ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಗಳ ಪ್ರತೀಕವಾಗಿರುವ ಪ್ರತಿಮೆಗಳ ನೆನೆಯುತ್ತಾ...

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಇತಿಹಾಸ ಸಾರುವ ಅಥವಾ ಮಹಾನ್‌ ವ್ಯಕ್ತಿಗಳ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಾಣ ಮಾಡುವುದು ಸಾಮಾನ್ಯ. ದೇಶದ ಪ್ರಮುಖ ಸ್ಥಳಗಳಲ್ಲೇ ಈ ಪ್ರತಿಮೆಗಳನ್ನು ಸ್ಥಾಪಿಸಿರುತ್ತಾರೆ. ದೇಶದ ಪ್ರತೀಕವಾಗಿರುವ ಪ್ರತಿಮೆಗಳು ಹಲವು ಕಥೆಗಳನ್ನು ಹೇಳುತ್ತವೆ. ಪ್ರಪಂಚದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿರುವ ಪ್ರಸಿದ್ಧ ಪ್ರತಿಮೆಗಳ ಮಾಹಿತಿ ಇಲ್ಲಿದೆ.

ಸ್ಪ್ರಿಂಗ್ ಬುದ್ಧ ದೇವಾಲಯ: ಚೀನಾದ ಹೆನಾನ್‌ನಲ್ಲಿರುವ ಇದು ವಿಶ್ವದ ಅತಿ ಎತ್ತರದ ಪ್ರತಿಮೆ. 153 ಮೀಟರ್‌ ಎತ್ತರವಿರುವ ಇದರ ನಿರ್ಮಾಣಕ್ಕೆ 343 ಕೋಟಿ ವೆಚ್ಚವಾಗಿದೆ. 1997ರಲ್ಲಿ ಪ್ರಾರಂಭವಾದ ಇದರ ನಿರ್ಮಾಣ ಮುಕ್ತಾಯವಾಗಿದ್ದು 2008ರಲ್ಲಿ. 20 ಮೀಟರ್‌ ಎತ್ತರದ ಕಮಲದ ಸಿಂಹಾಸನದ ಮೇಲೆ ಬುದ್ಧನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಬಿಸಿ ನೀರಿನ ಬುಗ್ಗೆ ಸಮೀಪವೇ ಇರುವುದರಿಂದ ಈ ಪ್ರತಿಮೆಗೆ ಸ್ಟ್ರಿಂಗ್‌ ಬುದ್ಧ ದೇವಾಲಯ ಎಂಬ ಹೆಸರು ಬಂದಿದೆ.

ಉಶಿಕು ಡೈಬುಟ್ಸು: 110 ಮೀಟರ್ ಎತ್ತರವಿರುವ ಈ ಪ್ರತಿಮೆ ಜಪಾನಿನ ಉಶಿಕು ನಗರದಲ್ಲಿದೆ. ಇದನ್ನು ಕಂಚಿನಿಂದ ನಿರ್ಮಾಣ ಮಾಡಲಾಗಿದೆ. ಪ್ರತಿಮೆಯೊಳಗೆ ನಾಲ್ಕು ವಿಭಿನ್ನ ಹಂತಗಳಿವೆ. ಲಿಫ್ಟ್‌ ಮೂಲಕ ಇದರ ಮೇಲೆ ಹೋಗಬಹುದು. ಮೊದಲ ಹಂತದಲ್ಲಿ ಸಂಗೀತದ ಇಂಪನ್ನು ಕಿವಿಗೆ ತುಂಬಿಕೊಳ್ಳಬಹುದು. ಎರಡನೇ ಹಂತದಲ್ಲಿ ಧರ್ಮಗ್ರಂಥಗಳು ಇರುತ್ತವೆ. ಮೂರನೇ ಹಂತದಲ್ಲಿ 3,000 ಸಾವಿರ ಬುದ್ಧನ ಪ್ರತಿಮೆ ಇದೆ. ಕೊನೆಯ ಹಂತದಲ್ಲಿ ಪ್ರತಿಮೆಯ ಸುತ್ತಲೂ ಸುಂದರ ತೋಟ ಇದೆ.

ಗುವಾನ್‌ಯಿನ್‌: ಚೀನಾದ ಹೈನಾನ್‌ ಪ್ರಾಂತ್ಯದಲ್ಲಿರುವ ಗುವಾನ್‌ಯಿನ್‌ ಪ್ರತಿಮೆ ಬೌದ್ಧ ಧರ್ಮದ ಸಹಾನುಭೂತಿ ದೇವತೆಯ ಪ್ರತೀಕ. ಈ ಪ್ರತಿಮೆ 108 ಮೀಟರ್‌ ಎತ್ತರವಿದೆ. ಇದು ಪ್ರಪಂಚದ ನಾಲ್ಕನೇ ಅತಿ ಎತ್ತರದ ಪ್ರತಿಮೆ. ಈ ಪ್ರತಿಮೆಯು ಮೂರು ವಿಭಿನ್ನ ಮುಖಗಳನ್ನು ಹೊಂದಿದೆ. ಇದನ್ನು ಪೂರ್ಣಗೊಳಿಸಲು 6 ವರ್ಷ ಬೇಕಾಯಿತು.

ಎಂಪೆರರ್‌ ಯಾನ್‌ ಮತ್ತು ಹುವಾಂಗ್: ಚೀನಾದ ರಾಜರಾದ ಯಾನ್‌ ಮತ್ತು ಹುವಾಂಗ್‌ ನೆನಪಿಗಾಗಿ ಈ ಶಿಲ್ಪವನ್ನು ನಿರ್ಮಿಸಲಾಗಿದೆ. ಈ ಪ್ರತಿಮೆ ನಿರ್ಮಾಣ 1987 ರಲ್ಲಿ ಪ್ರಾರಂಭವಾಯಿತು. ಪೂರ್ಣಗೊಳ್ಳಲು 20 ವರ್ಷ ತಗುಲಿತು. 106 ಮೀಟರ್ ಎತ್ತರವಿರುವ ಇದು ಚೀನಾದ ಹೆನನ್ ಪ್ರಾಂತ್ಯದಲ್ಲಿದೆ. ಈ ಮೂರ್ತಿಗಳ ಕಣ್ಣುಗಳು 3 ಮೀಟರ್ ಅಗಲ ಮತ್ತು ಮೂಗು 6 ಮೀಟರ್ ಉದ್ದವಿದೆ.

ಸೆಂಡೈ ಡೈಕಾನ್ನೊನ್: ಜಪಾನಿನ ಸೆಂಡೈನ ಬೆಟ್ಟದ ತುದಿಯಲ್ಲಿರುವ ಈ ಪ್ರತಿಮೆ 100 ಮೀಟರ್‌ ಎತ್ತರವಿದೆ. ಇದು ಬೋಧಿಸತ್ವವನ್ನು ಪ್ರತಿನಿಧಿಸುತ್ತದೆ. ಪ್ರವಾಸಿಗರು ಲಿಫ್ಟ್‌ ಮೂಲಕ ಬೆಟ್ಟದ ತುದಿ ತಲುಪುತ್ತಾರೆ.

ಪೀಟರ್‌ ದಿ ಗ್ರೇಟ್‌ ಪ್ರತಿಮೆ: 43 ವರ್ಷಗಳಿಂದ ದೇಶ ಆಳಿದ ರಷ್ಯಾದ ಚಕ್ರವರ್ತಿ ಪೀಟರ್ ಐ ನೆನಪಿಗಾಗಿ ಈ ಪ್ರತಿಮೆ ನಿರ್ಮಿಸಲಾಯಿತು. ಮಾಸ್ಕೊ ನಗರದ ಮಾಸ್ಕ್ವಾ ನದಿಯ ಮಧ್ಯೆ ಇರುವ ಈ ಪ್ರತಿಮೆ 98 ಮೀಟರ್ ಎತ್ತರವಿದೆ. ಇದನ್ನು  ವಾಸ್ತುಶಿಲ್ಪಿ ಝುರಾಬ್ ಟ್ಸೆರೆಲಿ ಅವರು ವಿನ್ಯಾಸಗೊಳಿಸಿದರು. 100 ಟನ್ ಇರುವ ಈ ಪ್ರತಿಮೆ ನಿರ್ಮಾಣಕ್ಕೆ 600 ಟನ್‌ ಸ್ಟೇನ್‌ಲೆಸ್‌ ಸ್ಟೀಲ್‌ ಮತ್ತು ಕಂಚು ಬಳಸಲಾಗಿದೆ. 1997ರಲ್ಲಿ ಇದನ್ನು ಅನಾವರಣಗೊಳಿಸಲಾಯಿತು.

ಗ್ರೇಟ್‌ ಬುದ್ಧ: ಥಾಯ್ಲೆಂಡ್‌ನಲ್ಲಿರುವ ಗ್ರೇಟ್ ಬುದ್ಧ ಪ್ರತಿಮೆ 92 ಮೀಟರ್ ಎತ್ತರವಿದೆ. 1990ರಲ್ಲಿ ಪ್ರಾರಂಭವಾದ ಇದರ ನಿರ್ಮಾಣ ಮುಕ್ತಾಯವಾಗಿದ್ದು 2008ರಲ್ಲಿ. ಸಿಮೆಂಟ್‌ನಿಂದ ನಿರ್ಮಿಸಿದ ಈ ಪ್ರತಿಮೆಗೆ ಬಂಗಾರದ ಬಣ್ಣ ಹಚ್ಚಲಾಗಿದೆ.

ಗ್ರ್ಯಾಂಡ್‌ ಬುದ್ಧ: ಈ ಪ್ರತಿಮೆ ಚೀನಾದ ಲಾಂಗ್ಶಾನ್ ಪರ್ವತದಲ್ಲಿದೆ. ಪ್ರತಿಮೆಯ ಎತ್ತರ 88 ಮೀಟರ್‌. ಸಂಪೂರ್ಣವಾಗಿ ಕಂಚಿನಿಂದ ನಿರ್ಮಿಸಲಾಗಿದೆ. ಇದು 700 ಟನ್ ತೂಗುತ್ತದೆ. ಈ ಪ್ರವಾಸಿ ತಾಣ 74 ಎಕರೆ ಪ್ರದೇಶದಲ್ಲಿದೆ.

ದಿ ಮದರ್‌ ಕಾಲ್ಸ್‌: 87 ಮೀಟರ್‌ ಎತ್ತರವಿರುವ ಈ ಪ್ರತಿಮೆ ಇರುವುದು ರಷ್ಯಾದ ವೋಲ್ಗೊಗ್ರಾಡ್‌ನಲ್ಲಿ. ಈ ಪ್ರತಿಮೆಯನ್ನು ಎಂಜಿನಿಯರ್ ನಿಕೋಲಾಯ್ ನಿಕಿತಿನ್ ಮತ್ತು ಶಿಲ್ಪಿ ಯೆಜ್‌ಜೆನಿ ವುಚೆತಿಚ್ ವಿನ್ಯಾಸಗೊಳಿಸಿದರು. 1942 - 1943ರಲ್ಲಿ ನಡೆದ ಸ್ಟಾಲಿಗ್ರಾಡ್‌ ಕದನದ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ 7900 ಟನ್‌ ಕಾಂಕ್ರಿಟ್‌ ಬಳಸಲಾಗಿದೆ. 1967ರಲ್ಲಿ ಇದನ್ನು ಅನಾವರಣಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT