ಕಪ್ಪು ನೆಲಕ್ಕೆ ಹನಿದ ಕೃಷ್ಣೆ

7
ರಾಮಥಾಳ ಯೋಜನೆ: 24 ಸಾವಿರ ಹೆಕ್ಟೇರ್‌ಗೆ ಹನಿ ನೀರಾವರಿ ವ್ಯವಸ್ಥೆ

ಕಪ್ಪು ನೆಲಕ್ಕೆ ಹನಿದ ಕೃಷ್ಣೆ

Published:
Updated:
ಕಪ್ಪು ನೆಲಕ್ಕೆ ಹನಿದ ಕೃಷ್ಣೆ

ಬಾಗಲಕೋಟೆ: ಏಷ್ಯಾ ಖಂಡದಲ್ಲಿಯೇ ಮೊದಲ ಪ್ರಯೋಗ ಎನಿಸಿದ, ಇಲ್ಲಿನ ರಾಮಥಾಳ ಹನಿ ನೀರಾವರಿ ಯೋಜನೆ ಈಗ ಉದ್ಘಾಟನೆಗೆ ಸಿದ್ಧವಾಗಿದೆ.

ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೃಷ್ಣಾ ಭಾಗ್ಯ ಜಲ ನಿಗಮ (ಕೆ.ಬಿ.ಜೆ.ಎನ್‌.ಎಲ್‌), ನಾರಾಯಣಪುರ ಜಲಾಶಯದಿಂದ ನೀರು ತಂದು ಹುನಗುಂದ ತಾಲ್ಲೂಕಿನ 24 ಸಾವಿರ ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ಮೂಲಕ ನೀರುಣಿಸಿದೆ.

ಫೆಬ್ರುವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಿದ್ಧತೆಯ ಪರಿಶೀಲನೆಗಾಗಿ ಸಚಿವರಾದ ಎಂ.ಬಿ.ಪಾಟೀಲ, ಡಿ.ಕೆ.ಶಿವಕುಮಾರ, ಆರ್‌.ಬಿ.ತಿಮ್ಮಾಪುರ, ಪ್ರಿಯಾಂಕ ಖರ್ಗೆ ಭಾನುವಾರ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ರಾಜಸ್ಥಾನದ ಜಲತಜ್ಞ ರಾಜೇಂದ್ರಸಿಂಗ್‌ ಕೂಡ ಜೊತೆಗಿದ್ದರು. ಪ್ರಾಯೋಗಿಕ ಹಂತದಲ್ಲಿ ಬೆಳೆ ಬೆಳೆದಿರುವ ತಾಲ್ಲೂಕುಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.

ಎರಡು ಹಂತದಲ್ಲಿ ನೀರು ಬಳಕೆ:ಬಚಾವತ್ ತೀರ್ಪಿನ ಅನ್ವಯ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ‘ಎ’ ಸ್ಕೀಂನ ಅಡಿ 7.27 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯದಿಂದ ಎರಡು ಹಂತದಲ್ಲಿ ಬಳಸಲಾಗಿದೆ. ಮೊದಲ ಹಂತದಲ್ಲಿ ಕಾಲುವೆ ಮೂಲಕ (ಮರೋಳ–1) 14 ಸಾವಿರ ಹೆಕ್ಟೇರ್ ಭೂಮಿಗೆ 4.5 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ಎರಡನೇ ಹಂತವೇ ಈ ಹನಿ ನೀರಾವರಿ ವ್ಯವಸ್ಥೆ.

ಅನಿಶ್ಚಿತತೆ ದೂರ: ‘ಮಳೆ ಬಿದ್ದರೆ ಮಾತ್ರ ಬೆಳೆ ಎಂಬ ಅನಿಶ್ಚಿತತೆ ಹನಿ ನೀರಾವರಿಯಿಂದಾಗಿ ದೂರವಾಗಿದೆ. ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಿದ್ದೇವೆ. ಮೊದಲು ಕಡಲೆ ಮಾತ್ರ ಬೆಳೆಯುತ್ತಿದ್ದ ಕಪ್ಪು ನೆಲದಲ್ಲಿ ಈಗ, ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ, ಗೋಧಿ, ತರಕಾರಿ, ಹೂವು ಬೆಳೆಯುತ್ತಿದ್ದೇವೆ’ ಎಂದು ಹಿರೇಹುನಕುಂಬಿಯ ರೈತ ಶರಣಪ್ಪ ಗೌಡಗೌಡರ ಹೇಳಿದರು. ಅವರ ಎರಡೂವರೆ ಎಕರೆ ಹೊಲದಲ್ಲಿ ಚೆಂಡು ಹೂ ನಳನಳಿಸುತ್ತಿತ್ತು.

***

ನೀರು ಬಳಕೆ ಹೇಗೆ?

ಹುನಗುಂದ ತಾಲ್ಲೂಕಿನ ಮರೋಳ ಬಳಿ ನಾರಾಯಣಪುರ ಜಲಾಶಯದ ಹಿನ್ನೀರನ್ನು ಎರಡು ಜಾಕ್‌ವೆಲ್‌ಗಳ ಮೂಲಕ 7.7 ಕಿ.ಮೀ ದೂರದ ಸಂಗ್ರಹಾಗಾರಕ್ಕೆ ವರ್ಗಾಯಿಸಿ ಅಲ್ಲಿಂದ ಜಮೀನುಗಳಿಗೆ ಹರಿಸಲಾಗುತ್ತಿದೆ. 1.60 ಲಕ್ಷ ಕಿ.ಮೀ ದೂರ ಡ್ರಿಪ್‌ ಕೇಬಲ್‌ ಬಳಸಿ ನೀರು ವಿತರಣೆ ಮಾಡಲಾಗಿದೆ. ರೈತರಿಗೆ ಹನಿ ನೀರಾವರಿ ಸಲಕರಣೆ ಉಚಿತವಾಗಿ ನೀಡಲಾಗಿದೆ.

ಮೊಬೈಲ್‌ಫೋನ್ ಮೂಲಕ ಸಂದೇಶ: ’ಪಂಪ್‌ಹೌಸ್‌ ಬಳಿಯೇ ನಿಯಂತ್ರಣ ಕೊಠಡಿ ಇದ್ದು ಸಂಪೂರ್ಣ ಗಣಕೀಕೃತಗೊಂಡಿದೆ. ಜಮೀನಿಗೆ ಎಷ್ಟು ಗಂಟೆಗೆ ನೀರು ಹರಿಸಲಾಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಹರಿದಿದೆ ಎಂಬುದರ ಬಗ್ಗೆ ರೈತರ ಮೊಬೈಲ್‌ಫೋನ್‌ಗಳಿಗೆ ಸಂದೇಶ ಕಳುಹಿಸಲಾಗುತ್ತಿದೆ. ಯೋಜನಾ ಪ್ರದೇಶದಲ್ಲಿ ಮಳೆ ಬಿದ್ದರೆ, ಪೂರೈಕೆ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿಕೊಂಡರೆ ನೀರಿನ ಹರಿವು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ತಾಂತ್ರಿಕತೆ ಅಳವಡಿಸಲಾಗಿದೆ’ ಎಂದು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈಜನಾಥ ಪಾಟೀಲ ತಿಳಿಸಿದರು.

ಮಹಾರಾಷ್ಟ್ರದ ಜಲಗಾಂವ್‌ನ ಜೈನ್‌ ಇರಿಗೇಶನ್ ಸಿಸ್ಟಮ್‌ ಹಾಗೂ ನೆಟಾಫಿಮ್ ಸಂಸ್ಥೆ ಇದನ್ನು ಪೂರ್ಣಗೊಳಿಸಿವೆ. ಮುಂದಿನ ಐದು ವರ್ಷ ನಿರ್ವಹಣಾ ಹೊಣೆ ಅವರಿಗೆ ವಹಿಸಲಾಗಿದೆ ಎಂದರು.

**

ರಾಜ್ಯದ ಸಿಂಗಟಾಲೂರು, ಕೊಪ್ಪಳ, ಭದ್ರಾ ಮೇಲ್ದಂಡೆ, ಮಳವಳ್ಳಿ ಹಾಗೂ ನಂದವಾಡಗಿ ಯೋಜನೆಗಳಿಗೂ ಹನಿ ನೀರಾವರಿ ವಿಸ್ತರಿಸಲಾಗುವುದು.

ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

**

ರಾಮಥಾಳ ಹನಿ ನೀರಾವರಿ ಯೋಜನೆ

₹ 786

ಕೋಟಿ ವೆಚ್ಚ

24 ಸಾವಿರ ಹೆಕ್ಟೇರ್‌

ಭೂಮಿ

2.77 ಟಿಎಂಸಿ ಅಡಿ

ನೀರು

55

ಗ್ರಾಮಗಳು

15 ಸಾವಿರ

ರೈತರು

8 ತಿಂಗಳು

ನಿರಂತರ ನೀರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry