ಜಾತಿ ರಾಜಕಾರಣ ಅಂತ್ಯ ಸಂಕೀರ್ಣವಾದ ಸವಾಲು

7

ಜಾತಿ ರಾಜಕಾರಣ ಅಂತ್ಯ ಸಂಕೀರ್ಣವಾದ ಸವಾಲು

Published:
Updated:
ಜಾತಿ ರಾಜಕಾರಣ ಅಂತ್ಯ ಸಂಕೀರ್ಣವಾದ ಸವಾಲು

ಜಾತಿ, ಧರ್ಮದ ಆಧಾರದ ಮೇಲೆ ಜನ ಮತ ಹಾಕುವುದರಿಂದ ಜಾತಿ ರಾಜಕಾರಣದಲ್ಲಿ ತೊಡಗುವುದು ಭಾರತದ ರಾಜಕಾರಣಿಗಳಿಗೆ ಅನಿವಾರ್ಯ. ಇದರಿಂದ ಮುಂದುವರಿಯುವ ಮತ ಬ್ಯಾಂಕ್ ರಾಜಕಾರಣ ನಮ್ಮ ಸಮಾಜದ ಪ್ರಗತಿಗೆ ಅಡ್ಡಿ ಎಂದು ಆರ್‍‍ಎಸ್‍‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಸಮಾಜದಲ್ಲಿ ಬದಲಾವಣೆಗಳಾದಲ್ಲಿ ಆಗ 'ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಬಾರದು' ಎಂದು ಮುಕ್ತವಾಗಿ ಹೇಳುವುದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಸಮಾಜದಲ್ಲಿ ಈ ಬದಲಾವಣೆ ತರುವುದು ಹೇಗೆಂಬುದನ್ನು ಅವರು ವಿವರಿಸಿಲ್ಲ. ಏಕ ಧರ್ಮ ಆಧಾರಿತ ಸಮಾಜ ನಿರ್ಮಾಣ ಆರ್‌ಎಸ್‌ಎಸ್‌ ಸಂಸ್ಥಾಪಕರ ಗುರಿ ಎಂಬುದು ಗೊತ್ತಿರುವ ಸಂಗತಿ. ಆದರೆ ಮೋಹನ್ ಭಾಗವತ್ ಬೇರೆಯದೇ ನೆಲೆಯಲ್ಲಿ ವಿಚಾರವನ್ನು ಮಂಡಿಸಿದ್ದಾರೆ ಎಂಬುದು ವಿಶೇಷ. ತಮ್ಮದೇ ಆಯ್ಕೆಯ ಧರ್ಮ ಆಚರಿಸಲು ಎಲ್ಲರೂ ಸ್ವತಂತ್ರರು ಎಂಬ ಮಾತನ್ನೂ ಅವರು ಹೇಳಿದ್ದಾರೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಸಹಿಷ್ಣುತೆ ಬಗ್ಗೆಯೂ ಮೋಹನ್ ಭಾಗವತ್ ಮಾತನಾಡಿದ್ದಾರೆ. ತಿನ್ನುವ ಆಹಾರ ಹಾಗೂ ಧರಿಸುವ ಉಡುಪಿನ ಮೇಲೆ ಯಾವುದೇ ನಿರ್ಬಂಧವನ್ನು ಹಿಂದುತ್ವ ಹೇರುವುದಿಲ್ಲ ಎಂದು ಭಾಗವತ್ ಕಳೆದ ವರ್ಷ ದೆಹಲಿಯಲ್ಲಿ 50 ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರ ಜೊತೆ ನಡೆಸಿದ ಸಂವಾದ ಸಂದರ್ಭದಲ್ಲಿ ಹೇಳಿದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ಧರ್ಮ ಆಧಾರಿತವಾಗಿ ಸಮಾಜವನ್ನು ವಿಭಜಿಸುವ ಯತ್ನಗಳು ನಡೆಯುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಭಾಗವತ್ ಅವರ ಮಾತುಗಳು ಸ್ವಾಗತಾರ್ಹ. ಆದರೆ, ಸ್ವಯಂಘೋಷಿತ ಸಾಂಸ್ಕೃತಿಕ ಸಂಘಟನೆಯಾಗಿರುವ ಆರ್‍‍ಎಸ್‍‍ಎಸ್‍‍ನಿಂದ ಬಲ ಹಾಗೂ ನ್ಯಾಯಸಮ್ಮತತೆ ಪಡೆದುಕೊಳ್ಳುವ ಅನೇಕ ಬಲಪಂಥೀಯ ಹಿಂದುತ್ವ ಸಂಘಟನೆಗಳು ಧರ್ಮದ ಹೆಸರಲ್ಲಿ ನಡೆಸುತ್ತಿರುವ ಆಕ್ರಮಣಶೀಲ ಕುಕೃತ್ಯಗಳನ್ನು ನಿಯಂತ್ರಿಸುವುದು ಸದ್ಯದ ದೊಡ್ಡ ಸವಾಲಾಗಿದೆ ಎಂಬುದನ್ನು ಮರೆಯುವಂತಿಲ್ಲ. ವಿಎಚ್‍‍ಪಿ, ಬಜರಂಗದಳ ಹಾಗೂ ಕರ್ಣಿಸೇನಾದಂತಹ ಸಂಘಟನೆಗಳು ನಡೆಸುವ ಕುಕೃತ್ಯಗಳಿಗೂ ತಮಗೂ ಸಂಬಂಧ ಇಲ್ಲವೆಂದು ಆರ್‍‍ಎಸ್‍‍ಎಸ್ ಹೇಳಿಕೊಳ್ಳಬಹುದು. ಆದರೆ ಹಿಂದುತ್ವ ಕಾರ್ಯಸೂಚಿಯಿಂದ ಪ್ರೇರಣೆ ಪಡೆದ ತುಂಡು ಸಂಘಟನೆಗಳಿವು ಎಂಬುದು ವಾಸ್ತವ. ಆರ್‍ಎಸ್‍‍ಎಸ್‍ ಮುಖ್ಯಸ್ಥರ ಮಾತುಗಳು ಈ ಸಂಘಟನೆಗಳ ಮೇಲೆ ಪ್ರಭಾವ ಬೀರಬಹುದೇ ಎಂಬುದು ಇಲ್ಲಿ ಮುಖ್ಯ.

ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಚರಿತ್ರೆಯುದ್ದಕ್ಕೂ ಕೆಲವು ಸಮುದಾಯದ ಜನರನ್ನು ಹೊರಗಿಟ್ಟಿರುವ ಜಾತಿ ವ್ಯವ್ಸಸ್ಥೆಯ ವಿರುದ್ಧ ಹೋರಾಡಲು ಜಾತಿ ರಾಜಕಾರಣ ಬೇಕು ಎಂಬಂಥ ಮತ್ತೊಂದು ವಾದವನ್ನೂ ಇಲ್ಲಿ ಪರಿಶೀಲಿಸುವುದು ಅವಶ್ಯ. 2005ರಲ್ಲಿ ದಲಿತರಿಗಾಗಿಯೇ ಪ್ರತ್ಯೇಕ ದಲಿತ ಭಾರತೀಯ ವಾಣಿಜ್ಯೋದ್ಯಮ ಸಂಘಟನೆ (ಡಿಐಸಿಸಿಐ) ಆರಂಭಿಸಲಾಗಿತ್ತು. ಏಕೆಂದರೆ, ಭಾರತದಲ್ಲಿ ಜಾತಿ ಎಂಬುದು ಈಗಲೂ ಸಾಮಾಜಿಕವಾಗಿ ಜನರನ್ನು ಹೊರಗುಳಿಸುವ ಸಾಧನ. ಹೀಗಾಗಿ ಇದಕ್ಕೆ ಪ್ರತಿರೋಧ ತೋರುತ್ತಾ ಜಾತಿ ಅಸ್ಮಿತೆಯನ್ನು ಪ್ರಧಾನವಾಗಿ ಪರಿಗಣಿಸುವುದೂ ನಡೆದುಕೊಂಡು ಬಂದಿದೆ. ಸಾಮಾಜಿಕ ನ್ಯಾಯದ ಜೊತೆಗೆ ಜಾತಿ ವಿನಾಶ ಆಗಬೇಕೆಂಬುದು ಇಂತಹ ನಡೆಯ ಹಿಂದಿರುವ ಆದರ್ಶ. ಆದರೆ ಇದಕ್ಕೆ ಬದಲಾಗಿ ಜಾತಿ ವ್ಯವಸ್ಥೆಯನ್ನು ಬಲಪಡಿಸುತ್ತಾ ಜಾತಿ ಅಸ್ಮಿತೆಯ ರಾಜಕಾರಣ ಪ್ರತಿಗಾಮಿಯಾಗಿ ಬೆಳೆಯುತ್ತಿದೆ ಎಂಬುದು ವಿಪರ್ಯಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry