ತಲೆ, ಎದೆ, ಕೈಗಳ ಮೇಲೆ ಮುಖಂಡರ ಹೆಸರು

7
‘ಬಾಬಣ್ಣ’ ಹೆಸರಿನ ಕೇಶವಿನ್ಯಾಸ, ಎತ್ತಿನ ಗಾಡಿ, ಬೈಕ್‌ ಆಟೊದಲ್ಲಿ ಮುಖಂಡರ ಹೆಸರು

ತಲೆ, ಎದೆ, ಕೈಗಳ ಮೇಲೆ ಮುಖಂಡರ ಹೆಸರು

Published:
Updated:
ತಲೆ, ಎದೆ, ಕೈಗಳ ಮೇಲೆ ಮುಖಂಡರ ಹೆಸರು

ಶ್ರೀರಂಗಪಟ್ಟಣ: ವಿಧಾನಸಭೆ ಚುನಾಣೆಗೆ ಇನ್ನೂ ಸಾಕಷ್ಟು ದಿನ ಇರುವಾಗಲೇ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರತೊಡಗಿದ್ದು, ವಿಭಿನ್ನ ರೀತಿಯ ಪ್ರಚಾರ ಆರಂಭವಾಗಿದೆ.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ಜೆಡಿಎಸ್‌ ಬಂಡಾಯ ಶಾಸಕ ರಮೇಶ ಬಂಡಿಸಿದ್ದೇಗೌಡ, ಜೆಡಿಎಸ್‌ ಟಿಕೆಟ್‌ ಬಯಸಿರುವ ರವೀಂದ್ರ ಶ್ರೀಕಂಠಯ್ಯ ಹಾಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಕೆ.ಎಸ್‌.ನಂಜುಂಡೇಗೌಡ ಅವರ ಬೆಂಬಲಿಗರು ವಿಭಿನ್ನ ರೀತಿಯಲ್ಲಿ ತಮ್ಮ ನಾಯಕರಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ತಲೆ, ಕೈ, ಎದೆ, ಎತ್ತಿನ ಗಾಡಿ, ಬೈಕ್‌ಗಳ ಮೇಲೆ ತಮ್ಮ ನಾಯಕರ ಹೆಸರು ಚಿತ್ರಿಸಿಕೊಳ್ಳುವ ಮೂಲಕ ಪರ ಪ್ರಚಾರ ನಡೆಸುತ್ತಿದ್ದಾರೆ. ಮೂರೂ ಪಕ್ಷಗಳ ಬೆಂಬಲಿಗರು ಸ್ಪರ್ಧೆಗೆ ಬಿದ್ದವರಂತೆ ಕೇಶ ವಿನ್ಯಾಸದಲ್ಲಿ ತಮ್ಮ ನೆಚ್ಚಿನ ನಾಯಕರ ಹೆಸರು ಕೆತ್ತಿಸಿಕೊಳ್ಳುತ್ತಿದ್ದಾರೆ.

ಅರಕೆರೆ ಗ್ರಾಮದ ನಿಂಗರಾಜು, ದೇವೇಗೌಡ, ಶರತ್‌ಕುಮಾರ್‌ ತಮ್ಮ ತಲೆಯ ಕೂದಲಿನ ನಡುವೆ ‘ಬಾಬಣ್ಣ’ ಎಂದು ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಎದೆ, ಕೈಗಳ ಮೇಲೆ ಸಾಕಷ್ಟು ಮಂದಿ ಹಚ್ಚೆ ಹಾಕಿಸಿಕೊಂಡಿದ್ದು, ಹಾಲಿ ಶಾಸಕ ರಮೇಶ ಬಂಡಿಸಿದ್ದೇಗೌಡರ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಹೆಬ್ಬಾಡಿಹುಂಡಿ ಗ್ರಾಮದ ಸ್ವಾಮಿ ಎಂಬುವರು ಆಟೊ ಮೇಲೆ ಭಾವಚಿತ್ರ ಬರೆಸಿ ಅಭಿಮಾನ ಮೆರೆದಿದ್ದಾರೆ. ಅರಕೆರೆಯ ಹತ್ತಕ್ಕೂ ಹೆಚ್ಚು ಮಂದಿ ತಮ್ಮ ಬೈಕ್‌ಗಳಿಗೆ ರಮೇಶ ಬಂಡಿಸಿದ್ದೇಗೌಡ ಚಿತ್ರ ಬರೆಸಿಕೊಂಡಿದ್ದಾರೆ.

ಅರಕೆರೆ ಗ್ರಾಮದ ಸುಧೀರ್‌ ತಮ್ಮ ತಲೆ ಕೂದಲಿನಲ್ಲಿ ‘ರವೀಂದ್ರಣ್ಣ’ ಎಂದು ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಇದೇ ಗ್ರಾಮದ ನಿಖಿಲ್‌ ತಮ್ಮ ಎತ್ತಿನ ಗಾಡಿ ಮೇಲೆ ರವೀಂದ್ರ ಶ್ರೀಕಂಠಯ್ಯ ಭಾವಚಿತ್ರವನ್ನೇ ಬರೆಸಿಕೊಂಡಿದ್ದಾರೆ. ಪಕ್ಕದ ವಡಿಯಾಂಡಹಳ್ಳಿ ಗ್ರಾಮದ ಅಶೋಕ್‌ ತಮ್ಮ ಕೈ ಮೇಲೆ ಅವರ ಹೆಸರನ್ನು ಚಿತ್ರಿಸಿಕೊಂಡಿದ್ದಾರೆ.

ಅರಕೆರೆ ಗ್ರಾಮದ ದ್ಯಾವ ತಮ್ಮ ಆಟೊ ಮೇಲೆ ರವೀಂದ್ರ ಚಿತ್ರದೊಂದಿಗೆ ‘ನಾನು ರವೀಂದ್ರ ಶ್ರೀಕಂಠಯ್ಯ ಅವರ ಅಭಿಮಾನಿ’ ಎಂದು, ಆದರ್ಶ ಎಂಬಾತ ತಮ್ಮ ಕೇಶ ವಿನ್ಯಾಸದಲ್ಲಿ ‘ಬಿಜೆಪಿ’ ಎಂದು ಬರೆಸಿಕೊಂಡಿದ್ದಾರೆ.

‘ಬಾಬಣ್ಣ ಎಂಎಲ್‌ಎ ಆಗಿ ಕ್ಷೇತ್ರದಲ್ಲಿ ಒಳ್ಳೆ ಕೆಲ್ಸ ಮಾಡವ್ರೆ. ಸುಲಭದಲ್ಲಿ ಕೈಗೆ ಸಿಕ್ತಾರೆ. ಕಷ್ಟ ಸುಖ ಕೇಳ್ತಾರೆ. ಮತ್ತೆ ಅವರೇ ಎಂಎಲ್‌ಎ ಆಗ್ಬೇಕು ಅನ್ನೋದು ನನ್ನಾಸೆ. ಎಲೆಕ್ಷನ್‌ನಲ್ಲಿ ಇಡೀ ಕ್ಷೇತ್ರವನ್ನೆಲ್ಲ ಸುತ್ತಿ ಪ್ರಚಾರ ಮಾಡ್ತೀನಿ’ ಎಂದು ಲಿಂಗರಾಜು ಹೇಳಿದರು.

‘ರವಿಯಣ್ಣ ಯುವಕರಿಗೆ ಆಶಾಕಿರಣವಾಗಿದ್ದಾರೆ. ಅವರ ಕುಟುಂಬ ಈ ಕ್ಷೇತ್ರಕ್ಕೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ಈ ಬಾರಿ ಜೆಡಿಎಸ್‌ನಿಂದ ನಿಲ್ಲುತ್ತಿದ್ದು, ಅವರ ಪರ ನಾನು ಮತ್ತು ನನ್ನ ಸ್ನೇಹಿತರು ಕೆಲಸ ಮಾಡುತ್ತೇವೆ’ ಎಂದು ಸುಧೀರ್‌ ಹೇಳುತ್ತಾರೆ.

‘ನಮ್ಮ ನಂಜುಂಡೇಗೌಡ್ರು 6 ಚುನಾವಣೆಗಳಲ್ಲಿ ಸೋತಿದ್ದಾರೆ. ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್‌ ಸಿಗುವುದು ಪಕ್ಕಾ ಆಗಿದೆ. ಗೌಡರ 37 ವರ್ಷಗಳ ನಿರಂತರ ಹೋರಾಟದ ಬಗ್ಗೆ ಜನರಿಗೆ ಗೊತ್ತಿದೆ. ಈ ಬಾರಿ ಗೆಲ್ಲಿಸಲು ಪಣ ತೊಟ್ಟಿದ್ದೇವೆ’ ಎಂದು ಕಡತನಾಳು ಗ್ರಾಮದ ಆಟೊ ಚಾಲಕ ಆದರ್ಶ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry