ಇಟ್ಟಿಗೆ ಬಟ್ಟಿಯಲ್ಲಿ ಪಾಲಕರ ದುಡಿಮೆ: ಮಕ್ಕಳ ಬವಣೆ

7

ಇಟ್ಟಿಗೆ ಬಟ್ಟಿಯಲ್ಲಿ ಪಾಲಕರ ದುಡಿಮೆ: ಮಕ್ಕಳ ಬವಣೆ

Published:
Updated:
ಇಟ್ಟಿಗೆ ಬಟ್ಟಿಯಲ್ಲಿ ಪಾಲಕರ ದುಡಿಮೆ: ಮಕ್ಕಳ ಬವಣೆ

ಡಂಬಳ: ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಲು ಸಾಕಷ್ಟು ಕಾನೂನುಗಳಿವೆ. ಆದರೆ, ಹೋಬಳಿ ವ್ಯಾಪ್ತಿಯಲ್ಲಿ, ಇಟ್ಟಿಗೆ ಬಟ್ಟಿಯ ಕೂಲಿಕಾರ್ಮಿಕರ ಹಲವು ಮಕ್ಕಳ ಬಾಲ್ಯ, ಇಲ್ಲಿನ ದೂಳು, ಬಿಸಿಲಿನಲ್ಲೇ ಕಳೆದುಹೋಗುತ್ತಿದೆ.

ಡಂಬಳ ಹಾಗೂ ಹೊಸ ಡಂಬಳ ಗ್ರಾಮದ ಸುತ್ತಮುತ್ತ 20ಕ್ಕೂ ಹೆಚ್ಚೂ ಇಟ್ಟಿಗೆ ಬಟ್ಟಿಗಳಿವೆ. ಕೊಪ್ಪಳ ಜಿಲ್ಲೆಯ ಕವಲೂರು, ಗುಡಿಗೇರಿ, ಅಳವುಂಡಿ, ಹಿರೇಸಿಂದೋಗಿ, ಕಾತರಕಿ, ರಘುನಾಥನಹಳ್ಳಿ, ಸೇರಿದಂತೆ ತಾಲ್ಲೂಕಿನ ಬರದೂರ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಮುಂಡವಾಡ, ಮಲ್ಲಿಕಾರ್ಜುನಪೂರ, ಸಿಂಗಟಾಲೂರ, ಹಳ್ಳಿಗುಡಿ, ಹಳ್ಳಿಕೇರಿ ಮುಂತಾದ ಗ್ರಾಮಗಳಿಂದ ಇಲ್ಲಿ ನೂರಾರು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಅನೇಕರು ಉದ್ಯೋಗ ಅರಸಿ ಇಲ್ಲಿಗೆ ವಲಸೆ ಬಂದಿದ್ದಾರೆ. ಹೀಗೆ ಬರುವಾಗ ತಮ್ಮ ಮಕ್ಕಳನ್ನೂ ಬೆನ್ನಿಗೆ ಕಟ್ಟಿಕೊಂಡು ಬಂದಿದ್ದಾರೆ. ತಂದೆ– ತಾಯಂದಿರು ಇಟ್ಟಿಗೆ ಬಟ್ಟಿಯಲ್ಲಿ ದುಡಿಯುತ್ತಿದ್ದರೆ, ಮಕ್ಕಳು ಈ ಭಟ್ಟಿಯ ಆವರಣದಲ್ಲೇ ಬಿಸಿಲು, ಧೂಳಿನಲ್ಲಿ ಆಟವಾಡಿಕೊಂಡಿರುತ್ತಾರೆ. ಶಾಲೆಗೆ ಹೋಗಬೇಕಾದ ಮಕ್ಕಳ ಬಾಲ್ಯ ದೂಳಿನಲ್ಲಿ ಕರಗುತ್ತಿದೆ.

‘ಊರಿನಲ್ಲಿ ಸಂಬಂಧಿಕರ ಬಳಿ ಮಕ್ಕಳನ್ನು ಬಿಟ್ಟು ಬರಲು ಆಗುತ್ತಿಲ್ಲ. ಬಡತನ ಇದ್ದರೂ, ನಮ್ಮ ಮಕ್ಕಳು ನಮ್ಮ ಹತ್ರ ಇದ್ದರೆ ಚಂದ’ ಎಂದು ಕೂಲಿ ಕಾರ್ಮಿಕ ಮಹಿಳೆಯರು ಹೇಳಿದರು.

‘ಕೊಪ್ಪಳ ಭಾಗದ ಕೂಲಿ ಕಾರ್ಮಿಕರು, ಇಲ್ಲಿನ ಇಟ್ಟಿಗೆ ಭಟ್ಟಿಯಲ್ಲಿ ದುಡಿಯಲು ಬಂದಿದ್ದಾರೆ. ಕೊಪ್ಪಳದ ಭಾಗದ ಬಿಇಒ ಅವರನ್ನು ಸಂಪರ್ಕಿಸಿ, ಮಕ್ಕಳ ದಾಖಲಾತಿ ತರಿಸಿಕೊಂಡು, ಅಲ್ಲಿನ ಕಾರ್ಮಿಕರ 48 ಮಕ್ಕಳಿಗೆ ಹೊಸ ಡಂಬಳದ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳಲಾಗಿದ್ದು, ಶಾಲೆಗೆ ಹೋಗುತ್ತಿದ್ದಾರೆ. ಆದಾಗ್ಯೂ, ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಂಡುಬಂದರೆ ಕ್ರಮ ವಹಿಸಲಾಗುವುದು' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry