ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಜಯ ಅನಿವಾರ್ಯ

ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ ಫುಟ್‌ಬಾಲ್‌ ; ಇಂದು ಟ್ರಾನ್ಸ್‌ಪೋರ್ಟ್‌ ವಿರುದ್ಧ ಹೋರಾಟ
Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯಾ ಫುಟ್‌ಬಾಲ್‌ ಕಾನ್ಫೆಡರೇಷನ್‌ ಕಪ್‌ನಲ್ಲಿ (ಎಎಫ್‌ಸಿ) ಚೊಚ್ಚಲ ಪ್ರಶಸ್ತಿ ಗೆಲ್ಲುವ ಮಹಾದಾಸೆ ಹೊಂದಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಈ ಹಾದಿಯಲ್ಲಿ  ಮಹತ್ವದ ಹೋರಾಟಕ್ಕೆ ಸಜ್ಜಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಎಎಫ್‌ಸಿ ಕಪ್‌ ಪ್ರಾಥಮಿಕ ಸುತ್ತಿನ ಎರಡನೇ ಲೆಗ್‌ನ ಹಣಾಹಣಿಯಲ್ಲಿ ಬಿಎಫ್‌ಸಿ, ಭೂತಾನ್‌ನ ಟ್ರಾನ್ಸ್‌ಪೋರ್ಟ್‌ ಯುನೈಟೆಡ್‌ ವಿರುದ್ಧ ಸೆಣಸಲಿದೆ.

ಹೋದ ವಾರ ಭೂತಾನ್‌ನಲ್ಲಿ ನಡೆದಿದ್ದ ಮೊದಲ ಲೆಗ್‌ನ ಪಂದ್ಯ ಗೋಲು ರಹಿತ ಡ್ರಾ ಆಗಿತ್ತು. ಹೀಗಾಗಿ ಮುಂದಿನ ಹಂತಕ್ಕೆ ಲಗ್ಗೆ ಇಡಬೇಕಾದರೆ ಬಿಎಫ್‌ಸಿಗೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಭೂತಾನ್‌ನಲ್ಲಿ ಜರುಗಿದ್ದ ಪೈಪೋಟಿಯಲ್ಲಿ ಸುನಿಲ್‌ ಚೆಟ್ರಿ ಪಡೆ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಎದುರಾಳಿಗಳ ಬಲಿಷ್ಠ ರಕ್ಷಣಾ ಕೋಟೆ ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಲು ಆಗಿರಲಿಲ್ಲ.

ಮಂಗಳವಾರ ತವರಿನ ಅಭಿ ಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದೆ.

ಚೆಟ್ರಿ ಮತ್ತು ವೆನಿಜುವೆಲಾದ ಆಟಗಾರ ಮಿಕು, ಬೆಂಗಳೂರಿನ ತಂಡದ ಬೆನ್ನೆಲುಬಾಗಿದ್ದಾರೆ. ಹಿಂದಿನ ಐದು ಐಎಸ್‌ಎಲ್‌ ಪಂದ್ಯಗಳಲ್ಲಿ ಇವರು ಕ್ರಮವಾಗಿ 5 ಮತ್ತು 3 ಗೋಲುಗಳನ್ನು ದಾಖಲಿಸಿದ್ದಾರೆ. ಉತ್ತಮ ಲಯದಲ್ಲಿರುವ ಇವರು ಟ್ರಾನ್ಸ್‌ಪೋರ್ಟ್‌ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗಬಲ್ಲರು.

ಎರಿಕ್‌ ಪಾರ್ಟಲು, ಉದಾಂತ್‌ ಸಿಂಗ್‌, ಲೆನಿ ರಾಡ್ರಿಗಸ್‌, ರಾಹುಲ್‌ ಬೆಕೆ, ಜುನಾನ್‌ ಮತ್ತು ಅಲ್ವಿನ್‌ ಜಾರ್ಜ್‌ ಅವರ ಮೇಲೂ ಭರವಸೆ ಇಡಬಹುದು. ಸೋಮವಾರ ಕಠಿಣ ತಾಲೀಮು ನಡೆಸಿರುವ ಇವರು ಕಂಠೀರವ ಕ್ರೀಡಾಂ ಗಣದಲ್ಲಿ ಕಾಲ್ಚಳಕ ತೋರಿ ತವರಿನ ಅಭಿಮಾನಿಗಳಿಗೆ ಮನರಂಜನೆಯ ರಸ ದೌತಣ ಉಣಬಡಿಸಲು ಕಾಯುತ್ತಿದ್ದಾರೆ.

ಬಿಎಫ್‌ಸಿ ತಂಡ ಐಎಸ್‌ಎಲ್‌ನಲ್ಲಿ ಸತತವಾಗಿ ಪಂದ್ಯಗಳನ್ನು ಆಡುತ್ತಿದೆ. ಹೀಗಾಗಿ ಕೋಚ್‌ ಅಲ್ಬರ್ಟ್‌ ರೋಕಾ ಈ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಬದಲಾವಣೆಗೆ ಮಾಡಿದರೆ ಕೆಲ ಹೊಸಬರಿಗೆ ಅಂಗಳಕ್ಕಿಳಿಯುವ ಅವಕಾಶ ಸಿಗಬಹುದು.

ವಿಶ್ವಾಸದಲ್ಲಿ ಟ್ರಾನ್ಸ್‌ಪೋರ್ಟ್‌: ಭೂತಾನ್‌ ರಾಷ್ಟ್ರೀಯ ಲೀಗ್‌ನಲ್ಲಿ ಚಾಂಪಿಯನ್‌ ಆಗಿರುವ ಟ್ರಾನ್ಸ್‌ಪೋರ್ಟ್‌ ತಂಡವೂ ಜಯದ ಮಂತ್ರ ಜಪಿಸುತ್ತಿದೆ.

ಎಜೆ ಕಾಲಿನ್ಸ್‌ ಪೆಡ್ರೊ, ಕೆಜಾಂಗ್‌ ವಾಂಗದಿ, ಪೂರ್ಣಕುಮಾರ್‌ ಪ್ರಧಾನ್‌ ಮತ್ತು ಕಿನ್‌ಲೆ ಪೆಂಜೊರ್‌ ಅವರಂತಹ ಪ್ರತಿಭಾವಂತ ಆಟಗಾರರು ಈ ತಂಡದಲ್ಲಿದ್ದಾರೆ. ಕೆಂಚೊ ತೊಬ್‌ಗೆ, ಹರಿ ಗುರುಂಗ್‌, ಚೋಕಿ ವಾಂಗ್‌ಚುಕ್‌ ಮತ್ತು ಸೋನಮ್‌ ತೊಬ್‌ಗೆ ಅವರು ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಇವರನ್ನು ನಿಯಂತ್ರಿಸಲು ಬಿಎಫ್‌ಸಿ ಕೋಚ್‌ ಅಲ್ಬರ್ಟ್‌ ರೋಕಾ ಯಾವ ಬಗೆಯ ಯೋಜನೆ ಹೆಣೆದಿದ್ದಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಪಂದ್ಯದ ಆರಂಭ: ರಾತ್ರಿ 8

ಸ್ಥಳ: ಕಂಠೀರವ ಕ್ರೀಡಾಂಗಣ.
**

ಟ್ರಾನ್ಸ್‌ಪೋರ್ಟ್‌ ಯುನೈಟೆಡ್‌ ಅಪಾಯಕಾರಿ ತಂಡ. ಹೀಗಾಗಿ ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎದುರಾಳಿಗಳನ್ನು ಕಟ್ಟಿಹಾಕಲು ಸೂಕ್ತ ಯೋಜನೆ ಹೆಣೆದಿದ್ದೇವೆ.
-ಅಲ್ಬರ್ಟ್‌ ರೋಕಾ, ಬಿಎಫ್‌ಸಿ ಕೋಚ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT