ರಾಷ್ಟ್ರೀಯ ಪಕ್ಷಗಳ ಸಾಧನೆ ಶೂನ್ಯ

7

ರಾಷ್ಟ್ರೀಯ ಪಕ್ಷಗಳ ಸಾಧನೆ ಶೂನ್ಯ

Published:
Updated:
ರಾಷ್ಟ್ರೀಯ ಪಕ್ಷಗಳ ಸಾಧನೆ ಶೂನ್ಯ

ಮಡಿಕೇರಿ: ‘ಜಾತಿ, ಧರ್ಮಗಳ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕಾರಣ ಮಾಡುತ್ತಿವೆ. ಸಾಧನ ಸಮಾವೇಶ ಹಾಗೂ ಪರಿವರ್ತನಾ ಯಾತ್ರೆಗಳನ್ನು ಏರ್ಪಡಿಸಿ, ಪರಸ್ಪರ ನಿಂದನೆಯಲ್ಲಿ ತೊಡಗಿಕೊಳ್ಳುವ ಪಕ್ಷಗಳಾಗಿದ್ದು, ಅಭಿವೃದ್ಧಿ ಸಾಧನೆಯಲ್ಲಿ ಇಂದಿಗೂ ಶೂನ್ಯ’ ಎಂದು ಜೆಡಿಎಸ್ ಯುವ ಜನತಾದಳದ ರಾಜ್ಯಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು. ನಗರದ ಗೌಡ ಸಮಾಜದ ಆವರಣ ದಲ್ಲಿ ಸೋಮವಾರ ನಡೆದ ಜೆಡಿಎಸ್ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಶೇ10 ರಿಂದ 15ರಷ್ಟು ರೈತರ ಸಾಲ ಮಾತ್ರ ಮನ್ನಾ ಆಗಿದೆ. ಬರೀ ಹೇಳಿಕೆ ಮಾತ್ರ ಕೇಳುತ್ತಿದೆ.  ಬಿಜೆಪಿಯ ಯಡ್ಯೂರಪ್ಪ ಅವರಿಗೆ ಸಾಲ ಮನ್ನಾ ಮಾಡಿ ಎಂದರೆ. ನಾವೇನೂ ನೋಟು ಪ್ರಿಂಟ್ ಮಾಡುವ ಮಷಿನ್ ಇಟ್ಟುಕೊಂಡಿದ್ದೇವೆಯೇ ಎಂದು ಹೇಳುತ್ತಾರೆ. ಅಂತಹವರಿಗೆ ಆಡಳಿತ ನಡೆಸುವ ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ಮೋದಿ ಮಾತು ನಂಬಿ ಅವರಿಗೆ ಮತ ನೀಡಿದ ರಾಜ್ಯದ ಪರಿಸ್ಥಿತಿ ಇಂದು ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ರಾಜ್ಯದ ಸಮಸ್ಯೆ ಬಗೆಹರಿಸಲು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆಡಳಿತಕ್ಕೆ ಬರಲೇ ಬೇಕಿದೆ’ ಎಂದು ಹೇಳಿದರು.

ರೈತರು ಹಾಗೂ ಯುವಕರು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ನಿರ್ಣಯ ಮಾಡಿದ್ದು, ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ. ಈ ಬದಲಾವಣೆ ಜಿಲ್ಲೆಯಲ್ಲೂ ಕಾಣಿಸಿಕೊಂಡಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ರಾಜ್ಯದ ಜನತೆ, ರೈತರ ಕಣ್ಣೀರು ಒರೆಸುವ ಕಾರ್ಯ ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯ. ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡಿದವರು ಇಂದು ತಲೆ ತಗ್ಗಿಸುವಂತೆ ಆಗಿದೆ. ಆನೆ ಹಾವಳಿಯಿಂದ ಮೃತಪಟ್ಟರೂ ಕನಿಷ್ಠ ಸೌಜನ್ಯಕ್ಕೂ ಭೇಟಿ ನೀಡುವ ಕಾರ್ಯ ಮಾಡಿಲ್ಲ ಎಂದು ದೂರಿದರು.

ಸಭೆಯಲ್ಲಿ ಜೆಡಿಎಸ್‌ನ ನಾಯಕರು, ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭ ವಿವಿಧ ಪಕ್ಷ ತೊರೆದ ಕೆಲವು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಜೆಡಿಎಸ್ ಯುವ ಜನತಾದಳದ ಜಿಲ್ಲಾ ಅಧ್ಯಕ್ಷ ಸಿ.ಎಲ್. ವಿಶ್ವ ಹಾಜರಿದ್ದರು.

ರಾಷ್ಟ್ರೀಯ ಪಕ್ಷದ ವಿಚಾರ ನಮಗೆ ಬೇಡ!

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಗೋಜಿಗೆ ನಾವು ಹೋಗುವುದಿಲ್ಲ. ಯಡ್ಯೂರಪ್ಪ ಅವರನ್ನು ಬೈದಲ್ಲಿ ಶೋಭಾ ಕರಂದ್ಲಾಜೆ ನಮ್ಮ ಮೇಲೆ ಎರಗಿ ಬೀಳ್ತಾರೆ. ಸಿದ್ದರಾಮಯ್ಯ ಅವರನ್ನು ಬೈದರೆ ಸಚಿವ ಆಂಜನೇಯ ನಮ್ಮ ಮೇಲೆ ಪ್ರಹಾರ ನಡೆಸುತ್ತಾರೆ. ಆದ್ದರಿಂದ ರಾಷ್ಟ್ರೀಯ ಪಕ್ಷದ ವಿಚಾರ ನಮಗೆ ಬೇಡ ಎಂದು ಮಧು ಬಂಗಾರಪ್ಪ ಕುಟುಕಿದರು.

ಜೀವಿಜಯ ಅವರನ್ನು ಗೆಲ್ಲಿಸಿ: ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಬಿ.ಎ.ಜೀವಿಜಯ ಅವರನ್ನು ಈ ಬಾರಿ ಹತ್ತರಿಂದ ಹದಿನೈದು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು, ಕಳೆದ ಬಾರಿ ಜೀವಿಜಯ ಅವರು, ಅಲ್ಪಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

* * 

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಾಗುವುದು

ಮಧು ಬಂಗಾರಪ್ಪ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry