ಬೆಳ್ಳಂದೂರು, ಅಗರ, ವರ್ತೂರು ಕೆರೆ ಪುನಶ್ಚೇತನ: ಸಮಗ್ರ ವರದಿಗೆ ಮೂರು ವಾರಗಳ ಗಡುವು

7

ಬೆಳ್ಳಂದೂರು, ಅಗರ, ವರ್ತೂರು ಕೆರೆ ಪುನಶ್ಚೇತನ: ಸಮಗ್ರ ವರದಿಗೆ ಮೂರು ವಾರಗಳ ಗಡುವು

Published:
Updated:
ಬೆಳ್ಳಂದೂರು, ಅಗರ, ವರ್ತೂರು ಕೆರೆ ಪುನಶ್ಚೇತನ: ಸಮಗ್ರ ವರದಿಗೆ ಮೂರು ವಾರಗಳ ಗಡುವು

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೆ ಅಗತ್ಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಮೂರು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬೆಳ್ಳಂದೂರು ಕೆರೆಯಲ್ಲಿ ಇತ್ತೀಚೆಗೆ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಯು.ಡಿ. ಸಾಳ್ವಿ ನೇತೃತ್ವದ ಹಸಿರು ಪೀಠ, ಒಳಚರಂಡಿ ಸಂಸ್ಕರಣ ಘಟಕ (ಎಸ್‌ಟಿಪಿ) ಅಳವಡಿಸದೆ ಬೆಳ್ಳಂದೂರು ಕೆರೆಗೆ ತ್ಯಾಜ್ಯ ಹರಿಬಿಡುತ್ತಿರುವ 99 ಅಪಾರ್ಟ್‌ಮೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿತು.

ಈ ಕೆರೆಗಳ ಜಲಾನಯನ ಪ್ರದೇಶದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಒತ್ತುವರಿಯನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ವಾಸಿಸುವ ಬಡಾವಣೆಗಳು ವಾಣಿಜ್ಯ ಸಂಕೀರ್ಣಗಳಿಂದ ಮಾತ್ರವಲ್ಲದೆ, ಕೈಗಾರಿಕೆಗಳ ತ್ಯಾಜ್ಯವೂ ಕೆರೆ ಸೇರದಂತೆಯೂ ಎಚ್ಚರಿಕೆ ವಹಿಸಬೇಕು. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸುವ ಮೂಲಕ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದ ಪೀಠವು, ಮುಂದಿನ ವಿಚಾರಣೆಯನ್ನು ಫೆಬ್ರುವರಿ 28ಕ್ಕೆ ಮುಂದೂಡಿತು.

ಈ ಮೂರೂ ಕೆರೆಗಳು ಎದುರಿಸುತ್ತಿರುವ ಬೆಂಕಿ ಮತ್ತಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ಖುದ್ದು ಪರಿಶೀಲನೆಗೆ ಸೂಚಿಸಬೇಕಲ್ಲದೆ, ಸಮಿತಿ ನೀಡುವ ಶಿಫಾರಸುಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು, ಎರಡು ಗಂಟೆಗಳ ಸುದೀರ್ಘ ಅವಧಿಯ ವಿಚಾರಣೆ ನಂತರ ನ್ಯಾಯಮೂರ್ತಿ ಸಾಳ್ವಿ ಹಾಗೂ ತಜ್ಞ ಸದಸ್ಯ ನೆಗ್ಲಿನ್‌ ನಂದಾ ಅವರು ನಿರ್ದೇಶನ ನೀಡಿದರು.

ವಿದೇಶ ಪ್ರವಾಸದ ಕಾರಣ ಕಳೆದ ಬಾರಿ ವಿಚಾರಣೆಗೆ ಹಾಜರಾಗದಿದ್ದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಸೋಮವಾರದ ವಿಚಾರಣೆ ವೇಳೆ ಖುದ್ದಾಗಿ ಹಾಜರಾದರಲ್ಲದೆ, ಬೆಳ್ಳಂದೂರು ಕೆರೆಯಿಂದ ಈಗಾಗಲೇ 19,000 ಟನ್‌ ತ್ಯಾಜ್ಯವನ್ನು ಈಗಾಗಲೇ ಹೊರ ತೆಗೆಯಲಾಗಿದ್ದು, ಬೆಂಕಿಗೆ ಕಾರಣವಾಗಿರುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಬೆಳ್ಳಂದೂರು ಕೆರೆಯ ಪುನಶ್ಚೇತನ ಕುರಿತು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಬೇಕಿದೆ ಎಂದು ಹಸಿರು ಪೀಠ ಸಲಹೆ ನೀಡಿದಾಗ ಮಧ್ಯ ಪ್ರವೇಶಿಸಿದ ಮೂಲ ಅರ್ಜಿದಾರ ಕುಪೇಂದ್ರರೆಡ್ಡಿ ಅವರ ಪರ ವಕೀಲ ಪಿ.ರಾಮಪ್ರಸಾದ್‌, ಕೇವಲ ಬೆಳ್ಳಂದೂರು ಕೆರೆ ಮಾತ್ರವಲ್ಲದೆ, ಅಪಾಯ ಎದುರಿಸುತ್ತಿರುವ ಅಗರ ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೂ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಒಂದು ಕಾಲದಲ್ಲಿ ನಗರದ ಜಲಮೂಲಗಳಾಗಿದ್ದ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಒಳಚರಂಡಿಯ ನೀರನ್ನು ಸಂಸ್ಕರಣಗೊಳಿಸದೆಯೇ ಹರಿ ಬಿಡುತ್ತಿರುವುದರಿಂದ ಕೆರೆಗಳು ಕಲುಷಿತಗೊಳ್ಳುತ್ತಿವೆ. ಜಲಾನಯನ ಪ್ರದೇಶ ಮತ್ತು ಬಫರ್‌ ವಲಯಗಳನ್ನು ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಾಣ ಕಾಮಗಾರಿ ನಡೆಸಿರುವುದರಿಂದ ಕೆರೆಗಳಿಗೆ ಆಪತ್ತು ಎದುರಾಗಿದೆ ಎಂದು ಅವರು ವಿವರಿಸಿದರು.

ಕೆರೆಯ ಪುನಶ್ಚೇತನಕ್ಕೆ ಸೂಚಿಸಿ ಇದುವರೆಗೆ ಹಸಿರು ಪೀಠ ನೀಡಿರುವ ಮಧ್ಯಂತರ ಆದೇಶಗಳ ಪಾಲನೆಯಾಗಿಲ್ಲ. ಸರ್ಕಾರ ಕೈಗೊಳ್ಳುವ ಕ್ರಮಗಳ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಸೂಚಿಸಬೇಕು ಎಂದು ಕೆರೆ ಸಂರಕ್ಷಣೆ ಕೋರಿ ಅರ್ಜಿ ಸಲ್ಲಿಸಿರುವ ನಮ್ಮ ಬೆಂಗಳೂರು ಪ್ರತಿಷ್ಠಾನದ ಪರ ವಕೀಲ ಶ್ರೀಧರ ಪಬ್ಬಿಶೆಟ್ಟಿ ಕೋರಿದರು.

ಈ ಕೆರೆಗಳು ಕಲುಷಿತಗೊಳ್ಳಲು ಕಾರಣವೇನು ಎಂಬುದನ್ನು ಮೊದಲು ಅರಿಯುವ ಮೂಲಕ, ಜೈವಿಕ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಈ ಮೂರು ಕೆರೆಗಳು ಮಾತ್ರವಲ್ಲದೆ, ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ನಿರ್ವಹಣೆ ಕುರಿತು ಪ್ರತಿ ತಿಂಗಳೂ ಸಂಬಂಧಿಸಿದ ಇಲಾಖೆ, ಮಂಡಳಿ ಮತ್ತು ಪ್ರಾಧಿಕಾರಿಗಳು ಕಡ್ಡಾಯವಾಗಿ ವರದಿ ಸಲ್ಲಿಸುವಂತಾಗಬೇಕು. ಯಾವುದೇ ರೀತಿಯ ಕುಂಟು ನೆಪಗಳನ್ನು ಹೇಳುವ ಬದಲು, ಪರಿಶೀಲನೆ ಮತ್ತು ಕ್ರಮಕ್ಕೆ ಒತ್ತು ನೀಡಬೇಕು ಎಂದು ನ್ಯಾಯಪೀಠ ತಾಕೀತು ಮಾಡಿತು.

ಬೆಳ್ಳಂದೂರು ಕೆರೆಯ ಪುನಶ್ಚೇತನ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮೇ 31ರವರೆಗೆ ಕಾಲಾವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಆದಿತ್ಯ ಸೋಂದಿ, ವಕೀಲರಾದ ಅಶೋಕ್‌ ದೇವರಾಜ್‌, ರಾಜೇಶ್‌ ಮಹಾಲೆ ಮನವಿ ಮಾಡಿದರು.

ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠವು, ‘ಸರ್ಕಾರ ಇದೇ ರೀತಿ ಕಾಲಾವಕಾಶ ಪಡೆದುಕೊಳ್ಳುತ್ತಲೇ ಹೋಗುತ್ತದೆ. ಅರ್ಜಿದಾರರು ದೂರುವುದನ್ನು ಮುಂದುವರಿಸುತ್ತಾರೆ. ಆ ಕುರಿತು ಚರ್ಚೆ ನಡೆಯುತ್ತದೆಯೇ ವಿನಾ ಸಮಸ್ಯೆಗೆ ಪರಿಹಾರವೆಂಬುದೇ ದೊರೆಯುವುದಿಲ್ಲ. ಹಾಗಾಗಿ ಸಮಯ ವ್ಯರ್ಥ ಮಾಡದೆ ಪರಿಹಾರ ಕಂಡುಕೊಳ್ಳುವತ್ತ ಚಿಂತನೆ ನಡೆಸಿ’ ಎಂದು ಕಿವಿಮಾತು ಹೇಳಿತು.

ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕಾಗಿ ಇದುವರೆಗೆ ಅನೇಕ ಬಾರಿ ಹಸಿರುಪೀಠ ಆದೇಶಗಳನ್ನು ಹೊರಡಿಸಿದೆ. ಆದರೂ ಅವುಗಳ ಪಾಲನೆ ಮಾಡಲಾಗಿಲ್ಲ. ಸಂಸ್ಕರಿಸದ ಒಳಚರಂಡಿ ನೀರು, ಒಣ ಹುಲ್ಲು, ಪಾಚಿ, ಕೈಗಾರಿಕಾ ತ್ಯಾಜ್ಯ, ರಾಸಾಯನಿಕ ತ್ಯಾಜ್ಯದಿಂದ ಕೆರೆಗೆ ಆಪತ್ತು ಎದುರಾಗಿದೆ ಎಂದು ಈ ಹಿಂದೆ ಪರಿಶೀಲನೆ ನಡೆಸಿರುವ ತಜ್ಞರ ಸಮಿತಿ ವರದಿ ಸಲ್ಲಿಸಿದ್ದರೂ ಈ ಬಗ್ಗೆ ಗಮನ ಹರಿಸಿಲ್ಲ. ಸಮಸ್ಯೆಯ ಮೂಲವನ್ನು ಅರಿತು ಕ್ರಮ ಕೈಗೊಂಡರೆ ಮಾತ್ರ ಪರಿಹಾರ ಸಾಧ್ಯ ಎಂದು ನ್ಯಾಯಮೂರ್ತಿ ಸಾಳ್ವಿ ಹಾಗೂ ನಂದಾ ಅಭಿಪ್ರಾಯಪಟ್ಟರು.

‘ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಪ್ರತಿ ಬೆಳವಣಿಗೆಗಳನ್ನೂ ಅವಲೋಕಿಸಬೇಕು. ಪ್ರತಿ ಸಮಸ್ಯೆಯ ಕುರಿತೂ ಕ್ರಿಯಾ ಯೋಜನೆ ರೂಪಿಸಿ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು’ ಎಂದು ಸೂಚಿಸಿದ ಪೀಠವು, ‘ಬೆಳ್ಳಂದೂರು ಕೆರೆಯನ್ನು ಎಷ್ಟು ಪ್ರಮಾಣದಲ್ಲಿ ಒತ್ತುವರಿ ಮಾಡಲಾಗಿದೆ ಎಂಬ ಮಾಹಿತಿ ಇದೆಯೇ’ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ವಿವರ ನೀಡಲು ವಿಫಲರಾದರು.

ಕೆರೆಯ ಉತ್ತರ ಭಾಗದಲ್ಲಿ, ಅಂದಾಜು ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಅಂಬೇಡ್ಕರ್‌ ನಗರಕ್ಕಾಗಿ ಕೆರೆಯನ್ನು ಒತ್ತುವರಿ ಮಾಡಿರುವ ಮಾಹಿತಿ ಸದ್ಯಕ್ಕಿದೆ. ಕೆರೆಯ ಆಸುಪಾಸಿನಲ್ಲಿರುವ 746 ಅಪಾರ್ಟ್‌ಮೆಂಟ್‌ಗಳ ಪರಿಶೀಲನೆ ನಡೆಸಲಾಗಿದೆ. ಅವುಗಳ ಪೈಕಿ 256 ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಹೊರಹಾಕುವ ತ್ಯಾಜ್ಯ ನೀರನ್ನು ಒಳಚರಂಡಿ ಮಂಡಳಿಯೇ ನಿರ್ವಹಣೆ ಮಾಡುತ್ತಿದೆ. ಮಿಕ್ಕಂತೆ 99 ಅಪಾರ್ಟ್‌ಮಂಟ್‌ಗಳು ಎಸ್‌ಟಿಪಿ ಅಳವಡಿಸದೆ ಇರುವುದು ಕಂಡುಬಂದಿದೆ. ಹಿರಿಯ ನಾಗರಿಕರು ಆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣದಿಂದ ಮೃದು ಧೋರಣೆ ಅನುಸರಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.

ಮೊದಲು 200 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿದ್ದ ಬೆಂಗಳೂರು ನಗರವು ಈಗ ಸುತ್ತಮುತ್ತಲಿನ 110 ಗ್ರಾಮಗಳೂ. 7 ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡು 800 ಚದರ ಕಿಲೋಮೀಟರ್‌ ವ್ಯಾಪ್ತಿಗೆ ವಿಸ್ತಾರ ಹೊಂದಿದೆ. ಈ ಎಲ್ಲ ಪ್ರದೇಶಗಳ ಒಳಚರಂಡಿ ನಿರ್ವಹಣೆಯೇ ದೊಡ್ಡ ಸವಾಲಾಗಿದೆ ಎಂದೂ ಅವರು ವಿವರಿಸಿದರು.

ಎಸ್‌ಟಿಪಿ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಅಪಾರ್ಟ್‌ಮೆಂಟ್‌ಗಳಿಗೆ ಸ್ವತಃ ಆಯುಕ್ತರೇ ಭೇಟಿ ನೀಡಿ ಪರಿಶೀಲನೆ ನಡೆಸುವಂತಾಗಬೇಕು. ಸಮಯಾವಕಾಶ ನೀಡಿ ಆಯಾ ಅಪಾರ್ಟ್‌ಮೆಂಟ್‌ಗಳಲ್ಲಿ ಲಭ್ಯವಿರುವ ಜಾಗದಲ್ಲೇ ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಮನಾಲಿ ನಗರಗಳಲ್ಲಿ ಅಳವಡಿಸಿರುವ ಮಾದರಿಯಲ್ಲೇ ಅತ್ಯಾಧುನಿಕ ಎಸ್‌ಟಿಪಿ ಅಳವಡಿಸಲು ಸೂಚಿಸಬೇಕು. ಇದಕ್ಕೆ ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry