‘ಮತ್ತೊಂದು ಜನ್ಮವಿದ್ದರೆ ಇಲ್ಲೇ ಹುಟ್ಟುವಾಸೆ’

7

‘ಮತ್ತೊಂದು ಜನ್ಮವಿದ್ದರೆ ಇಲ್ಲೇ ಹುಟ್ಟುವಾಸೆ’

Published:
Updated:
‘ಮತ್ತೊಂದು ಜನ್ಮವಿದ್ದರೆ ಇಲ್ಲೇ ಹುಟ್ಟುವಾಸೆ’

ಕನ್ನಡ, ತೆಲುಗು, ತಮಿಳು, ಹಿಂದೆ ಸೇರಿದಂತೆ ಬಹು ಭಾಷೆಯಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ಮಾಡಿರುವ ಅವರು ಸುಪ್ರಸಿದ್ಧ ಹಿನ್ನೆಲೆ ಗಾಯಕ ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ).

ಈಗ ಈ ಗಾಯಕ ಸಿನಿಮಾಗಳಿಗೆ ಅಷ್ಟಾಗಿ ಹಾಡುತ್ತಿಲ್ಲ, ಆದರೆ ಸಂಗೀತಪ್ರಿಯರು ಈಗಲೂ ಅವರನ್ನು ಅಷ್ಟೇ ಆರಾಧಿಸುತ್ತಾರೆ, ಪ್ರೀತಿಸುತ್ತಾರೆ. 1966ರಿಂದಲೂ ಹಾಡುತ್ತಲೇ ಬಂದ ಈ ಗಾನಗಂಧರ್ವನಿಗೆ ಈಗ 71 (ಜನನ:1946) ವರ್ಷ. ಶರೀರಕ್ಕೆ ವಯಸ್ಸಾದಂತೆ ಕಂಡರೂ ಶಾರೀರ ಹಾಗೆಯೇ ಇದೆ

*

ಗಾಯಕನಿಗೆ ವಯಸ್ಸಾಗಿದೆ; ಗಾಯನಕ್ಕಲ್ಲ. ಕೇಳುಗರು ಬದಲಾಗಿದ್ದಾರೆ; ಅಭಿಮಾನ, ಪ್ರೀತಿ ಕಡಿಮೆಯಾಗಿಲ್ಲ. ಹಿಂದೊಮ್ಮೆ ಹಿಟ್‌ ಅನ್ನಿಸಿಕೊಂಡಿದ್ದ ಹಾಡುಗಳನ್ನು ಮತ್ತೆ ನನ್ನದೇ ಕಂಠದಲ್ಲಿ ಕೇಳುತ್ತಿದ್ದರೆ ‘ವಾಹ್‌, ಒನ್ಸ್‌ಮೋರ್‌’ ಎನ್ನುವ ಒತ್ತಾಸೆ ಅಭಿಮಾನಿಗಳಿಂದ! ಯಾತಕ್ಕಾಗಿ ನನ್ನನ್ನು ಇಷ್ಟೊಂದು ಪ್ರೀತಿಸ್ತೀರಾ? ಮರಳಿ ನಿಮಗೇನು ಕೊಡಲಿ ನಾನು?

ದೂರದ ಆಂಧ್ರಪ್ರದೇಶದಲ್ಲಿ ಹುಟ್ಟಿದೆ. 52 ವರ್ಷಗಳಿಂದ ಹಾಡುತ್ತಿದ್ದೇನೆ. ಚಲನಚಿತ್ರಗಳಿಗೆ ನಾನು ಹಾಡಿದ ಎರಡನೇ ಹಾಡೇ ಕನ್ನಡದ ಹಾಡು. ಈಗೇನೂ ನಾನು ಅಷ್ಟಾಗಿ ಹಾಡುವುದಿಲ್ಲ, ಆದರೆ ನಾನು ಹಿಂದೆಲ್ಲ ಹಾಡಿದ ಹಾಡುಗಳನ್ನೇ ಈಗಲೂ ನೀವೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ನನ್ನನ್ನು ಇಷ್ಟೊಂದು ಪ್ರೀತಿಸುತ್ತೀರಲ್ಲ, ಸತ್ಯವಾಗಿ ಹೇಳ್ತೀನಿ ನನಗೆ ಮತ್ತೊಂದು ಜನ್ಮವಿದ್ದರೆ ಕರ್ನಾಟಕದಲ್ಲಿಯೇ ಹುಟ್ಟುವಾಸೆ...

ಹತ್ತು ವರ್ಷಗಳ ಹಿಂದೊಮ್ಮೆ ಹುಬ್ಬಳ್ಳಿಗೆ ಬಂದಿದ್ದೆ. ಆ ಬಳಿಕ ಬಂದಿದ್ದು ಈಗಲೇ. ಇದು ಪುಣ್ಯಭೂಮಿ. ಗಂಗೂಬಾಯಿ ಹಾನಗಲ್‌, ಮಲ್ಲಿಕಾರ್ಜುನ ಮನ್ಸೂರ್‌ ಅವರಂತಹ ಮಹಾನ್‌ ಗಾಯಕರು ಹುಟ್ಟಿದ ನೆಲವಿದು. ಅವರು ಓಡಾಡಿದ ನೆಲದಲ್ಲಿ ಕಾಲಿಟ್ಟು ಹಾಡುವುದೇ ನಮ್ಮ ಸೌಭಾಗ್ಯ.

1966ರಲ್ಲಿ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ ಎಂಬ ತೆಲುಗು ಚಿತ್ರಕ್ಕೆ ಹಾಡುವ ಮೂಲಕ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ ಮಾಡಿದವನು ನಾನು. ಮುಂದಿನ ಕೆಲವೇ ದಿನಗಳಲ್ಲಿ ಎಂ.ರಂಗರಾವ್‌ ಸಂಗೀತದ ವಿಜಯನಾರಸಿಂಹ ವಿರಚಿತ ‘ನಕ್ಕರೆ ಅದೇ ಸ್ವರ್ಗ’ ಕನ್ನಡ ಚಿತ್ರದ ‘ಕನಸಿದೋ ನನಸಿದೋ ಮುಗುದ ಮನದ ಬಿಸಿ ಬಯಕೆಯೋ...’ ಹಾಡನ್ನು ಗಾಯಕಿ ಪಿ.ಸುಶೀಲಾ ಅವರೊಂದಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ಇದು ನಾನು ಕನ್ನಡದಲ್ಲಿ ಹಾಡಿದ ಮೊದಲ ಹಾಡಾದರೆ, ವೃತ್ತಿ ಬದುಕಿನ ಎರಡನೇ ಹಾಡು! ನಾನು ಶಾಸ್ತ್ರೀಯವಾಗಿ ಸಂಗೀತ ಕಲಿತವನಲ್ಲ. ದೈವದತ್ತವಾಗಿ ಒಲಿಯಿತೆನ್ನಿ.

ನನ್ನ ಕಾಲ ಸುವರ್ಣಯುಗ ...

ಎಷ್ಟೇ ದೊಡ್ಡ ಗಾಯಕನಾದರೂ ಉತ್ತಮ ಹಾಡುಗಳು ಸಿಗದೇ ಇದ್ದರೆ, ದೊಡ್ಡ ದೊಡ್ಡ ಸಂಗೀತ ನಿರ್ದೇಶಕರು ಸ್ವರ ಸಂಯೋಜನೆ ಮಾಡದೇ ಇದ್ದರೆ ನಾವೆಲ್ಲ ಈಗ ಇಲ್ಲಿ ಬಂದು ಹಾಡುತ್ತಿರಲಿಲ್ಲ. ನಮ್ಮದೆಲ್ಲ ಸುವರ್ಣಯುಗ. ಹಲವಾರು ಮಹಾನ್‌ ಸಂಗೀತ ನಿರ್ದೇಶಕರ ಬಳಿ ಕೆಲಸ ಮಾಡಿದೆವು.

ಒಂದು ಹಾಡು ಹುಟ್ಟಿ, ಯಶಸ್ವಿಯಾಗಿ ಕೇಳುಗರ ಬಳಿ ತಲುಪುವುದರ ಹಿಂದೆ ಹತ್ತಾರು ತಜ್ಞರ ಶ್ರಮವಿರುತ್ತದೆ. ಹೀಗಾಗಿ ನಾವಿಲ್ಲಿ ಬಂದು ಷೋ ಕೊಡ್ತೀವಿ ಅಂದ ಮಾತ್ರಕ್ಕೆ ನೂರಕ್ಕೆ ನೂರರಷ್ಟು ಉತ್ತಮವಾಗಿ ಹಾಡ್ತೀವಿ ಅಂತ ಅರ್ಥವಲ್ಲ. ಶೇ 60ರಷ್ಟು ಮಾತ್ರ ನಾವಿಲ್ಲಿ ಹಾಡಬಹುದಷ್ಟೇ.... ನಿಮಗೆ ಗೊತ್ತಾ ಈಗಲೂ ನಾನು ರಿಹರ್ಸಲ್‌ ಮಾಡ್ತೀನಿ. ನಾನು ಈಗಲೂ ಸ್ಟೇಜ್‌ ಮೇಲೆ ಹಾಡುವಾಗ ಭಯಪಡ್ತೇನೆ. ಕಾರಿನಲ್ಲಿ ಬರುವಾಗಲೂ ರಿಹರ್ಸಲ್‌ ಮಾಡ್ತೇನೆ. ರೆಕಾರ್ಡಿಂಗ್‌ನಲ್ಲಿ ಹತ್ತಾರು ಬಾರಿ ಮಾರ್ಪಾಟು ಮಾಡಿ ಒಂದು ಹಾಡು ಹಾಡಬಹುದು. ಅದು ಬಹಳ ಪ್ರಸಿದ್ಧವಾಗಲೂಬಹುದು. ಅದನ್ನು ನೀವೆಲ್ಲ ಕೇಳಿ ಅಭ್ಯಾಸವಾಗಿರುತ್ತದೆ. ಆದರೆ ಅದೇ ಹಾಡನ್ನು ಇಲ್ಲಿ ಒಂದೇ ಸಲಕ್ಕೆ ಹಾಡಬೇಕಲ್ಲ. ನೀವು ಅಂದುಕೊಂಡಂತೆ ಹಾಡುವುದು ಕಷ್ಟ. ನಾನೊಬ್ಬ ಚಿಕ್ಕ ಹಾಡುಗಾರ, ಪ್ರಯತ್ನ ಮಾಡ್ತೀನಿ ಅಷ್ಟೆ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry