ಮೂಲ ಸೌಲಭ್ಯ ವಂಚಿತ ಗೊಬ್ಬುರ(ಬಿ) ಗ್ರಾಮ

7

ಮೂಲ ಸೌಲಭ್ಯ ವಂಚಿತ ಗೊಬ್ಬುರ(ಬಿ) ಗ್ರಾಮ

Published:
Updated:
ಮೂಲ ಸೌಲಭ್ಯ ವಂಚಿತ ಗೊಬ್ಬುರ(ಬಿ) ಗ್ರಾಮ

ಅಫಜಲಪುರ: ತಾಲ್ಲೂಕಿನ ದೊಡ್ಡ ಗ್ರಾಮವಾದ ಗೊಬ್ಬುರ (ಬಿ) ಗ್ರಾಮದಲ್ಲಿ ಸುಮಾರು 15 ಸಾವಿರ ಜನಸಂಖ್ಯೆಯಿದೆ. ಈ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದಾರೆ. ಈ ಗ್ರಾಮ ರಾಷ್ಟ್ರೀಯ ಹೆದ್ದಾರಿ 150ರ ಬದಿಯಲ್ಲಿದ್ದು, ಹತ್ತು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ.

ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವಿದೆ. ಇದು 20 ಗ್ರಾಮಗಳು, 4 ತಾಂಡಾಗಳು ಸೇರಿದಂತೆ ಸುಮಾರು 40 ಸಾವಿರ ಜನಸಂಖ್ಯೆಗೆ ಸೇವೆ ಒದಗಿಸಬೇಕಾದ ಸ್ಥಿತಿ ಇದೆ. ಆದರೆ, ರಾತ್ರಿವೇಳೆ ವೈದ್ಯರ ಸಮಸ್ಯೆಯಿದೆ. ರೋಗಿಗಳಿಗೆ ಪೂರ್ಣ ಪ್ರಮಾಣದ ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ. ಇಲ್ಲಿನ ಜನಸಂಖ್ಯೆ ನೋಡಿದರೆ ಇದು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಬೇಕಿದೆ.

‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿದೆ. ಆದರೆ, ಇದು ಸಾಕಾಗುತ್ತಿಲ್ಲ. ಸದ್ಯಕ್ಕೆ ಬಿದನೂರ ಕೆರೆ ಹತ್ತಿರ ಬಾವಿ ತೋಡಿ ಅಲ್ಲಿಂದ ಪೈಪ್‌ಲೈನ್‌ ಮೂಲಕ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಿ ಗ್ರಾಮಕ್ಕೆ ನೀಡಲಾಗುತ್ತಿದೆ. ನೀರು ಶುದ್ಧೀಕರಣವಾಗದ ಕಾರಣ ಬಳಸಲು ಯೋಗ್ಯವಾಗಿಲ್ಲ. ಸ್ನಾನ ಮಾಡಿದರೆ ಮೈ ತುರಿಕೆಯಾಗುತ್ತಿದೆ ಮತ್ತು ಕೂದಲು ಉದುರುತ್ತಿವೆ’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ನಾಟೀಕಾರ ಹೇಳುತ್ತಾರೆ.

ಚರಂಡಿ ವ್ಯವಸ್ಥೆ: ‘ಗ್ರಾಮದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಿದ್ದರಿಂದ ಮಾಲಿನ್ಯ ನೀರು ಮುಂದೆ ಹರಿದು ಹೋಗುತ್ತಿಲ್ಲ. ಯೋಗ್ಯ ರೀತಿಯಲ್ಲಿ ವಾರ್ಡ್‌ಗಳಲ್ಲಿ ರಸ್ತೆಗಳಿಲ್ಲ’ ಎಂದು ಅವರು ಆರೋಪಿಸುತ್ತಾರೆ.

ಈ ಕುರಿತು ಗ್ರಾಮ ಮುಖಂಡ ಹಬೀಬ ಡಾಂಗೆ ಮಾಹಿತಿ ನೀಡಿ, ‘ಗ್ರಾಮ ದಲ್ಲಿ ಉರ್ದು ಪ್ರಾಥಮಿಕ ಶಾಲೆಯಿದೆ. ಕನ್ನಡ ವಿಷಯವಿದೆ. ಕಲಿಸುವ ಶಿಕ್ಷಕರಿಲ್ಲ, ಮತ್ತು ಎಲ್ಲಾ ಶಿಕ್ಷಕರು ಮಹಿಳೆಯರಾದ್ದರಿಂದ ಶಾಲೆಯ ಕುಂದು ಕೊರತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಬ್ಬರು–ಮೂವರು ಪುರುಷ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಬೇಕು’ ಎಂದರು.

ಹಾಳು ಬಿದ್ದ ಶಾಲಾ ಕಟ್ಟಡ, ವಸತಿನಿಲಯ: ‘ಸುಮಾರು 5 ವರ್ಷಗಳಿಂದ ಸರ್ಕಾರ ಸರ್ಕಾರಿ ಪ್ರೌಢಶಾಲೆಯ ಹಿಂದುಗಡೆ ಶಿಕ್ಷಕರಿಗಾಗಿ ವಸತಿನಿಲಯ ಮತ್ತು ಮಕ್ಕಳಿಗಾಗಿ ಇನ್ನೊಂದು ಶಾಲಾ ಕೋಣೆಗಳ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಿದೆ. ಇವತ್ತು ಅದು ಹಂದಿ ನಾಯಿಗಳ ತಾಣವಾಗಿದೆ. ಒಂದು ಕಡೆ ಶಾಲಾ ಕೋಣೆಗಳ ಬೇಡಿಕೆಗಾಗಿ ಪ್ರತಿಭಟನೆ ಮಾಡಿದರೆ, ಇನ್ನೊಂದು ಕಡೆ ಸುಸಜ್ಜಿತವಾಗಿ ಶಾಲಾ ಕೋಣೆ ಮತ್ತು ಶಿಕ್ಷಕರ ವಸತಿನಿಲಯವಿದ್ದು, ಅವು ಬಳಕೆಯಾಗದೇ ಹಾಳಾಗುತ್ತಿವೆ. ಈ ಶಾಲೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು, ವಿದ್ಯಾರ್ಥಿಗಳಿಗಾಗಿ 4 ಕೋಣೆಯ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಅದು ಸಹ ಪಾಳು ಬಿದ್ದಿದೆ’ ಎಂದು ಅವರು ಹೇಳುತ್ತಾರೆ.

ಗೊಬ್ಬುರ(ಬಿ) ಕ್ಷೇತ್ರದಿಂದ ಜಿ.ಪಂ ಸದಸ್ಯರಾಗಿ ಆಯ್ಕೆಯಾಗಿರುವ ಶೋಭಾ ಸಿದ್ದು ಶಿರಸಗಿ ಅವರು ಪ್ರಸ್ತುತ ಜಿ.ಪಂ ಉಪಾಧ್ಯಕ್ಷರಾಗಿದ್ದಾರೆ. ಅವರನ್ನು ವಿಚಾರಿಸಿದಾಗ ಪ್ರೌಢಶಾಲೆಯ ಹಿಂದೆ ಪಾಳು ಬಿದ್ದಿರುವ ‘ಶಾಲಾ ಕಟ್ಟಡ ಮತ್ತು ಶಿಕ್ಷಕರ ವಸತಿನಿಲಯ ಹಾಳು ಬಿದ್ದ ಬಗ್ಗೆ ಜಿ.ಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ’ ಎಂದರು.

ಗ್ರಾಮದ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿದ್ದು, ಆ ಹೆದ್ದಾರಿ ಬದಿ ಯಲ್ಲಿ ವಿವಿಧ ಅಂಗಡಿಗಳಿಂದ ಉಪ ಯೋಗಿಸಿದ ತ್ಯಾಜ್ಯಗಳನ್ನು ರಸ್ತೆಯ ಮೇಲೆ ಮತ್ತು ರಸ್ತೆಯ ಬದಿಯಲ್ಲಿ ಬಿಸಾಡಿದ್ದರಿಂದ ಸಂಪೂರ್ಣ ಬಸ್ ನಿಲ್ದಾಣ ತ್ಯಾಜ್ಯಮಯವಾಗಿದೆ. ಗ್ರಾ.ಪಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹೇಳುತ್ತಾರೆ.

* * 

 ಗೊಬ್ಬುರ(ಬಿ) ಗ್ರಾಮದಲ್ಲಿ ಚರಂಡಿಗಳ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಮಾಲಿನ್ಯ ನೀರು ಮುಂದೆ ಹರಿದು ಹೋಗುತ್ತಿಲ್ಲ. ಅಶುದ್ಧ ನೀರು ಬಳಸುತ್ತಿರುವುದರಿಂದ ಜನರಿಗೆ ಮೈ ತೂರಿಕೆ ಆಗುತ್ತಿದ್ದು, ಕೂದಲು ಉದುರುತ್ತಿವೆ.

ಮಲ್ಲಿಕಾರ್ಜುನ ನಾಟೀಕಾರ ಗ್ರಾ.ಪಂ ಮಾಜಿ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry