ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿ ಲೋಕದ ವಿಸ್ಮಯ ಕ್ಷಣಗಳು...

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ದೊಮ್ಮಲೂರಿನ ಗಲ್ಲಿಗಳಲ್ಲಿ ಗೂಡು ತೊರೆದ ಪಾರಿವಾಳದ ಮರಿಗಳು ಅಪಾಯದಲ್ಲಿ ಸಿಲುಕಿದರೆ ಆರೈಕೆ ಮಾಡುತ್ತಿದ್ದ ಬಾಲಕ ಸಕಲ ಪ್ರಾಣಿ, ಪಕ್ಷಿಗಳಿಗೂ ಕಣ್ಮಣಿ ಆಗಿದ್ದ. ಆದರೆ, ಹದ್ದುಮೀರಿದ ಅವನ ತುಂಟತನ ಸಹಿಸದ ಪೋಷಕರು ‌ಬೆಂಗಳೂರಿನಿಂದ ದೂರದ ಗುಂಡಿಬಂಡೆಯ ವಸತಿ ಶಾಲೆಯೊಂದಕ್ಕೆ ಸೇರಿಸುತ್ತಾರೆ. ಅಲ್ಲಿನ ಬೆಟ್ಟಗುಡ್ಡಗಳ ಬಯಲು ಸೀಮೆಯ ಪರಿಸರ ಬಾಲಕನ ಸಹಜ ಕೂತೂಹಲದ ತಾಣವಾಗುತ್ತದೆ.

ವಾಸವಾಗಿದ್ದ ಹಾಸ್ಟೆಲ್‌ ಒಳಗೆ ನುಸುಳುತ್ತಿದ್ದ ಹಾವುಗಳನ್ನು ಹಿಡಿದು ಸುರಕ್ಷಿತ ಜಾಗದಲ್ಲಿ ಬಿಡುವುದು, ಪಕ್ಷಿ ಪ್ರಿಯನಾಗಿ ಕಾಜಾಣ, ಪಾರಿವಾಳಗಳ ವೀಕ್ಷಣೆಗಾಗಿ ಅಲೆದಾಡುವುದು, ಹೈಸ್ಕೂಲ್ ಸಹ‍ಪಾಠಿಗಳಿಗೆ ಪ್ರಕೃತಿ ವಿಸ್ಮಯ ವಿವರಿಸುವ ಪರಿಣತನಾಗುತ್ತಾನೆ. ಪರಿಸರ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುವಂತೆ ಶಿಕ್ಷಕರನ್ನೇ ಹುರಿದುಂಬಿಸಿ ನೇಚರ್ ಕ್ಯಾಂಪ್ ಆಯೋಜಿಸುವ ಹೊಣೆಗಾರಿಕೆ ವಹಿಸಿಕೊಳ್ಳುವುದು... ಹೀಗೆ ಅವನ ದಿನಚರಿ ವಿಭಿನ್ನ ಆಯಾಮ ಹಿಡಿಯಿತು.

(‘ಮಿಕ’ ಹಿಡಿದ ಕಾಡು ಕಾಗೆ)

ವಯಸ್ಸಿನ ಸಹಜ ತುಂಟಾಟ, ಸಾಹಸ ಪ್ರವೃತ್ತಿ ಬೆಳೆಸಿಕೊಂಡ ಕಿರಣ್ ಪೂಣಚ್ಚ, ಮೂಲತಃ ಮಡಿಕೇರಿಯ ಸೋಮವಾರಪೇಟೆಯವರು. ಬೆಂಗಳೂರಿನಲ್ಲಿ ಅವರ ತಂದೆ ಟ್ರಾನ್ಸ್‌ಪೋರ್ಟ್‌ ವ್ಯವಹಾರದಲ್ಲಿ ತೊಡಗಿದ್ದರಿಂದ ಅವರು ಇಲ್ಲೇ ಹುಟ್ಟಿ ಬೆಳೆದರು. ಬಾಲ್ಯದಿಂದಲೂ ಅಜ್ಜನ ಊರು ಮಡಿಕೇರಿಗೆ ಹೋದಾಗ ಅಲ್ಲಿನ ಪರಿಸರ ಕಂಡು ಪುಳಕಿತರಾಗಿ, ಹೊಸ ಅನ್ವೇಷಣೆಯ ಕಾತರ ಬೆಳೆಸಿಕೊಂಡರು.

‘ಬಿಬಿಎಂ ಪದವಿ ಮುಗಿಸಿ ಕಾರ್ನರ್‌ಸ್ಟೋನ್ ಎನ್ನುವ ಖಾಸಗಿ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದ ಕಂಪನಿ ವ್ಯವಹಾರದಿಂದಾಗಿ ನನಗೆ ಏಕತಾನತೆ ಕಾಡಲಾರಂಭಿಸಿತು. ಕೆಲಸದ ಒತ್ತಡ ನೀಗಲು ಹುಣಸೂರಿನಲ್ಲಿ ನಡೆದ ನೇಚರ್ ಕ್ಯಾಂಪ್‌ಗೆ ಹೋಗುವಂತೆ ಗೆಳೆಯರೊಬ್ಬರು ಸಲಹೆ ನೀಡಿದರು. ಮೊದಲಿನಿಂದಲೂ ಪರಿಸರಪ್ರೇಮಿ ಆಗಿದ್ದ ಕಾರಣ ಚಿಕ್ಕದೊಂದು ಕ್ಯಾಮೆರಾದೊಂದಿಗೆ ಕ್ಯಾಂಪ್‌ಗೆ ಹಾಜರಾದೆ. ಆದರೆ ಅಲ್ಲಿನ ವೃತ್ತಿಪರ ಛಾಯಾಗ್ರಾಹಕರ ಬಳಿಯಿದ್ದ ದೊಡ್ಡ ಮೊತ್ತದ ಬೆಲೆ ಬಾಳುವ ಕ್ಯಾಮೆರಾಗಳನ್ನು ಕಂಡು ನನ್ನ ಕ್ಯಾಮೆರಾವನ್ನು ಮರೆಮಾಚಿಕೊಂಡೆ. ಅಷ್ಟೇ ಅಲ್ಲ, ದೊಡ್ಡದೊಂದು ಕ್ಯಾಮೆರಾ ಖರೀದಿಸುವ ಶಪಥದೊಂದಿಗೆ ಕ್ಯಾಂಪ್‌ನಿಂದ ಹಿಂತಿರುಗಿದೆ’.

ಕಿರಣ್ ಪೂಣಚ್ಚ ಅವರ ಫೋಟೊಗ್ರಫಿ ಯಾನ ಆರಂಭವಾಗಿದ್ದು ಅಲ್ಲಿಂದಲೇ. ಈಗ ಕಾರ್ನರ್‌ಸ್ಟೋನ್ ಕಂಪನಿಯಲ್ಲಿ ಲ್ಯಾಂಡ್ ಬ್ಯಾಂಕ್ ನಿರ್ದೇಶಕರಾಗಿ ಉನ್ನತ ಸ್ಥಾನದಲ್ಲಿದ್ದಾರೆ. ವಿಪರೀತ ಒತ್ತಡದ ನಡುವೆಯೂ ಲವಲವಿಕೆಯಿಂದ ಕೆಲಸ ಮಾಡಲು ಫೋಟೊಗ್ರಫಿ ಹವ್ಯಾಸ ಮತ್ತು ಪಕ್ಷಿಗಳ ಅಧ್ಯಯನದ ಧಾನ್ಯಸ್ಥ ಸ್ಥಿತಿ ಅವರನ್ನು ಚೈತನ್ಯಶೀಲರನ್ನಾಗಿಸಿದೆ.

(ಮಲಬಾರ್ ಹಾರ್ನ್‌ಬಿಲ್)

‘ವಾರಾಂತ್ಯದಲ್ಲಿ ಸ್ನೇಹಿತರೊಂದಿಗೆ ಕುಡಿತ, ಮೋಜು – ಮಸ್ತಿಯಲ್ಲಿ ತೊಡಗುತ್ತಿದ್ದೆ. ಈಗ ಅದಕ್ಕೆ ಗುಡ್‌ ಬೈ ಹೇಳಿದ್ದೇನೆ. ಮುಂಜಾನೆಯೇ ಎದ್ದು ಹೆಸರಘಟ್ಟ, ಹೊಸಕೋಟೆ ಸುತ್ತಲಿನ ಪ್ರದೇಶ‌ಕ್ಕೆ ಹೋಗಿ ಪಕ್ಷಿಗಳ ಚಲನವಲನ ಅಧ್ಯಯನದಲ್ಲಿ ತೊಡಗುತ್ತೇನೆ. ‍ಮರಿ ಹಕ್ಕಿಯೊಂದು ಆಹಾರವನ್ನು ದಕ್ಕಿಸಿಕೊಳ್ಳುವ ಪರಿ, ಅದರ ಮುದ್ದಾಟ, ಇತರ ಪಕ್ಷಿಗಳೊಂದಿಗೆ ಚಿನ್ನಾಟದ ಅಪರೂಪದ ಕ್ಷಣಗಳನ್ನು ಸೆರೆ ಹಿಡಿಯುವುದು ನನಗೆ ತುಂಬಾ ಇಷ್ಟ’ ಎನ್ನುತ್ತಾರೆ ಕಿರಣ್.

‘ವಾರಾಂತ್ಯದ ಬಿಡುವಿನಲ್ಲಿ ಮಡಿಕೇರಿ ಸಮೀಪದಲ್ಲಿ ಎಲ್ಲಾದರೂ ಪಕ್ಷಿ ವೀಕ್ಷಣೆಗಾಗಿ ಗೋಪುರ ನಿರ್ಮಿಸಿ ಪ್ರಕೃತಿ ನಡುವೆ ಕಾಲ ಕಳೆಯುತ್ತೇನೆ. ಅಲ್ಲಿನ ನಮ್ಮ ಪುಟ್ಟಮನೆ ಮತ್ತು ತೋಟದಲ್ಲಿ ಪಕ್ಷಿಗಳ ವಾಸಕ್ಕೆ ಯೋಗ್ಯವಾದ ಪರಿಸರ ಸೃಷ್ಟಿಸಿದ್ದೇನೆ. ತೋಟದಲ್ಲಿ ಸಿಸಿಟಿವಿ ಕ್ಯಾಮೆರಾವನ್ನೂ ಅಳವಡಿಸಿದ್ದೇನೆ. ನೀರು, ಆಹಾರ ಹುಡುಕುತ್ತಾ ಬರುವ ವಿವಿಧ ಪ್ರಬೇಧದ ಪಕ್ಷಿಗಳ ದೈನಂದಿನ ದಿನಚರಿ, ಆಹಾರ ಪದ್ಧತಿ, ಸಂತಾನೋತ್ಪತ್ತಿ, ವಲಸೆ ಪ್ರವೃತ್ತಿ, ಪ್ರಣಯ, ಮರಿಗಳ ಪೋಷಣೆ ಹೀಗೆ... ಪಕ್ಷಿ ಪ್ರಪಂಚದ ನೂರೆಂಟು ನೋಟಗಳನ್ನು ಮೊಬೈಲ್‌ ಮೂಲಕ ಅರಿತುಕೊಳ್ಳುತ್ತೇನೆ’ ಎಂದು ಹವ್ಯಾಸವನ್ನು ಸಾಗಿಸುತ್ತಿರುವ ಪರಿಯನ್ನು ವಿವರಿಸುತ್ತಾರೆ.

ವೃತ್ತಿ ಸಂಬಂಧ ವಿದೇಶ ಪ್ರವಾಸ ಸಿಕ್ಕಿದಾಗಲೆಲ್ಲಾ ತಪ್ಪಿಸಿಕೊಳ್ಳುತ್ತಿದ್ದ ಅವರು, ಪಕ್ಷಿಗಳ ಫೋಟೊಗ್ರಫಿಗಾಗಿಯೇ ಅಮೆರಿಕದ ಕೋಸ್ಟರಿಕಾ, ಅಮೆಜಾನ್ ಪ್ರದೇಶ ಸುತ್ತಿ ಬಂದಿದ್ದಾರೆ. ಮನೆಯಲ್ಲೂ ಆಫ್ರಿಕಾದ ಗ್ರೆ ಪ್ಲಾರೆಟ್ ಪಕ್ಷಿಯೊಂದನ್ನು ಸಾಕುತ್ತಿದ್ದು, ಅದರೊಂದಿಗೆ ಕಾಲ ಕಳೆದ ಮೇಲೆಯೇ ರಾತ್ರಿ ಊಟ, ನಿದ್ದೆಗೆ ಜಾರುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಪತ್ನಿ, ಪುತ್ರನ ಪ್ರೋತ್ಸಾಹದಿಂದಲೇ ಒತ್ತಡದ ವೃತ್ತಿಯಲ್ಲೂ ಇಂತಹ ಹವ್ಯಾಸ ಮುಂದುವರಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಕಿರಣ್ ಪೂಣಚ್ಚ.

ಅವರ Kiran Poonacha Photography ಎಂಬ ಫೇಸ್‌ಬುಕ್‌ ಪುಟಕ್ಕೆ 10ಲಕ್ಷ ಫಾಲೋವರ್ಸ್ ಇದ್ದು, ವಾರಕ್ಕೆ 1.5 ಲಕ್ಷ ಜನರು ಪುಟವನ್ನು ನೋಡುತ್ತಾರೆ. ಹೊಸದಾಗಿ ಅಪ್‌ಲೋಡ್‌ ಮಾಡುವ ಪಕ್ಷಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ವಿಚಾರ ವಿನಿಮಯವೂ ನಡೆಯುತ್ತದೆ. ‌‌ನಗರದ ವಿವಿಧ ಶಾಲಾ – ಕಾಲೇಜುಗಳಿಗೆ ಭೇಟಿ ನೀಡಿ ಪರಿಸರ ಪಾಠ ಮಾಡುವ ಪ್ರವೃತ್ತಿಯೂ ಅವರಿಗಿದೆ.ದುವರೆಗೂ ಸೆರೆಹಿಡಿದ ಫೋಟೊಗ್ರಫಿಗೆ ಅಮೆರಿಕದ ಪ್ರತಿಷ್ಠಿತ ಆರ್ಟ್ ಇಂಟರ್ ನ್ಯಾಷನಲ್ ಫೋಟೊಗ್ರಫಿ ಅವಾರ್ಡ್ (2012), ಸ್ಯಾಂಚುರಿ ಏಷ್ಯಾ ವೈಲ್ಡ್‌ಲೈಫ್ ಫೋಟೊಗ್ರಫಿ ಅವಾರ್ಡ್ (2015) ಸೇರಿದಂತೆ ಹಲವು ಪ್ರಶಸ್ತಿಗಳೂ ಸಂದಿವೆ.

(ವೈಲೆಟ್‌ ಸಬ್ರೆವಿಂಗ್‌)

*

(ಸಬ್ರ್ಯೂಯಿಂಗ್)

*

(ಈಗಲ್)

*

(ಸ್ಪ್ಯಾರೋಹಾಕ್)

*

(ಕೆಂಪು ಕಣ್ಣಿನ ಕಪ್ಪೆ)

*

(ಮಲಬಾರ್‌ ಪಿಟ್‌ ವೈಬರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT