ವಿಶ್ವಮಟ್ಟದಲ್ಲಿ ದೇಶವನ್ನು ಬೆಳಗುವಂತೆ ಮಾಡಿದವರು ಗಾಂಧೀಜಿ: ಕೆ.ಸಿ. ವೇಣುಗೋಪಾಲ್

7

ವಿಶ್ವಮಟ್ಟದಲ್ಲಿ ದೇಶವನ್ನು ಬೆಳಗುವಂತೆ ಮಾಡಿದವರು ಗಾಂಧೀಜಿ: ಕೆ.ಸಿ. ವೇಣುಗೋಪಾಲ್

Published:
Updated:
ವಿಶ್ವಮಟ್ಟದಲ್ಲಿ ದೇಶವನ್ನು ಬೆಳಗುವಂತೆ ಮಾಡಿದವರು ಗಾಂಧೀಜಿ: ಕೆ.ಸಿ. ವೇಣುಗೋಪಾಲ್

ಬೆಂಗಳೂರು: ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ. ಅವರು ವಿಶ್ವಮಟ್ಟದಲ್ಲಿ ದೇಶವನ್ನು ಬೆಳಗುವಂತೆ ಮಾಡಿದವರು’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದರು.

ಕಾಂಗ್ರೆಸ್‌ ಪಕ್ಷದ ಚುನಾವಣಾ ತಯಾರಿ ಸಭೆಯಲ್ಲಿ ಮಾತನಾಡಿದ ಅವರು, ‘ಇಂದು ಇಡೀ ದೇಶ ಗಾಂಧೀಜಿಯವರನ್ನು ನೆನಪಿಸಿಕೊಳ್ಳುತ್ತದೆ. ವಿಪರ್ಯಾಸವೆಂದರೆ ಕೆಲವರು ಗೋಡ್ಸೆಯನ್ನೂ ನೆನಪಿಸಿಕೊಳ್ಳುತ್ತಾರೆ. ಇದು ನಾಚಿಕೆಗೇಡು’ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ಗಾಂಧೀಯವರ ಕನಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗಳ ಮೂಲಕ ನನಸು ಮಾಡುತ್ತಿದ್ದಾರೆ. ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ನಾಲ್ಕೂವರೆ ವರ್ಷಗಳ ಕಾಂಗ್ರೆಸ್‌ ಸರ್ಕಾರದ ಸಾಧನೆ ಅನನ್ಯ. ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಅರ್ಥಮಾಡಿಕೊಳ್ಳಬೇಕು. ಗಾಂಧೀಜಿಯವರ ದಾರಿಯಲ್ಲೇ ನಾವು ಸಾಗುತ್ತಿದ್ದೇವೆ. ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಪಕ್ಷ ಅಳವಡಿಸಿಕೊಂಡು ಬಂದಿದೆ. ಮುಂದೆಯೂ ಅವರ ತತ್ವ, ಸಿದ್ಧಾಂತಗಳ ತಳಹದಿಯಲ್ಲೇ ಸಾಗುತ್ತೇವೆ’ ಎಂದು ವೇಣುಗೋಪಾಲ್ ಹೇಳಿದರು.

ಕಳೆದ ನಾಲ್ಕು ವರ್ಷದಲ್ಲಿ ಅಸಹಿಷ್ಣುತೆ ಬಿತ್ತುವ ಕೆಲಸ ನಡೆದಿದೆ. ಜನರ ಮನಸ್ಸಿನಿಂದ  ಗಾಂಧಿ ತತ್ವ ಅಳಿಸುವ ಕೆಲಸ ನಡೆದಿದೆ ಎಂದು ಕೆ.ಸಿ. ವೇಣುಗೋಪಾಲ್ ವಾಗ್ದಾಳಿ ನಡೆಸಿದರು.

ವ್ಯಕ್ತಿಗಿಂತ ಪಕ್ಷದ ಪೂಜೆ ಮಾಡಿ: ಡಿ.ಕೆ. ಶಿವಕುಮಾರ್: ‘ನಮ್ಮ ನಮ್ಮಲ್ಲೇ ಭಿ‌ನ್ನಾಭಿಪ್ರಾಯ ಇರುವುದು ಸಹಜ. ಮೊದಲು ಈ ಬಗ್ಗೆ ಗಮನ ಹರಿಸಬೇಕು. ವ್ಯಕ್ತಿ ಪೂಜೆಗಿಂತ ಪಕ್ಷದ ಹಿತ ಮುಖ್ಯ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಯಾರ ಮೇಲೂ ಅಸಮಾಧಾನ ಬೇಡ. ಯಾರಿಗೆ ಪಕ್ಷ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡಿ. ಅವರಿಗೆ ಸಿಗಲಿಲ್ಲ. ಇವರಿಗೆ ಸಿಗಲಿಲ್ಲ ಅನ್ನೋ ಮಾತು ಬೇಡ ಎಂದು ಅವರು ಕಿವಿಮಾತು ಹೇಳಿದರು.

ಸ್ಥಳೀಯ ಅಭ್ಯರ್ಥಿ ಗಳಿಗೆ ನಾವು ಬೆಂಬಲ ಕೊಡಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದೂ ಅವರು ಹೇಳಿದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು:

* ನಮ್ಮ ಕ್ಷೇತ್ರ ನಮ್ಮ ಹೊಣೆ ಶಿರ್ಷಿಕೆಯಡಿ ಪದಾಧಿಕಾರಿಗಳಿಗೆ ಕೆಪಿಸಿಸಿ ತರಬೇತಿ. ಈಗ ಆಗಿರುವ ಚಟುವಟಿಕೆ, ಮುಂದಿನ ಗುರಿ ನಿಗದಿ.

* ಪ್ರತಿ ಮತಗಟ್ಟೆಯಲ್ಲಿ 50 ಮತ ಹೆಚ್ಚಿಸುವ ಗುರಿ.

* ಮೂರು ತಿಂಗಳು ಕಷ್ಟಪಡದೇ ಇದ್ದರೆ ಐದು ವರ್ಷ ಕಷ್ಟ ಪಡಬೇಕಾಗುತ್ತದೆ ಎಂದು ಎಚ್ಚರಿಕೆ.

* ಅಭ್ಯರ್ಥಿಗಳ ಬಗ್ಗೆ ಋಣಾತ್ಮಕ ಮಾತು ನಿಲ್ಲಿಸಬೇಕು.

* ಈ ಸಭೆ ಬಿಜೆಪಿ ವಿರುದ್ಧ ಯುದ್ಧತಯಾರಿ.

* ಈ ಸಭೆಗೆ ಬಾರದವರನ್ನು ಹುದ್ದೆಯಿಂದ ಕಿತ್ತು ಹಾಕಬಾರದೇಕೆಂದು ನೋಟಿಸ್ ಜಾರಿ, ಎಐಸಿಸಿ ನಿರ್ಧಾರ.

* ಮಾಹಿತಿ ಪಡೆಯಲು, ಮಾಹಿತಿ ನೀಡಲು 24ಗಂಟೆ ಕಂಟ್ರೋಲ್ ರೂಂ ಸ್ಥಾಪನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry