ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕರೆಬೆಳ್ಳೂರು ಕೆರೆ ಅಭಿವೃದ್ಧಿಗೆ ಯೋಜನೆ

Last Updated 30 ಜನವರಿ 2018, 7:00 IST
ಅಕ್ಷರ ಗಾತ್ರ

ಭಾರತೀನಗರ: ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆಬೆಳ್ಳೂರುವಿನಲ್ಲಿ ಕೊಕ್ಕರೆಗಳ ಸಾವು ತಡೆಗಟ್ಟುವ ಕ್ರಮವಾಗಿ ₹ 1.30 ಕೋಟಿ ವೆಚ್ಚದಲ್ಲಿ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕೊಕ್ಕರೆಬೆಳ್ಳೂರಿಗೆ ವಲಸೆ ಬರುವ ಕೊಕ್ಕರೆಗಳು ನೀರು, ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಕೆರೆಗಳನ್ನು ಆಶ್ರಯಿಸಿವೆ. ಶಿಂಷಾ ನದಿ, ಸೂಳೆಕೆರೆ ಸೇರಿ ಸುತ್ತಮುತ್ತಲ ಗ್ರಾಮಗಳ ಕೆರೆಗಳು ಕೊಕ್ಕರೆಗಳ ಆಹಾರದ ಮೂಲವಾಗಿದೆ.

ಪ್ರಸ್ತುತ ಈ ಕೆರೆಗಳು ನೀರಿನ ಸೆಲೆ ಕಲುಷಿತ ಗೊಂಡಿದೆ. ಇದು ಕೊಕ್ಕರೆಗಳ ಸಾವಿಗೆ ಕಾರಣವಾಗಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರಸ್ತುತ ಮಾದರಹಳ್ಳಿ ಸಮೀಪದ ಸೂಳೆಕೆರೆಯಲ್ಲಿ 3 ಕೊಕ್ಕರೆಗಳು, 2 ನೀರು ಕೋಳಿಗಳು ಸತ್ತಿರುವುದು ಅಧಿಕಾರಿಗಳ ಶಂಕೆಯನ್ನು ಬಲವಾಗಿಸಿದೆ. ಜೊತೆಗೆ ಎಲ್ಲಾ ಕೆರೆಗಳಿಗೂ ಔಷಧಿ ಸಿಂಪಡಿಸಲು ಅಸಾಧ್ಯವಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು ಕೊಕ್ಕರೆಬೆಳ್ಳೂರು ಗ್ರಾಮದ ಕೆರೆಯನ್ನೇ ಅಭಿವೃದ್ದಿ ಪಡಿಸಿ, ಆ ಕೆರೆಯಲ್ಲಿ ಮೀನುಗಳನ್ನು ಬಿಟ್ಟರೆ ಕೊಕ್ಕರೆಗಳು ಆಹಾರ ಹುಡುಕಿ ಕೊಂಡು ಮತ್ಯಾವ ಕೆರೆಗಳಿಗೂ ಹೋಗದೇ ಇಲ್ಲಿಯೇ ಇರುತ್ತವೆ. ಇದರಿಂದ ಕೊಕ್ಕರೆಗಳ ಆರೋಗ್ಯವನ್ನು ಕಾಪಾಡಬಹುದು ಎಂಬುದು ಅಧಿಕಾರಿಗಳ ಯೋಚನೆಯಾಗಿದೆ.

ಈಗಾಗಲೇ ಗ್ರಾಮದ ಕೆರೆ ಅಭಿವೃದ್ದಿ ಮಾಡಲು ₹ 1.30 ಕೋಟಿ ಅಂದಾಜು ವೆಚ್ಚ ತಯಾರಾಗಿದೆ. ಸರ್ಕಾರದ ಮಂಜೂರಾತಿ ಸಿಕ್ಕಿದೆ. ಕಾಮಗಾರಿಯ ಕೆಲಸವೂ ಕೂಡ ಭರದಿಂದ ಸಾಗಿದೆ. ಶಿಂಷಾ ನದಿಯಿಂದ ಬನ್ನಹಳ್ಳಿ ಮಾರ್ಗವಾಗಿ ಏತನೀರಾವರಿ ಮೂಲಕ ಕೆರೆಗೆ ನೀರು ತುಂಬಿಸಲು ಯೋಜಿಸಲಾಗಿದೆ.

ಕೆರೆ ಮಧ್ಯೆ ದ್ವೀಪವನ್ನು ನಿರ್ಮಿಸಿ ಮಾಡಿ, ಅದರಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳೆಸಲು ಯೋಜಿಸಲಾಗಿದೆ. ಕೊಕ್ಕರೆಗಳಿಗೆ ಆಹಾರವಾಗಿ ಕೆರೆಯ ನೀರಿನಲ್ಲಿ ಮೀನುಗಳನ್ನು ಬಿಟ್ಟು ಕೊಕ್ಕರೆಗಳು ಸ್ವಚ್ಛಂದವಾಗಿ ವಿಹರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಇದರ ಕಾಮಗಾರಿಯು ಆರಂಭವಾಗಿದೆ.

‘ಕೆರೆ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಿರಲು ನಿರ್ಧರಿಸಲಾಗಿದೆ. ಇದಕ್ಕೆ ಗ್ರಾಮಸ್ಥರ ಸಹಕಾರವಿದೆ. ಬರುವ ಜೂನ್‌, ಜುಲೈ ವೇಳೆಗೆ ಕೆರೆಯ ಅಭಿವೃದ್ದಿ ಕಾಮಗಾರಿಯು ಮುಗಿಯಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದರು.

ಕೆರೆ ಅಭಿವೃದ್ಧಿಯ ಬಳಿಕ ವಲಸೆ ಬರುವ ಕೊಕ್ಕರೆಗಳ ಆಹಾರಕ್ಕೆ ಧಕ್ಕೆ ಯಾಗದು. ಈ ಕ್ರಮದಿಂದ ಈ ಭಾಗದಲ್ಲಿ ಅಂತರ್ಜಲವು ಸಂರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈಚೆಗೆ ಪೆಲಿಕಾನ್‌ಗಳು ಸತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಸ್ವಸ್ಥವಾಗಿದ್ದ ಎರಡು ಕೊಕ್ಕರೆಗಳ ಸಾವು

ಕೊಕ್ಕರೆಬೆಳ್ಳೂರಿನಲ್ಲಿ ಅಸ್ವಸ್ಥಗೊಂಡಿದ್ದ 2 ಕೊಕ್ಕರೆಗಳು ಸೋಮವಾರ ಮೃತಪಟ್ಟಿವೆ.

ಒಂದು ತಿಂಗಳಿನಿಂದ ಕೊಕ್ಕರೆಬೆಳ್ಳೂರಿನಲ್ಲಿ ಸತ್ತ ಕೊಕ್ಕರೆಗಳ ಸಂಖ್ಯೆ 20 ಮುಟ್ಟಿದೆ.

ಅರಣ್ಯ ವೀಕ್ಷಕರು ಸತ್ತ ಕೊಕ್ಕರೆಗಳನ್ನು ಪಕ್ಷಿ ಕೇಂದ್ರದ ಬಳಿ ಸುಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT