ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರುತ್ತಿದೆ ಜಯದೇವ ಜಾನುವಾರು ಜಾತ್ರೆ

Last Updated 30 ಜನವರಿ 2018, 8:37 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ, ಶನಿವಾರಸಂತೆ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಂಡಿರುವ ಶ್ರೀಜಯದೇವ ಜಾನುವಾರು ಜಾತ್ರೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿರುವ ಈ ಜಾತ್ರೆ ಜ.24 ರಂದು ಆರಂಭಗೊಂಡಿದ್ದು, ಫೆ.8ರವರೆಗೆ ನಡೆಯುತ್ತದೆ. 16 ದಿನ ಜಾತ್ರೆ ನಡೆಯುತ್ತಿರುವುದು ಈ ಬಾರಿಯ ವಿಶೇಷ.

73 ವರ್ಷಗಳ ಹಿಂದೆ ಚಿತ್ರದುರ್ಗದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ವೀರಶೈವ ಧರ್ಮ ಸಮ್ಮೇಳನ ಈ ಮೈದಾನದಲ್ಲಿ ನಡೆದಿತ್ತು. ಅದರ ನೆನಪಿಗಾಗಿ ಪ್ರತಿ ವರ್ಷ ಇಲ್ಲಿ ಜಾನುವಾರು ಜಾತ್ರೆ ಆಯೋಜಿಸಲಾಗುತ್ತಿದೆ.

1945ರಲ್ಲಿ ಸಮಿತಿಯೊಂದನ್ನು ರಚಿಸಿ ಅದರ ಉಸ್ತುವಾರಿಯಲ್ಲಿ ಜಾತ್ರೆಯನ್ನು ಆರಂಭಿಸಲಾಯಿತು. ನಂತರದ ವರ್ಷಗಳಲ್ಲಿ ಜಿಲ್ಲೆ ಮಾತ್ರ ವಲ್ಲದೆ ನೆರೆಯ ಹಾಸನ, ಮೈಸೂರು ಜಿಲ್ಲೆಯಿಂದಲೂ ಜಾನುವಾರುಗಳು ಇಲ್ಲಿಗೆ ಬರತೊಡಗಿದವು.

ಹೊರ ಜಿಲ್ಲೆಗಳಲ್ಲಿ ಜಾತ್ರೆಯ ಕುರಿತು ಹಸ್ತಪ್ರತಿಗಳನ್ನು ಹಂಚುವ ಮೂಲಕ, ಅಲ್ಲದೇ ಅಂಗಡಿ, ಹೋಟೆಲ್‌ಗಳಿಗೂ ಯಾವುದೇ ಸುಂಕ ವಿಧಿಸದೆ ಸಮಿತಿಯ ಸ್ವಂತ ವೆಚ್ಚದಲ್ಲಿ 15 ದಿನಗಳ ಕಾಲ ಜಾತ್ರಾ ಉತ್ಸವ ಆಯೋಜಿಸುತ್ತಿದ್ದರಿಂದ ಹೆಚ್ಚಿನ ಜನರು ಇಲ್ಲಿಗೆ ಬರುತ್ತಿದ್ದರು.

ಕಿತ್ತೂರಿನ ಕೆ.ಮಲ್ಲಪ್ಪ ಸಚಿವರಾಗಿದ್ದಾಗ ಜಾತ್ರೆಗೆಂದೇ ಈ ಮೈದಾನವನ್ನು ಮೀಸಲಿರಿಸಿದರು. ಬಳಿಕ ಶನಿವಾರಸಂತೆಯ ಮಾಜಿ ಪುರಸಭಾಧ್ಯಕ್ಷ ಬಿ.ಗಂಗಪ್ಪ ಕರ್ಕೇರ, ಶಾಂತವೀರಪ್ಪ, ಮಹಾಂತಪ್ಪ, ಚಂದ್ರಶೇಖರ್, ಕಿತ್ತೂರು ವೀರಪ್ಪ, ಹಂಡ್ಲಿಯ ಪುಟ್ಟಣ್ಣ ಮತ್ತಿತರರು ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸ್ಥಳೀಯ ಮಂಡಲ ಪಂಚಾಯಿತಿ ಮೂಲಕ ಜಾತ್ರೆ ನಡೆಸಿಕೊಂಡು ಬಂದರು.

ಮನೋರಂಜನೆಗಾಗಿ ಸರ್ಕಸ್, ಯಕ್ಷಿಣಿ ಪ್ರದರ್ಶನ ಸೇರಿದಂತೆ ಅನೇಕ ಆಟಿಕೆಗಳು ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಆಕರ್ಷಿಸುತ್ತಿದ್ದವು. ಅಲ್ಲದೇ, ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದ್ದು, ರೈತರು ಬೆಳೆವ ತರಕಾರಿಗಳು, ಹಣ್ಣುಗಳು, ಗೃಹ ಕೈಗಾರಿಕೆಯ ವಸ್ತುಗಳು ಪ್ರದರ್ಶನಗೊಂಡು ಜನರನ್ನು ಸೆಳೆಯುತ್ತವೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ.

ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಬರುವ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಜೋಡಿ ಎತ್ತುಗಳು ₹15 ಸಾವಿರದಿಂದ ₹ 1 ಲಕ್ಷದವರೆಗೂ ಬೆಲೆ ಪಡೆದುಕೊಳ್ಳುತ್ತಿವೆ.

ಜಾತ್ರೆಯ ದಿನಗಳಲ್ಲಿ ಮಾತ್ರ ಪೂಜೆ

ಜಾತ್ರೆಯ ಮೊದಲ ದಿನ ಗುಡುಗಳಲೆ ಬಸವೇಶ್ವರ ದೇವಾಲಯದ ನೆರೆ ಬಸವಣ್ಣ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯದೊಂದಿಗೆ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗುತ್ತದೆ. ಜಾತ್ರೆ ನಡೆಯುವ ಈ ದಿನಗಳಲ್ಲಿ ಮಾತ್ರ ಪೂಜೆ ಮಾಡುವುದರಿಂದ ಹೆಚ್ಚಿನ ಭಕ್ತರು ಸೇರುತ್ತಾರೆ.

ಶನಿವಾರಸಂತೆ ಸಮೀಪದ ಹಾರಳ್ಳಿ ಗ್ರಾಮದ ರಾಜವಂಶದ ಪ್ರಮುಖರೊಬ್ಬರು ಕೊಡಗಿನ ಕೊನೆಯ ರಾಜ ಚಿಕ್ಕವೀರರಾಜೇಂದ್ರನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಅವರ ಕುಟುಂಬದವರು ಜಾತ್ರಾ ಮೈದಾನದ ದೀಣೆ ಮೇಲೆ ಬಸವೇಶ್ವರ ದೇವರ ಪುಟ್ಟ ಗುಡಿಗಳನ್ನು ನಿರ್ಮಿಸಿದ್ದಾರೆ. ಈಗಲೂ ಜಾತ್ರಾ ಮೈದಾನದ ಎರಡೂ ಬದಿಯಲ್ಲಿ ಆ ಗುಡಿಗಳನ್ನು ಕಾಣಬಹುದು.

ನೂತನ ಬಸವೇಶ್ವರ ದೇವಾಲಯವೂ ನಿರ್ಮಾಣವಾಗಿದೆ. ಇದೇ ಮೈದಾನದಲ್ಲಿ ಕಾಳಿಕಾಂಬ ದೇವಾಲವೂ ಇದ್ದು ಜಾತ್ರೆಗೆ ಬರುವ ಭಕ್ತಾದಿಗಳನ್ನು ಸೆಳೆಯುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT