ಗೋಡೆ ಏರಿ ಸಾಧನೆ ಮೆರೆದರು

7

ಗೋಡೆ ಏರಿ ಸಾಧನೆ ಮೆರೆದರು

Published:
Updated:
ಗೋಡೆ ಏರಿ ಸಾಧನೆ ಮೆರೆದರು

ಚಳಿಗಾಲದ ನಸುಕು. ಹಾಸಿಗೆ ಬಿಟ್ಟು ಏಳಲು ಸೋಮಾರಿತನದ ಅಡ್ಡಿ. ಆದರೆ ಇಂದಿರಾನಗರದ ಬೀದಿಯಲ್ಲಿ ಸೈಕಲ್ ಓಡಿಸುತ್ತಾ ಒಂದಷ್ಟು ಜನ ಬಂದರು. ‘ನಾವು ಯಾರಿಗೂ ಕಡಿಮೆ ಇಲ್ಲ’ ಎನ್ನುವ ಆತ್ಮವಿಶ್ವಾಸ ಅವರ ಮೊಗದಲ್ಲಿ ಬೆಳಗುತ್ತಿತ್ತು. ಜಯನಗರದಿಂದ ಈ ಮಕ್ಕಳು ಸೈಕಲ್ ತುಳಿದಿದ್ದರು.

ಇಂದಿರಾನಗರದ ‘ಇಕ್ವಿಲಿಬ್ರಿಯಂ ಕ್ಲೈಂಬಿಂಗ್‌ ಸ್ಟೇಷನ್‌‘ನಲ್ಲಿ ‘ಫೈರ್‌ಫಾಕ್ಸ್‌ ಬೈಕ್ಸ್‌ ಆಂಡ್‌ ಅಡ್ವೆಂಚರ್ಸ್‌ ಬಿಯಾಂಡ್‌ ಬ್ಯಾರಿಯರ್ಸ್‌' ಪ್ರತಿಷ್ಠಾನವು ಅಂಗವಿಕಲರಿಗಾಗಿ ಸಾಹಸ ಪ್ರಧಾನ ಕ್ರೀಡೆಗಳನ್ನು ‘#ಎವೆರಿಡೆಎಬಿಲಿಟಿ’ ಶೀರ್ಷಿಕೆಯಡಿ ಆಯೋಜಿಸಿತ್ತು. ಅಂಗವಿಕಲರಲ್ಲಿರುವ ಕೀಳರಿಮೆಯನ್ನು ಶಮನಗೊಳಿಸಿ, ಅವರು ಸಾಹಸ ಕ್ರೀಡೆಗಳನ್ನು ಮಾಡಬಲ್ಲರು ಹಾಗೂ ಸಬಲರು ಎಂದು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶ.

‘ಅಂಗವಿಕಲತೆ ದೌರ್ಬಲ್ಯವಲ್ಲ. ಅದು ನಮಗೆ ಬಂದ ಕೊಡುಗೆ. ಅದನ್ನು ಪ್ರೀತಿಯಿಂದ ಸ್ವೀಕರಿಸಿ, ಗೆದ್ದು ನಿಲ್ಲಬೇಕು. ನಮ್ಮನ್ನು ದೌರ್ಬಲ್ಯದಿಂದ ಗುರುತಿಸಬಾರದು. ಸಾಧನೆಯಿಂದ ಗುರುತಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ನಾವು ಮಾಡುವ ಸಾಧನೆ ಇತರರಿಗೆ ಮಾದರಿ ಆಗಬೇಕು. ಇದೇ ಉದ್ದೇಶದಿಂದ ‘#ಎವೆರಿಡೆಎಬಿಲಿಟಿ’ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು ಫೌಂಡೇಷನ್‌ನ ವ್ಯವಸ್ಥಾಪಕ ದಿವ್ಯಾನ್ಸೊ.

(ಮಹಮ್ಮದ್‌ ಇನಾಯದುಲ್ಲ)

ಯಲಹಂಕದ ಡೆಲ್ಲಿ ಪಬ್ಲಿಕ್‌ ಶಾಲೆ ಶಿಕ್ಷಕಿ ಮಂಜು ಅವರು ತಮ್ಮ ವಿದ್ಯಾರ್ಥಿ ಕರಣ್‌ವೀರ್‌ ಸಿಂಗ್‌ನನ್ನು ಕರೆದುಕೊಂಡು ಬಂದಿದ್ದರು. ‘ಅಂಗವಿಕಲ ಮಕ್ಕಳಿಗೆ ವಿಶೇಷ ಸಾಮರ್ಥ್ಯ ಇರುತ್ತದೆ. ಇಂಥ ಮಕ್ಕಳು ಅನೇಕ ಸಂದರ್ಭಗಳಲ್ಲಿ ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅವರಲ್ಲಿ ಕೀಳರಿಮೆ ತೊಲಗಿಸಿ, ಧೈರ್ಯ ತುಂಬಬೇಕು. ಇಂಥ ಮಕ್ಕಳಿಗೆ ಶಿಕ್ಷಣ ನೀಡಲೆಂದೇ ನಮ್ಮ ಶಾಲೆಯ 60 ಶಿಕ್ಷಕರು ಭಾರತೀಯ ವಿದ್ಯಾಭವನದಲ್ಲಿ ತರಬೇತಿ ಪಡೆದುಕೊಂಡಿದ್ದೇವೆ. ಮಕ್ಕಳ ಪ್ರತಿಭೆ ಗುರುತಿಸಲು ಇಂಥ ಕಾರ್ಯಕ್ರಮಗಳು ಸಹಕಾರಿ’ ಎಂದು ಹೇಳಿದರು.

ನೆಚ್ಚಿನ ಟೀಚರಮ್ಮನ ಮಾತಿಗೆ ಪ್ರತಿಕ್ರಿಯಿಸಿದ ಕರಣ್‌ವೀರ್, ‘ಮಂಜು ಟೀಚರ್‌ ಇಲ್ಲದಿದ್ದರೆ ನಾನು ಇಲ್ಲ. ಅವರೇ ನನಗೆ ಸ್ಫೂರ್ತಿ’ ಎಂದು ನಿಟ್ಟುಸಿರುಬಿಟ್ಟ.

ಜಯನಗರದ ಮೊಹಮದ್ ಇನಾಯತ್‌ಉಲ್ಲಾ ಅವರಿಗೆ ಆರ್ಥಿಕ ಅಡಚಣೆಯಿಂದ ಹೆಚ್ಚು ಓದಲು ಆಗಲಿಲ್ಲ. ಪಿಯುಸಿಗೆ ಓದು ನಿಲ್ಲಿಸಿದ ಅವರು ವಾಲ್‌ ಕ್ಲೈಂಬಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದವರು.

‘ಎರಡೂ ಕಾಲುಗಳಲ್ಲಿ ಶಕ್ತಿಯಿಲ್ಲ. 15 ವರ್ಷದವನಿದ್ದಾಲೇ ವಾಲ್‌ಕ್ಲೈಂಬಿಂಗ್ ಅಭ್ಯಾಸ ಶುರುಮಾಡಿದೆ. ಮೊದಮೊದಲ ಕಷ್ಟ  ಎನಿಸುತ್ತಿತ್ತು. ತೋಳುಗಳ ಮೇಲೆ ಭಾರ ಹಾಕಿ, ಕಾಲುಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಲು ಕಲಿತೆ. ಸ್ವಲ್ಪ ಕೈ ಜಾರಿದರೂ ಅಪಾಯ. ಏನಾದರಾಗಲಿ ಕಲಿಯಲೇಬೇಕು ಎಂದು ಗಟ್ಟಿಮನಸು ಮಾಡಿ, ವಾಲ್‌ ಕ್ಲೈಂಬಿಂಗ್ ಅಭ್ಯಾಸ ಮಾಡಿದೆ’ ಎನ್ನುತ್ತಾರೆ ಅವರು.

(ಫೈರ್‌ಫಾಕ್ಸ್‌ ಬೈಕ್ಸ್‌ ಆಂಡ್‌ ಅಡ್ವೆಂಚರ್ಸ್‌ ಬಿಯಾಂಡ್‌ ಬ್ಯಾರಿಯರ್ಸ್‌ ಫೌಂಡೇಷನ್‌ ಸಂಸ್ಥೆ ಸಿಬ್ಬಂದಿಗಳು ಹಾಗೂ ಸಮರ್ಥನಂ ಸಂಸ್ಥೆ ವಿದ್ಯಾರ್ಥಿಗಳು)

ಮೊಹಮದ್ ಅವರು ಈಗ ಯಾರ ಸಹಾಯವೂ ಇಲ್ಲದೇ 15 ಅಡಿ ಎತ್ತರದ ಗೋಡೆಗಳನ್ನು ಏರುತ್ತಾರೆ. 2013ರಲ್ಲಿ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಬಂಗಾರದ ಪದಕ ಗಳಿಸಿದ್ದರು. ಫ್ರಾನ್ಸ್‌ನಲ್ಲಿ 2015ರಲ್ಲಿ ನಡೆದ ಸ್ಪರ್ಧೆಯಲ್ಲಿ 4ನೇ ಸ್ಥಾನ. ಈಗ ವಾಲ್‌ಕ್ಲೈಂಬಿಂಗ್‌ನಲ್ಲಿ ಇವರು ವಿಶ್ವಮಟ್ಟದಲ್ಲಿ 5ನೇ ಕ್ರಮಾಂಕದಲ್ಲಿದ್ದಾರೆ.

‘ಸಮರ್ಥನಂ’ ಸಂಸ್ಥೆಯಲ್ಲಿ 3ನೇ ವರ್ಷದ ಪದವಿ (ಬಿಎ) ವ್ಯಾಸಂಗ ಮಾಡುತ್ತಿರುವ ನೇತ್ರಾ ಮೊದಲ ಬಾರಿಗೆ ವಾಲ್‌ಕ್ಲೈಂಬಿಂಗ್‌ ಸಾಧನೆ ಮಾಡಿದರು. ‘ನನ್ನ ಕೈಲಿ ಹತ್ತಲು ಆಗುತ್ತೋ, ಇಲ್ಲವೋ ಎಂಬ ಭಯ ಸಾಕಷ್ಟು ಕಾಡಿತು. ಇಲ್ಲಿನ ವಾತಾವರಣ ನನ್ನ ಆಸೆಯನ್ನು ಬೆಂಬಲಿಸಿತು. ಇಂಥ ಪ್ರೋತ್ಸಾಹ ಮುಂದುವರಿದರೆ ನಮ್ಮಿಂದಲೂ ಮಹತ್ತರ ಸಾಧನೆ ಸಾಧ್ಯ’ ಎಂದು ಖುಷಿಖುಷಿಯಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry