‘ಬಿಜೆಪಿಗೆ ದಲಿತರ 20 ಮತವೂ ಬೀಳದಂತೆ ಹೋರಾಟ’ :ಗೌರಿ ದಿನ’ ದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ

7

‘ಬಿಜೆಪಿಗೆ ದಲಿತರ 20 ಮತವೂ ಬೀಳದಂತೆ ಹೋರಾಟ’ :ಗೌರಿ ದಿನ’ ದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ

Published:
Updated:
‘ಬಿಜೆಪಿಗೆ ದಲಿತರ 20 ಮತವೂ ಬೀಳದಂತೆ ಹೋರಾಟ’ :ಗೌರಿ ದಿನ’ ದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ

ಬೆಂಗಳೂರು: ‘ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಎಲ್ಲ ಪಕ್ಷಗಳು ಮತ್ತು ಪ್ರಗತಿಪರ ಮನಸು ಉಳ್ಳವರು ಒಗ್ಗಟ್ಟಿನಿಂದ ಹೋರಾಡಿ ಚಡ್ಡಿ ಪಕ್ಷ ಬಿಜೆಪಿಯನ್ನು ಮಣಿಸಬೇಕು’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ ಕರೆ ನೀಡಿದರು.

ಗೌರಿ ಸ್ಮಾರಕ ಟ್ರಸ್ಟ್‌ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಶೇ 20ರಷ್ಟು ದಲಿತರ ಮತಗಳಿವೆ. ಚುನಾವಣೆ ವೇಳೆ ರಾಜ್ಯದಲ್ಲೇ ಬೀಡುಬಿಟ್ಟು ಬಿಜೆಪಿಗೆ ದಲಿತರ 20 ಮತಗಳೂ ಬೀಳದಂತೆ ತಡೆಯುತ್ತೇನೆ. ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು, ಮೋದಿ ಪ್ರಧಾನಿಯಾಗಬಾರದೆಂಬ ಸಂಕಲ್ಪದೊಂದಿಗೆ ಹೋರಾಟ ನಡೆಸುತ್ತೇನೆ’ ಎಂದು ಘೊಷಿಸಿದರು.

‘ನಾನು ಎಲ್ಲಿ ಭಾಷಣ ಮಾಡುತ್ತೀನೋ ಅಲ್ಲೆಲ್ಲ ಬಿಜೆಪಿಯ ಭಕ್ತರು ಒಂದೊಂದು ಪ್ರಕರಣ ದಾಖಲಿಸುತ್ತಿದ್ದಾರೆ. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೇ ಹೆದರಲಿಲ್ಲ, ಈ ಒಂದೂವರೆ ಪುಟದ ಎಫ್‌ಐಆರ್‌ಗೆ ಹೆದರುತ್ತೀನಾ ಎನ್ನುವುದನ್ನು ಬಿಜೆಪಿ ಬಾಲಕರು ಅರ್ಥ ಮಾಡಿಕೊಳ್ಳಲಿ’ ಎಂದು ಲೇವಡಿ ಮಾಡಿದರು.

ದೆಹಲಿಯ ಕನ್ಹಯ್ಯ ಕುಮಾರ್‌, ‘ದೇಶದಲ್ಲಿರುವ ಮುಸ್ಲಿಮರನ್ನೆಲ್ಲ ಕೊಂದುಬಿಟ್ಟರೆ ಬಡತನ, ನಿರುದ್ಯೋಗ, ಶೋಷಣೆ, ಅಸಮಾನತೆ, ಭಾಷಾ ಸಂಘರ್ಷದಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಮೋದಿ ಯುವಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಪ್ರಧಾನಿಯ ರಾಜಕೀಯ ನಡೆ, ರಾಜನೀತಿ ಬಗ್ಗೆ ಚಿಂತಿಸುವುದಿಲ್ಲ. ಅವರ ಪಕೋಡಾ ವಾದವನ್ನೂ ವಿರೋಧಿಸಲು ಸಮಯ ವ್ಯರ್ಥ ಮಾಡುವುದಿಲ್ಲ. ಸಂಘಪರಿವಾರದ ಹಿಡಿತದಿಂದ ದೇಶ ಪಾರು ಮಾಡಲು ನಿರಂತರ ಹೋರಾಡುತ್ತೇವೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ‘ಮುಂದಿನ ಚುನಾವಣೆ ನಿಜವಾದ ಅಗ್ನಿಪರೀಕ್ಷೆ ಇದ್ದಂತೆ. ಈ ರಾಜ್ಯವನ್ನು ಬಿಜೆಪಿಗೆ ಒಪ್ಪಿಸಿದರೆ ಇಡೀ ದೇಶ ಮೋದಿಯ ತೆಕ್ಕೆಗೆ ಸಿಕ್ಕಂತಾಗುತ್ತದೆ. ಇದನ್ನು ತಡೆಯದಿದ್ದರೆ ಸರ್ವನಾಶ ಖಚಿತ’ ಎಂದು ಎಚ್ಚರಿಸಿದರು.

ನಟ ಪ್ರಕಾಶ್‌ ರೈ ಮಾತನಾಡಿ, ‘ಪ್ರಪಂಚದಲ್ಲಿ ಯಾವುದೇ ಫ್ಯಾಸಿಸ್ಟ್‌ ಶಕ್ತಿಗಳು ಹೆಚ್ಚು ಕಾಲ ಉಳಿದಿಲ್ಲ. ನಮ್ಮ ದೇಶದಲ್ಲಿಯೂ ಹೆಚ್ಚೆಂದರೆ ಇನ್ನು ಐದು ವರ್ಷ ಕಾಲ ಇವರು ಆಡಳಿತ ನಡೆಸಬಹುದು. ಆದರೆ, ಅವರು ಮಾಡುವ ಗಾಯ ಮತ್ತು ನೋವಿಗೆ ನಾವು 20 ವರ್ಷಗಳು ಶುಶ್ರೂಷೆ ಮಾಡಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ದುರುಳರು ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಒಂಟಿಯಾಗಿಸಿ ಬೇಟೆಯಾಡುತ್ತಿದ್ದಾರೆ. ನಾವು ಗೌರಿಯನ್ನು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ. ಗೌರಿ ವಿಚಾರಧಾರೆಗಳ ಹೆಮ್ಮರವಾಗಿ ಫಲಕೊಡುತ್ತಾಳೆ’ ಎಂದರು.

ಗೌರಿಯನ್ನು ನೆನೆದು ಕವಿತಾ ಲಂಕೇಶ್‌ ವೇದಿಕೆಯಲ್ಲೇ ಕಂಬನಿ ಮಿಡಿದರು. ಗೌರಿ ಕುರಿತು ಬರೆದಿರುವ ಕವನವನ್ನು ನಜ್ಮಾ ವಾಚಿಸಿದಾಗ ಒತ್ತರಿಸಿ ಬಂದ ದುಃಖ ತಡೆಯಲಾಗದೆ ಅತ್ತರು.

ಗೌರಿಲಂಕೇಶ್‌ ವಾರಪತ್ರಿಕೆಯನ್ನು ಟ್ರಸ್ಟ್‌ ಮೂಲಕ ಮಾರ್ಚ್‌ 8ರಂದು ಹೊರ ತರಲಾಗುವುದು ಎಂದು ಟ್ರಸ್ಟ್‌ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ತಿಳಿಸಿದರು.

ಒಂದು ಪುಸ್ತಕಕ್ಕೆ ಒಂದು ಲಕ್ಷ

ಕಾರ್ಯಕ್ರಮದಲ್ಲಿ ‘ನಾನು ಗೌರಿ, ಉರಿಯ ಬೆಳದಿಂಗಳು’ ಕವನ ಸಂಕಲನ ಮತ್ತು ಗೌರಿ ಹೂ (ಗೌರಿ ಬರೆದ ಮತ್ತು ಗೌರಿಯ ಬಗ್ಗೆ ಬರೆಯಲಾದ ಲೇಖನಗಳ ಸಂಗ್ರಹ) ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ₹200 ಮುಖಬೆಲೆಯ ಒಂದು ಪುಸ್ತಕವನ್ನು ನಟ ಪ್ರಕಾಶ್‌ ರೈ ₹1 ಲಕ್ಷ ನೀಡಿ ಖರೀದಿಸಿದರು.

***

ನರೇಂದ್ರ ಮೋದಿ ಅವರು ರೋಬೊ ಇದ್ದಂತೆ. ಅವರಿಂದ ದೇಶದ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಕಾಳಜಿ ತೋರುವ ಸಾಮರ್ಥ್ಯವಿಲ್ಲ.

–ಉಮರ್‌ ಖಾಲಿದ್‌, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ನಾಯಕ

***

ಸಂಘಪರಿವಾರವೇ ನಿಜವಾದ ಭಯೋತ್ಪಾದಕ ಸಂಘಟನೆ. ಇವರಿಂದ ನಾವು ದೇಶ ಪ್ರೇಮದ ಪಾಠ ಕಲಿಯಬೇಕಿಲ್ಲ.

ಶೆಹ್ಲಾ ರಶೀದ್‌, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ನಾಯಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry