‘ಮಹಿಳೆಯರು ಉತ್ಪಾದಕ ಶಕ್ತಿಯಾಗಲಿ’

7

‘ಮಹಿಳೆಯರು ಉತ್ಪಾದಕ ಶಕ್ತಿಯಾಗಲಿ’

Published:
Updated:
‘ಮಹಿಳೆಯರು ಉತ್ಪಾದಕ ಶಕ್ತಿಯಾಗಲಿ’

ಕೊಪ್ಪಳ: ‘ದುರ್ಬಲ ವರ್ಗದ ಮಹಿಳೆಯರು ಸಾಲ ಸದುಪಯೋಗ ಪಡಿಸಿಕೊಂಡು ಮುಖ್ಯವಾಹಿನಿಗೆ ಬರುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕಷ್ಟು ನೆರವು ನೀಡಿದೆ’ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್‌.ಎಚ್‌.ಮಂಜುನಾಥ್ ಹೇಳಿದರು.

ನಗರದ ಶಿವಶಾಂತವೀರ ಮಂಗಲ ಭವನದ ಆವರಣದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಸಿರಿಧಾನ್ಯ ಆಹಾರಮೇಳ ವ್ಯವಸ್ಥಾಪನಾ ಸಮಿತಿ, ನಗರಸಭೆ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಹಾಗೂ ಸಿರಿಧಾನ್ಯ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಐದು ವರ್ಷಗಳ ಹಿಂದೆ ಜಿಲ್ಲೆಗೆ ಯೋಜನೆ ಬಂದಾಗ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆವು. ಇಂದು ಜಿಲ್ಲೆಯಲ್ಲಿ ಸಾಕಷ್ಟು ಪರಿವರ್ತನೆ ಆಗಿದೆ. ಮೂಲೆಗುಂಪಾಗಿದ್ದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ಪುರುಷರು ಶಿಸ್ತಿನ ಬದುಕು ನಡೆಸುತ್ತಿದ್ದಾರೆ. ಇಲ್ಲಿ ಕೇವಲ ಆರ್ಥಿಕ ಸಬಲೀಕರಣ ಮಾತ್ರವಲ್ಲ ಅದೊಂದು ಉತ್ಪಾದಕ ಶಕ್ತಿಯಾಗಬೇಕು’ ಎಂದು ಆಶಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ‘ಕುಟುಂಬ ಏಳಿಗೆ ಹೊಂದಬೇಕಾದರೆ ಮಹಿಳೆಯ ಶ್ರಮ ಅಗತ್ಯ. ಯೋಜನೆಯ ವತಿಯಿಂದ ಮಹಿಳೆಯರ ಪ್ರತಿಭೆ ಗುರುತಿಸುವ ಕೆಲಸ ಆಗಬೇಕಿದೆ. ಯುವಜನರು ದುಶ್ಚಟ ಗಳಿಂದ ಹೊರಬರುವಂತೆ ಪ್ರೇರೇಪಿಸುವ ಕೆಲಸ ಆಗಿದೆ. ಶೇ 50ರಷ್ಟಿರುವ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕಿದೆ’ ಎಂದು ಹೇಳಿದರು.

ಡಾ.ರಾಧಾ ಕುಲಕರ್ಣಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳ ಮಹಿಳೆಯರು ಇನ್ನೂ ಹಿಂದುಳಿದಿದ್ದಾರೆ. ಅವರು ಸುಶಿಕ್ಷಿತರಾಗಬೇಕಿದೆ. ಬದುಕಿನಲ್ಲಿ ಸವಾಲು ಎದುರಿಸುವ ಸಾಮರ್ಥ್ಯ ಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾದಾಗ ಆ ಮಹಿಳೆಯನ್ನು ಸುಶಿಕ್ಷಿತಳು ಎನ್ನಬಹುದು. ಸ್ತ್ರೀಯರ ಮೇಲಿನ ತಾರತಮ್ಯ, ದೌರ್ಜನ್ಯ ತಡೆಗಟ್ಟಬೇಕಿದೆ. ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೈಜೋಡಿಸಬೇಕು’ ಎಂದು ಕೋರಿದರು.

ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಬಿಜೆಪಿ ಮುಖಂಡರಾದ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ.ಉಕ್ಕುಂದ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಧುರಾ ಕರಣಂ, ಇನ್ನರ್‌ ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಪ್ರತಿಮಾ ಪಟ್ಟಣಶೆಟ್ಟಿ, ಯೋಜನಾ ನಿರ್ದೇಶಕ ಮುರಳೀಧರ ಎಚ್‌.ಎಲ್‌. ಸುರೇಂದ್ರನಾಯ್ಕ್‌ ಇದ್ದರು.

ಸಾಲಕೊಟ್ಟು ಮರುಪಾವತಿ ಮಾಡಿಸುವುದಷ್ಟೇ ನಮ್ಮ ಗುರಿ ಅಲ್ಲ. ಪ್ರತಿ ಮಹಿಳೆಯೂ ಆರ್ಥಿಕ, ಉತ್ಪಾದಕ ಶಕ್ತಿಯಾಗಿ ಹೊರಹೊಮ್ಮಬೇಕು.

ಡಾ.ಎಲ್‌.ಎಚ್‌.ಮಂಜುನಾಥ್‌

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry