ಇಳುವರಿ ಕುಸಿತ: ತೆಂಗಿನಕಾಯಿ ಬೆಲೆ ಏರಿಕೆ

7

ಇಳುವರಿ ಕುಸಿತ: ತೆಂಗಿನಕಾಯಿ ಬೆಲೆ ಏರಿಕೆ

Published:
Updated:
ಇಳುವರಿ ಕುಸಿತ: ತೆಂಗಿನಕಾಯಿ ಬೆಲೆ ಏರಿಕೆ

ಚಾಮರಾಜನಗರ: ಜಿಲ್ಲೆಯಲ್ಲಿ ತೆಂಗಿನಕಾಯಿ ಬೆಲೆ ಗಗನಮುಖಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಗ್ರಾಹಕರು ಮಾತ್ರ ಕೈ ಕೈ ಹಿಸುಕಿಕೊಳ್ಳುವಂತೆ ಆಗಿದೆ.

ಇಳುವರಿ ಕುಸಿತದಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಆವಕ ಕಡಿಮೆಯಾಗಿದೆ. ಜತೆಗೆ, ತಮಿಳುನಾಡಿನ ತೆಂಗಿನಕಾಯಿ ಪೌಡರ್‌ ಉತ್ಪಾದಿಸುವ ಕಾರ್ಖಾನೆಗಳಿಂದ ಬೇಡಿಕೆ ಹೆಚ್ಚಾಗಿದೆ. ಇದು ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

ಮಾರುಕಟ್ಟೆಯಲ್ಲಿ 1ಟನ್‌ ತೆಂಗಿನಕಾಯಿಗೆ ₹ 40,000ದಿಂದ 42,000 ಬೆಲೆಯಿದೆ. ಸಾಧಾರಣ ಗಾತ್ರದ ಒಂದು ಕಾಯಿಗೆ ₹ 30 ಹಾಗೂ ದೊಡ್ಡ ಗ್ರಾತದ ಕಾಯಿಗೆ ₹ 40ರಿಂದ 50 ಬೆಲೆ ಇದೆ. ಹಾಗಾಗಿ, ಹಲವು ದಿನಗಳಿಂದ ತೆಂಗಿನಕಾಯಿ ಸಂಗ್ರಹಿಸಿಕೊಂಡಿದ್ದ ರೈತರು ಈಗ ಸಿಪ್ಪೆ ಸುಲಿದು ಮಾರಾಟಕ್ಕೆ ಮುಂದಾಗಿದ್ದಾರೆ.

‘ಜಿಲ್ಲೆಯ 4 ತಾಲ್ಲೂಕು ವ್ಯಾಪ್ತಿಯ ಮಳೆಯಾಶ್ರಿತ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿತ್ತು. ಆದರೆ, ಕಳೆದ ಮೂರು ನಾಲ್ಕು ವರ್ಷಗಳಿಂದ ರೈತರನ್ನು ನಿರಂತರವಾಗಿ ಕಾಡಿದ ಬರಗಾಲ ಹಾಗೂ ಕಪ್ಪುತಲೆ ಹುಳುಬಾಧೆಯಿಂದ ತೆಂಗು ಬೆಳೆ ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿದೆ. ಪ್ರಸ್ತುತ ನೀರಾವರಿ ಪ್ರದೇಶದಲ್ಲಿ ಮಾತ್ರವೇ ತೆಂಗಿನ ಉತ್ಪಾದನೆ ಇದೆ’ ಎಂದು ರೈತ ಸಂಘದ ಮುಖಂಡ ಎ.ಎಂ. ಮಹೇಶ್‌ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಇಳುವರಿ ಕುಸಿತವಾಗಿದೆ. ಜತೆಗೆ, ಜನವರಿಯಿಂದ ಜೂನ್‌ವರೆಗೆ ತೆಂಗಿನಕಾಯಿ ಕೊಯ್ಲುಗೆ ಪೂರಕವಲ್ಲ. ಇದರಿಂದ ಬೆಲೆ ಏರಿಕೆಯಾಗಿದೆ. ಆದರೆ, ತೆಂಗಿನ ರುಚಿ ಮತ್ತು ಗಾತ್ರದಲ್ಲಿ ಬದಲಾಗಿಲ್ಲ. ಬೆಲೆ ಇಳಿಕೆಯಾಗಬೇಕಾದರೆ ಜುಲೈವರೆಗೆ ಕಾಯಬೇಕು’ ಎನ್ನುತ್ತಾರೆ ಅವರು.

‘ಬೇಸಿಗೆ ಸಮೀಪಿಸುತ್ತಿದ್ದು, ನಗರದಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಇದರಿಂದ ಸುತ್ತಲಿನ ಗ್ರಾಮಗಳ ರೈತರು ಎಳನೀರು ಮಾರಾಟಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಶುಭ ಸಮಾರಂಭಗಳು, ಹಬ್ಬ, ಜಾತ್ರೆ ಹೆಚ್ಚು ನಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಬೆಲೆ ಏರಿಕೆಯಾಗಿದೆ. ಸದ್ಯ ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲ’ ಎಂದು ತೆಂಗಿನಕಾಯಿ ವ್ಯಾಪಾರಿ ರಘು ತಿಳಿಸಿದರು.

‘ನನ್ನ ಜಮೀನಿನಲ್ಲಿ 300ಕ್ಕೂ ಹೆಚ್ಚು ತೆಂಗಿನಮರಗಳಿದ್ದು, ಪ್ರಸಕ್ತ ವರ್ಷ ಇಳುವರಿ ಸ್ವಲ್ಪ ಕಡಿಮೆಯಾಗಿದೆ. ಆದರೂ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಸಮಾಧಾನ ಮೂಡಿಸಿದೆ. ಇನ್ನೂ ಕೆಲವು ದಿನ ಇದೇ ಬೆಲೆ ಇದ್ದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೆಬ್ಬಸೂರು ಗ್ರಾಮದ ರೈತ ರವಿ ತಿಳಿಸಿದರು.

ಟೊಮೆಟೊ ಧಾರಣೆ ಕುಸಿತ:

ಮಾರುಕಟ್ಟೆಯಲ್ಲಿ ಟೊಮೆಟೊ ಹಾಗೂ ಈರುಳ್ಳಿ ಧಾರಣೆ ಕುಸಿತವಾಗಿದ್ದು, ಗ್ರಾಹಕರಲ್ಲಿ ಸಮಾಧಾನ ಮೂಡಿಸಿದೆ. ಕಳೆದ ಎರಡು ತಿಂಗಳಿನಿಂದ ಧಾರಣೆ ಏರಿಳಿತ ಕಾಣುತ್ತಿದ್ದ ಟೊಮೆಟೊ ಪ್ರಸ್ತುತ ₹ 10ಕ್ಕೆ 2 ಕೆ.ಜಿ. ಮಾರಾಟವಾಗುತ್ತಿದೆ.

‘ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಹೆಚ್ಚಾಗಿದೆ. ಹಣ್ಣು ಹೆಚ್ಚು ಮಾಗಿರುವುದರಿಂದ ಹೆಚ್ಚುದಿನ ಸಂಗ್ರಹಿಸಲು ಆಗುತ್ತಿಲ್ಲ. ಹಾಗಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಸಂಜೆ ವೇಳೆಗೆ ₹ 10ಕ್ಕೆ 3 ಕೆ.ಜಿ. ಮಾರಾಟ ಮಾಡಲಾಗುತ್ತದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಸಣ್ಣ ಈರುಳ್ಳಿ ಹಾಗೂ ದಪ್ಪ ಈರುಳ್ಳಿಯ ಧಾರಣೆಯೂ ಕೂಡ ಒಂದು ತಿಂಗಳಿನಿಂದ ಇಳಿಕೆಯಾಗುತ್ತಿದೆ. ಪ್ರಸ್ತುತ ಒಂದು ಕೆ.ಜಿ. ಸಣ್ಣ ಈರುಳ್ಳಿಗೆ ₹ 50ರಿಂದ 60 ಹಾಗೂ ದಪ್ಪ ಈರುಳ್ಳಿಗೆ ₹ 30ರಿಂದ 40 ಧಾರಣೆ ನಿಗದಿಪಡಿಸಲಾಗಿದೆ. ಉಳಿದಂತೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹಿಂದಿನ ವಾರದಷ್ಟೇ ಇದ್ದು ಸ್ಥಿರತೆ ಕಾಯ್ದುಕೊಂಡಿದೆ.

ಹಣ್ಣು, ಹೂವು ಸ್ಥಿರ: ಹಣ್ಣು ಮತ್ತು ಹೂವಿನ ಬೆಲೆ ಸ್ಥಿರವಾಗಿದೆ. ಏಲಕ್ಕಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ ₹ 60 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ಇದೆ. ಹೂವಿನ ಬೆಲೆಯು ಕಳೆದ ವಾರಕ್ಕಿಂತ ತುಸು ಏರಿಕೆಯಾಗಿದ್ದು, ಚೆಂಡು ಹೂವು ₹ 10, ಕಾಕಡ ₹ 20, ಕನಕಾಂಬರ ₹ 40ರಿಂದ 50, ಊಟಿ ಮಲ್ಲಿಗೆ ₹ 30, ಗುಲಾಬಿ ₹ 5 ಹಾಗೂ ಹೂವಿನ ಹಾರ ₹ 50ರಿಂದ 300ರವರೆಗೂ ಮಾರಾಟವಾಗುತ್ತಿವೆ.

ತರಕಾರಿ ಬೆಲೆ(ಕೆಜಿಗೆ):

ಹಸಿಮೆಣಸಿಕಾಯಿ ₹ 20

ಬೂದುಗುಂಬಳ ₹ 15

ಸಿಹಿಕುಂಬಳ ಕಾಯಿ ₹ 15

ಬಿಳಿ ಬದನೆಕಾಯಿ ₹ 20

ಬೀನ್ಸ್‌ ₹ 25

ಕ್ಯಾರೆಟ್‌ ₹ 30

ಸೌತೆಕಾಯಿ ₹ 20

ಶುಂಠಿ ₹ 40

ಬೀಟ್‌ರೂಟ್‌ ₹ 15

ಹೀರೇಕಾಯಿ ₹ 20

ಹಣ್ಣಿನ ಧಾರಣೆ(ಕೆಜಿಗೆ):

ಸೇಬು ₹ 100

ಕಿತ್ತಳೆ ₹ 60

ಮೂಸಂಬಿ ₹ 80

ದ್ರಾಕ್ಷಿ ₹120

ದಾಳಿಂಬೆ ₹ 90

ಸಪೋಟ ₹ 60

ಎಸ್. ಪ್ರತಾಪ್‌

ತೆಂಗಿನಕಾಯಿ ಬೆಲೆ ಏರಿಕೆಯಿಂದ ಮದ್ಯಮ ವರ್ಗದ ಜನರಿಗೆ ಹೆಚ್ಚು ತೊಂದರೆಯಾಗಿದೆ. ನಿತ್ಯದ ಬಳಕೆಗೆ ಆದಷ್ಟು ಕಡಿಮೆ ಕಾಯಿ ಉಪಯೋಗಿಸುತ್ತಿದ್ದೇವೆ

ಭಾಗ್ಯಮ್ಮ ಗ್ರಾಹಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry