ಎಲ್ಲರನ್ನೂ ಒಳಗೊಳ್ಳುವ ಮಹಾತ್ಮ

7

ಎಲ್ಲರನ್ನೂ ಒಳಗೊಳ್ಳುವ ಮಹಾತ್ಮ

Published:
Updated:

ನಿಜವಾದ ಅಹಿಂಸೆಯನ್ನು ಎದುರಿಸಲಾಗದ ಒಬ್ಬ ಪುಕ್ಕಲ ಹಿಂದೂ, ಕಳೆದ ಶತಮಾನದ ಜಾಗತಿಕ ಬಂಡಾಯಗಾರನಾಗಿದ್ದ; ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದ ಇನ್ನೊಬ್ಬ ಹಿಂದೂವನ್ನು ಕೊಂದ ದಿನ ಜನವರಿ 30. ಈ ಇಬ್ಬರಲ್ಲಿ ಒಬ್ಬ ಹಿಂದೂ ತಾನು ವಿರೋಧಿಸಿದ ಬ್ರಿಟಿಷರನ್ನೂ ಒಳಗೊಳ್ಳುತ್ತಾ ಹೋದ. ಅಂತಹ ಹಿಂದೂವನ್ನು ಕೂಡ ಒಳಗೊಳ್ಳಲು ಸಾಧ್ಯವಾಗದವ ಮತ್ತೊಬ್ಬ ಹಿಂದೂ!

ಮಹಾತ್ಮ ಗಾಂಧಿ ತಮ್ಮ ಒಂದೊಂದು ಕ್ರಿಯೆಯನ್ನೂ ರೂಪಕವನ್ನಾಗಿ ಕಟ್ಟಿದರು. ಉಪ್ಪಿಲ್ಲದ ಅಡುಗೆ ಹೇಗೆ ರುಚಿಸದೋ ಹಾಗೆಯೇ, ಸ್ವಾತಂತ್ರ್ಯವಿಲ್ಲದ ಯಾವುದೇ ಬದುಕು ರುಚಿಸದೆಂಬುದನ್ನು ಉಪ್ಪಿನ ಸತ್ಯಾಗ್ರಹ ಹೇಳಿತು. ಎಲಿಜಬೆತ್‌ಳ ಮದುವೆಗೆ ಗಾಂಧಿ ನೇಯ್ದು ಕೊಟ್ಟ ಟೇಬಲ್ ಕ್ಲಾತ್ 'ನಮ್ಮ ಅನ್ನವನ್ನು ಕಿತ್ತುಕೊಂಡ ನಿಮ್ಮ ಅನ್ನದ ತಟ್ಟೆಯ ಅಡಿಯ ಹಾಸಾಗಲು ನಾವು ಅಂಜುವುದಿಲ್ಲ' ಎಂಬ ಸಂದೇಶ ನೀಡಿತು. ಇಡೀ ದೇಶವೇ ಬೆಂಬಲಕ್ಕಿದ್ದರೂ ಚೌರಿಚೌರಾ ಘಟನೆಯ ನಂತರ ಅಸಹಕಾರ ಚಳವಳಿಯನ್ನು ಮುಂದುವರಿಸುವುದಿಲ್ಲ ಎಂದು ಗಾಂಧಿ ಹೇಳಿದ್ದು ಕೃತಿಗಿಂತಲೂ ಕೃತಿಯನ್ನು ಸಾಧಿಸುವ ದಾರಿಯ ಮಹತ್ವವನ್ನು ನಿರೂಪಿಸಿತು. ಚಂಪಾರಣ್‌ನಲ್ಲಿ ತಮ್ಮನ್ನು ಇಂಗ್ಲಿಷ್ ಜಮೀನ್ದಾರರು ಕೊಲ್ಲುವರೆಂಬ ಸುದ್ದಿ ತಿಳಿದೊಡನೆ ರಾತ್ರಿ ಒಂಟಿಯಾಗಿ ಹೋಗಿ, 'ಒಬ್ಬನೇ ಬಂದಿದ್ದೇನೆ. ಕೊಲ್ಲುವುದಾದರೆ ಕೊಲ್ಲಿ' ಎಂದದ್ದು ಆತ್ಮಶಕ್ತಿ ಅಂದರೆ ಏನು ಎಂಬುದನ್ನು ಜಗತ್ತಿಗೆ ಪರಿಚಯಿಸಿತು.

ಇಂತಹ ಗಾಂಧಿ ಕಟ್ಟಿದ ವೈಚಾರಿಕತೆ ಏನು? ಎಲ್ಲರನ್ನೂ ಒಳಗೊಳ್ಳುವುದೇ ಗಾಂಧಿಯ ವೈಚಾರಿಕತೆ. ಬ್ರಿಟಿಷರನ್ನು ಕೂಡ ಒಳಗೊಂಡರು ಅವರು. ಆದರೆ, 'ನನ್ನ ದೇಶದ ದಾಸ್ಯ ವಿಮೋಚನೆಗಾಗಿ ಹೋರಾಡುವುದು ನಿಮ್ಮ ಕಾನೂನಿನ ಅನ್ವಯ ರಾಜದ್ರೋಹವಾದರೆ ಜೈಲಿನಿಂದ ಹೊರ ಬಂದೊಡನೆ ನಾನು ರಾಜದ್ರೋಹವನ್ನೇ ಮಾಡುತ್ತೇನೆ' ಎನ್ನಲು ಗಾಂಧಿ ಹಿಂಜರಿಯಲಿಲ್ಲ. ಹೀಗಿದ್ದರೂ, ಆ ಸಂದರ್ಭದಲ್ಲಿ ವೈಸರಾಯ್‌ಗೆ ಪತ್ರ ಬರೆಯುವಾಗ 'ಯುವರ್ ಎಕ್ಸಲೆನ್ಸಿ' ಎಂದೇ ಸಂಬೋಧಿಸುವ ಸಂಸ್ಕಾರವನ್ನು ಬಿಡಲಿಲ್ಲ. ಇಂತಹ ಗಾಂಧಿಯ ಬಗ್ಗೆ ಸಿನಿಮಾ ಮಾಡಿದವನು ಒಬ್ಬ ಬ್ರಿಟಿಷ್! ಎದುರಾಳಿಯನ್ನು ಸೋಲಿಸದೇ ಗೆಲ್ಲುವುದನ್ನು ಗಾಂಧಿಯಿಂದ ಕಲಿಯಬೇಕು. ಏಕೆಂದರೆ ಅಲ್ಲಿ ಗೆಲ್ಲುವುದು ತತ್ವ ಮಾತ್ರ; ಯಾವ ವ್ಯಕ್ತಿಯೂ ಅಲ್ಲ.

ಕಮ್ಯುನಿಸ್ಟ್ ಚಳವಳಿ ಉತ್ತುಂಗದಲ್ಲಿದ್ದ ಕಾಲ ಅದು. ಆದರೆ ಗಾಂಧಿ ಶ್ರೀಮಂತರನ್ನು ದ್ವೇಷಿಸಲಿಲ್ಲ. ಶ್ರೀಮಂತರನ್ನೂ ಒಳಗೊಂಡ ಗಾಂಧಿ ಶ್ರೀಮಂತರು ಏನನ್ನು ಮಾಡಬೇಕೆಂದು ಹೇಳಿದರು. ಕೆಳ ಜಾತಿಗಳನ್ನು ಅದಮ್ಯವಾಗಿ ಪ್ರೀತಿಸಿದರು. ಹಾಗಂತ ಮೇಲು ಜಾತಿಗಳನ್ನು ದ್ವೇಷಿಸಲಿಲ್ಲ. ಬದಲು ಮೇಲು ಜಾತಿಗಳು ಏನು ಮಾಡಬೇಕೆಂದು ಹೇಳಿದರು. ಹಿಂಜರಿದವರ ಎದುರಿನಲ್ಲಿ ತಾವು ಬರಿಗಾಲಿನಲ್ಲೇ ಹೊಲಸು ಮೆಟ್ಟಿಕೊಂಡು ಹೋಗಿ ಕೆಳಜಾತಿಗಳ ಕೇರಿಗಳನ್ನು ಸ್ವಚ್ಛ ಮಾಡಿ ತೋರಿಸಿದರು. ಸಮುದ್ರ ದಾಟಿದ್ದಕ್ಕಾಗಿ ಜಾತಿ ಬಹಿಷ್ಕೃತನಾದ ಗಾಂಧಿ ಮತ್ತೆಂದೂ ಜನಿವಾರ ಧರಿಸಲಿಲ್ಲ. ಆದರೆ ತಮ್ಮ ಜಾತಿಯನ್ನು ನಿರಾಕರಿಸಲಿಲ್ಲ. ಪಕ್ಕದಲ್ಲಿದ್ದ ಆಧುನಿಕ ಸೆಕ್ಯುಲರಿಸ್ಟ್ ಮಹಮದ್ ಅಲಿ ಜಿನ್ನಾ ಮತೀಯ ರಾಷ್ಟ್ರವೊಂದರ ನಿರ್ಮಾಪಕರಾದಾಗಲೂ ಗಾಂಧಿ ತನ್ನನ್ನು ಹಿಂದೂ ಎಂದೇ ಕರೆದುಕೊಂಡರು. ಹಿಂದೂ ಆಗಿಯೇ ಬಾಳಿದರು. ಅಂತಹ ಗಾಂಧಿ ಒಂದು ಸೆಕ್ಯುಲರ್ ರಾಷ್ಟ್ರದ ಪಿತಾಮಹ ಎನ್ನುವುದು ಚರಿತ್ರೆಯ ವಿಸ್ಮಯ.

ಹಿಂದೂ ಎನ್ನುವುದು ಇಂದೂ ಇದೆ. ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುವವರು ಒಂದಿಷ್ಟು ಮಂದಿ ಇದ್ದಾರೆ. ಹಿಂದೂ ಅಂದರೆ ಏನು ಎಂಬುದರ ಅರಿವೇ ಇಲ್ಲದೆ 'ಹಿಂದೂ' ಎಂದು ಆರ್ಭಟಿಸುವ ಇನ್ನೊಂದಷ್ಟು ಮಂದಿಯೂ ಇದ್ದಾರೆ. ಇಂತಹ ಇಬ್ಬರ ನಡುವೆ 'ಹಿಂದೂ' ನಲುಗಿಹೋಗಿದ್ದಾನೆ.

ಈ ಸ್ಥಿತಿಯ‌ ನಿರ್ಮಾಣ ಏಕಾಏಕಿ ಆಗಲಿಲ್ಲ. ಎಲ್ಲರನ್ನೂ ಒಳಗೊಂಡ ಗಾಂಧಿಯ ವೈಚಾರಿಕತೆ ಎಲ್ಲರನ್ನೂ ಒಡೆಯುವ ವೈಚಾರಿಕತೆಯಾಗಿ ಬದಲಾಗುವ ಕ್ರಿಯೆ ಗಾಂಧಿ ಹತ್ಯೆಯಿಂದಲೇ ಪ್ರಾರಂಭವಾಗಿತ್ತು. ಇವತ್ತು ಇರುವ 'ಹಿಂದೂ' ಎನ್ನುವುದು ಒಂದು ಮಾನಸಿಕತೆಯೇ ಹೊರತು ಅದೊಂದು ವೈಚಾರಿಕತೆಯಲ್ಲ. ಬ್ರಾಹ್ಮಣರನ್ನಷ್ಟೇ ಒಳಗೊಳ್ಳುವುದೋ, ದಲಿತರನ್ನೂ ಒಳಗೊಂಡುಬಿಡುವುದೋ, ಅಲ್ಲ ಮುಸ್ಲಿಂ-ಕ್ರೈಸ್ತರನ್ನೆಲ್ಲ ಒಳಗೊಂಡುಬಿಡುವುದೋ ಎಂಬ ಗೊಂದಲದಲ್ಲಿ ಹಿಂದೂ ಎಂಬ ಮಾನಸಿಕತೆ ಒದ್ದಾಡುತ್ತಿದೆ.

ಗಾಂಧಿಯ 'ಹಿಂದೂ' ಪರಿಕಲ್ಪನೆಯ ಗರ್ಭವನ್ನು ಸೀಳಿ ಹೊರಬಂದ ಆಧುನಿಕ ಭಾರತದ ಸೆಕ್ಯುಲರ್ ವೈಚಾರಿಕತೆಯು ಮೊದಲು ಬ್ರಾಹ್ಮಣರು ಮತ್ತು ಶ್ರೀಮಂತರನ್ನು ಹೊರದಬ್ಬಿತು. ನಂತರ ಮೇಲು ಜಾತಿಗಳನ್ನು ಕೈಬಿಡುತ್ತಾ ಹೋಯಿತು. ನಂತರದ ಹಂತದಲ್ಲಿ ಎಲ್ಲ ಜಾತಿಗಳಲ್ಲೂ ಇರುವ ಮಹಿಳೆಯರನ್ನು ಕೈಬಿಟ್ಟು ಅತ್ಯಾಚಾರವಾದಾಗ ಗಂಡಸರನ್ನೂ, ಸರ್ಕಾರವನ್ನೂ ನಿಂದಿಸುವಲ್ಲಿಗೆ ತನ್ನನ್ನು ತಾನು ಸೀಮಿತಗೊಳಿಸಿಕೊಂಡಿತು. ಜೈನ, ಬೌದ್ಧ, ಕ್ರೈಸ್ತರ ಪ್ರಶ್ನೆಯನ್ನು ಸಂಪೂರ್ಣವಾಗಿ ಕಡೆಗಣಿಸಿತು.

ಆದರೂ  ರಾಮಮನೋಹರ ಲೋಹಿಯಾ ತೆರೆದಿಟ್ಟ ರಚನಾತ್ಮಕ ಆಯಾಮವನ್ನು ಅಲ್ಪಸ್ವಲ್ಪ ಬೆಳೆಯಿಸಿಕೊಂಡು ಬಂದ ವೈಚಾರಿಕತೆ 1990ರ ನಂತರ ನೇತ್ಯಾತ್ಮಕವಾಗಿಯೇ ದೇಶವನ್ನು ಮುಖಾಮುಖಿಯಾಗಲು ತೊಡಗಿತು. ಹಿಂದೂ ಎಂಬುದೇ ಇಲ್ಲ, ಹಿಂದೂ ಎಂಬುದು ಬ್ರಾಹ್ಮಣ ಎಂಬ ಪ್ರತಿಪಾದನೆಯ ಮೂಲಕ ಇತರರನ್ನು ಒಗ್ಗೂಡಿಸಬಹುದೆಂಬ ಬೌದ್ಧಿಕ ತರ್ಕ ಒಂದು ತಂತ್ರವಾಗಿ ಸರಿಯಾಗಿತ್ತು. ಆದರೆ ಗಾಂಧಿ ತನ್ನ ವೈಚಾರಿಕತೆಯನ್ನು ರೂಪಿಸಿದ್ದು ಇಡೀ ದೇಶವನ್ನು ಸುತ್ತಾಡಿದ ನಂತರ ಸಿಕ್ಕ ಅನುಭವದಿಂದ ಎಂಬುದು ಮರೆತೇ ಹೋಯಿತು. ಸಾವಿರಾರು ವರ್ಷಗಳಿಂದ ಸ್ವತಂತ್ರ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ತಿತ್ವದೊಂದಿಗೆಯೇ ಏಕರೂಪದ ಪ್ರಶ್ನೆ ಬಂದಾಗ ವೈದಿಕದೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ವಿಧಾನದಲ್ಲಿ ಗುರುತಿಸಿಕೊಂಡು ಬಂದ ಸಮುದಾಯಗಳು ವಾದವೊಂದನ್ನು ಮುಂದಿಟ್ಟ ತಕ್ಷಣ ಕಳಚಿಕೊಂಡು ಬರಲಾರವು ಎಂಬುದು ಅರ್ಥವಾಗಲಿಲ್ಲ. ಸದ್ಯಕ್ಕೆ ಈ ವೈಚಾರಿಕತೆ ಮುಸ್ಲಿಂ ಮತ್ತು ದಲಿತ ಗಂಡಸರನ್ನು ಮಾತ್ರ ಅವಲಂಬಿಸಿ ಮುಂದುವರಿಯುತ್ತಿದೆ. ರಾಜಕೀಯ ನಿರ್ಧಾರಗಳಿಗೆ ಸರ್ಕಾರವನ್ನು ಪ್ರಶ್ನಿಸುವುದನ್ನು ಬಿಟ್ಟು ಬ್ರಾಹ್ಮಣ ಸಮುದಾಯವನ್ನು ಪ್ರಶ್ನಿಸಿ ಭಾವನಾತ್ಮಕ ಸಂತೋಷವನ್ನು ಅನುಭವಿಸುವ ಹತಾಶ ಲಕ್ಷಣಗಳನ್ನು ಇದು ಪ್ರದರ್ಶಿಸುತ್ತಿದೆ.

ಯಾವ ವೈಚಾರಿಕತೆಯೇ ಆದರೂ ಸಮಾಜದಿಂದಲೇ ಶಕ್ತಿಯನ್ನು ಪಡೆಯಬೇಕು. ಸಮಾಜದಿಂದ ಕಳಚಿಕೊಳ್ಳುತ್ತಾ ಹೋಗುವ ವೈಚಾರಿಕತೆ ಎಲ್ಲಿಂದ ತಾನು ಶಕ್ತಿಯನ್ನು ಪಡೆಯುತ್ತೇನೆಂದು ಭಾವಿಸಿದೆ ಎಂಬುದು ಗೊತ್ತಾಗುವುದಿಲ್ಲ. ಮತ್ತೆ ಈ ದೇಶಕ್ಕೊಂದು ರಚನಾತ್ಮಕ ವೈಚಾರಿಕತೆ ದೊರಕಲು ಸಾಧ್ಯವಿದ್ದರೆ ಅದು ಎಲ್ಲರನ್ನೂ ಒಳಗೊಂಡು ದೇಶವನ್ನು ಒಂದಾಗಿ ನಿಲ್ಲಿಸಬಲ್ಲ ಗಾಂಧಿಯಿಂದ ಮಾತ್ರ ಸಾಧ್ಯ. ಗಾಂಧಿ ಭುವನದ ಭಾಗ್ಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry