ನಿಗದಿತ ಪ್ರಮಾಣದ ನೀರು ಹರಿಸಿ

7

ನಿಗದಿತ ಪ್ರಮಾಣದ ನೀರು ಹರಿಸಿ

Published:
Updated:

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿಗೆ ಭದ್ರಾ ನಾಲೆಯಲ್ಲಿ ನಿಗದಿಪಡಿಸಿದ ಪ್ರಮಾಣದಲ್ಲಿ ನೀರನ್ನು ಹರಿಸಬೇಕು ಎಂದು ರೈತರು ನೀರಾವರಿ ನಿಗಮದ ಅಧಿಕಾರಿಗಳನ್ನು ಒತ್ತಾಯಿಸಿದರು.

ಸಮೀಪದ ಎಕ್ಕೆಗೊಂದಿ ಬಳಿ ಸೋಮವಾರ ರಸ್ತೆ ತಡೆ ನಡೆಸಲು ಮುಂದಾಗಿದ್ದ ರೈತರನ್ನು ಪೊಲೀಸರು ಮನವೊಲಿಸಿ ಅಧಿಕಾರಿಗಳ ಸಮ್ಮುಖ

ದಲ್ಲಿ ಸಮಾಲೋಚನಾ ಸಭೆ ನಡೆಸಿದ ವೇಳೆ ಈ ಬೇಡಿಕೆಯನ್ನು ಮಂಡಿಸಿದರು.

ಈಗಾಗಲೇ ನಾಲೆಗೆ ನೀರು ಬಿಟ್ಟು 24 ದಿನಗಳಾಗಿದ್ದರೂ ಕೊನೆಭಾಗಕ್ಕೆ ನೀರು ಮುಟ್ಟಿಲ್ಲ. ಮೇಲ್ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ ಮನದಟ್ಟು ಮಾಡಿಕೊಟ್ಟರು.

ಈಗಾಗಲೇ ಮೂರು ಬೆಳೆ ಕಳೆದುಕೊಂಡಿರುವ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೊಮಾರನಹಳ್ಳಿ ಪಿಯರ್ ಗೇಜ್‌ಗೆ 4.9 ಅಡಿ ನೀರು ಹರಿಸಿ ಎಂದು ಬಿಜೆಪಿ ಮುಖಂಡ ಬಿ.ಪಿ. ಹರೀಶ್ ಆಗ್ರಹಿಸಿದರು.

ನಾಲೆಗೆ ಅಳವಡಿಸಿರುವ ಪಂಪ್‌ಸೆಟ್‌ ಎತ್ತಿಸುವ ನಾಟಕ ನಿಲ್ಲಿಸಿ. ಜಿಲ್ಲಾಧಿಕಾರಿ ನಾಲೆ ಮೇಲೆ ಹೋಗದೇ, ಕುಳಿತಲ್ಲಿಯೇ ಬೆಸ್ಕಾಂ ಹಾಗೂ ನೀರಾವರಿ ನಿಗಮದ ಸಿಬ್ಬಂದಿ ಬಳಸಿಕೊಂಡು ನೀರು ಹರಿಸಲು ಸಾಧ್ಯ. ನೀರಿಗಾಗಿ ಪ್ರತಿಭಟನೆ ಮಾಡಿದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಸರ್ಕಾರದ ಈ ನಿಲುವಿನ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಶಾಸಕರ ಮಾತಿಗೆ ಅಡ್ಡಿ: ‘ಚುನಾವಣಾ ವೇಳೆ ರಾಜಕೀಯ ನಾಯಕರ ಪರಸ್ಪರ ಆರೋಪ ಪ್ರತ್ಯಾರೋಪ ಸಹಜ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯಾರೋಪ ಮಾಡುತ್ತಾರೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಇವರಿಬ್ಬರ ಮೇಲೂ ಪ್ರತ್ಯಾರೋಪ ಮಾಡುತ್ತಾರೆ’ ಎಂದು ಶಾಸಕ ಎಚ್.ಎಸ್. ಶಿವಶಂಕರ್ ಮಾತು ಆರಂಭಿಸಿದರು.

‘ಈಗ ಅನಧಿಕೃತ ಅಚ್ಚುಕಟ್ಟು ಪ್ರದೇಶ ಹೆಚ್ಚಾಗಿದೆ. ನಾನೂ ಒಬ್ಬ ರೈತ. ನೀರಿನ ಸಮಸ್ಯೆಗೆ ರಾಜಕೀಯ ಬಣ್ಣ ಬೇಡ’ ಎಂದು ಶಾಸಕರು ಹೇಳುತ್ತಿದ್ದಂತೆ ರೈತರು ಆಕ್ಷೇಪ ವ್ಯಕ್ತಪಡಿಸಿ ಮಾತನಾಡಲು ಅಡ್ಡಿ ಪಡಿಸಿದರು.

ನೀರಾವರಿ ನಿಗಮದ ಬಸವಾಪಟ್ಟಣ ವಿಭಾಗದ ಎಇಇ ಮಲ್ಲಿಕಾರ್ಜುನ ಮಾತನಾಡಿ, ತಮ್ಮ ವಿಭಾಗದ ಅಕ್ರಮ ಪಂಪ್‌ಸೆಟ್‌ ಬಗ್ಗೆ ಮಾಹಿತಿ ನೀಡಿದರು. ರೈತರು ಆಂತರಿಕ ಸರದಿ ಉಲ್ಲಂಘಿಸಿ ಹೆಚ್ಚಿನ ಪ್ರಮಾಣದ ನೀರನ್ನು ಕೃಷಿಗೆ ಬಳಸುತ್ತಿದ್ದಾರೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಎ.ಎ ಮಲ್ಲಿಕಾರ್ಜುನ್ ಮಾತನಾಡಿ, ‘ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರದಿರುವುದು ಸಮಸ್ಯೆಗೆ ಮೂಲ ಕಾರಣ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆಯಂತೆ ಅಕ್ರಮ ಪಂಪ್‌ಸೆಟ್‌ ತೆರವು ಮಾಡಲಾಗಿದೆ’ ಎಂದು ಹೇಳುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಅವರು ಸಬೂಹು ಹೇಳದೇ ನೀರು ಹರಿಸಿ ಎಂದು ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಓಂಕಾರಪ್ಪ ಅವರು, ‘ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ಸಾಕಾಗಿದೆ. 4.9 ಅಡಿ ನೀರು ತರಲು ಆಗುತ್ತಿಲ್ಲ ನಿಮಗೆ. ಬಿಪಿ, ಸಕ್ಕರೆಕಾಯಿಲೆ ಹೆಚ್ಚಾಗಿದೆ. ನಾಲೆ ಮೇಲೆ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಹಾಕಿಸಿ ಕೊನೆಭಾಗಕ್ಕೆ ನೀರು ಹರಿಸಿ ಎಂದಾಗ ಗದ್ದಲ ಉಂಟಾಯಿತು.

ರೈತರು ರಸ್ತೆ ತಡೆಗೆ ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ತಹಶೀಲ್ದಾರ್ ರೆಹಾನ್ ಪಾಷಾ, ಡಿವೈಎಸ್‌ಪಿ ಮಂಜುನಾಥ್ ಗಂಗಲ್, ಬೆಸ್ಕಾಂ ಎಂಜಿನಿಯರ್ ಶ್ರೀನಿವಾಸ್ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಭದ್ರಾ ಯೋಜನಾ ವೃತ್ತದ ಎಸ್ಇ ಹಾಗೂ ಸಿಇ ರೈತರ ಸಮಸ್ಯೆ ಆಲಿಸಲಿದ್ದಾರೆ. ನೀರಾವರಿ ಇಲಾಖೆ ಸಭಾಭವನದಲ್ಲಿ ಸಭೆ ಕರೆಯಲಾಗುವುದು ಎಂದು ಎಂಜಿನಿಯರ್‌ ಘೋಷಿಸಿದ ನಂತರ ರೈತರು ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry