ಬಿಕೋ ಎನ್ನುತ್ತಿರುವ ಕಾಂಗ್ರೆಸ್‌ ಕಚೇರಿ

7

ಬಿಕೋ ಎನ್ನುತ್ತಿರುವ ಕಾಂಗ್ರೆಸ್‌ ಕಚೇರಿ

Published:
Updated:
ಬಿಕೋ ಎನ್ನುತ್ತಿರುವ ಕಾಂಗ್ರೆಸ್‌ ಕಚೇರಿ

ಯಾದಗಿರಿ: ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನ ಹಿರಿಯ ಧುರೀಣ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಅವರ ದಿಢೀರ್ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆಯಿಂದಾಗಿ ಯಾದಗಿರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ರಾಜಕೀಯ ಚುಟುವಟಿಕೆಗಳು ಸ್ತಬ್ಧಗೊಂಡಿವೆ. ಸದಾ ಜನಸಂದಣಿ ತುಂಬಿರುತ್ತಿದ್ದ ನಗರದಲ್ಲಿನ ಅವರ ಮನೆ ‘ನಂದನ ನಿಲಯ’ ಸೋಮವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ನಗರದ ಕನಕ ವೃತ್ತದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯೂ ಕೂಡ ಕಾರ್ಯಕರ್ತರಿಲ್ಲದೆ ಕದ ಹಾಕಿಕೊಂಡಿದೆ. ಗ್ರಾಮೀಣ ಭಾಗದ ಪಕ್ಷದ ಕಾರ್ಯಕರ್ತರು ಬೀಗ ಹಾಕಿಕೊಂಡಿರುವ ಶಾಸಕರ ಮನೆ, ಪಕ್ಷದ ಕಚೇರಿ ನೋಡಿಕೊಂಡು ಹಿಂದಿರುಗುತ್ತಿದ್ದ ದೃಶ್ಯ ಸೋಮವಾರ ಕಂಡುಬಂತು.

ಶಾಸಕರ ನಡೆ ಯಾವ ಕಡೆ?:

ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಸಕ್ರಿಯ ರಾಜಕಾರಣದಲ್ಲಿ ಇದ್ದುಕೊಂಡೇ ಸಲಹೆ ಸೂಚನೆ ನೀಡುವುದಾಗಿ ಹೇಳಿಕೆ ನೀಡಿರುವುದರಿಂದ ಎರಡನೇ ಸಾಲಿನ ಮುಖಂಡರಲ್ಲಿ ಗೊಂದಲ ಶುರುವಾಗಿದೆ.

ಡಾ.ಮಾಲಕರಡ್ಡಿ 40 ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದರೂ, ಯಾದಗಿರಿ ಮತಕ್ಷೇತ್ರದಲ್ಲಿ ಯಾರನ್ನೂ ಗುರುತಿಸಿ ನಾಯಕರನ್ನಾಗಿ ಬೆಳೆಸುವ ಪ್ರಯತ್ನ ಮಾಡಿಲ್ಲ. ಹಾಗಾಗಿ, ಅವರ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ನಾಯಕರು ಕಾಂಗ್ರೆಸ್‌ ನಲ್ಲಿ ಇಲ್ಲ ಎಂಬುದಾಗಿ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಸಕ್ರಿಯ ರಾಜಕಾರಣ ಬಿಟ್ಟು ಹೋಗುವುದಿಲ್ಲ ಎಂಬುದಾಗಿ ಹೇಳಿರುವ ಡಾ.ಮಾಲಕರಡ್ಡಿ ಪಕ್ಷ ಬದಲಾಯಿಸುತ್ತಾರೆಯೇ? ಎಂಬುದು ಇನ್ನೂ ಗೊಂದಲ ಇದೆ. ಈ ಸಂದರ್ಭವನ್ನು ಬಳಸಿಕೊಂಡಿರುವ ಬಿಜೆಪಿಯ ನಾಯಕರು ಶಾಸಕ ಮಾಲಕರಡ್ಡಿ ಬಿಜೆಪಿಯಿಂದ ಟಿಕೆಟ್‌ ಕೇಳುತ್ತಿದ್ದಾರೆ? ಬಿಜೆಪಿಯಿಂದ ಸ್ಪರ್ಧಿಸಲು ತೆರೆಮರೆ ಕಸರತ್ತು ನಡೆಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಸಂಪರ್ಕದಲ್ಲಿದ್ದಾರೆ ಎಂಬುದಾಗಿ ವದಂತಿ ಹಬ್ಬಿಸಿದ್ದಾರೆ. ಆದರೆ, ಮಾಲಕರಡ್ಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿಲ್ಲ. 40 ವರ್ಷ ಮತನೀಡಿ ಗೆಲ್ಲಿಸಿರುವ ಮತಕ್ಷೇತ್ರದ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಿಗೆ, ಮುಖಂಡರಿಗೆ ತಿಳಿಸದೇ ಪಕ್ಷ ಬದಲಿಸಲು ಅವರು ಅಧಿಕಾರದಾಹಿ ರಾಜಕಾಣಿ ಅಲ್ಲ’ ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ಸ್ಪರ್ಧಿಸಿದರೂ ಅಚ್ಚರಿ ಇಲ್ಲ!: ‘ಡಾ.ಮಾಲಕರಡ್ಡಿ ಸರಳ, ಸಜ್ಜನ, ನಿಷ್ಕಳಂಕ ವ್ಯಕ್ತಿತ್ವದವರು. ಅವರು ಎಂದೂ ದ್ವೇಷ ರಾಜಕಾರಣ ಮಾಡಿಲ್ಲ. ಸಾತ್ವಿಕ ಗುಣ ಸ್ವಭಾವದ ಅವರು ಸಿಟ್ಟುಬಂದಾಗ ದಿಢೀರ್ ಬೇಸರ ವ್ಯಕ್ತಪಡಿಸುತ್ತಾರೆ. ಆದರೆ, ನಂತರ ಚಿಂತಿತರಾಗಿ ಮುಂದುವರಿಯುತ್ತಾರೆ. ಹಾಗೆ, ಶಾಸಕ ಡಾ.ಮಾಲಕರಡ್ಡಿ ಅವರು ಮುಂದಿನ ದಿನಗಳಲ್ಲಿ ಮತದಾರರ, ಮುಖಂಡರ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಅಚ್ಚರಿ ಇಲ್ಲ. ನಿವೃತ್ತಿ ಕೇವಲ ಮೌಖಿಕವೇ ಹೊರತು, ಲಿಖಿತರೂಪದಲ್ಲಿ ಇಲ್ಲ. ಅವರಿನ್ನೂ ಕಾಂಗ್ರೆಸ್ ಶಾಸಕರಾಗಿಯೇ ಉಳಿದಿದ್ದಾರೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಚನ್ನಾರಡ್ಡಿ ತುನ್ನೂರು ಹೇಳುತ್ತಾರೆ.

ಶಾಸಕರ ಮನವೊಲಿಸಲು ಯತ್ನ: ಫೆ.11ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಭೇಟಿ ನೀಡಿರುವ ರಾಹುಲ್‌ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಬಿಜ್ಜುವಾಲ, ಎಐಸಿಸಿ ಕಾರ್ಯದರ್ಶಿ ಡಾ.ಶೈಲಜನಾಥ ಸಾಕೆ ಅವರು ಶಾಸಕ ಮಾಲಕರಡ್ಡಿ ಅವರ ಮನವೊಲಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ನಾನು ಪಕ್ಷ ಬದಲಿಸಲ್ಲ. ಹಾಗಂತ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ನಾನು ಸೂಚಿಸಿದ ವ್ಯಕ್ತಿಗೆ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಗೆಲುವಿಗೆ ಶ್ರಮಿಸುವುದಾಗಿ ಡಾ.ಮಾಲಕರಡ್ಡಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಎಚ್ಚರಿಕೆ ರವಾನಿಸಿದ್ದಾರೆ ಎಂಬುದಾಗಿಯೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಶಾಸಕರ ಒಲವು ಯಾರತ್ತ?

ಡಾ.ಮಾಲಕರಡ್ಡಿ ಬೆಂಬಲಿಸಿದರೆ ಯಾದಗಿರಿ ಮತಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳಾಗಲು ಮುಖಂಡರಾದ ಚನ್ನಾರಡ್ಡಿ ತುನ್ನೂರು, ಶ್ರೀನಿವಾಸರಡ್ಡಿ ಕಂದಕೂರು, ಲಾಯಕ್ ಬಾದಲ್‌ ಹುಸೇನ್, ಮರೀಗೌಡ ಹುಲ್‌ಕಲ್‌ ತುದಿಗಾಲಿನಲ್ಲಿ ನಿಂತಿದ್ದಾರೆ.

ಆದರೆ, ಶಾಸಕ ಮಾಲಕರಡ್ಡಿ ಅವರ ಒಲವು ಯಾರ ಮೇಲೆ ಇದೆ ಎಂಬುದಾಗಿ ಕಾಂಗ್ರೆಸ್‌ ಕಾರ್ಯಕರ್ತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಶ್ರೀನಿವಾಸರಡ್ಡಿ ಕಂದಕೂರ ಅವರ ಮೇಲೆ ಮಾಲಕರಡ್ಡಿ ಅವರ ಒಲವು ಹೆಚ್ಚಿದೆ. ಆದರೆ, ಚನ್ನಾರಡ್ಡಿ ತುನ್ನೂರು ಇತ್ತ ಮಾಲಕರಡ್ಡಿ, ಅತ್ತ ಖರ್ಗೆ ಇಬ್ಬರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಹಾಗಾಗಿ, ಟಿಕೆಟ್ ಅವರ ಪಾಲಾಗಬಹುದು ಎಂಬ ರಾಜಕೀಯ ಸಮೀಕರಣ ಶುರುವಾಗಿದೆ.

ಮಾಲಕರಡ್ಡಿಯೇ ಮುಂದಿನ ಅಭ್ಯರ್ಥಿ

‘ಮುನಿಸಿಕೊಂಡಿರುವ ಡಾ.ಮಾಲಕರಡ್ಡಿಯೇ ಕಾಂಗ್ರೆಸ್‌ನ ಮುಂದಿನ ಅಭ್ಯರ್ಥಿ’ ಎಂದು ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಕೃಷ್ಣಾ ಜೀ ತಿಳಿಸಿದರು. ನಗರದಲ್ಲಿ ಸೋಮವಾರ ಕಾರ್ಯಕರ್ತರ ಬೂತ್‌ಮಟ್ಟದ ತರಬೇತಿ ಕಾರ್ಯಕ್ರಮ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದರು.

‘ಇಡೀ ಮತಕ್ಷೇತ್ರದಲ್ಲಿ ಮಾಲಕರಡ್ಡಿ ಅವರೇ ನಿಲ್ಲಬೇಕು ಎಂಬ ಧ್ವನಿ ಕೇಳಿಬರುತ್ತಿದೆ. ಮಾಲಕರಡ್ಡಿ ಅವರದ್ದು ಮಗುವಿನಂತಹ ಮನಸ್ಸು. ಅವರು ಮತದಾರರ ಒತ್ತಡಕ್ಕೆ ಮಣಿಯಲಿದ್ದಾರೆ’ ಎಂದರು.

* * 

ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಪಡಿಸಿದವರಲ್ಲಿ ಡಾ.ಮಾಲಕರಡ್ಡಿ ಅವರ ಅಪಾರ ಶ್ರಮ ಇದೆ. ಅವರ ಪಕ್ಷ ಬದಲಾವಣೆಯನ್ನು ಮತಕ್ಷೇತ್ರದ ಮತದಾರರು ನಿರ್ಣಯಿಸುತ್ತಾರೆ.

ಚನ್ನಾರಡ್ಡಿ ತುನ್ನೂರು

ಕಾಂಗ್ರೆಸ್ ಹಿರಿಯ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry