ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಿಂಗ್ ಕೆಲಸಗಾರ ಈಗ ಕೋಟ್ಯಧೀಶ: ₹ 40 ಲಕ್ಷ ಆದಾಯ ಘೋಷಣೆ

ಕೂಲಿಕಾರರ ಸೋಗಿನಲ್ಲಿ ಗಾಂಜಾ ಮಾರುತ್ತಿದ್ದವರ ಸೆರೆ
Last Updated 30 ಜನವರಿ 2018, 6:54 IST
ಅಕ್ಷರ ಗಾತ್ರ

ಬೆಂಗಳೂರು: ಮಾದಕವಸ್ತು ಮಾರಾಟದಿಂದಲೇ ಕೋಟ್ಯಧೀಶನಾಗಿದ್ದ ಸೆಂಟ್ರಿಂಗ್ ಕೆಲಸಗಾರ, ತನ್ನ ಸಹಚರನೊಂದಿಗೆ ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಚಾಮರಾಜನಗರ ಜಿಲ್ಲೆಯ ಪುಷ್ಪಾಪುರ ಗ್ರಾಮದ ರಾಚಪ್ಪ (34) ಹಾಗೂ ಶ್ರೀನಿವಾಸ್ (47) ಬಂಧಿತರು. ಆರೋಪಿಗಳಿಂದ 26 ಕೆ.ಜಿ.ಗಾಂಜಾ, ₹5 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದೇವೆ. ಇನ್ನೊಬ್ಬ ಆರೋಪಿ ಸಾಶು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದಾಯ ತಿಳಿಸಿ ಸಿಕ್ಕಿಬಿದ್ದ: 12 ವರ್ಷಗಳಿಂದ ಈ ದಂಧೆ ನಡೆಸುತ್ತಿರುವ ರಾಚಪ್ಪ, ಸದ್ಯ ಕನಕಪುರ ರಸ್ತೆಯ ವಿಲ್ಲಾದಲ್ಲಿ ನೆಲೆಸಿದ್ದ. ಶ್ರೀನಿವಾಸ್, ಗಾಂಜಾ ದಾಸ್ತಾನು ಮಾಡುವುದಕ್ಕಾಗಿಯೇ ಚಂದಾಪುರದಲ್ಲಿ ಬಾಡಿಗೆ ಮನೆ ಮಾಡಿದ್ದ. ವರ್ಷದ ಹಿಂದೆ ಇವರಿಗೆ ಡ್ರಗ್ಸ್‌ ಪೆಡ್ಲರ್ (ಪೂರೈಕೆದಾರ) ಸಾಶುವಿನ ಪರಿಚಯವಾಗಿತ್ತು. ಬಳಿಕ ವ್ಯವಸ್ಥಿತವಾಗಿ ಸಂಚು ರೂಪಿಸಿ ದಂಧೆ ಪ್ರಾರಂಭಿಸಿದ್ದರು.

ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ತಮ್ಮ ಏಜೆಂಟ್‌ಗಳನ್ನಾಗಿ ಮಾಡಿಕೊಂಡ ಆರೋಪಿಗಳು, ಅವರ ಮೂಲಕ ಪ್ರತಿ ವಾರ 30 ಕೆ.ಜಿ ಗಾಂಜಾ ಮಾರಾಟ ಮಾಡಿಸುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳೇ ಇವರ ಗಿರಾಕಿಗಳಾಗಿದ್ದರು.

ತನ್ನ ವಾರ್ಷಿಕ ಆದಾಯ ₹ 40 ಲಕ್ಷ ಎಂದು ರಾಚಪ್ಪ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಲ್ಲಿಸಿದ್ದ. ಸೆಂಟ್ರಿಂಗ್ ಕೆಲಸ ಮಾಡುವವನಿಗೆ ಇಷ್ಟೊಂದು ಆದಾಯ ಹೇಗೆ ಬರುತ್ತದೆ ಎಂದು ತಬ್ಬಿಬ್ಬಾದ ಅಧಿಕಾರಿಗಳು, ಆದಾಯದ ಮೂಲ ಹುಡುಕಲು
ಪ್ರಾರಂಭಿಸಿದ್ದರು. ಆತನ ಮೇಲೆ ನಿಗಾ ಇಡುವಂತೆ ಪೊಲೀಸರಿಗೂ ತಿಳಿಸಿದ್ದರು.


ಶ್ರೀನಿವಾಸ್

‘ರಾಚಪ್ಪ, ಶ್ರೀನಿವಾಸ್ ಹಾಗೂ ಸಾಶು ಜ.20ರ ಮಧ್ಯಾಹ್ನ 12.30ರ ಸುಮಾರಿಗೆ ಕೋರಮಂಗಲ 80 ಅಡಿ ರಸ್ತೆಯ ‘ಗಂಗಾ ಸಾಗರ್’ ಹೋಟೆಲ್ ಬಳಿ ಇರುವ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ತೆರಳಿ ಅವರ ಕಾರನ್ನು ಪರಿಶೀಲಿಸಿದಾಗ 26 ಕೆ.ಜಿ. ಗಾಂಜಾ ಸಿಕ್ಕಿತು. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದೆವು. ಆದರೆ, ಸಾಶು ತಪ್ಪಿಸಿಕೊಂಡ’ ಎಂದು ಪೊಲೀಸರು ತಿಳಿಸಿದರು.

ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಚಾಮರಾಜನಗರದ ಶಾಗ್ಯ ಗ್ರಾಮದ ವ್ಯಕ್ತಿಯೊಬ್ಬನಿಂದ ಮೂಟೆಗಟ್ಟಲೆ ಗಾಂಜಾ ಖರೀದಿಸುತ್ತಿದ್ದೆವು. ಆತ ಎಲ್ಲಿಂದ ತರುತ್ತಿದ್ದ ಎಂಬುದು ನಮಗೂ ಗೊತ್ತಿಲ್ಲ’ ಎಂದು ಹೇಳಿಕೆ ಕೊಟ್ಟರು. ಆ ವ್ಯಕ್ತಿ ಸದ್ಯ ಬಳ್ಳಾರಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದ್ದು, ಸಿಬ್ಬಂದಿಯ ವಿಶೇಷ ತಂಡ ಬಳ್ಳಾರಿಗೆ ತೆರಳಿದೆ ಎಂದು ಮಾಹಿತಿ ನೀಡಿದರು.


₹ 2 ಕೋಟಿ ಆಸ್ತಿ
‘ದಂಧೆಯಿಂದ ಗಳಿಸಿದ್ದ ಹಣದಲ್ಲಿ ರಾಚಪ್ಪ ಚಾಮರಾಜನಗರದಲ್ಲಿ ಎರಡು ಮನೆ ಹಾಗೂ ಜಮೀನನ್ನು ಖರೀದಿಸಿದ್ದಾನೆ. ಸದ್ಯದ ಮಾಹಿತಿ ಪ್ರಕಾರ ಆತನ ಆಸ್ತಿ ₹ 2 ಕೋಟಿ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT