ಎಸ್‌ಟಿ ಪಟ್ಟಿಗೆ ಸೇರಿಸಲು ಕುರುಬರ ಒತ್ತಾಯ

7

ಎಸ್‌ಟಿ ಪಟ್ಟಿಗೆ ಸೇರಿಸಲು ಕುರುಬರ ಒತ್ತಾಯ

Published:
Updated:
ಎಸ್‌ಟಿ ಪಟ್ಟಿಗೆ ಸೇರಿಸಲು ಕುರುಬರ ಒತ್ತಾಯ

ಬೆಂಗಳೂರು: ಕುರುಬ (ಹಾಲುಮತಸ್ಥ) ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘ’ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

‘ನಮ್ಮ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಎಸ್‌ಟಿ ಸ್ಥಾನಮಾನ ನೀಡಿ ಏಳಿಗೆಗೆ ಪ್ರೋತ್ಸಾಹ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಈ ಬೇಡಿಕೆ ಇಟ್ಟಾಗಲೇ ಪರಿಗಣಿಸಿದ್ದರೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿದ್ದೆವು. ಆದರೆ, ಬೇಡಿಕೆ ಈಡೇರಿಸುವ ಮುಖವಾಡ ತೊಟ್ಟ ಸಮುದಾಯದ ಕೆಲವರು ಅದನ್ನು ಮಾಡದೆ ದ್ರೋಹ ಎಸಗಿದ್ದಾರೆ’ ಎಂದು ಕಿಡಿಕಾರಿದರು.

ಅಹಿಂದ ಸಂಘಟನೆಯ ಕೆ.ಮುಕುಡಪ್ಪ ಮಾತನಾಡಿ, ‘ಕುರುಬರಿಗೆ ಎಸ್‌ಟಿ ಸ್ಥಾನಮಾನ ಕಲ್ಪಿಸಿ, ಮೀಸಲಾತಿ ಪ್ರಮಾಣವನ್ನು ಶೇ 22ಕ್ಕೆ ಏರಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ’ ಎಂದರು.

‘ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಸಿದ್ದರಾಮಯ್ಯ ಅವರು 1996ರ ಕುರುಬರ ಸಮಾವೇಶದಲ್ಲಿ ವಿರೋಧಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ಬೇಡಿಕೆ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ 2012ರ ಸಮಾವೇಶದಲ್ಲಿ ಭರವಸೆ ನೀಡಿದ್ದರು. ಈ ಬಗ್ಗೆ ದ್ವಂದ್ವ ನಿಲುವು ಹೊಂದಿರುವ ಅವರು ಹೋರಾಟದ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಅಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ, ‘ಸಿದ್ದರಾಮಯ್ಯ ಅವರು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು.

**

ಅಧಿಕಾರಕ್ಕೆ ಬಂದ ಕೂಡಲೇ ಗೊಲ್ಲರು ಹಾಗೂ ಬೆಸ್ತರನ್ನು ಎಸ್‌ಟಿಗೆ ಸೇರಿಸಲು ಕ್ರಮಕೈಗೊಂಡಿರುವ ಮುಖ್ಯಮಂತ್ರಿ ನಮ್ಮನ್ನೇಕೆ ಕಡೆಗಣಿಸಿದ್ದಾರೆ

–ಕೆ.ಮುಕುಡಪ್ಪ, ಅಹಿಂದ ಸಂಘಟನೆ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry