ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಒವೈಸಿ ಸೇರಿದರೆ ಸಮಾಜದ ಗತಿ ಏನು: ಸಿ.ಎಂ

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಮತ್ತು ಅಸಾದುದ್ದೀನ್‌ ಒವೈಸಿ ಅಧ್ಯಕ್ಷರಾಗಿರುವ ಆಲ್‌ ಇಂಡಿಯಾ ಮಜ್ಲಿಸ್‌ ಇತ್ತೆಹಾದುಲ್‌ ಮುಸ್ಲಿಮೀನ್ (ಎಐಎಂಐಎಂ) ಪಕ್ಷ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಹೀಗಿರುವಾಗ, ಈ ಎರಡೂ ಪಕ್ಷಗಳು ಪರಸ್ಪರ ಚುನಾವಣಾ ಹೊಂದಾಣಿಕೆ ಮಾಡಿಕೊಂಡರೆ ಸಮಾಜದ ಗತಿ ಏನು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ’ ಎಂದೂ ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದರು.

ಹೈದರಾಬಾದ್‌ನಲ್ಲಿ ರಹಸ್ಯ ಸಭೆ: ‘ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಒವೈಸಿ ಜೊತೆ ಬಿಜೆಪಿ ನಾಯಕರು ಹೈದರಾಬಾದ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಆರೋಪಿದರು.

‘ಬಿಜೆಪಿಯವರು ಉತ್ತರ ಪ್ರದೇಶದಲ್ಲಿಯೂ ಇದೇ ರೀತಿ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಕರ್ನಾಟಕದಲ್ಲೂ ಅದೇ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯವರು ಯಾವ ಮಾರ್ಗ ಬೇಕಾದರೂ ಹಿಡಿಯುತ್ತಾರೆ. ಇದು ಬಿಜೆಪಿಗೆ ಹೊಸದೇನೂ ಅಲ್ಲ’ ಎಂದರು.

‘ಅಧಿಕಾರಕ್ಕಾಗಿ ಪಿಎಫ್‌ಐ, ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಬಿಜೆಪಿ. ಬೇಕಿದ್ದರೆ  ದಾಖಲೆ ತೋರಿಸುತ್ತೇನೆ. ಆದರೆ, ನಾವು ಅಂಥ ಸಂಘಟನೆಗಳ ಜೊತೆ ಹೋಗಿಲ್ಲ’ ಎಂದರು.

ಯಾವ ಒವೈಸಿ ಬಂದರೂ ಆಗಲ್ಲ: ‘ಕರ್ನಾಟಕಕ್ಕೆ ಯಾವ ಒವೈಸಿ ಬಂದರೂ ಏನೂ ಮಾಡುವುದಕ್ಕೆ ಆಗಲ್ಲ. ಇಲ್ಲಿನ ಮುಸ್ಲಿಮರು ಬುದ್ಧಿವಂತರು. ಬಿಜೆಪಿಯ ಇಂಥ ತಂತ್ರಗಳನ್ನು ಚೆನ್ನಾಗಿ ಅರಿತಿದ್ದಾರೆ’ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಹೇಳಿದರು.

‘ನಾನು ಜೆಡಿಎಸ್‌ನಲ್ಲಿ ಇದ್ದಾಗ ಮುಸ್ಲಿಮರ ಮತಗಳನ್ನು ಪಡೆಯುವುದು ಕಷ್ಟವಾಗಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ಅಂಥ ವಾತಾವರಣ ಇಲ್ಲ. ಎಲ್ಲ ಮುಸ್ಲಿಮರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ’ ಎಂದರು.

ಬಿಜೆಪಿ ತಂತ್ರ ನಡೆಯಲ್ಲ: ‘ಬಿಜೆಪಿಯವರು ಜಾತಿ, ಧರ್ಮವನ್ನು ಎತ್ತಿ ಕಟ್ಟಿ ಚುನಾವಣೆ ಎದುರಿಸುತ್ತಾರೆ. ಮುಸ್ಲಿಂ ವಿರುದ್ಧ ಚಟುವಟಿಕೆ ನಡೆಸಿ
ಕೊಂಡು ಬರುತ್ತಿದ್ದಾರೆ. ಒವೈಸಿ ಜೊತೆ ಸಖ್ಯ ಬೆಳೆಸಿ ಚುನಾವಣೆ ಗೆಲ್ಲುವ ಬಿಜೆಪಿ ತಂತ್ರ ಕರ್ನಾಟಕದಲ್ಲಿ ನಡೆಯದು’ ಎಂದು ಇನ್ನೊಬ್ಬ
ಜೆಡಿಎಸ್‌ ಭಿನ್ನಮತೀಯ ಶಾಸಕ ಚೆಲುವರಾಯ ಸ್ವಾಮಿ ಅವರು ಹೇಳಿದರು.
***
ಒವೈಸಿ ಜತೆ ಕಾಂಗ್ರೆಸ್ ನಾಯಕರ ಮಾತುಕತೆ: ಶೋಭಾ

‘ಆಲ್ ಇಂಡಿಯಾ ಮಜ್ಲಿಸ್‌ ಇತ್ತೆಹಾದುಲ್‌ ಮುಸ್ಲಿಮೀನ್‌ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಜತೆಗೆ ಕಾಂಗ್ರೆಸ್‌ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಆಪಾದಿಸಿದ್ದಾರೆ.

‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಒವೈಸಿ ಜತೆ ಚುನಾವಣೆ ಹೊಂದಾಣಿಕೆ ಕಾಂಗ್ರೆಸ್‌ ನಾಯಕರ ಚಿಂತನೆಯ ಕೂಸು. ಒವೈಸಿ ಮನೋಭಾವನೆ ತಿಳಿಯಲು ಕಾಂಗ್ರೆಸ್ ತಮ್ಮವರನ್ನು ಈಗಾಗಲೇ ಕಳುಹಿಸಿದೆ. ಕೋಮುವಾದಿ ಶಕ್ತಿಗಳ ಜತೆ ಕೈಜೋಡಿಸುವ ಅವಶ್ಯಕತೆ ನಮಗಿಲ್ಲ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಕೋಮುವಾದಿಗಳು ಮತ್ತು ಜಿಹಾದಿಗಳ ಜತೆ ಕಾಂಗ್ರೆಸ್‌ ಕೈಜೋಡಿಸಿರುವುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಹತಾಶರಾಗಿರುವ ಕಾಂಗ್ರೆಸ್‌ ನಾಯಕರು ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದು, ಏನು ಮಾತನಾಡುತ್ತಿದ್ದೇವೆ ಎಂಬುದೇ ಅವರಿಗೆ ಗೊತ್ತಾಗುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT