ಸೈನಾ, ಸಿಂಧು ಭಾರತದ ಭರವಸೆ

7
ಇಂದಿನಿಂದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ

ಸೈನಾ, ಸಿಂಧು ಭಾರತದ ಭರವಸೆ

Published:
Updated:
ಸೈನಾ, ಸಿಂಧು ಭಾರತದ ಭರವಸೆ

ನವದೆಹಲಿ : ಭಾರತದ ಸೈನಾ ನೆಹ್ವಾಲ್‌ ಹಾಗೂ ಪಿ.ವಿ ಸಿಂಧು ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಇಲ್ಲಿನ ಸಿರಿ ಪೋರ್ಟ್‌ ಸ್ಟೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಪಂದ್ಯಗಳು ನಡೆಯಲಿವೆ. ಹೋದ ವರ್ಷ ಚಾಂಪಿಯನ್ ಆಗಿದ್ದ ಸಿಂಧು ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. 2014ರಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಕಿದಂಬಿ ಶ್ರೀಕಾಂತ್  ಕಣಕ್ಕಿಳಿಯಲಿರುವುದು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬಲ ಹೆಚ್ಚಿಸಿದೆ. ಶ್ರೀಕಾಂತ್ ಇಂಡೊನೇಷ್ಯಾ ಮಾಸ್ಟರ್ಸ್‌ನಲ್ಲಿ ಆಡಿರಲಿಲ್ಲ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದ ಸೈನಾ ಇಲ್ಲಿ 2015ರಲ್ಲಿ ಚಾಂಪಿಯನ್ ಆಗಿದ್ದರು. ಇಂಡೊನೇಷ್ಯಾ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅವರು ಮೊದಲ ರ‍್ಯಾಂಕಿಂಗ್ ಆಟಗಾರ್ತಿ ಎದುರು ಆಡಿದ ರೀತಿಗೆ ಅವರ ಫಿಟ್‌ನೆಸ್‌ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಪಾದದ ಶಸ್ತ್ರಚಿಕಿತ್ಸೆ ಬಳಿಕ ಅವರು ಸಾಕಷ್ಟು ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಇಲ್ಲಿ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ಸೋಫಿ ದಾಲ್ ವಿರುದ್ಧ ಆಡಲಿದ್ದಾರೆ.  ಈ ಬಾರಿಯ ಟೂರ್ನಿಯಲ್ಲಿ ಸಿಂಧು ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿರುವ ಅವರು ಡೆನ್ಮಾರ್ಕ್‌ನ ನತಾಲಿಯಾ ರೋಡೆ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ಇಂಡೊನೇಷ್ಯಾ ಟೂರ್ನಿಯಲ್ಲಿ ಸೈನಾ–ಸಿಂಧು ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಸೈನಾ ಗೆಲುವು ಒಲಿಸಿಕೊಂಡಿದ್ದರು. ಇಲ್ಲಿ ಫೈನಲ್‌ ತಲುಪಿದರೆ ಮತ್ತೊಮ್ಮೆ ಇಬ್ಬರು ಆಟಗಾರ್ತಿಯರು ಎದುರಾಗುವ ಸಾಧ್ಯತೆ ಇದೆ.

ಹೋದ ವರ್ಷ ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಶ್ರೀಕಾಂತ್ ಬಳಿಕ ಗಾಯದ ಸಮಸ್ಯೆ ಎದುರಿಸಿದ್ದರು. ದುಬೈ ಸೂಪರ್ ಸೀರಿಸ್‌ ಫೈನಲ್‌ನಲ್ಲಿ ಅವರು ಆಡಿದ ಗುಂಪು ಹಂತದ ಮೂರೂ ಪಂದ್ಯ ಸೋತಿದ್ದರು. ಪ್ರೀಮಿಯರ್ ಬ್ಯಾಡ್ಮಿಂಟನ್‌ ಲೀಗ್‌ ಅವಧ್ ವಾರಿಯರ್ಸ್‌ ತಂಡದಲ್ಲಿ ಆಡಿದ್ದ ಅವರು ಮೂರು ಪಂದ್ಯ ಸೋತರು.

ಈ ಋತುವಿನಲ್ಲಿ ಮೊದಲ ಟೂರ್ನಿ ಆಡುತ್ತಿರುವ ಶ್ರೀಕಾಂತ್ ಬಿಡ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಹೊಂದಿದ್ದಾರೆ. ಹೋದ ವರ್ಷ ಶ್ರೀಕಾಂತ್‌ ಮೊದಲ ಸುತ್ತಿನಲ್ಲಿಯೇ ಅಗ್ರ ರ‍್ಯಾಂಕಿಂಗ್ ಆಟಗಾರ ವಿಕ್ಟರ್ ಅಕ್ಸೆಲ್‌ಸನ್ ಎದುರು ಸೋತಿದ್ದರು. ಈ ಬಾರಿ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ಲೀ ಚೆಕ್ ಯು ಅವರೊಂದಿಗೆ ಆಡಲಿದ್ದಾರೆ.

ಭರವಸೆಯ ಆಟಗಾರ ಎಚ್.ಎಸ್.ಪ್ರಣಯ್‌ ಕೂಡ ಕಣದಲ್ಲಿದ್ದಾರೆ. ಇಂಡೊನೇಷ್ಯಾ, ಫ್ರೆಂಚ್ ಓಪನ್‌ಗಳಲ್ಲಿ ಅವರು ಸೆಮಿಫೈನಲ್ ತಲುಪಿದ್ದರು. ಅಮೆರಿಕ ಓಪನ್ ಗ್ರ್ಯಾನ್‌ ಪ್ರಿ ಹಾಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಬಿ. ಸಾಯಿ ಪ್ರಣೀತ್ ಅವರು ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ರಾಜೀವ್ ಓಸೆಫ್ ವಿರುದ್ಧ , ಪರುಪಳ್ಳಿ ಕಶ್ಯಪ್‌ ಡೆನ್ಮಾರ್ಕ್‌ನ ಹನ್ಸ್‌ ಕ್ರಿಸ್ಟಿಯನ್‌ ವಿಟ್ಟಿಗನ್ಸ್ ಮೇಲೂ, ಅಜಯ್ ಜಯರಾಮ್‌ ಇಂಡೊನೇಷ್ಯಾದ ಟಾಮಿ ಸುಗರ್ತೊ ವಿರುದ್ಧ ಆಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹಾಂಕಾಂಗ್ ಜೋಡಿಯೊಂದಿಗೆ ಮೊದಲ ಸುತ್ತಿನ ಪಂದ್ಯ ಆಡಲಿದೆ. ಬಿ.ಸುಮೀತ್ ರೆಡ್ಡಿ ಮತ್ತು ಮನು ಅತ್ರಿ ಆರನೇ ಶ್ರೇಯಾಂಕದ ಮಲೇಷ್ಯಾದ ಆಂಗ್‌ ಸಿಂಗ್ ಮತ್ತು ಯೊ ತಿನ್ ಯಿ ಅವರ ಸವಾಲು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry