ವಸತಿನಿಲಯ ಕಾರ್ಮಿಕರ ಪ್ರತಿಭಟನೆ

7

ವಸತಿನಿಲಯ ಕಾರ್ಮಿಕರ ಪ್ರತಿಭಟನೆ

Published:
Updated:

ಚಾಮರಾಜನಗರ: ಹುದ್ದೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಡಳಿತದ ಭವನದ ಮುಂಭಾಗ ಸಮಾವೇಶಗೊಂಡ ಕಾರ್ಮಿಕರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಕುರಿತು ಮಾಹಿತಿ ಸಂಗ್ರಹಿಸಿ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಬೇಕು ಎಂದು 2017ರ ಜೂನ್‌ 15ರಂದು ಸಚಿವ ಎಚ್‌. ಆಂಜನೇಯ ಅವರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಅದನ್ನು ಅರ್ಧಕ್ಕೆ ಕೈಬಿಟ್ಟು ಹೊಸದಾಗಿ ನೇಮಕಗೊಂಡವರಿಗೆ ಸ್ಥಳ ನಿಯೋಜನೆ ಮಾಡಲಾಗುತ್ತಿದೆ. ಈ ಮೂಲಕ ಸುಮಾರು 5,000 ಕಾರ್ಮಿಕರಿಗೆ ನಿರುದ್ಯೋಗ ಭಾಗ್ಯ ಕರುಣಿಸುತ್ತಿದೆ ಎಂದು ದೂರಿದರು.

ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರ ವಿವರವನ್ನು ಸಂಗ್ರಹಿಸಿ ಆಯಾ ಇಲಾಖೆಯ ಆಯುಕ್ತರ ಕಚೇರಿಗಳಲ್ಲಿ ಇಡಲಾಗಿದೆ. ಈ ಮಾಹಿತಿಯನ್ನು ಆಧರಿಸಿ ಕಾರ್ಮಿಕರ ಸೇವಾ ಭದ್ರತೆ ಕುರಿತು ಸಚಿವರು ಮುಖ್ಯಮಂತ್ರಿಗಳೊಂದಿಗೆ ಅಥವಾ ಸಂಪುಟಸಭೆಯಲ್ಲಿ ಚರ್ಚಿಸಬೇಕಿತ್ತು. ಆದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಈಗ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ನೇರ ನೇಮಕಾತಿಗೊಂಡ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ. ಇದರಿಂದ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದ 5,000 ಮಂದಿಗೆ ನಿರುದ್ಯೋಗದ ಭೀತಿ ಎದುರಾಗಿದೆ ಎಂದರು.

ಇಲಾಖೆಗಳಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯಡಿ ಕಾಯಂ ನೌಕರರಿಗೆ ನೀಡುವ ಸೌಲಭ್ಯಗಳನ್ನು ನೀಡಬೇಕು. ನಿವೃತ್ತಿಯಾಗುವವರೆಗೂ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಪೌರಾಡಳಿತ ಇಲಾಖೆಯಿಂದಲೇ ನೇರವಾಗಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ವೇತನವನ್ನು ಪಾವತಿಸಲು ಆದೇಶಿಸಬೇಕು. ಪಿಎಫ್‌ ಮತ್ತು ಇಎಸ್‌ಐ ಕುರಿತು ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಘಟಕ ಜಿ.ಎಂ. ಪುಟ್ಟರಾಜು, ನೌಕರರಾದ ಮಲ್ಲಿಕಾರ್ಜುನ್‌, ಶಾಂತರಾಜು, ಕೃಷ್ಣಮೂರ್ತಿ, ಶಂಕರ, ಲೋಕೇಶ್‌, ವಿಶ್ವನಾಥ್‌, ಚಿನ್ನಮ್ಮ, ಮೀನಾಕ್ಷಿ, ಪುಷ್ಪಾ, ಮಹದೇವಯ್ಯ, ಮಂಜುಳಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry