ಹೆಗಡೆಗೆ ಅಗ್ರಸ್ಥಾನ: ಬಿಜೆಪಿಯಲ್ಲಿ ಅಸಮಾಧಾನ

7
ತಾರಾ ಪ್ರಚಾರಕರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿದ ಅನಂತಕುಮಾರ್

ಹೆಗಡೆಗೆ ಅಗ್ರಸ್ಥಾನ: ಬಿಜೆಪಿಯಲ್ಲಿ ಅಸಮಾಧಾನ

Published:
Updated:
ಹೆಗಡೆಗೆ ಅಗ್ರಸ್ಥಾನ: ಬಿಜೆಪಿಯಲ್ಲಿ ಅಸಮಾಧಾನ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ವರಿಷ್ಠರು ಸಿದ್ಧಪಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆಗೆ ಆರನೇ ಸ್ಥಾನ ನೀಡಿರುವುದು ರಾಜ್ಯ ಘಟಕದಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 75 ಜನ ತಾರಾ ಪ್ರಚಾರಕ ಪಟ್ಟಿಯನ್ನು ಸಿದ್ಧಪಡಿಸಿ, ರಾಜ್ಯ ಘಟಕಕ್ಕೆ ಕಳುಹಿಸಲಾಗಿದೆ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷರು, ಹಿರಿಯ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಹೆಸರುಗಳನ್ನು ಕಡೆಗಣಿಸಿ ಹೆಗಡೆಗೆ ಬಡ್ತಿ ನೀಡಿರುವುದಕ್ಕೆ ಆಂತರಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ಕಾರಣಕ್ಕಾಗಿ ಪಟ್ಟಿಯನ್ನು ಈವರೆಗೂ ಬಿಡುಗಡೆ ಮಾಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿವಾದ ಎಬ್ಬಿಸುವ ಪ್ರಚೋದನಾಕಾರಿ ಹೇಳಿಕೆ ನೀಡುವಲ್ಲಿ ನಿಸ್ಸೀಮರಾದ ಹಾಗೂ ಸಂವಿಧಾನ ಬದಲಾವಣೆ ಮಾಡಬೇಕು ಎಂಬ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದ ಹೆಗಡೆ ಅವರಿಂದ ರಾಜಕೀಯವಾಗಿ ಅನುಕೂಲ ಕಡಿಮೆ. ಹಾಗಿದ್ದರೂ ಅವರಿಗೆ ಅಗ್ರಪಂಕ್ತಿ ನೀಡಿರುವುದು ಸರಿಯಲ್ಲ ಎಂದು ಪ್ರಮುಖರು ಅತೃಪ್ತಿ ಹೊರಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

ಒಂದು ಬಾರಿ ಮುಖ್ಯಮಂತ್ರಿಯಾಗಿದ್ದ, ಹಿರಿಯ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ, ದಲಿತ ಸಮುದಾಯದ ಹಿರಿಯ ನಾಯಕ ರಮೇಶ ಜಿಗಜಿಣಗಿ, ಕರ್ನಾಟಕದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜ್ಯದಿಂದ ಆಯ್ಕೆಯಾದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಹೆಗಡೆ ನಂತರದ ಸ್ಥಾನದಲ್ಲಿದ್ದಾರೆ. ಪಟ್ಟಿ ಮಾಡುವಾಗ ಶಿಷ್ಟಾಚಾರ ಪಾಲನೆಯಾಗದೇ ಇರುವುದು ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಬಡ್ತಿಗೆ ಆಕ್ಷೇಪ: ಕೇವಲ ಸಂಸದರಾಗಿ ಹೆಗಡೆ ನೀಡುವ ಹೇಳಿಕೆಗೆ ಹೆಚ್ಚಿನ ಪ್ರಚಾರ ಸಿಗುವುದಿಲ್ಲ. ಸಚಿವರಾಗಿ ನೀಡುವ ಹೇಳಿಕೆಗೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ. ಹಿಂದೂ ಮತಗಳ ಕ್ರೋಡೀಕರಣಕ್ಕೆ ಇದರಿಂದ ಅನುಕೂಲ ಎಂಬ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ನೀಡಲಾಯಿತು ಎಂದು ಬಿಜೆಪಿ ಆಂತರಿಕ ವಲಯದಲ್ಲಿ ಚರ್ಚೆಯೂ ನಡೆದಿತ್ತು.

ಪಕ್ಷದ ರಾಜ್ಯ ಘಟಕದಲ್ಲಿ ಆಯಕಟ್ಟಿನ ಸ್ಥಾನವನ್ನು ಇಲ್ಲಿಯವರೆಗೂ ಹೆಗಡೆ ಅಲಂಕರಿಸಿಲ್ಲ. ಸಚಿವರಾಗುವವರೆಗೆ ಪಕ್ಷದ ಚಟುವಟಿಕೆಯಿಂದ ಬಹುತೇಕ ಹೊರಗಿದ್ದ ವ್ಯಕ್ತಿಯನ್ನು ಏಕಾಏಕಿ ಆರನೇ ಸ್ಥಾನಕ್ಕೆ ಏರಿಸಿರುವುದು ಎಷ್ಟು ಸರಿ ಎಂದೂ ನಾಯಕರು ಪ್ರಶ್ನಿಸಲಾರಂಭಿಸಿದ್ದಾರೆ.

ಅವರಿಗೆ ಹೀಗೆ ಬಡ್ತಿ ನೀಡುತ್ತಾ ಬಂದರೆ, ಚುನಾವಣೆ ಹೊತ್ತಿಗೆ ಅಥವಾ ಮುಗಿದ ಬಳಿಕ ಅವರು ನಾಲ್ಕನೆ ಸ್ಥಾನಕ್ಕೆ ಬಂದರೂ ಬರಬಹುದು ಎಂಬ ಆತಂಕ ಪಕ್ಷದ ನಾಯಕರಲ್ಲಿ ಕಾಡಲಾರಂಭಿಸಿದೆ. ಅದಕ್ಕಾಗಿ ವಿರೋಧ

ವ್ಯಕ್ತವಾಗಿದೆ ಎಂದೂ ಮೂಲಗಳು ಹೇಳಿವೆ.

***

1.ಪ್ರಧಾನಿ ನರೇಂದ್ರ ಮೋದಿ

2.ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ

3.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

4.ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ

5.ಕೇಂದ್ರ ಸಂಸದೀಯ ಸಚಿವ ಎಚ್.ಎನ್. ಅನಂತಕುಮಾರ್‌

6. ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry