ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‍ಬಾಲ್ ಪಂದ್ಯ

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಫುಟ್‍ಬಾಲ್ ಪಂದ್ಯವನ್ನೇ ನೋಡಿಲ್ಲದ ಯೇಸುಸ್ವಾಮಿ ಒಮ್ಮೆ ಪ್ರೊಟೆಸ್ಟೆಂಟ್‌ ಹಾಗೂ ಕ್ಯಾಥೊಲಿಕ್‌ ಪಂಗಡಗಳ ಮಧ್ಯೆ ನಡೆಯುವ ಪಂದ್ಯವೊಂದನ್ನು ನೋಡಲು ಹೋದರು. ಪಂದ್ಯ ಆರಂಭವಾಗಿ ಜಿದ್ಧಾಜಿದ್ಧಿನ ಹೋರಾಟ ನಡೆಯುತ್ತಿತ್ತು. ಕ್ಯಾಥೊಲಿಕ್‌ ತಂಡದವರು ಮೊದಲನೇ ಗೋಲನ್ನು ಬಾರಿಸಿದಾಗ, ಯೇಸುಸ್ವಾಮಿ ಎದ್ದು ನಿಂತು ಸೀಟಿಯೊಡೆದು ಸಂಭ್ರಮಿಸಿದರು. ಕೆಲ ನಿಮಿಷಗಳ ನಂತರ, ಪ್ರೊಟೆಸ್ಟೆಂಟ್‌ ತಂಡದವರು ಉತ್ತಮ ದಾಳಿಯನ್ನು ಸಂಘಟಿಸಿ ತಮ್ಮ ತಂಡದ ಪರವಾಗಿ ಒಂದು ಗೋಲನ್ನು ಹೊಡೆದರು. ಯೇಸುಸ್ವಾಮಿ ಮತ್ತೆ ಎದ್ದು ನಿಂತು ಸೀಟಿ ಹೊಡೆದು ಸಂಭ್ರಮಿಸಿದರು. ಯೇಸುಸ್ವಾಮಿಯ ಹಿಂದಿನ ಆಸನದಲ್ಲಿ ಕುಳಿತು ಪಂದ್ಯವನ್ನು ನೋಡುತ್ತಾ ಇದ್ದ ಮಹನೀಯರೊಬ್ಬರು ಇದರಿಂದ ಗಲಿಬಿಲಿಗೊಂಡು ಯೇಸುಸ್ವಾಮಿಯ ಭುಜವನ್ನು ತಟ್ಟಿ, ರಾಯರೇ, ತಾವು ಯಾವ ತಂಡದ ಪರವಾಗಿದ್ದೀರಿ? ಎಂದು ಕೇಳಲು, ಯೇಸುಸ್ವಾಮಿ ನಗುಮುಖದಿಂದ ‘ನಾನು ಯಾವ ತಂಡದ ಪರವಾಗಿಯೂ ಇಲ್ಲ, ನಾನು ಫುಟ್ಬಾಲ್ ಪಂದ್ಯವನ್ನು ಆಸ್ವಾದಿಸಲು ಬಂದಿದ್ದೇನೆ’ ಎಂದುತ್ತರಿಸಿದರು. ಪಂದ್ಯದ ಮುಗಿದ ಮೇಲೆ, ತಾವು ಯಾವತ್ತೂ ಯಾವ ತಂಡದ ಪರವಾಗಿಯೂ ನಿಲ್ಲುವುದಿಲ್ಲವೇ ಎಂದು ಪ್ರಶ್ನಿಸಲು, ಯೇಸುಸ್ವಾಮಿ, ನಾನಿರುವುದು ಜನರ ಪರವಾಗಿ, ಧರ್ಮಗಳ ಪರವಾಗಿ ಅಲ್ಲ, ಮಾನವತೆಯ ಪರವಾಗಿ, ಕಾಯಿದೆ ಕಟ್ಟಳೆಗಳ ಪರವಾಗಿ ಅಲ್ಲ, ಎಂದು ಉತ್ತರಿಸಿದರು. ಇಂದಿನ ಕಾಲಕ್ಕೆ ಸೂಕ್ತವಾದ ಆಧ್ಯಾತ್ಮಿಕ ಗುರು ಟೋನಿ ಡಿ’ಮೆಲ್ಲೊ ಧರ್ಮಗಳ ಬಗ್ಗೆ ಹೇಳಿದ ಮಾರ್ಮಿಕ ಕಥೆಯಿದು.

ಮಾನವನನ್ನು ಸ್ವತಂತ್ರಗೊಳಿಸುವುದು ಧರ್ಮದ ಉದ್ದೇಶ, ಅವನನ್ನು ಬಂಧಿಯಾಗಿಸುವುದಲ್ಲ. ಆದರೆ ಮೂಲಧರ್ಮಕ್ಕೆ ನೂರೆಂಟು ಕಾಯಿದೆ ಕಟ್ಟಳೆಗಳನ್ನು ಪೋಣಿಸಿ ಅದನ್ನು ಭಾರವಾದ ಹೊರೆಯಾಗಿಸಿದ್ದು ಧಾರ್ಮಿಕ ನಾಯಕರ ಘನಕಾರ್ಯ. ದಶಾಜ್ಞೆಗಳ ಆಧಾರದ ಮೇಲೆ ನಿಂತಿದ್ದ ಯೆಹೂದ್ಯ ಧರ್ಮವನ್ನು, ನೂರಾರು ಕಟ್ಟಳೆಗಳ ಧರ್ಮವನ್ನಾಗಿ ಸಾಮಾನ್ಯ ಜನರಿಗೆ ಹೊರಲು ಅಸಾಧ್ಯವಾಗ ಹೊರೆಯನ್ನಾಗಿಸಿದ್ದು ನಾಯಕರಾದ ಫರಿಸಾಯರು ಹಾಗೂ ಧರ್ಮಪಂಡಿತರು. ಯೇಸುಸ್ವಾಮಿ ಈ ಎಲ್ಲಾ ಕಾಯಿದೆ ಕಟ್ಟಳೆಗಳನ್ನು ದೈವ ಪ್ರೀತಿ ಹಾಗೂ ಪರ ಪ್ರೀತಿ ಎಂಬ ಅತ್ಯಂತ ಸರಳ ಕಟ್ಟಳೆಯಲ್ಲಿ ಒಂದುಗೂಡಿಸಿ ಮಾನವನ ಹೆಗಲ ಮೇಲಿದ್ದ ಅಸಾಧ್ಯ ಭಾರವನ್ನು ಹಗುರಗೊಳಿಸಿದರು. ಎಲ್ಲಾ ಧಾರ್ಮಿಕ ನಿಯಮಗಳಿಗಿಂತ ಮಾನವೀಯತೆಯೇ ಅತಿ ದೊಡ್ಡ ಬಾಧ್ಯತೆ ಎಂದು ಬೋಧಿಸಿದರು. ಸಾಬ್ಬತ್ ದಿನದಂದು ತಮ್ಮ ಹಸಿವೆಯನ್ನು ನೀಗಿಸಲು ಗೋದಿ ಕಾಳುಗಳನ್ನು ಆರಿಸಿ ತಿಂದ ಶಿಷ್ಯರ ನೆರವಿಗೆ ಧಾವಿಸಿ, ಯೆಹೂದ್ಯ ನಿಯಮಗಳ ಪ್ರಕಾರ ಅದು ತಪ್ಪೆಂದು ವಾದಿಸಿದ್ದ ಫರಿಸಾಯರಿಗೆ, ಹಸಿದವನಿಗೆ ಆಹಾರ ನೀಡುವುದು ಎಲ್ಲಾ ಧಾರ್ಮಿಕ ನಿಯಮಗಳಿಗಿಂತ ಶ್ರೇಷ್ಠ ಎಂದು ಸ್ಪಷ್ಟಪಡಿಸಿದರು.

ಮಾನವತೆಯೇ ಶ್ರೇಷ್ಠ ಧರ್ಮ, ಅದಿಲ್ಲದೆ ಸಕಲ ಧರ್ಮಗಳೂ ಅರ್ಥವಿಲ್ಲದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT