ಗೆಲುವಿಗಾಗಿ ಮೂರು ಪಕ್ಷಗಳ ರಣತಂತ್ರ

7

ಗೆಲುವಿಗಾಗಿ ಮೂರು ಪಕ್ಷಗಳ ರಣತಂತ್ರ

Published:
Updated:
ಗೆಲುವಿಗಾಗಿ ಮೂರು ಪಕ್ಷಗಳ ರಣತಂತ್ರ

ವಿಜಯಪುರ: ವಿಧಾನಸಭಾ ಚುನಾ ವಣೆಗೆ ದಿನಗಣನೆ ಆರಂಭಗೊಂಡಿದೆ. ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದ್ದು, ಮೂರು ಪಕ್ಷಗಳ ಹೈಕಮಾಂಡ್‌ ಗೆಲುವಿಗಾಗಿ ರಣತಂತ್ರ ರೂಪಿಸಿವೆ.

2008ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಐದು ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದರೆ, ಕಾಂಗ್ರೆಸ್‌ ಮೂರು ಕ್ಷೇತ್ರಗಳನ್ನು ತನ್ನ ‘ಕೈ’ ವಶಪಡಿಸಿಕೊಂಡಿತ್ತು. 2013ರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಮೂಲಕ ಏಳು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ, ಏಕಸ್ವಾಮ್ಯ ಸಾಧಿಸಿದರೆ, ಬಿಜೆಪಿ ಒಂದೇ ಒಂದು ಕ್ಷೇತ್ರಕ್ಕೆ ಸೀಮಿತಗೊಂಡಿತ್ತು.

ಈ ಎರಡೂ ಚುನಾವಣೆಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ ನೇರ ಹಣಾಹಣಿ ನೀಡಿದರೂ, ಕೆಲ ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಪರಾಜಯ ಹೊಂದಿದೆ. ದಶಕದಿಂದ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಜೆಡಿಎಸ್‌ ಖಾತೆ ತೆರೆದಿಲ್ಲ.

ಬಿಜೆಪಿ: ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಕಮಲ ಪಾಳೆಯದ ಸ್ಥಿತಿ ಚಿಂತಾ ಜನಕವಾಗಿದೆ. ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಬಹುತೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲ ದಂತಿದೆ. ಎಲ್ಲರೂ ತಳ ಹಂತದಿಂದ ಹಿಡಿದು ಹೈಕಮಾಂಡ್‌ ತನಕವೂ ತಮ್ಮದೇ ಆದ ಲಾಬಿ ನಡೆಸಿದ್ದು, ನನಗೆ ಟಿಕೆಟ್‌, ನನ್ನನ್ನು ಬೆಂಬಲಿಸಿ, ನಾನೇ ಕ್ಷೇತ್ರದ ಶಾಸಕ ಎಂಬ ನಾಮಫಲಕವನ್ನು ಬೆಂಬಲಿಗರ ಕೊರಳಿಗೆ ತೂಗು ಹಾಕಿ ಕ್ಷೇತ್ರ ಸುತ್ತಾಟ ನಡೆಸಿದ್ದಾರೆ.

ಬಿಜೆಪಿ ಜಿಲ್ಲಾ ಮುಖಂಡರ ಆಂತರಿಕ ಸಮೀಕ್ಷೆ, ಒಳಗಿನ ಮಾತಿನ ಪ್ರಕಾರ ಎರಡರಿಂದ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಎಂಬುದನ್ನು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಕಮಲ ಪಾಳೆಯದ ಹೈಕಮಾಂಡ್‌ ಕನಿಷ್ಠ ಏಳು ಕ್ಷೇತ್ರ ಗೆಲ್ಲಬೇಕು ಎಂಬ ಗುರಿಯೊಂದಿಗೆ ಚುನಾವಣಾ ರಣ ಕಣಕ್ಕೆ ಧುಮುಕಿದೆ. ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಪರೇಷನ್‌ ಕಮಲ ನಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಇದು ವಿಫಲವಾದರೂ 2008ರ ಫಲಿತಾಂಶವನ್ನು ಪಡೆಯಲೇಬೇಕು ಎಂಬ ಹಠ ಬಿಜೆಪಿ ನಾಯಕರದ್ದು.

ಫೆ 4ರಂದು ನವಕರ್ನಾಟಕ ಪರಿವ ರ್ತನಾ ಸಮಾವೇಶದ ಸಮಾರೋಪದ ಬಳಿಕ ವರಿಷ್ಠರು ಸೂಚಿಸಿದ ಕೇಂದ್ರ ತಂಡ ನಿರ್ದಿಷ್ಟವಾಗಿ ಜಿಲ್ಲೆಯಲ್ಲೇ ಬೀಡು ಬಿಡಲಿದ್ದು, ನಿಗದಿತ ಗುರಿ ತಲುಪಲಿಕ್ಕಾಗಿ ರಣತಂತ್ರ ರೂಪಿಸಲಿದೆ ಎಂದು ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಭಾಗದ ಉಸ್ತುವಾರಿ ಹೊಣೆ ಹೊತ್ತಿರುವ ಸಂಘಟನೆಯ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಾಂಗ್ರೆಸ್‌: ಹಾಲಿ ಆರು ಶಾಸಕರು ಪಕ್ಷದಲ್ಲಿದ್ದಾರೆ. ಚುನಾವಣಾ ಸಿದ್ಧತೆ ಬಿರುಸಿನಿಂದ ನಡೆಸಿ ಕೊಂಡಿದ್ದಾರೆ. ದೇವರಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಜೆಡಿಎಸ್‌ ಜತೆ ಗುರುತಿಸಿಕೊಂಡಿದ್ದು, ಈ ವಿಧಾನಸಭಾ ಕ್ಷೇತ್ರ ಸೇರಿದಂತೆ ದಶಕದಿಂದ ‘ಕೈ’ ಜಾರಿರುವ ಸಿಂದಗಿ ವಿಧಾನಸಭಾ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳಬೇಕು ಎಂಬ ಉಮೇದು ಕಾಂಗ್ರೆಸ್‌ ನಾಯಕರದ್ದು.

ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಜಿಲ್ಲೆಗೆ ಭೇಟಿ ನೀಡುವ ತನಕವೂ ‘ಕೈ’ ಪಡೆ ಯಲ್ಲಿ ಶೀತಲ ಸಮರದ್ದೇ ಸದ್ದು ಹೊರ ಹೊಮ್ಮುತ್ತಿತ್ತು. ಶಾಸಕರು–ಸಚಿವ ನಡುವೆ ಸಜ್ಜಿರಲಿಲ್ಲ. ತಿಕ್ಕಾಟ ಕೆಲವೊಮ್ಮೆ ತಾರಕಕ್ಕೇರಿದ ನಿದರ್ಶನಗಳು ಹಲವುಂಟು.

ಕಾಂಗ್ರೆಸ್ಸಿಗರ ಸದ್ಯದ ಲೆಕ್ಕಾಚಾರ ದಂತೆ ಎರಡ್ಮೂರು ಕ್ಷೇತ್ರ ಗಳಲ್ಲಿ ನಿರಾಯಾಸವಾಗಿ ಗೆಲುವು ದಾಖ ಲಿಸಬಹುದು. ಶಾಸಕರು, ಸಚಿವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದು, ಗೆಲುವಿಗಾಗಿ ಪ್ರತಿತಂತ್ರ ಹೂಡುತ್ತಿದ್ದಾರೆ. ಎರಡ್ಮೂರು ವರ್ಷದಿಂದ ಮುನಿಸಿ ಕೊಂಡು ತಮ್ಮಿಂದ ದೂರವಾದ ನಾಯಕರು, ವಿರೋಧ ಪಕ್ಷಗಳಲ್ಲಿನ ಮುಖಂಡರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರ ನಡೆಸಿದ್ದಾರೆ.

ಹಾಲಿಯಿರುವ ಸ್ಥಾನಗಳನ್ನು ಉಳಿಸಿ ಕೊಳ್ಳುವ ಜತೆಗೆ, ಉಳಿದ ಒಂದು ಕ್ಷೇತ್ರವನ್ನು ಕೈವಶ ಪಡಿಸಿಕೊಳ್ಳಬೇಕು ಎಂಬುದು ಹೈಕಮಾಂಡ್‌ ಉಸ್ತು ವಾರಿಯ ತಂತ್ರಗಾರಿಕೆ. ಪಕ್ಷಕ್ಕೆ ವಿರೋಧ ವ್ಯಕ್ತವಾಗಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ, ನಾಗಠಾಣ, ಸಿಂದಗಿ, ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸ್ತುತ ತಳ ಹಂತದಲ್ಲಿ ‘ಕೈ’ ಸರ್ವೇ ನಡೆದಿದೆ.

ಫೆ 15ರವರೆಗೆ ಈ ಸರ್ವೇ ನಡೆಯ ಲಿದೆ. ಉತ್ತರ ಪ್ರದೇಶದ ಪರಿಣಿತರ ತಂಡ ಸರ್ವೇಯಲ್ಲಿ ಭಾಗಿಯಾಗಿದ್ದು, ನಾಲ್ಕು ಮತ ಕ್ಷೇತ್ರಗಳಲ್ಲಿ ಯಾರ ಪರ ಒಲವಿದೆ ಎಂಬುದನ್ನು ಪಕ್ಷದ ಕಾರ್ಯಕರ್ತರು, ಮತದಾರರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ಈ ಸರ್ವೇ ಆಧರಿಸಿಯೇ ಹೈಕಮಾಂಡ್‌ ಟಿಕೆಟ್‌ ಅಂತಿಮಗೊಳಿಸಲಿದೆ. ಗೆಲುವಿಗೆ ತೊಡಕಾಗಿರುವ ಅಂಶಗಳನ್ನು ಸರಿಪಡಿಸಿಕೊಳ್ಳಲಿದೆ ಎಂದು ಎಐಸಿಸಿ ಮೂಲಗಳು ಖಚಿತಪಡಿಸಿವೆ.

ಜೆಡಿಎಸ್‌: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೋಮ ವಾರದಿಂದ ಐದು ದಿನ ಜಿಲ್ಲೆಯ ದೇವರಹಿಪ್ಪರಗಿ, ಮುದ್ದೇಬಿಹಾಳ, ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ.

ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಬೇಕು ಎಂಬುದು ಜೆಡಿಎಸ್‌ ರಾಜ್ಯ ವರಿಷ್ಠರ ಆಶಯ. ಈ ನಿಟ್ಟಿನಲ್ಲಿ ತಳಹಂತದ ರೂಪುರೇಷೆ ತಯಾರಾಗಿದೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿ ಸಲಾಗಿದೆ. ಮುನಿಸಿಕೊಂಡವರ ಜತೆ ಮಾತುಕತೆ ನಡೆಸಿ ಸಮಾಧಾನ ಪಡಿಸಲಾಗಿದೆ. ಹೊಸಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ.

ಜೆಡಿಎಸ್‌ ಅಗ್ರೇಸರ ಎಚ್‌.ಡಿ.ದೇವೇಗೌಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಎಲ್ಲ ಹಿರಿಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ತಮ್ಮ ರಾಜಕೀಯ ದಾಳವನ್ನು ಉರುಳಿಸಿದ್ದಾರೆ. ಕಾಂಗ್ರೆಸ್‌–ಬಿಜೆಪಿ ಟಿಕೆಟ್‌ ಘೋಷಿಸುವುದನ್ನು ಕಾತರದಿಂದ ಕಾಯುತ್ತಿದ್ದು, ಟಿಕೆಟ್‌ ದೊರಕದ ಪ್ರಬಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕೆಲ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

* * 

ಚುನಾವಣಾ ಕೌಂಟ್‌ಡೌನ್‌ ಆರಂಭವಾಗಿದೆ. ಮೂರು ಪಕ್ಷಗಳು ರಾಜಕೀಯ, ಸಾಮಾಜಿಕ, ಜಾತಿ ಸಮೀಕರಣದಲ್ಲಿ ತಲ್ಲೀನವಾಗಿವೆ

ಪ್ರಕಾಶ ಪಾಟೀಲ, ವಿಜಯಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry