‘ಪಿಯುಸಿ ಪರೀಕ್ಷೆಗೆ ತಯಾರಿ ಹೇಗಿರಬೇಕು?’

7

‘ಪಿಯುಸಿ ಪರೀಕ್ಷೆಗೆ ತಯಾರಿ ಹೇಗಿರಬೇಕು?’

Published:
Updated:
‘ಪಿಯುಸಿ ಪರೀಕ್ಷೆಗೆ ತಯಾರಿ ಹೇಗಿರಬೇಕು?’

1. ನಾನು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು, ದ್ವಿತೀಯ ಪಿಯುಸಿಯಲ್ಲಿ 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬ ಆಸೆ ಮತ್ತು ಗುರಿ ಇದೆ. ಆದ್ದರಿಂದ ಅದಕ್ಕಾಗಿ ಹೇಗೆ ಓದಬೇಕು? ಯಾವ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು? ಓದಿದ್ದನ್ನು ಹೇಗೆ ನೆನಪಿಟ್ಟುಕೊಳ್ಳಬೇಕು? ನಾನು ಈಗಿನಿಂದಲೇ ತಯಾರಿ ನಡೆಸಬೇಕೆಂದಿದ್ದೇನೆ. ಅದನ್ನು ಹೇಗೆ ಮಾಡಬಹುದು? ಹಾಗೂ ನನಗೆ ಜೀವಶಾಸ್ತ್ರ ಮತ್ತು ಭೌತಶಾಸ್ತ್ರವು ಸ್ವಲ್ಪಮಟ್ಟಿಗೆ ಕಷ್ಟ ಎನಿಸುತ್ತದೆ. ಎಷ್ಟೇ ಓದಿದರೂ ಮರೆಯುವ ಹಾಗೂ ಗೊಂದಲಗಳಾಗುವ ಸಾಧ್ಯತೆ ಹೆಚ್ಚಿದೆ. ಇದನ್ನು ಯಾವ ರೀತಿ ಓದುಬೇಕು?

⇒ರಶ್ಮಿ. ಆರ್‌., ನಾಗಮಂಗಲ


ಉತ್ತರ:  ನೀವು ಈಗಿನಿಂದಲೇ ತಯಾರಿ ಮಾಡಿ ಉತ್ತಮ ಅಂಕವನ್ನು ಪಡೆಯಬೇಕೆಂಬ ಗುರಿಯನ್ನು ನಾನು ಮೆಚ್ಚಿದೆ. ಪಿಸಿಎಂಬಿ ಕಾಂಬಿನೇಷನ್‌ನಲ್ಲಿ ಜೀವಶಾಸ್ತ್ರ ಮತ್ತು ಭೌತಶಾಸ್ತ್ರ ಎರಡೂ ಕಷ್ಟ ಅಂತ ಅನ್ನುತ್ತಿದ್ದೀರಿ. ಇದಕ್ಕೆ ಸ್ಪೆಷಲ್‌ ಕೋಚಿಂಗ್‌ ತೆಗೆದುಕೊಂಡರೆ ಉತ್ತಮ.

ಇನ್ನು ಓದುವ ರೀತಿ: ಪ್ರತಿ ಪಾಠವನ್ನು ಆಯಾಯ ದಿನವೇ ಓದಬೇಕು. ಒಂದು ಪುಸ್ತಕದಲ್ಲಿ, ಆ ಚಾಪ್ಟರ್‌ನಲ್ಲಿರುವ ‘ಕೀ’ ಪದಗಳನ್ನು ಗುರುತು ಹಾಕಿಕೊಳ್ಳಿ. ಡಯಾಗ್ರಂಗಳನ್ನು ಅಭ್ಯಾಸ ಮಾಡಿ. ಹೀಗೆ ಒಂದು ಬಾರಿ ಓದಿದ್ದನ್ನು ಇನ್ನೊಮ್ಮೆ ಓದಿ. ಹೀಗೆ ಅಭ್ಯಾಸ ಮಾಡಿದರೆ ಮತ್ತು ಮತ್ತೊಂದು ಸಲ ಬರೆದರೆ ಜ್ಞಾಪಕವಿರುತ್ತದೆ. ಆ ಮೇಲೆ ಪುಸ್ತಕ ಮುಚ್ಚಿ ಜ್ಞಾಪಿಸಿಕೊಳ್ಳಿ. ಇದನ್ನು ‘3R Policy’ ಎಂದು ಕರೆಯುತ್ತೇವೆ. ‘ಕನ್ಸಿಸ್ಟೆಂಟ್‌ ಸ್ಟಡಿ ಹ್ಯಾಬಿಟ್‌’ ಬಹಳ ಮುಖ್ಯ. ಈ ಮೇಲಿನಂತೆ ಅಭ್ಯಾಸವನ್ನು ಪ್ರತಿಯೊಂದು ವಿಷಯದಲ್ಲೂ ಮಾಡಬೇಕು.

ನೀವು ಓದುವಾಗ ಯಾವ ರೀತಿಯ ಅಡಚಣೆಯೂ ಇರಬಾರದು (ಮನೆಯಲ್ಲಿ ಜಗಳ, ವಾಟ್ಸ್ಯಾಪ್‌ ಮೆಸೇಜ್‌ಗಳನ್ನು ನೋಡುವುದು, ಟಿ.ವಿ. ನೋಡಲು ಹೋಗುವುದು, ಸ್ನೇಹಿತರ ಕರೆಗಳನ್ನು ತೆಗೆದುಕೊಳ್ಳುವುದು ಎಲ್ಲವನ್ನು ದೂರವಿಡಬೇಕು.)ಓದುವಾಗ ಅದೊಂದೇ ನಿಮ್ಮ ಗುರಿಯಾಗಿರಲಿ.

ಚೆನ್ನಾಗಿ ಓದಲು ಮುಖ್ಯವಾಗಿ ವ್ಯಾಯಾಮ, ಸಮತೋಲಿತ ಆಹಾರ ಸೇವನೆ, ಓದುವ ಕ್ರಮ ಎಲ್ಲವೂ ಮುಖ್ಯ. ಆಹಾರದಲ್ಲಿ ಹಣ್ಣು, ತರಕಾರಿ, ಹಾಲು ಇರಲಿ, ಇದು ನಿಮಗೆ ಸಮತೋಲಿತ ಡಯೆಟ್‌. ದಿನಕ್ಕೆ 5–6 ಬಾದಾಮಿ ತಿನ್ನಿ, ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಇದೆ. ಬೇಳೆಕಾಳುಗಳಿಂದ ಪ್ರೋಟೀನ್‌ ಸಿಗುತ್ತದೆ. ಸಲಾಡ್‌ಗಳು ನಿಮ್ಮ ಹಾರ್ಮೋನ್‌ ಅನ್ನು ಹದದಲ್ಲಿ ಇಡುತ್ತದೆ. ವ್ಯಾಯಾಮ ನಿಮ್ಮ ಮೆದುಳಿಗೆ ಆಮ್ಲಜನಕ. ಏಳು ಗಂಟೆಯ ನಿದ್ದೆಯೂ ಬಹಳ ಮುಖ್ಯ. ಈ ರೀತಿ ಕ್ರಮಬದ್ಧವಾಗಿ ವ್ಯಾಸಂಗ ಮಾಡಿದರೆ ನೀವು ಜಯಶೀಲರಾಗುವುದರಲ್ಲಿ ಸಂದೇಹವೇ ಇಲ್ಲ.

2. ನಾನು ಬಿಎ, ಬಿಇಡಿ (ಇಂಗ್ಲಿಷ್) ಪದವಿ ‍ಪಡೆದು, ನಂತರ ಮನೆಯ ಜವಾಬ್ದಾರಿಯಿಂದ ಓದನ್ನು ಮುಂದುವರೆಸಲಾಗಲಿಲ್ಲ. ಈಗ ಎಂಎ (ಇಂಗ್ಲಿಷ್) ಪದವಿ ಪೂರ್ಣಗೊಳಿಸಲು ರೆಗ್ಯುಲರ್ ಆಗಿ ಮಾಡಬೇಕೆ ಅಥವಾ ಇರೆಗ್ಯುಲರ್ ಆಗಿ ಮಾಡಬೇಕೆ? ಯಾವುದು ಉತ್ತಮ? ಉದ್ಯೋಗದ ಅವಕಾಶಗಳನ್ನೂ ತಿಳಿಸಿ.

–ಹೆಸರು, ಊರು ಬೇಡ


ಉತ್ತರ: ನೀವು ಬಿಎ, ಬಿಇಡಿ ಮಾಡಿದ್ದೀರಿ, ಎಂಎ ಮಾಡಲು ಆಸೆ ಇದೆ. ಇರೆಗ್ಯುಲರ್‌ ಆಗಿ ಏನೂ ಮಾಡಲು ಸಾಧ್ಯವಿಲ್ಲ. ದೂರಶಿಕ್ಷಣದ ಮೂಲಕ ಮಾಡಬಹುದೇ ಎನ್ನುವುದು ನಿಮ್ಮ ಪ್ರಶ್ನೆ. ಉದ್ಯೋಗ ಅವಕಾಶ ಶಾಲೆಯಲ್ಲಿ ಪಾಠ ಹೇಳಲು. ನೀವು ವಯಸ್ಸಿನ ಮಕ್ಕಳಿಗೆ ಪಾಠ ಹೇಳಬಯಸುತ್ತೀರೋ, ಅದರ ಪ್ರಕಾರ ನಿಮ್ಮ ವಿದ್ಯಾರ್ಹತೆ ಇರಬೇಕು. ನೀವು ಬಿಎ, ಬಿಇಡಿ ಮಾಡಿರುವುದರಿಂದ ಹೈಸ್ಕೂಲ್‌ನಲ್ಲಿ ಪಾಠ ಮಾಡಬಹುದು.

ಟಿಇಟಿ (TET) ಟೀಚರ್‌ ಎಲಿಜಿಬೆಲಿಟಿ ಟೆಸ್ಟ್‌ನ್ನು ನೀವು ಬರೆಯಬೇಕು. ಇದು ಎಲ್ಲಾ ರಾಜ್ಯಗಳಲ್ಲೂ ಕಡ್ಡಾಯ.

1ರಿಂದ 5ನೇ ತರಗತಿಗೆ ಟೀಚರ್‌ ಅನ್ನು ಪ್ರೈಮರಿ ಟೀಚರ್‌ ಅನ್ನುತ್ತಾರೆ.

6ರಿಂದ 8ನೇ ತರಗತಿಗೆ ಅಪ್ಪರ್‌ ಪ್ರೈಮರಿ ಟೀಚರ್‌ ಅನ್ನುತ್ತಾರೆ.

9 ಮತ್ತು 10ನೇ ತರಗತಿ ಟೀಚರ್‌ ಅನ್ನು ಸೆಕೆಂಡರಿ ಸ್ಕೂಲ್‌ ಟೀಚರ್‌ ಅನ್ನುತ್ತಾರೆ.

ಟಿಇಟಿ ಪರೀಕ್ಷೆಯ ಎಲ್ಲ ನಿಯಮಗಳನ್ನು, ಸಿಲೆಬಸ್‌, ಅರ್ಹತೆ ಎಲ್ಲವನ್ನು ಎನ್‌ಸಿಟಿಇ – ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಷನ್‌ ಅವರು ನಿರ್ಧರಿಸಿದ್ದಾರೆ.

ಹೆಚ್ಚಿನ ವಿವರವನ್ನು ctet.nic.in ಇಂದ ಪಡೆಯಿರಿ.

ಎಸ್‌ಟಿಇಟಿ – ‘ಸ್ಟೇಟ್‌ ಲೆವೆಲ್‌ ಟೀಚರ್‌ ಎಲಿಜಿಬಿಲಿಟಿ ಟೆಸ್ಟ್‌’ಅನ್ನು ಪ್ರತಿ ರಾಜ್ಯದಲ್ಲೂ ನಡೆಸುತ್ತಾರೆ. ಇದರಲ್ಲಿ ಪಾಸ್‌ ಆದವರಿಗೆ ಎಲ್ಲ ಶಾಲೆಗಳಲ್ಲೂ, ಸರ್ಕಾರಿ ಮತ್ತು ಖಾಸಗಿ, ಕೆಲಸ ಸಿಗುತ್ತದೆ. ನೀವು ಎಂಎ ಮುಗಿಸಿ, ಕಾಲೇಜಿನಲ್ಲಿ ಪಾಠ ಹೇಳಬಯಸಿದರೆ ಯುಜಿಸಿ–ಎನ್‌ಇಟಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.

ಇದರ ಸಂಪೂರ್ಣ ವಿವರವನ್ನು cbsenet.nic.in ಇಂದ ಪಡೆಯಿರಿ.

ನಿಮ್ಮ ವಿದ್ಯಾರ್ಹತೆ, ನೀವು ಪಾಸುಮಾಡಿದ ಪರೀಕ್ಷೆಯ ಮೇರೆಗೆ ನಿಮ್ಮ ಸಂಬಳ ನಿರ್ಧಾರವಾಗುತ್ತದೆ. ನೀವು ಹೆಸರು, ಊರು ಮುಚ್ಚಿಡುವ ಕಾರಣ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಇದರ ಅಗತ್ಯವಿಲ್ಲ.

3. ನಾನೊಬ್ಬ (ಬಿಕಾಂ) ಪದವೀಧರ. ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೆ ಕೆಲಸಕ್ಕೆ ಸೇರಿದೆ. ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಸಿಕ್ಕಿದರೂ ಕಂಪನಿಯ ನೇರ ನೇಮಕಾತಿಯಲ್ಲದ ಕಾರಣ ನನ್ನ ಸಂಬಳ ನಾಲ್ಕಂಕಿಯನ್ನು ದಾಟಿಲ್ಲ. ಹೀಗಾಗಿ ಈಗ ನನಗೆ ಯಾವುದಾದರೂ ವೃತ್ತಿ ಸಂಬಂಧಪಟ್ಟ ಕೋರ್ಸ್ ಮಾಡುವ ಇಚ್ಛೆಯಿದೆ.  ನಾನು ಕಣ್ಣಿಗೆ (ಕನ್ನಡಕದ) ಸಂಬಂಧಪಟ್ಟ ಯಾವುದಾದರೂ ಕೋರ್ಸ್ ಮಾಡಲು ಸಾಧ್ಯವಿದೆಯೆ? ಅಥವಾ ಅದಕ್ಕೆ ವಿಜ್ಞಾನ ವಿಷಯವೇ ಕಡ್ಡಾಯವಿದ್ದಲ್ಲಿ ಒಳಾಂಗಣ ವಿನ್ಯಾಸದ (ಇಂಟೀರಿಯರ್ ಡಿಸೈನಿಂಗ್) ಬಗ್ಗೆ ಕಲಿಯಬಹುದೇ? ಈ ಬಗ್ಗೆ ನನಗೆ ಪೂರ್ಣಮಾಹಿತಿಯನ್ನು ನೀಡಿ.

⇒ವಿವೇಕ್, ಚಿಕ್ಕಮಗಳೂರು

ಉತ್ತರ: ಎಂಎನ್‌ಸಿಯಲ್ಲಿ ಇದ್ದೂ  ಸಂಬಳ ಹೆಚ್ಚಿಲ್ಲ ಅಂದರೆ, ನಿಮ್ಮವರಿಗೆ ಇರುವ ಅಗತ್ಯದಲ್ಲಿ ಕೊರತೆ ಇದೆ. ನೀವು ಮಾಡುತ್ತಿರುವ ಕೆಲಸಕ್ಕೆ ಅನುಕೂಲವಾಗುವ ‘ಕಂಪ್ಯೂಟರ್‌ ಲ್ಯಾಂಗ್ವೇಜ್‌’ ಅನ್ನು ಕಲಿಯಿರಿ. ಬ್ಯಾಂಕಿಂಗ್‌ ಪರೀಕ್ಷೆಯನ್ನು ತೆಗೆದುಕೊಳ್ಳಿ. ನಿಮಗೆ ಪರೀಕ್ಷೆ ಪಾಸು ಮಾಡುವ ನಂಬಿಕೆ ಇದ್ದಲ್ಲಿ, CAT ಪರೀಕ್ಷೆ ತೆಗೆದುಕೊಂಡು ಎಂಬಿಎ ಕೋರ್ಸ್‌ನ್ನು ಪ್ರಯತ್ನಿಸಿ. ಇಂಟೀರಿಯರ್‌ ಡಿಸೈನ್‌ಗೆ ಒಂದು ವಿಶೇಷವಾದ ಸಾಮರ್ಥ್ಯ ಬೇಕು.

ನೀವು ಮೊದಲೇ ನಿರ್ಧರಿಸಿದ್ದರೆ ‘ಬಿಎಸ್ಸಿ ಐಚ್ಛಿಕ’ ಕೋರ್ಸ್‌ ಮಾಡಬಹುದಿತ್ತು. ಶಂಕರ ನೇತ್ರಾಲಯ ಅಕಾಡೆಮಿಯವರು ಒಂದು ವರ್ಷದ ಸರ್ಟಿಫಿಕೇಟ್‌ ಕೋರ್ಸ್‌ ಇನ್‌ ಆಪ್ಟಿಕಲ್‌ ರೀಟೇಲ್‌ ಮ್ಯಾನೇಜ್‌ಮೆಂಟ್‌ ಅನ್ನು ನಡೆಸುತ್ತಾರೆ. ಹೆಚ್ಚಿನ ವಿವರಕ್ಕೆ:  www.thesnacademy.ac.inಗೆ ಭೇಟಿಕೊಡಿ. ನನ್ನ ಸಲಹೆ – ನೀವು ಈಗ ಇರುವ ಕೆಲಸಕ್ಕೆ ಬೇಕಾಗುವ ಕೋರ್ಸ್‌ ಮಾಡಿ.

4. ನನ್ನ ಸೊಸೆ ಬಿಎಸ್ಎಎಂ ಪದವಿ ಪಡೆದಿದ್ದು ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಐದು ವರ್ಷದ ಒಬ್ಬ ಮಗ ಇದ್ದು, ಈಗ ಮೂರು ತಿಂಗಳ ಹಿಂದೆ ಮತ್ತೊಬ್ಬ ಮಗ ಹುಟ್ಟಿದ್ದಾನೆ. ಹೀಗಾಗಿ ಸದ್ಯ ಯಾವ ಕೆಲಸಕ್ಕೂ ಹೋಗುತ್ತಿಲ್ಲ. ಈ ಸಮಯ ಹಾಗೂ ವಿರಾಮವನ್ನು ಉಪಯೋಗಿಸಿಕೊಂಡು ಆಕೆಗೆ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಪದವಿಗೆ ಸೇರಲು ಸಂಘ, ಸಂಸ್ಥೆಗಳಿವೆ? ಅವುಗಳಲ್ಲಿ ಯಾವ ಸಂಘಕ್ಕೆ ಹೆಚ್ಚು ಹೆಸರಿದೆ. ವಿವರಗಳನ್ನು ತಿಳಿಸಿ. ಮೈಸೂರು ನಗರದಿಂದ ವ್ಯವಸ್ಥೆ ಅನುಕೂಲವಾಗುವ ಸ್ಥಳ ತಿಳಿಸಿ.

⇒ಊರು, ಹೆಸರು ಬೇಡ

ಉತ್ತರ: 
ನಿಮ್ಮ ಸೊಸೆಯ ಪರವಾಗಿ ನೀವು ಪ್ರಶ್ನೆ ಕೇಳುತ್ತಿದ್ದೀರಾ. ಎಂದರೆ ಅವರು ಓದಿ, ಕೆಲಸ ಮಾಡಲಿ ಅಂತ ನಿಮ್ಮ ಇಚ್ಛೆಯೇ? ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರು ಮರಳಿ ಕೆಲಸ ಮುಂದುವರೆಸುವುದು ಉತ್ತಮ. ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ನ್ನು ಮೆಡಿಕಲ್‌ ಅಥವಾ ಯಾವುದೇ ಪದವಿ ಇರುವವರು ಮಾಡಬಹುದು. ಮೆಡಿಕಲ್‌ ರಿಲೇಟೆಡ್‌ ಇರುವ ಕಡೆ ಮೆಡಿಕಲ್‌ ಮಾಡಿದವರನ್ನೇ ತೆಗೆದುಕೊಳ್ಳುತ್ತಾರೆ. ನಾನ್‌ ಟೆಕ್ನಿಕಲ್‌ ಕಡೆ, ಪದವಿಧರರು ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ ಮಾಡಿದರೆ ಅವರನ್ನು ನಾನ್‌ ಟೆಕ್ನಿಕಲ್‌ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ ಅಂದರೆ ಒಂದು ಆಸ್ಪತ್ರೆಯ ವಹಿವಾಟು, ಪ್ಲಾನಿಂಗ್‌, ಅಲ್ಲಿ ಕೆಲಸಕ್ಕೆ ಬೇಕಾದವರ ಆಯ್ಕೆ, ಆಸ್ಪತ್ರೆ ನೀಡುವ ಸೌಲಭ್ಯ ಮತ್ತು ರೋಗಿಗಳ ಜೊತೆ ಹೊಂದಾಣಿಕೆ ವಿವರಗಳ ಮೂಲಕ ತಿಳಿಸುವುದು, ಕಡಿಮೆ ಖರ್ಚಿನಲ್ಲಿ ಆಸ್ಪತ್ರೆ  ನೀಡುವ ಸಹಾಯ, ಇವೆಲ್ಲವನ್ನೂ ನಿರ್ವಹಿಸುವ ಜವಾಬ್ದಾರಿ ಹಾಸ್ಪಿಟಲ್‌ ಮ್ಯಾನೇಜರ್‌ಗಳದ್ದು. ಉದ್ಯೋಗಾವಕಾಶ, ಸರ್ಕಾರಿ ಮತ್ತು ಪ್ರೈವೇಟ್‌ ಆಸ್ಪತ್ರೆಗಳಲ್ಲಿ, ಹೆಲ್ತ್‌ಕೇರ್‌ ಏಜೆನ್ಸೀಸ್‌, ಕ್ಲಿನಿಕ್‌, ಲ್ಯಾಬೋರೆಟರಿ, ನ್ಯಾಷನಲ್‌–ಇಂಟರ್‌ ನ್ಯಾಷನಲ್‌ ಹೆಲ್ತ್‌ಕೇರ್‌ ಸಂಸ್ಥೆಗಳಲ್ಲಿ, ಹೆಲ್ತ್‌ ಇನ್‌ಷ್ಯುರೆನ್ಸ್‌ ಕಂಪನಿಗಳಲ್ಲಿ, ಮೆಡಿಕಲ್‌ ಕಾಲೇಜುಗಳಲ್ಲಿ, ಪಬ್ಲಿಕ್‌ ಹೆಲ್ತ್‌ ಡಿಪಾರ್ಟ್‌ಮೆಂಟ್‌ಗಳಲ್ಲಿ, ಫರ್ಮಾಸಿಟಿಕಲ್‌ ಕಂಪನಿಗಳಲ್ಲಿ ಇನ್ನೂ ಅನೇಕ ಕಡೆ ಉತ್ತಮ ಉದ್ಯೋಗಾವಕಾಶವಿದೆ. ನೀವು ಕೇಳಿರುವ ಪ್ರಕಾರ, ಮೈಸೂರಿನಲ್ಲಿ:

1. JSS Academy of higher education and research, Mysure - MBA (Hospital Management)

ನೀವು ಉತ್ತಮವಾದ ಇನ್ಸಿಟಿಟ್ಯೂಟ್‌ ಮತ್ತು ಮೈಸೂರಿನಲ್ಲೇ ಬೇಕು ಅನ್ನುವುದು ಸರಿಯಲ್ಲ.

ಕೆಲವು ಉತ್ತಮ ಸಂಸ್ಥೆ/ ವಿಶ್ವವಿದ್ಯಾಲಯಗಳು:

1. All India Institute of Medical Science (AIIMS) Ansarinagar, New Delhi - 110029

2. Birla Institute of Science and Technology Pilani - 333031

3. CMC, Vellore

4. MAHE, Manipal

5. AFMC, Pune

6. St. Jhon's Medical College, Bangalore –560034 ಇನ್ನೂ ಅನೇಕ.

ನಿಮ್ಮ ನೆರವು ಇರುವುದರಿಂದ, ಸದ್ಯಕ್ಕೆ ಮನೆಯಲ್ಲೇ ಮೂರು ಗಂಟೆಗಳ ಕಾಲ ಕ್ಲಿನಿಕ್‌ ನಡೆಸುವುದು ಉತ್ತಮ.

ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ? ನಮಗೆ ಕಳುಹಿಸಿ...

ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು, ಲಭ್ಯವಿರುವ ವಿದ್ಯಾರ್ಥಿವೇತನಗಳು – ಹೀಗೆ ನಿಮ್ಮ ಶಿಕ್ಷಣವನ್ನು ಕುರಿತಾದ ಎಲ್ಲ ಪ್ರಶ್ನೆಗಳಿಗೂ ನೀವು ‘ಶಿಕ್ಷಣ’ ಪುರವಣಿಯಲ್ಲಿ ಉತ್ತರವನ್ನು ಪಡೆಯಬಹುದು. ವೃತ್ತಿಶಿಕ್ಷಣ ಸಲಹೆಗಾರರಾದ ಅನ್ನಪೂರ್ಣ ಮೂರ್ತಿ ನಿಮ್ಮ ಸಂಶಯಗಳನ್ನು ನಿವಾರಿಸುತ್ತಾರೆ. ಪ್ರಶ್ನೆಗಳನ್ನು ಯೂನಿಕೋಡ್‌, ನುಡಿಯಲ್ಲಿ ಇ–ಮೇಲ್ ಮೂಲಕವೂ ಕಳುಹಿಸಬಹುದು. ನಮ್ಮ ವಿಳಾಸ: ಸಂಪಾದಕರು, ‘ಶಿಕ್ಷಣ ಪುರವಣಿ’, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ,

ಬೆಂಗಳೂರು– 560001

ಇಮೇಲ್‌: shikshana@prajavani.co.in

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry