ತಾರುಣ್ಯ–ಸಾಹಿತ್ಯದ ಸೌಂದರ್ಯ ಸಮೀಕರಣ

7
ಸಾಹಿತ್ಯೋತ್ಸವದಲ್ಲಿ ಸಹೃದಯರ ತೊರೆ; ಐದು ದಿನ, ಆರು ವೇದಿಕೆ, 250 ಗೋಷ್ಠಿಗಳು

ತಾರುಣ್ಯ–ಸಾಹಿತ್ಯದ ಸೌಂದರ್ಯ ಸಮೀಕರಣ

Published:
Updated:
ತಾರುಣ್ಯ–ಸಾಹಿತ್ಯದ ಸೌಂದರ್ಯ ಸಮೀಕರಣ

ಜೈಪುರ: ಇಪ್ಪತ್ತೈದು ವರ್ಷದ ರೂಪಿಕೌರ್‌ ‘ಇನ್‌ಸ್ಟಾಗ್ರಾಮ್‌ ಕವಿ’ ಎಂದೇ ಪ್ರಸಿದ್ಧರಾದವರು. ‘ಕವಿಯಾಗುವ ನನ್ನ ಕನಸು ಸಾಮಾಜಿಕ ಜಾಲತಾಣಗಳ ಮೂಲಕವೇ ನನಸಾಯಿತು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಯುವ ಕವಯಿತ್ರಿ, ‘ಜೈ‍ಪುರ ಸಾಹಿತ್ಯೋತ್ಸವ’ದಲ್ಲಿ ಹೊಸ ತಲೆಮಾರಿನ ಲೇಖಕರ ಪ್ರತಿನಿಧಿಯಂತೆ, ಇಡೀ ಉತ್ಸವದ ಆಶಯದಂತೆ ಕಾಣಿಸುತ್ತಿದ್ದರು.

‘ಜೆಎಲ್‌ಎಫ್‌’ನ ಯಶಸ್ಸು ತರುಣತರುಣಿಯರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆದಿರುವುದರಲ್ಲಿದೆ. ‘ಇಲ್ಲಿಗೆ ಬರುವ ಶೇ.60ರಷ್ಟು ಮಂದಿ 25 ವರ್ಷದೊಳಗಿನವರು’ ಎನ್ನುವ ಉತ್ಸವದ ಸಂಘಟಕರಲ್ಲೊಬ್ಬರಾದ ನಮಿತಾಗೋಖಲೆ ಅವರ ಮಾತು ಕೂಡ ಜೈಪುರ ಸಾಹಿತ್ಯ ಹಬ್ಬಕ್ಕಿರುವ ತಾರುಣ್ಯದ ನಂಟಿನ ಕಥೆ ಹೇಳುವಂತಿದೆ.

ಜ.25ರಂದು ಆರಂಭವಾದ ಈ ಬಾರಿಯ ಉತ್ಸವದ ಮೊದಲನೇ ದಿನ ಅಷ್ಟೇನೂ ಗೌಜುಗದ್ದಲದಿಂದ ಕೂಡಿರಲಿಲ್ಲ. ಎರಡನೇ ದಿನದಿಂದ ಡಿಗ್ಗಿ ಪ್ಯಾಲೇಸ್‌ನ ಪರಿಸರವೇ ಬದಲಾಯಿತು. ಉತ್ಸವದ ಆರು ವೇದಿಕೆಗಳಲ್ಲಿ, ವೇದಿಕೆಗಳಾಚೆಗಿನ ಬಯಲಿನಲ್ಲಿ, ಮಳಿಗೆಗಳಲ್ಲಿ –ಎಲ್ಲಿ ನೋಡಿದರೂ ಹುಡುಗ ಹುಡುಗಿಯರ ರಂಗು. ಶಾಲಾಸಮವಸ್ತ್ರ ತೊಟ್ಟವರಿಂದ ಹಿಡಿದು, ‘ವಸ್ತ್ರಸಂಹಿತೆ’ ಧಿಕ್ಕರಿಸುವ ಕುದಿಪ್ರಾದವರಿಂದ ಸಾಹಿತ್ಯೋತ್ಸವದ ನೆಪದಲ್ಲಿ ಫ್ಯಾಷನ್‌ ಪರೇಡ್‌ಗೆ ಡಿಗ್ಗಿಪ್ಯಾಲೇಸ್‌ ವೇದಿಕೆಯಾದಂತಿತ್ತು.

ಮೋಹನಮುರಲಿ: ಇಷ್ಟೊಂದು ಸಂಖ್ಯೆಯ ಯುವಜನ ‘ಜೆಎಲ್‌ಎಫ್‌’ ಸೆಳೆತಕ್ಕೆ ಒಳಗಾಗಿರುವುದು ಹೇಗೆ? ಬಾಲಿವುಡ್‌ ಸೆಲೆಬ್ರಿಟಿಗಳನ್ನು ನೋಡಲು ಇಲ್ಲಿಗೆ ಬರುತ್ತಾರಾ? ನಂದಿತಾ ದಾಸ್‌ ಹಾಗೂ ನವಾಜುದ್ದೀನ್‌ ಸಿದ್ದಿಕಿ ಅವರ ಗೋಷ್ಠಿಗೆ ಜನರು ಕಿಕ್ಕಿರಿದಿದ್ದು ಈ ಮಾತಿಗೆ ಉದಾಹರಣೆಯಂತಿತ್ತು. ಆದರೆ, ಉತ್ಸವದ ಮೇಲ್ವಿಚಾರಕರಲ್ಲಿ ಒಬ್ಬರಾದ ಸಂಜಯ್‌ ಕೆ.ರಾವ್‌ ಅವರಿಗೆ ‘ಜೆಎಲ್‌ಎಫ್‌’ ಜನಪ್ರಿಯತೆ ಜೊತೆ ಬಾಲಿವುಡ್‌ ಅನ್ನು ತಳಕು ಹಾಕುವ ಪ್ರಶ್ನೆಯೇ ಕಿರಿಕಿರಿ ಹುಟ್ಟಿಸುತ್ತದೆ. ‘ಬಾಲಿವುಡ್‌ ಬಗ್ಗೆ ನಿಮ್ಮ ಪರಿಕಲ್ಪನೆ ಏನು? ಇಲ್ಲಿಗೆ ಬಂದಿರುವ ವಿಶಾಲ್‌ ಭಾರದ್ವಾಜ್‌, ಅನುರಾಗ್‌ ಕಶ್ಯಪ್‌ ಜೊತೆಗಿನ ಸಂವಾದಗಳಲ್ಲಿ ಸಾಹಿತ್ಯದ ಸಂವೇದನೆ ಇರಲಿಲ್ಲವಾ? ಸಿನಿಮಾ ಗೀತರಚನೆ ಸಾಹಿತ್ಯವಲ್ಲವಾ?’– ಅವರು ಮರುಪ್ರಶ್ನೆಗಳನ್ನು ಎಸೆಯುತ್ತಾರೆ.

ಸಂಜಯ್‌ ಸಿಡಿಮಿಡಿಗೆ ಸಾಕ್ಷ್ಯಗಳು ಉತ್ಸವದಲ್ಲಿಯೇ ಸಿಗುತ್ತವೆ. ಲೇಖಕ ಅಶ್ವಿನ್‌ ಸಾಂಘಿ ಅವರ ‘ಕೀಪರ್ಸ್‌ ಆಫ್‌ ಕಾಲಚಕ್ರ’ ಕೃತಿ ಪರಿಚಯದ ಗೋಷ್ಠಿಗೆ ಸಹೃದಯರು ದೊಡ್ಡಸಂಖ್ಯೆಯಲ್ಲಿ ನೆರೆದಿದ್ದರು. ಅಷ್ಟು ಮಾತ್ರವಲ್ಲ, ಗೋಷ್ಠಿಯ ನಂತರ ಪುಸ್ತಕದ ಮೇಲೆ ನೆಚ್ಚಿನ ಲೇಖಕನ ಸಹಿ ಪಡೆಯಲು ಯುವಜನರ ಉದ್ದನೆ ಸಾಲು. ಭಾರತೀಯ ಭಾಷೆಗಳಲ್ಲಿ ಬರೆಯುವ ಯಾವ ಲೇಖಕನಾದರೂ ಕರುಬುವ ದೃಶ್ಯವದು.

ಪುಸ್ತಕ ಮಳಿಗೆಯಲ್ಲಿ ಆಯಾದಿನದ ಗೋಷ್ಠಿಗಳಲ್ಲಿ ಚರ್ಚೆಯಾಗುವ ಪುಸ್ತಕಗಳ ಪ್ರದರ್ಶನದ ಪ್ರತ್ಯೇಕ ವಿಭಾಗವೇ ಇದ್ದುದು ಪುಸ್ತಕಗಳಿಗಿದ್ದ ಬೇಡಿಕೆಯ ಕುರುಹಿನಂತಿತ್ತು.

ಖ್ಯಾತನಾಮರ ದಂಡು: ಭಾರತದ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿನ ಪ್ರಸಿದ್ಧ ಬರಹಗಾರರು– ಸಾಧಕರು ಯುವಜನರ ಆಕರ್ಷಣೆಯ ಕೇಂದ್ರಗಳಾಗಿದ್ದರು. ಹೋಮಿ ಕೆ.ಭಾಭಾ, ಪಿಕೊ ಅಯ್ಯರ್‌, ಮುಹಮ್ಮದ್‌ ಯೂನಸ್‌, ಸ್ಯಾಮ್‌ ಮಿಲ್ಲರ್‌, ಕ್ರಿಸ್ಟೋಫೆ ಜಾಫ್ರೆಲೊಟ್‌, ಹೆಲೆನ್‌ ಫೀಲ್ಡಿಂಗ್, ಸುಜಾತಾ ಗಿಲ್ಡಾ, ಎಮಿ ಟ್ಯಾನ್, ಜಾಕೀರ್‌ ಹುಸೇನ್‌, ಸೋನಾಲ್‌ ಮಾನ್‌ ಸಿಂಗ್‌, ಮೀರಾ ನಾಯರ್‌ – ‘ಜೆಎಲ್‌ಎಫ್‌’ನಲ್ಲಿ ಎಲ್ಲಿ ನೋಡಿದರೂ ಚುಂಬಕಗಳೇ! ಉತ್ಸವದ ಸೂತ್ರಧಾರರಲ್ಲೊಬ್ಬರಾದ ವಿಲಿಯಂ ಡಾರ್ಲಿಂಪಲ್‌ ಕೂಡ ಸುಪ್ರಸಿದ್ಧ ಪ್ರವಾಸ ಕಥನಕಾರ.

ಸಾಹಿತ್ಯವೂ ಯೌವನವೂ ಒಟ್ಟಾಗಿ ಭಾರತೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ರೂಪಿಸಿರಬಹುದಾದ ಹೊಸ ‘ಸೌಂದರ್ಯ ಸಮೀಕರಣ’ದಂತೆ  ‘ಜೆಎಲ್‌ಎಫ್’ ಕಾಣಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry