ಲೈಂಗಿಕ ಕಿರುಕುಳ: ಕಿರಿಯ ವಿಜ್ಞಾನಿ ವಿರುದ್ಧ ಎಫ್‌ಐಆರ್

7
ಸಹೋದ್ಯೋಗಿ ವ್ಯವಸ್ಥಾಪಕಿ ದೂರು ದಾಖಲು

ಲೈಂಗಿಕ ಕಿರುಕುಳ: ಕಿರಿಯ ವಿಜ್ಞಾನಿ ವಿರುದ್ಧ ಎಫ್‌ಐಆರ್

Published:
Updated:

ಬೆಂಗಳೂರು: ಸಹೋದ್ಯೋಗಿ ವ್ಯವಸ್ಥಾಪಕಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಸಂಶೋಧನಾ ಸಂಸ್ಥೆಯೊಂದರ ಕಿರಿಯ ವಿಜ್ಞಾನಿ ಸಾಯಿಕುಮಾರ್ ಪಡಾಲಾ ಎಂಬುವರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶಾಖಪಟ್ಟಣದ ಸಾಯಿಕುಮಾರ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಎಚ್‌ಎಸ್‌ಆರ್ ಲೇಔಟ್‌ನ ಪರಂಗಿಪಾಳ್ಯದಲ್ಲಿ ನೆಲೆಸಿದ್ದರು.

‘ಕಿರಿಯ ವಿಜ್ಞಾನಿಯಾಗಿದ್ದ ಸಾಯಿಕುಮಾರ್, ತಿಂಗಳ ಹಿಂದೆ ನನ್ನ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಆಡಳಿತ ಮಂಡಳಿಗೆ ದೂರು ಕೊಟ್ಟಿದ್ದೆ. ಆಂತರಿಕ ತನಿಖೆ ನಡೆಸಿದಾಗ, ಆತ ದುರ್ವರ್ತನೆ ತೋರಿರುವುದು ಸಾಬೀತಾಗಿತ್ತು. ಆ ನಂತರ ಆಡಳಿತ ಮಂಡಳಿಯು ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

‘ಅದೇ ದ್ವೇಷದಲ್ಲಿ ಜ.19ರ ಸಂಜೆ 5 ಗಂಟೆ ಸುಮಾರಿಗೆ ನನ್ನ ಮನೆ ಬಳಿ ಬಂದಿದ್ದ ಸಾಯಿಕುಮಾರ್, ‘ಈಗ ನನ್ನ ಕೈಯಿಂದ ಹೇಗೆ ತಪ್ಪಿಸಿಕೊಳ್ಳುತ್ತೀಯಾ ನೋಡುತ್ತೇನೆ’ ಎಂದು ಹೇಳಿದ. ಕೂಡಲೇ ನಾನು ಮನೆ ಮಾಲೀಕರಿಗೆ ಕರೆ ಮಾಡಿದೆ. ಅವರು ರಕ್ಷಣೆಗೆ ಬರುವಷ್ಟರಲ್ಲಿ ನನ್ನ ಬಟ್ಟೆ ಹಿಡಿದು ಎಳೆದಾಡಿದ ಆತ,‌ ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೊರಟು ಹೋದ. ಹೀಗಾಗಿ, ಸಾಯಿಕುಮಾರ್‌ನನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಕೋರಿದ್ದಾರೆ.

‘ಲೈಂಗಿಕ ಕಿರುಕುಳ (ಐಪಿಸಿ 354), ಮಹಿಳೆಯನ್ನು ಹಿಂಬಾಲಿಸುವುದು (354ಡಿ) ಹಾಗೂ ಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಕೋರಮಂಗಲ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry