ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಂದ ಪ್ರಧಾನಿಗೆ ಟ್ವೀಟ್‌

Last Updated 30 ಜನವರಿ 2018, 6:53 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಗೆ ಮಾನ್ಯತೆ ನೀಡುವಂತೆ ಭಿಕ್ಷೆ ಬೇಡಿ ಸಾಕಾಯ್ತು. ನಿಮ್ಮ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ?’
ಹೀಗೆ, ಕೆಎಸ್‌ಒಯು ವಿದ್ಯಾರ್ಥಿಗಳು ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ. ‘ಬಿಜೆಪಿಯ ಅಮಿತ್ ಷಾ, ಪ್ರಕಾಶ್ ಜಾವಡೇಕರ್, ಬಿ.ಎಸ್.ಯಡಿಯೂರಪ್ಪ, ಪ್ರತಾಪ ಸಿಂಹ, ಅನಂತಕುಮಾರ್ ಅವರಿಗೆ ಮನವಿ ಮಾಡಿ ಸಾಕಾಗಿದೆ. ಇವರೆಲ್ಲರೂ ಕೆಲಸಕ್ಕೆ ಬಾರದವರು’ ಎಂದು ವಿದ್ಯಾರ್ಥಿಗಳು ‍ಪ್ರಧಾನಮಂತ್ರಿ ಕಚೇರಿ (PMO India) ಖಾತೆಗೆ ಪ್ರಹಾರ ನಡೆಸಿದ್ದಾರೆ.

ಕೆಎಸ್‌ಒಯುಗೆ ಮಾನ್ಯತೆ ನೀಡುವಂತೆ ಕೋರಿ ನಿರಂತರವಾಗಿ ಮನವಿ ನೀಡಿ ಬೇಸತ್ತಿರುವ ವಿದ್ಯಾರ್ಥಿಗಳು ಫೆ. 4ರಂದು ಬೆಂಗಳೂರು ಅರಮನೆ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ಬಿಜೆಪಿಯ ಪರಿವರ್ತನಾ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ ಅವರಿಗೆ ಕ‌ಪ್ಪು ಬಾವುಟ ಪ್ರದರ್ಶಿಸುವಾಗಿ ನಿರ್ಧರಿಸಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಟ್ವೀಟ್‌ ಸಹ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ ಸಿಂಹ, ಫೆ. 3ರಂದು ಬೆಂಗಳೂರಿನಲ್ಲಿ ಪ್ರಕಾಶ್ ಜಾವಡೇಕರ್‌ ಅವರ ಜತೆ ಸಭೆ ಆಯೋಜಿಸಿದ್ದು, ವಿದ್ಯಾರ್ಥಿಗಳು ಭಾಗವಹಿಸುವಂತೆ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳು, ‘ನಮ್ಮ ಪ್ರತಿಭಟನೆಯ ದಿಕ್ಕು ತಪ್ಪಿಸಲು ಈ ಸಭೆ ಕರೆಯಲಾಗಿದೆ. ಪ್ರತಿಭಟನೆ ನಡೆಯುವುದು ಖಚಿತ’ ಎಂದು ತಿಳಿಸಿದ್ದಾರೆ.

ಇದೀಗ ಪ್ರಧಾನಿ ಕಚೇರಿಗೂ ಟ್ವೀಟ್‌ ಮಾಡಿರುವ ವಿದ್ಯಾರ್ಥಿಗಳು ತಾವು, ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ‍ಪಡಿಸಿದ್ದಾರೆ. ಪ್ರಕಾಶ್‌ ಜಾವಡೇಕರ್ ಅವರಿಗೂ ಟ್ವೀಟ್ ಮಾಡಿದ್ದ ವಿದ್ಯಾರ್ಥಿಗಳು, ‘ಕೆಎಸ್‌ಒಯುಗೆ ಮಾನ್ಯತೆ ನೀಡಲು ನಿಮಗೆ ಮನಸಿಲ್ಲ’ ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT