ಪ್ರೀತಿ ಇಲ್ಲದ ಮೇಲೆ...!

7
ಸಾಫ್ಟ್‌ವೇರ್‌ ದಂಪತಿಗೆ ಹೈಕೋರ್ಟ್‌ ಕಿವಿಮಾತು

ಪ್ರೀತಿ ಇಲ್ಲದ ಮೇಲೆ...!

Published:
Updated:

ಬೆಂಗಳೂರು: ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ...’ ಎಂಬ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪನವರ ಜನಪ್ರಿಯ ಕವಿತೆಯ ಆಶಯವನ್ನು ವಿಚ್ಛೇದನ ಪ್ರಕರಣವೊಂದರಲ್ಲಿ ಕೋರ್ಟ್‌ ಮೆಟ್ಟಿಲೇರಿರುವ ದಂಪತಿಗೆ ಹೈಕೋರ್ಟ್‌ ತಿಳಿಹೇಳಿತು.

ವರದಕ್ಷಿಣೆ ಕಿರುಕುಳ ಆರೋಪದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಪತಿಯೊಬ್ಬರು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಪ್ರೀತಿ ಇಲ್ಲದ ಗಂಡ–ಹೆಂಡಿರ ಜೀವನ, ನಾಯಿ–ನರಿಗಳ ಪಾಡಿಗಿಂತಲೂ ಕಡೆಯಾಗಿರುತ್ತದೆ’ ಎಂದು ಕಿವಿಮಾತು ಹೇಳಿತು.

ಪ್ರಕರಣವೇನು: ಪತಿ ಮಹಾರಾಷ್ಟ್ರಕ್ಕೆ ಸೇರಿದವರು. ವಯಸ್ಸು 38. ಪತ್ನಿಗೆ 35 ವರ್ಷ. ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಅಂತರ್ಜಾಲದ ವಧು–ವರರ ತಾಣದಲ್ಲಿ ಪರಸ್ಪರ ಮೆಚ್ಚಿ 2011ರಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು.

ಇಬ್ಬರೂ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಕೆಲವೇ ವರ್ಷಗಳಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ಪತಿ ಟೆಕ್ಸಾಸ್‌ ಕೋರ್ಟ್‌ನಲ್ಲಿ 2013ರಲ್ಲಿ ವಿಚ್ಛೇದನ ಪಡೆದರು. ನಂತರ ಪತ್ನಿ ವಾಪಸು ಬೆಂಗಳೂರಿಗೆ ಬಂದರು. ಇಲ್ಲಿಗೆ ಬಂದ ಮೇಲೆ ‘ನನಗೆ ಅಮೆರಿಕ ನ್ಯಾಯಾಲಯದ ಆದೇಶ ಅನ್ವಯವಾಗುವುದಿಲ್ಲ’ ಎಂದು ಅಲ್ಲಿನ ಡಿಕ್ರಿ ಪ್ರಶ್ನಿಸಿ ದಾವೆ ಹೂಡಿದ್ದಾರೆ. ಅಂತೆಯೇ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣವನ್ನೂ ದಾಖಲಿಸಿದ್ದಾರೆ.

ಇದೀಗ ಪತಿ ಈ ಪ್ರಕರಣದ ರದ್ದುಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ವಿಚಾರಣೆ ವೇಳೆ ಪ್ರತಿವಾದಿ ಪತ್ನಿಯ ಮನಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ನೀವು ಇದೇ ರೀತಿ ವರ್ತಿಸಿದರೆ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ. ಪ್ರೀತಿ ಇಲ್ಲದ ಮೇಲೆ ಭಾವನೆಗಳು ಹೇಗೆ ತಾನೆ ಬೆರೆತಾವು. ಕೂಡಿಕೊಂಡು ಹೋಗುವುದು ಸುಲಭವಲ್ಲ, ಇದು ಒಂದೆರಡು ದಿನದ ಮಾತಲ್ಲ’ ಎಂದು ಹೇಳಿದರು.

‘ಪತಿ–ಪತ್ನಿ ಇಬ್ಬರಿಗೂ ಸಾಮಾಜಿಕ, ಮಾನಸಿಕ ಅಸ್ವಸ್ಥತೆ ಇದ್ದಂತಿದೆ. ಇವರಿಗೆ ನಿಮ್ಹಾನ್ಸ್‌ (ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ) ಅಥವಾ ತತ್ಸಮಾನ ವೈದ್ಯರಿಂದ ಸಮಾಲೋಚನೆ ನಡೆಸಿ’ ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿದರು.

ಹೆಂಡತಿ ಜೊತೆ ಮಾತಾಡಲು ಹಿಂದೇಟು..!:

ಇದಕ್ಕೂ ಮುನ್ನ ಬೆಳಿಗ್ಗೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು ಪತಿ,ಪತ್ನಿ ಇಬ್ಬರನ್ನೂ ಉದ್ದೇಶಿಸಿ, ‘ಹೋಗಿ ಕಬ್ಬನ್‌ ಪಾರ್ಕ್‌ನಲ್ಲಿ ಕುಳಿತು ಒಂದಷ್ಟು ಮಾತುಕತೆ ಆಡಿಕೊಂಡು ಬನ್ನಿ. ಪ್ರಕರಣ ಬೆಳೆಸುವುದೊ ಅಥವಾ ರಾಜಿ ಆಗಲು ಸಾಧ್ಯವೇ ಎಂಬುದರ ಬಗ್ಗೆ ಇನ್ನೊಮ್ಮೆ ಚಿಂತಿಸಿ’ ಎಂದು ಸಲಹೆ ನೀಡಿತ್ತು.

ಈ ಸಲಹೆಗೆ ಪತಿ, ‘ಸ್ವಾಮಿ, ಆ ರೀತಿ ಮಾತುಕತೆ ಕಷ್ಟಸಾಧ್ಯ. ಈಗಾಗಲೇ ಈ ರೀತಿ ಮಾತನಾಡುವಾಗ ಸುಮಾರು ಬಾರಿ ಜಗಳ ಆಗಿದೆ. ನಾನು ಈಕೆಯ ಜೊತೆ ಕಬ್ಬನ್‌ ಪಾರ್ಕ್‌ಗೆ ಹೋಗುವುದಿಲ್ಲ. ಬೇಕಿದ್ದರೆ ಇಲ್ಲೇ ಕಾರಿಡಾರ್‌ನಲ್ಲೇ ಚರ್ಚಿಸುತ್ತೇನೆ’ ಎಂದು ಹೇಳಿದ್ದರು!.

ಇದಕ್ಕೆ ನ್ಯಾಯಮೂರ್ತಿಗಳು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಅವರನ್ನು ಕರೆಯಿಸಿ, ‘ಇವರು ಇಲ್ಲೇ ಕಾರಿಡಾರ್‌ನಲ್ಲಿ ಚರ್ಚಿಸುತ್ತಾರೆ. ದೂರದಿಂದ ಗಮನಿಸಿ’ ಎಂದು ರಕ್ಷಣೆ ಕೊಡಿಸಿದರು.

***

ಮಗುವಿಗೆ ಕೋರ್ಟ್‌ ಪ್ರೀತಿಯ ಧಾರೆ...

ಮತ್ತೊಂದು ವಿಚ್ಛೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅಮ್ಮನ ಜೊತೆ ಬಂದಿದ್ದ ಮಗುವನ್ನು ಸಮೀಪಕ್ಕೆ ಕರೆದು ಅತ್ಯಂತ ವಾತ್ಸಲ್ಯದಿಂದ ಮಾತನಾಡಿಸಿದರು.

‘ನಿನ್ನ ಹೆಸರೇನು, ಯಾವ ಶಾಲೆಯಲ್ಲಿ ಓದುತ್ತಿರುವೆ, ನಿನ್ನ ಶಾಲೆಗೆ ಇವತ್ತು ರಜೆ ಅಲ್ಲವೇ, ಹೋಗಿ ಕಬ್ಬನ್‌ ಪಾರ್ಕ್‌ ಸುತ್ತಾಡು...’ ಎಂದು ಪ್ರೀತಿಯಿಂದ ಹೇಳಿದರು.

ಆ 10 ವರ್ಷದ ಹುಡುಗ ತಾಯಿ ಬಳಿ ಬಂದು ಅಪ್ಪಿಕೊಂಡಿತು. ಆಗ ತಾಯಿ ಮಗುವನ್ನು ತಲೆಯ ಮೇಲೆ ಕೈಯಾಡಿಸುತ್ತಾ ಅವನನ್ನು ಸಂತೈಸಿದರು.

ಇದಕ್ಕೆ ನಾಗರತ್ನ, ‘ಮಗುವಿಗೆ ಅಷ್ಟೊಂದು ರಕ್ಷಣೆ ಕೊಡುವುದು ಬೇಡ. ಅದು ಸಹಜವಾಗಿಯೇ ಇರಲಿ ಬಿಡಿ’ ಎಂದು ಕಿವಿಮಾತು ಹೇಳಿದರು. ಪತಿ ಪತ್ನಿ ಇಬ್ಬರೂ ಮಧ್ಯಾಹ್ನ ಊಟದ ವೇಳೆ ತಮ್ಮ ಚೇಂಬರ್‌ಗೆ ಬಂದು ಕಾಣುವಂತೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry