‘ಪದ್ಮಾವತಿ’ ಫ್ಯಾಷನ್‌

7

‘ಪದ್ಮಾವತಿ’ ಫ್ಯಾಷನ್‌

Published:
Updated:
‘ಪದ್ಮಾವತಿ’ ಫ್ಯಾಷನ್‌

ಪದ್ಮಾವತಿ’ ಸಿನಿಮಾ ವಿವಾದಗಳ ಹೊಡೆತಕ್ಕೆ ಸಿಕ್ಕಿ ‘ಪದ್ಮಾವತ್‌’ ಆಗಿ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ನೋಡಿದವರು ತಮ್ಮದೇ ರೀತಿಯಲ್ಲಿ ಚಿತ್ರವನ್ನು, ಪಾತ್ರಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆದರೆ ‘ಪದ್ಮಾವತಿ’ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಬೆಚ್ಚನೆಯ ಸ್ಥಾನ ಗಿಟ್ಟಿಸಿಕೊಂಡಾಗಿದೆ. ರಾಣಿ ಪದ್ಮಿನಿಯಾಗಿ ದೀಪಿಕಾ ಪಡುಕೋಣೆ ಧರಿಸಿರುವ ರಜಪೂತ ಶೈಲಿಯ ಒಡವೆಗಳು ಮತ್ತು ಉಡುಗೆಗಳು ಈಗ ಫ್ಯಾಷನ್‌ ಜಗತ್ತಿನಲ್ಲಿ ಟ್ರೆಂಡ್‌ ಸೃಷ್ಟಿಸಿಬಿಟ್ಟಿವೆ. ‘ಪದ್ಮಾವತಿ’ ಹೆಸರಿನ ಕೃತಕ ಆಭರಣಗಳು ಮತ್ತು ಲೆಹೆಂಗಾ, ಘಾಗ್ರಾಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ವಸ್ತುಗಳಾಗಿವೆ.

ಹಾಗೆ ನೋಡಿದರೆ, ‘ಪದ್ಮಾವತಿ ಒಡವೆ’ ಮತ್ತು ಭರ್ಜರಿ ವಿನ್ಯಾಸದ ಉಡುಗೆ ತೊಡುಗೆಗಳ ಕುರಿತು ಕಳೆದ ವರ್ಷದಿಂದಲೂ ಪ್ರತಿನಿತ್ಯ ಚರ್ಚೆ ನಡೆಯುತ್ತಲೇ ಇತ್ತು. ‘ಒಡವೆಗಳನ್ನು ತಯಾರಿಸಲು 200 ಮಂದಿ ಕುಶಲಕರ್ಮಿಗಳು 600 ದಿನ ಶ್ರಮಿಸಿದ್ದಾರೆ ಮತ್ತು 400 ಕೆ.ಜಿ. ಬಂಗಾರ ಬಳಕೆಯಾಗಿದೆ’ ಎಂಬ ಸಂಗತಿಯನ್ನು, ಚಿತ್ರಕ್ಕಾಗಿ ಒಡವೆ ವಿನ್ಯಾಸ ಮಾಡಿದ ‘ತನಿಷ್ಕ್‌’ ಬಹಿರಂಗಪಡಿಸಿದಾಗ ಚಿತ್ರ ಜಗತ್ತು ಮತ್ತು ಸಿನಿಮಾ ಪ್ರೇಕ್ಷಕರು ದಂಗಾಗಿದ್ದರು.

ಅಲ್ಲಿಂದೀಚೆ, ಒಡವೆಗಳ ಫ್ಯಾಷನ್‌ ಲೋಕದಲ್ಲಿ ‘ಪದ್ಮಾವತಿ’ ವಿನ್ಯಾಸ ಟ್ರೆಂಡ್‌ ಶುರುವಾಗಿತ್ತು. ‘ತನಿಷ್ಕ್‌’ ಆಭರಣ ಬ್ರ್ಯಾಂಡ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ‘ಪದ್ಮಾವತಿ’ ವಿನ್ಯಾಸಗಳ ಸಂಗ್ರಹವೇ ತೆರೆದುಕೊಳ್ಳುತ್ತದೆ. ಮೀನಾಕ್ಷಿ, ಜಡಾವು, ಮಿನಿಯೇಚರ್‌ ಪೇಂಟಿಂಗ್‌ ಮತ್ತು ಮುತ್ತಿನ ವಿನ್ಯಾಸ, ಕುಂದನ್‌ನಲ್ಲಿ ಹೂಗಳ ವಿನ್ಯಾಸ, ಇಂಟ್ರಿಕೇಟ್‌ ಎಂಬ ಲೇಬಲ್‌ನಿಂದಲೇ ಕರೆಸಿಕೊಳ್ಳುವ ಸಂಕೀರ್ಣ ವಿನ್ಯಾಸಗಳನ್ನು ಈ ಸಿನಿಮಾಕ್ಕಾಗಿ ‘ತನಿಷ್ಕ್‌’ ಪರಿಚಯಿಸಿತ್ತು.

ಬಹು ಚರ್ಚಿತ ಹಾಗೂ ಸುದ್ದಿ ಮಾಡಿದ ಹೊಸ ಬಗೆಯ ಉಡುಗೆ ತೊಡುಗೆಗಳ ಟ್ರೆಂಡ್‌ಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಆನ್‌ಲೈನ್‌ ಮಾರುಕಟ್ಟೆಯ ಪಾತ್ರ ದೊಡ್ಡದು. ‘ಪದ್ಮಾವತಿ’ ಒಡವೆಗಳ ಟ್ರೆಂಡ್‌ ಸೃಷ್ಟಿಸುವಲ್ಲಿಯೂ ಇದು ನಿಜವಾಗಿದೆ. ‘ಪದ್ಮಾವತಿ ಸ್ಟೈಲ್‌’ ‘ಪದ್ಮಾವತಿ ಜ್ಯುವೆಲರಿ’ ಎಂದು ಗೂಗಲಿಸಿದರೆ ಅಂತಹ ಒಡವೆಗಳ ದೊಡ್ಡ ಭಂಡಾರವೇ ತೆರೆದುಕೊಳ್ಳುತ್ತದೆ. ಕೆಲವು, ಪದ್ಮಾವತಿ ಒಡವೆ ವಿನ್ಯಾಸಗಳ ಪಡಿಯಚ್ಚು ಎನ್ನುವಂತಿದ್ದರೆ, ಅವುಗಳಿಂದ ಪ್ರೇರೇಪಣೆ ಪಡೆದು ಅಭಿವೃದ್ಧಿಪಡಿಸಲಾದ ವಿನ್ಯಾಸಗಳು ತಮ್ಮ ಸಂಗ್ರಹದಲ್ಲಿರಲೇಬೇಕು ಎಂದು ಪ್ರಭಾವಿಸುವಂತಿವೆ.

ರಾಣಿ ‘ಪದ್ಮಿನಿ’ ಧರಿಸಿರುವುದು ನೆಕ್‌ಲೇಸ್‌ ಮತ್ತು ಚೋಕರ್‌ಗಳನ್ನು. ಕುಂದನ್‌ ವಿನ್ಯಾಸಗಳಿಗೆ ಚಿನ್ನ ಮತ್ತು ಕೃತಕ ಒಡವೆಗಳಲ್ಲಿ ಬಹುಬೇಡಿಕೆ. ‘ಪದ್ಮಾವತಿ’ ಮಾದರಿಯ, ಮುತ್ತು ಪೋಣಿಸಿದ ಕುಂದನ್‌ ನೆಕ್‌ಲೇಸ್‌ಗಳು ಭರ್ಜರಿಯಾಗಿವೆ. Myntra.comನಲ್ಲಿ ₹1300ಕ್ಕೆ ಇವು ಲಭ್ಯ.

ದೀಪಿಕಾ ಅವರ ರಾಣಿಯ ನೋಟವನ್ನು ಇನ್ನಷ್ಟು ಶ್ರೀಮಂತಗೊಳಿಸಿರುವುದು ತಲೆಯ ಆಭರಣ (ಬೈತಲೆ ಪಟ್ಟಿ) ಮತ್ತು ಮೂಗಿನ ಆಭರಣ. ಈ ಹಿಂದೆಯೂ ಐತಿಹಾಸಿಕ ಹಿನ್ನೆಲೆಯ ಸಿನಿಮಾಗಳಲ್ಲಿ ಬಳೆಯಷ್ಟು ದೊಡ್ಡ ಸಾಂಪ್ರದಾಯಿಕ ಶೈಲಿಯ ಮೂಗಿನ ಒಡವೆಗಳು ಬಳಕೆಯಾಗಿದ್ದವು. ಆದರೆ ‘ಪದ್ಮಾವತಿ’ಯಲ್ಲಿ ಗಮನ ಸೆಳೆದಿರುವುದು ಅಂತಹ ದೊಡ್ಡ ‘ರಾಜ್‌ವಾಡ’ ರಿಂಗ್‌ ಮತ್ತು ಎರಡೂ ಹೊಳ್ಳೆಗಳ ನಡುವಿನ ಕಂಬಕ್ಕೆ ಚುಚ್ಚಿರುವ ‘ಸೆಪ್ಟಂ’ ಅಥವಾ ನತ್ತು. ಹೂವಿನ ವಿನ್ಯಾಸ, ಕುಂದನ್‌ ಕಲೆ ಮತ್ತು ಪುಟಾಣಿ ಮುತ್ತಿನ ಹರಳುಗಳಿಂದ ಕೂಡಿರುವ ‘ರಾಜ್‌ವಾಡ’ ರಿಂಗ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತಿವೆ. ಆರಂಭಿಕ ಬೆಲೆ ₹7,500.

‘ಪದ್ಮಾವತಿ’ ಶೈಲಿಯ ತಲೆಯ ಆಭರಣಗಳು ಮಾಂಗ್‌ ಟಿಕ್ಕಾ, ಮಾತಾ ಟಿಕ್ಕಾ, ಮಾತಾ ಪಟ್ಟಿ ಎಂಬ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಲಭ್ಯ. ‘ರಜಪೂತ ಶೈಲಿ’ ಮತ್ತು ‘ಪದ್ಮಾವತಿ ಮಾಂಗ್‌ ಟಿಕ್ಕ’, ‘ಪದ್ಮಾವತಿ ಮಾತಾಪಟ್ಟಿ’ ಎಂಬ ವಿಶೇಷಣಗಳೊಂದಿಗೆ ಅವು ಬೇಡಿಕೆ ಕುದುರಿಸಿಕೊಂಡಿವೆ. ಹಣೆಯಲ್ಲಿ ಬೈತಲೆ ಭಾಗದಲ್ಲಿ ಕೂರುವ ಜುಮಕಾ ಮಾದರಿಯ ಬುಗುಡಿ ಅಥವಾ ಗೊಂಡೆಯಿಂದಾಗಿ ಅವುಗಳಿಗೆ ರಜಪೂತ ಸ್ಪರ್ಶ ಸಿಕ್ಕಿದೆ. ಬಗೆ ಬಗೆಯ ಮಾತಾ ಪಟ್ಟಿಗಳನ್ನು ದೀಪಿಕಾ ಧರಿಸಿದ್ದರೂ ಆ ಎಲ್ಲಾ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸಂಕೀರ್ಣ (ಇಂಟ್ರಿಕೇಟ್‌) ವಿನ್ಯಾಸದ ಮಾತಾ ಟಿಕ್ಕಾವೊಂದು ‘ಪಾಪ್‌ ಅಪ್‌ ಶಾಪ್‌’ ಎಂಬ ಆನ್‌ಲೈನ್‌ ಪೋರ್ಟಲ್‌ನಲ್ಲಿದೆ. ಆರಂಭಿಕ ಬೆಲೆ ₹16,500.

‘ಪದ್ಮಿನಿ’ ಧರಿಸಿದ ಅಂಗೈಯಷ್ಟು ಅಗಲದ ಓಲೆ ಮತ್ತು ದೊಡ್ಡ ದೊಡ್ಡ ಜುಮಕಾ, ಲೋಲಕ್‌ಗಳೂ ಗಮನ ಸೆಳೆಯುತ್ತವೆ. ಈ ಮಾದರಿಯ ಒಡವೆಗಳ ಬೆಲೆ ‘ಮಿಂತ್ರಾ’ದಲ್ಲಿ ₹800ರಿಂದ ಆರಂಭವಾಗುತ್ತವೆ.

ಐತಿಹಾಸಿಕ ಕಥನವನ್ನು ಪ್ರಸ್ತುತಪಡಿಸುವಾಗ ಆಗಿನ ಕಾಲದ ರಾಜಮನೆತನ ಪಾಲಿಸುತ್ತಿದ್ದ (ಕ್ರಿ.ಶ. 1300) ಸಣ್ಣ ಸಣ್ಣ ವಿವರಗಳನ್ನೂ ಉಡುಗೆ ತೊಡುಗೆ, ಚಿತ್ರೀಕರಣದ ಸೆಟ್‌, ನೋಟದ ಮೂಲಕ ತೋರಿಸುವುದು ಕತೆಯಷ್ಟೇ ಮುಖ್ಯವಾಗುತ್ತದೆ. ಪದ್ಮಿನಿ ಪಾತ್ರಕ್ಕೆ ಸಂಜಯ್‌ ಲೀಲಾ ಬನ್ಸಾಲಿ ಅಷ್ಟು ಆಸ್ಥೆ ವಹಿಸಿ ವಿಲಾಸಿತನ ತುಂಬಿರುವುದೂ ಇದೇ ಕಾರಣಕ್ಕೆ.

ವಿಲಾಸಿ ಉಡುಗೆ: ದೀಪಿಕಾ ಧರಿಸಿರುವ ಒಂದೊಂದು ಲೆಹೆಂಗಾದ ವಿನ್ಯಾಸ, ಕಸೂತಿ, ಒಟ್ಟಾರೆ ಶ್ರೀಮಂತಿಕೆಯಿಂದ ಫ್ಯಾಷನ್‌ ಜಗತ್ತಿನಲ್ಲಿಯೂ ಬಹಳ ಮೆಚ್ಚುಗೆ ಗಳಿಸಿದೆ. ಬರೋಬ್ಬರಿ 30 ಕೆ.ಜಿ. ತೂಕದ ಒಂದೊಂದು ಲೆಹೆಂಗಾ ಮತ್ತು ಭಾರಿ ಒಡವೆಗಳನ್ನು ಧರಿಸಿ ದಿನಕ್ಕೆ 14ರಿಂದ 16 ಗಂಟೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದುದು ದೀಪಿಕಾ ಅವರ ವೃತ್ತಿಪರತೆ ಮತ್ತು ಶ್ರದ್ಧೆಗೆ ಸಾಕ್ಷಿ. ಈ ಲೆಹೆಂಗಾಗಳಲ್ಲಿ ಬಳಸಿರುವುದು ‘ಮುಕ್ಕೆ ಕಾ ಕಾಮ್‌’, ‘ಪಕ್ಕಾ ಭಾರತ್‌’, ‘ಸಲ್ಮಾ ಅಂಡ್‌ ಸಿತಾರಾ’, ‘ಗೋಕ್ರು ಆ್ಯಂಡ್‌ ಡಂಕ’ ಎಂಬ ರಾಜಸ್ತಾನದ ಪಾರಂಪರಿಕ ಕಸೂತಿಗಳನ್ನು. ಲೆಹೆಂಗಾ, ಘಾಗ್ರಾ ಮತ್ತು ದುಪಟ್ಟಾಗಳ ‘ಮೇಕಿಂಗ್‌’ ಬಗ್ಗೆ, ‘ಪದ್ಮಾವತ್‌‘ ವಿನ್ಯಾಸಕ ಜೋಡಿಯಾದ ರಿಂಪಲ್‌ ನರೂಲಾ ಮತ್ತು ಹರ್‌ಪ್ರೀತ್‌ ನರೂಲಾ ಹಿಂದೊಮ್ಮೆ ಮಾಹಿತಿ ನೀಡಿದ್ದರು.

ಒಟ್ಟು 11 ಬಗೆಯ ಲೆಹೆಂಗಾ ಮತ್ತು ಘಾಗ್ರಾಗಳನ್ನು ದೀಪಿಕಾ ಧರಿಸಿದ್ದಾರೆ. ರಾಜಸ್ತಾನದ ಅರಮನೆಗಳ ವಾಸ್ತುಶಿಲ್ಪಕ್ಕೆ ವೈಭವ ಮತ್ತು ಪಾರಂಪರಿಕ ನೋಟ ನೀಡುವ ಝರೊಕಾ ಮತ್ತು ಕಿಟಕಿಗಳ ವಿನ್ಯಾಸವನ್ನು ಈ ಉಡುಗೆಗಳ ಅಂಚಿನಲ್ಲಿ ಪಡಿಮೂಡಿಸಿದ್ದಾರೆ ರಿಂಪಲ್‌ ಮತ್ತು ಹರ್‌ಪ್ರೀತ್‌. ಅಲ್ಲದೆ, ಈ ಉಡುಗೆಗಳೊಂದಿಗೆ ಮೇಲುಡುಗೆಯಾಗಿ ಧರಿಸಿದ್ದ ದುಪಟ್ಟಾಗಳಲ್ಲಿ (ಓಡ್ಣಿ) ರಾಜಸ್ತಾನದ ಮೇವಾರ್‌ ಪ್ರಾಂತ್ಯದ ಪರಂಪರೆ ಮತ್ತು ವಸ್ತ್ರ ವೈಭವವನ್ನು ಬಿಂಬಿಸಲಾಗಿದೆ. ಈ ಎಲ್ಲಾ ವಿನ್ಯಾಸಗಳು ‘ಪದ್ಮಾವತಿ’ ನೆಪದಲ್ಲಿ ಟ್ರೆಂಡ್‌ ಸೃಷ್ಟಿಸಿವೆ.

₹1,400ರಿಂದ ಆನ್‌ಲೈನ್‌ನಲ್ಲಿ ಲಭ್ಯವಿವೆ. ಸಿನಿಮಾವೊಂದು ಟ್ರೆಂಡ್ ಸೃಷ್ಟಿಸುವುದು ಹೊಸದೇನಲ್ಲ. ಸಿನಿಮಾದ ಹೆಸರಿನಲ್ಲಿ, ನಟ ನಟಿಯರ ಹೆಸರಿನಲ್ಲಿ ದಶಕಗಳ ಕಾಲ ಟ್ರೆಂಡ್ ಉಳಿಯುವುದೂ ಇದೆ. ‘ಪದ್ಮಾವತಿ’ ಮತ್ತು ದೀಪಿಕಾ ಆ ಬಗೆಯ ಟ್ರೆಂಡ್‌ ಉಳಿಸುವಲ್ಲಿ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry