ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

–ನಾಗರಾಜು, ಬೆಂಗಳೂರು

ವಯಸ್ಸು 69, ಪತ್ನಿಗೆ 63 ವರ್ಷ. ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು. ಮೊದಲನೆ ಮಗ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಾನೆ. ನನ್ನ ನಿವೇಶನದಲ್ಲಿ 3 ಮನೆಗಳಿದ್ದು Gift deed ಮಾಡಿ 2016ರಲ್ಲಿ ಮೊದಲನೆ ಮಗನಿಗೆ ಕೊಟ್ಟಿರುತ್ತೇನೆ. ನನ್ನ ಮಗ ನನಗೆ Power Of Authorny ಕೊಟ್ಟು ಬರುವ ಮನೆ ಬಾಡಿಗೆ ನನಗೆ ಸಿಗುವಂತೆ ಮಾಡಿರುತ್ತಾನೆ. ಆತನಿಗೆ ಇಲ್ಲಿ ಬೇರೆ ಆದಾಯವಿಲ್ಲ. ಬಾಡಿಗೆ ₹ 25,000 ಬರುತ್ತದೆ. ನನಗೆ ಬ್ಯಾಂಕಿನಲ್ಲಿ ಠೇವಣಿ ಮೇಲೆ ₹6,000 ಬಡ್ಡಿ ಬರುತ್ತದೆ. 15ಎಚ್ ಕೊಟ್ಟಿದ್ದೇನೆ. ಇದರಿಂದ ನನಗಾಗಲೀ ನನ್ನ ಮಗನಿಗಾಗಲೀ ತೆರಿಗೆ ಬರುತ್ತದೆಯೇ?

ಉತ್ತರ: ನೀವು ನಿಮ್ಮ ಮಗನಿಂದ ಬಾಡಿಗೆ ಹಣದ ರೂಪದಲ್ಲಿ ಪಡೆಯುವ ₹ 25,000ಕ್ಕೆ ನಿಮಗೀರ್ವರಿಗೂ ತೆರಿಗೆ ಬರುವುದಿಲ್ಲ. ಬಾಡಿಗೆ ಆದಾಯಕ್ಕೆ ನಿಮ್ಮ ಮಗ, ಆದಾಯ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್ ತುಂಬಬೇಕು. ಬಾಡಿಗೆಯಲ್ಲಿ ವಾರ್ಷಿಕ ಕಂದಾಯ ಕಳೆದು ಬರುವ ಮೊತ್ತದಲ್ಲಿ ಸೆಕ್ಷನ್ 24 (ಎ) ಆಧಾರದ ಮೇಲೆ ಶೇ 30 ಕಳೆದು ಉಳಿದ ಹಣಕ್ಕೆ ತೆರಿಗೆ ಸಲ್ಲಿಸಬೇಕು. ಅವರು ಅನಿವಾಸಿ ಭಾರತೀಯರಾದ್ದರಿಂದ (NRI) ಹೆಚ್ಚಿನ ವಿಚಾರಕ್ಕೆ ನಿಮ್ಮ ಮನೆಗೆ ಸಮೀಪದ ಚಾರ್ಟರ್ಡ್ ಅಕೌಂಟೆಂಟ್  ಬಳಿ ವಿಚಾರಿಸಿ, ಬಾಡಿಗೆ ವಿವರ ತಿಳಿಸಿ, ರಿಟರ್ನ್ ತುಂಬುವಂತೆ ಮಾಡಿರಿ.

*

–ಹೆಸರು– ಊರು ಬೇಡ

ನನ್ನೊಡನೆ  ₹ 10 ಲಕ್ಷ ಬ್ಯಾಂಕ್ ಠೇವಣಿ ಇದೆ. ಐ.ಟಿ. ರಿಟರ್ನ್ ಏಕೆ ತುಂಬಲಿಲ್ಲ ಎಂಬುದಾಗಿ  ನೋಟಿಸ್ ಬಂದಿದೆ. ಅದಕ್ಕೆ ಉತ್ತರಿಸಿದ್ದೇನೆ. ಅವರಿಂದ ಉತ್ತರ ಇಲ್ಲ. ನಾನು ನಿವೃತ್ತ ಶಿಕ್ಷಕ. ವಯಸ್ಸು 70. ಬ್ಯಾಂಕಿಗೆ 15ಎಚ್ ಪ್ರತೀ ವರ್ಷ ಸಲ್ಲಿಸುತ್ತೇನೆ. ನನ್ನ ವಾರ್ಷಿಕ ಪಿಂಚಣಿ  ₹ 3 ಲಕ್ಷದೊಳಗಿದೆ. ನಾನು ಪ್ರತೀ ವರ್ಷ ಐ.ಟಿ. ರಿಟರ್ನ್ ತುಂಬ ಬೇಕೇ?

ಉತ್ತರ: ನೀವು 15 ಎಚ್ ಬ್ಯಾಂಕಿಗೆ ಸಲ್ಲಿಸುವುದರಿಂದ ಬ್ಯಾಂಕಿನಲ್ಲಿ ನೀವು ಪಡೆಯುವ ಬಡ್ಡಿ ಮೂಲದಲ್ಲಿ ತೆರಿಗೆ ಮುರಿಯುವು
ದಿಲ್ಲವಾದರೂ, ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯ್ತಿ ಇರುವುದಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಎಷ್ಟು ಎನ್ನುವುದನ್ನು ಪ್ರಶ್ನೆಯಲ್ಲಿ ತಿಳಿಸಿಲ್ಲ. ಒಟ್ಟಿನಲ್ಲಿ ನಿಮ್ಮ ಆದಾಯ (Gross Income) ವಾರ್ಷಿಕವಾಗಿ ₹ 3 ಲಕ್ಷ ದಾಟಿದಲ್ಲಿ,  ₹ 3 ಲಕ್ಷಗಳಿಗೂ ಮಿಕ್ಕಿದ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಒಟ್ಟು ಆದಾಯ ಪರಿಗಣಿಸುವಾಗ ಪಿಂಚಣಿ ಹಾಗೂ ಬ್ಯಾಂಕ್ ಬಡ್ಡಿ ಎರಡೂ ಲೆಕ್ಕ ತೆಗೆದುಕೊಳ್ಳಬೇಕಾಗುತ್ತದೆ. ತೆರಿಗೆ ಉಳಿಸಲು ಸೆಕ್ಷನ್ 80 ಸಿ. ಆಧಾರದ ಮೇಲೆ ಗರಿಷ್ಠ  ₹ 1.50 ಲಕ್ಷ ಬ್ಯಾಂಕ್ ಠೇವಣಿ ಮಾಡಬಹುದು. ಏನೇ ಇರಲಿ ಓರ್ವ ವ್ಯಕ್ತಿಯ ಒಟ್ಟು ಆದಾಯ ತನ್ನ ಮಿತಿಗಿಂತ ಹೆಚ್ಚಿಗೆ ಪಡೆದಲ್ಲಿ ತೆರಿಗೆಗೆ ಒಳಗಾಗದಿದ್ದರೂ, ಐ.ಟಿ. ರಿಟರ್ನ್ ತುಂಬಬೇಕು.

*

ಲೀನಾ, ಮಂಗಳೂರು

ನಾನು 84 ವರ್ಷ ವರ್ಷದ ನಿವೃತ್ತ ಶಿಕ್ಷಕಿ, ನನ್ನ ಮಾಸಿಕ ಪಿಂಚಣಿ  ₹ 17,000. ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಂದ ಸಿಗುವ ಒಟ್ಟು ಬಡ್ಡಿ  ₹ 3.50 ಲಕ್ಷ. ನನಗೆ ಆದಾಯ ತೆರಿಗೆ ಬರುತ್ತದೆಯೇ. ಐ.ಟಿ. ರಿಟರ್ನ್ ತುಂಬಬೇಕೇ  ತಿಳಿಸಿರಿ. ಈ ವರ್ಷ ಜನಸಾಮಾನ್ಯರ ಆದಾಯ ತೆರಿಗೆ ಮಿತಿ  ₹ 2.50 ಲಕ್ಷ ಅಥವಾ  ₹ 3 ಲಕ್ಷ ತಿಳಿಸಿ?

ಉತ್ತರ: 60 ವರ್ಷದೊಳಗಿರುವವರು  ₹ 2.50 ಲಕ್ಷಗಳ ತನಕ, 60–80 ವರ್ಷಗಳ ಅಂತರದಲ್ಲಿರುವವರು  ₹ 3 ಲಕ್ಷ, 80 ದಾಟಿದವರು  ₹ 5 ಲಕ್ಷಗಳ ತನಕ ಆದಾಯ ತೆರಿಗೆ ಮಿತಿಯಲ್ಲಿರುತ್ತಾರೆ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ  ₹ 2,04,000. ಬಡ್ಡಿ ಆದಾಯ  ₹ 3.50 ಲಕ್ಷ. ನಿಮ್ಮ ಒಟ್ಟು ವಾರ್ಷಿಕ ವರಮಾನ  ₹ 5,54,000. ನೀವು ₹ 54 ಸಾವಿರಕ್ಕೆ ತೆರಿಗೆ ಸಲ್ಲಿಸಬೇಕು. ತೆರಿಗೆ ಉಳಿಸಲು  ₹ 54,000, 5 ವರ್ಷಗಳ ಬ್ಯಾಂಕ್ ಠೇವಣಿ ಮಾಡಬಹುದು. ಹೀಗೆ ಠೇವಣಿ ಮಾಡಿದರೂ, ನಿಮ್ಮ ಒಟ್ಟು ಆದಾಯ  ₹ 5 ಲಕ್ಷ ದಾಟಿರುವುದರಿಂದ ನೀವು ಐ.ಟಿ. ರಿಟರ್ನ್ ಸಲ್ಲಿಸಬೇಕಾಗುತ್ತದೆ. ನಿಮಗೆ ತುಂಬಿದ ಜೀವನ ಕರುಣಿಸಿದ ಭಗವಂತ ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ.

*

–ಎಂ.ಎಸ್. ವೀರೇಶಯ್ಯ, ದಾವಣಗೆರೆ

ನಾನು ಅಕ್ಟೋಬರ್ 2016ರಲ್ಲಿ ಗೃಹ ನಿರ್ಮಾಣ ಸಂಬಂಧ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಸಾಲ ಮಂಜೂರಾತಿ ಸಮಯದಲ್ಲಿ ಬಡ್ಡಿದರ ಶೇ 9.55 ಇರುತ್ತದೆ. ಆದರೆ ಕೆನರಾ ಬ್ಯಾಂಕು ಇತ್ತೀಚೆಗೆ ಗೃಹಸಾಲದ ಬಡ್ಡಿದರ ಶೇ 8.60ಕ್ಕೆ ಇಳಿಸಿದ್ದು, ನಾನು ಪಡೆದಿರುವ ಸಾಲಕ್ಕೆ ದಿನಾಂಕ 4–7–2017 ವರೆಗೂ ಶೇ 9.55 ರಂತೆ ಬಡ್ಡಿಯನ್ನು ಪಾವತಿಸುತ್ತಿದ್ದೇನೆ. ನಾನು ಸಾಕಷ್ಟು ಮನವಿ ಮಾಡಿಕೊಂಡರೂ, ಅಕ್ಟೋಬರ್ 2016 ರಿಂದ ಅಕ್ಟೋಬರ್ 2017ರ ವರೆಗೆ ಒಂದು ವರ್ಷದ ನಂತರ ನಾನು ಪಡೆದಿರುವ ಸಾಲಕ್ಕೆ ಪ್ರಸ್ತುತ ಬಡ್ಡಿದರ ಅನ್ವಯವಾಗುತ್ತದೆ ಅಂತಾ ತಿಳಿಸಿರುತ್ತಾರೆ. ನನಗೆ ಮಾರ್ಗದರ್ಶನ ಮಾಡಿ?

ಉತ್ತರ: ಬ್ಯಾಂಕುಗಳಲ್ಲಿ ಗೃಹ ಸಾಲ ಪಡೆಯುವಾಗ ಬದಲಾಗುವ ಬಡ್ಡಿದರ(Floating Rate of Interest) ಪಡೆದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್  ಬ್ಯಾಂಕುಗಳಿಗೆ ನೀಡುವ ಸಾಲನ ಮೇಲಿನ (Repo Rate) ಬಡ್ಡಿ ಕಡಿಮೆ ಮಾಡಿದಾಗ, ಆ ಅವಧಿಯಿಂದ ತಗ್ಗಿದ ಬಡ್ಡಿದರ ಗ್ರಾಹಕರಿಗೆ ಹಾಕುತ್ತಾರೆ. ಒಟ್ಟಿನಲ್ಲಿ, ಗೃಹಸಾಲ ಪಡೆಯುವಾಗ ಇರುವ ಬಡ್ಡಿದರ, ಆರ್.ಬಿ.ಐ. ಬಡ್ಡಿ ದರ ಇಳಿಸುವ ತನಕ ಬದಲಾಗುವುದಿಲ್ಲ.

*

–ಎಂ. ಮಲ್ಲಿಕಾರ್ಜುನ, ಬೆಳಗಾವಿ

ನಾನು ಇತ್ತೀಚೆಗೆ ನಿವೃತ್ತನಾದೆ. ನಾನು ಅಂಗವಿಕಲ. ನಿವೃತ್ತಿಯಿಂದ  ₹ 35 ಲಕ್ಷ ಬಂದಿದೆ. ನನ್ನ ಪಿಂಚಣಿ  ₹ 15,396. ಇದರಲ್ಲಿ  ₹ 15 ಲಕ್ಷವನ್ನು ನನ್ನ ಹೆಸರಿನಲ್ಲಿ ಠೇವಣಿ ಮಾಡಿದ್ದೇನೆ. ಉಳಿದ ಹಣ ಎಲ್ಲಿ ಇರಿಸಿದರೆ ಆದಾಯ ಠೇವಣಿಯಿಂದ ವಿನಾಯ್ತಿ ಪಡೆಯಬಹುದು. ನನಗೆ 3 ಜನ ಮಕ್ಕಳು. ಒಬ್ಬನಿಗೆ ಮದುವೆ ಆಗಿದೆ. ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಿದರೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?‌

ಉತ್ತರ: ನೀವು ಅಂಗವಿಕಲರಾದ್ದರಿಂದ ವಾರ್ಷಿಕ  ₹ 3 ಲಕ್ಷದ ಜೊತೆಗೆ, ಸೆಕ್ಷನ್ 80 ಯು, ಆಧಾರದ ಮೇಲೆ  ₹75,000 ಹೆಚ್ಚಿನ ವರಮಾನದ ವರೆಗೆ, ಅಂದರೆ  ₹ 3.75 ಲಕ್ಷ ಆದಾಯದ ತನಕ ತೆರಿಗೆ ಕೊಡುವ ಅಗತ್ಯವಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 1,84,752,  ₹ 15 ಲಕ್ಷ ಠೇವಣಿ ಮೇಲಿನ ಬಡ್ಡಿ, ಶೇ 7 ರಂತೆ  ₹ 1,05,000. ಒಟ್ಟು ಆದಾಯ ₹ 2,89,752. ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ರಿಟರ್ನ್ ತುಂಬುವ ಅವಶ್ಯವಿಲ್ಲ. ಉಳಿದ ಹಣ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಿರಿ. ಇಲ್ಲಿ ಬರುವ ಬಡ್ಡಿ ಆದಾಯ ನಿಮ್ಮ ಆದಾಯಕ್ಕೆ ಸೇರಿಸುವ ಅವಶ್ಯವಿಲ್ಲ.

*

–ಕೆ.ಜಿ. ವಿಜಯ ಶೇಖರ, ಹಳಿಯಾಳ

ನನ್ನ ವಯಸ್ಸು 62. NWKRTC ಯಿಂದ ನಿವೃತ್ತಿ. ನಿವೃತ್ತಿ ವೇತನ ₹ 2,233.  ನಿವೃತ್ತಿಯಿಂದ ಬಂದ ಹಣದಿಂದ  ₹ 14 ಲಕ್ಷ ಅಂಚೆ ಕಚೇರಿ 5 ವರ್ಷಗಳ ಠೇವಣಿಯಲ್ಲಿರಿಸಿ ತಿಂಗಳಿಗೆ  ₹ 10,033 ಪಡೆಯುತ್ತಿದ್ದೇನೆ. ಈ ಹಣ 5 ವರ್ಷಗಳ ಆರ್.ಡಿ. ಮಾಡಿದ್ದೇನೆ. ಪ್ರಶ್ನೆ: 1. ಇದರಿಂದ ಬರುವ ಆದಾಯಕ್ಕೆ ತೆರಿಗೆ ಇದೆಯೇ. 2. ರಿಟರ್ನ್ ತುಂಬಬೇಕಾ 3. ತೆರಿಗೆ ಬರುವಲ್ಲಿ ವಿನಾಯ್ತಿ ಪಡೆಯುವ ಬಗೆ– ಇವೆಲ್ಲವನ್ನು ವಿವರವಾಗಿ ತಿಳಿಸಿರಿ. 2016ರಲ್ಲಿ ಗ್ರ್ಯಾಚುಟಿ  ₹ 13,00,472 ಬಂದಿದ್ದು,  ₹ 13,00,472ಕ್ಕೆ ತೆರಿಗೆ ಕೊಟ್ಟಿದ್ದೇನೆ. ಈಗ ಗ್ರಾಚ್ಯುಟಿ ಮಿತಿ  ₹ 20 ಲಕ್ಷವಾಗಿದ್ದು, ಉಳಿಕೆ ಹಣ ನನಗೆ ಸಿಗಬಹುದೇ, ತುಂಬಿದ ತೆರಿಗೆ ವಾಪಸು ಸಿಗಬಹುದೇ?

ಉತ್ತರ: ನಿಮ್ಮ ಪಿಂಚಣಿ ಹಾಗೂ ಬ್ಯಾಂಕ್ ಬಡ್ಡಿಯಿಂದ ನೀವು ವಾರ್ಷಿಕವಾಗಿ  ₹ 1,47,191  ಮಾತ್ರ ಪಡೆಯುತ್ತಿದ್ದು, ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಜೊತೆಗೆ ರಿಟರ್ನ್ ತುಂಬುವ ಅವಶ್ಯವೂ ಇಲ್ಲ. ನೀವು 2016 ರಲ್ಲಿ ನಿವೃತ್ತರಾದ್ದರಿಂದ  ₹ 20 ಲಕ್ಷಕ್ಕೆ ಹೆಚ್ಚಿಸಿದ ಗ್ರ್ಯಾಚುಟಿ ಸೌಲಭ್ಯಕ್ಕೆ ನೀವು ಅರ್ಹರಾಗುವುದಿಲ್ಲ ಹಾಗೂ ಈ ಬಾಬ್ತು ಕಟ್ಟಿದ ತೆರಿಗೆ ವಾಪಸು ಪಡೆಯಲು ಅವಕಾಶವಿಲ್ಲ.

–ಸೀತಾರಾಮ ಭಟ್, ಮಾಳ (ಕಾರ್ಕಳ)

ಪ್ರತೀ ಬುಧವಾರ ನಿಮ್ಮ ಸಲಹೆಗಳನ್ನು ಓದುತ್ತೇನೆ.  BSE-NSE-SEBI ಇವುಗಳೆಲ್ಲ ಏನೆಂಬುದು ತಿಳಿಯಲಿಲ್ಲ.  ಸೂಚ್ಯಂಕ ಏರಿಳಿತ ಇವೆಲ್ಲಾ ಅರಿವಾಗುವಂತೆ ತಿಳಿಸಿ?

ಉತ್ತರ: ನೀವು ಕಾರ್ಕಳ ತಾಲ್ಲೂಕಿನ ಒಂದು ಹಳ್ಳಿಯಲ್ಲಿದ್ದು, ಪ್ರಜಾವಾಣಿ ಓದುತ್ತಿರುವುದು ಹಾಗೂ ಪ್ರಶ್ನೆ ಕೇಳಿರುವುದು ನನಗೆ ನಿಜವಾಗಿ ಖುಷಿ ಕೊಟ್ಟಿದೆ. NSE-BSE-SEBI ಈ ಮೂರು ಸಂಸ್ಥೆಗಳು ಷೇರು ಮಾರುಕಟ್ಟೆಗೆ ಸಂಬಂಧಿಸಿವೆ. NSE– National Stock Exchange, BSE–Bombay Stock Exchange, SEBI– Security Exchange Board of India. ಬಿ.ಎಸ್.ಇ. ಹಾಗೂ ಎನ್.ಎಸ್.ಇ.ಗಳು ಷೇರು ಮಾರುಕಟ್ಟೆಗಳು. ಪ್ರತೀ ದಿವಸ –– ಷೇರುಗಳು ಖರೀದಿ ಹಾಗೂ ಮಾರಾಟ ಆಗುತ್ತದೆ.

ಷೇರು ದಲ್ಲಾಳಿಗಳ (Share Brokers) ಮುಖಾಂತರ ಈ ವಹಿವಾಟು ಮಾಡಬಹುದು. ವಹಿವಾಟಿಗೆ ಬ್ರೋಕರ್ಸ್‌ಗಳಿಗೆ ಕಮಿಷನ್ ಕೊಡಬೇಕಾಗುತ್ತದೆ. SEBI, ಕೇಂದ್ರ ಸರ್ಕಾರದ ಒಂದು ಅಂಗ ಸಂಸ್ಥೆ. ಈ ಸಂಸ್ಥೆ BSE-NSE ವಹಿವಾಟುಗಳನ್ನು ಮ್ಯೂಚುವಲ್ ಫಂಡ್‌ಗಳನ್ನು (RBI ಬ್ಯಾಂಕುಗಳನ್ನು ನಿಯಂತ್ರಿಸುವಂತೆ) ನಿಯಂತ್ರಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟದ ಒತ್ತಡ ಹೆಚ್ಚಾದಾಗ, ಸೂಚ್ಯಂಕ (SENSEX) ಕೆಳಗೆ ಬರುತ್ತದೆ ಹಾಗೂ ಖರೀದಿಸುವವರ ಸಂಖ್ಯೆ ಹೆಚ್ಚಾದಾಗ ಸೂಚ್ಯಂಕ ಮೇಲಕ್ಕೆ ಹೋಗುತ್ತದೆ.

–ಹೆಸರು ಬೇಡ, ಊರು ತುಮಕೂರು

ನನ್ನ ವಯಸ್ಸು 86. ರೈಲ್ವೆ ನಿವೃತ್ತ ಅಧಿಕಾರಿ. ತಿಂಗಳ ಪಿಂಚಣಿ ₹ 23,600. ನನಗೆ 4 ಜನ ಹೆಣ್ಣುಮಕ್ಕಳು. ನನ್ನ ಹೆಂಡತಿ 10 ವರ್ಷಗಳ ಹಿಂದೆ ವಿಧಿವಶಳಾಗಿದ್ದಾಳೆ. ಈಗ ನನ್ನ ಹೆಸರಿನಲ್ಲಿರುವ ನಿವೇಶನ ಮಾರಾಟ ಮಾಡಬೇಕೆಂದಿದ್ದೇನೆ. ₹ 25 ಲಕ್ಷ ಬರಬಹುದು. ಈ ಹಣ ಹೂಡಿಕೆ ಮಾಡುವುದರಲ್ಲಿ ನಿಮ್ಮ ಸಲಹೆ ಕೋರುತ್ತೇನೆ. ರೂರಲ್‌ ಇಲೆಕ್ಟ್ರಿಫಿಕೇಷನ್‌ ಡಿಪಾಸಿಟ್‌ ಎಂದರೇನು. ಇದರಲ್ಲಿ ಹೂಡಿದರೆ ಆದಾಯತೆರಿಗೆ ಕೊಡಬೇಕಾಗಿಲ್ಲವೇ?

ಉತ್ತರ: ನೀವು ನಿವೇಶನ ಮಾರಾಟ ಮಾಡಿದಾಗ ಹಾಗೂ ಖರೀದಿಸುವಾಗ ಕೊಟ್ಟ ಹಣ ಇವೆರಡರ ಅಂತರಕ್ಕೆ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಬರುತ್ತದೆ. ಆದಾಯ ತೆರಿಗೆ ಬರುವುದಿಲ್ಲ. ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಸೆಕ್ಷನ್‌ 5ಇಸಿ ಅಡಿಯಲ್ಲಿ Rural Electrification Corporationನಲ್ಲಿ ಗರಿಷ್ಠ ₹ 50 ಲಕ್ಷಗಳ ತನಕ ಇರಿಸಿ, ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ವಿನಾಯತಿ ಪಡೆಯಬಹುದು. ಇದೇ ಮಾರ್ಗ ನಿಮಗೆ ಸೂಕ್ತವಾಗಿದೆ. REC ಎಂದರೆ ಇದೊಂದು ಕೇಂದ್ರ ಸರ್ಕಾರದ ಅಂಗ ಸಂಸ್ಥೆ. ಇಲ್ಲಿ ಹಣ ಹೂಡಲು ಭಯಪಡುವ ಅವಶ್ಯವಿಲ್ಲ. ಇದರಲ್ಲಿ ಹೂಡಿಕೆ ಮಾಡಿದರೆ ಇಲ್ಲಿ ತಿಳಿಸಿದಂತೆ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಕೊಡುವಂತಿಲ್ಲ. ರೂರಲ್‌ ಇಲೆಕ್ಟ್ರಿಫಿಕೇಷನ್‌ ಅಥವಾ ನ್ಯಾಷನಲ್‌ ಹೈವೇ ಅಥಾರಿಟಿ. ಈ ಎರಡೂ ಸಂಸ್ಥೆ ಭಾರತ ಸರ್ಕಾರದ ಅಂಗ ಸಂಸ್ಥೆಗಳಾಗಿದ್ದು, ನೀವು ಇವೆರೆಡರಲ್ಲಿ ಯಾವುದನ್ನೂ ಆರಿಸಿಕೊಳ್ಳಬಹುದು.

–ವಿಜಯಕುಮಾರ್‌, ವೈಟ್‌ಫೀಲ್ಡ್‌, ಬೆಂಗಳೂರು

ನಾನು ಬೆಂಗಳೂರಿನಲ್ಲಿ ಉಪಾಹಾರ ಮಂದಿರ (ಹೋಟೆಲ್‌) ಪ್ರಾರಂಭಿಸಬೇಕೆಂದಿದ್ದೇನೆ. ನನ್ನ ಬಳಿ ಇರುವ ಸ್ವಲ್ಪ ಹಣದಿಂದ ಇದು ಸಾಧ್ಯವಾಗಲಾರದು. ಬ್ಯಾಂಕ್‌ ಸಾಲ, ಬಡ್ಡಿದರ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿ.

ಉತ್ತರ: ಬ್ಯಾಂಕುಗಳು ಸಾಲಕೊಡುವ ಮುನ್ನ ನಿಮ್ಮ ಯೋಜನೆಯ ವಿವರಣೆ (Project Report) ಕೇಳುತ್ತವೆ ಹಾಗೂ ಯೋಜನೆ ಆರ್ಥಿಕವಾಗಿ ಸಾಧ್ಯವಾಗಬಹುದೇ (Economically Viable) ಎನ್ನುವುದನ್ನು ಪರಿಶೀಲಿಸುತ್ತವೆ. ವ್ಯಕ್ತಿಯು ಪ್ರಾರಂಭಿಸುವ ಯೋಜನೆಯಲ್ಲಿ ಹಣ ತೊಡಗಿಸಿದಾಗ ಯೋಜನೆ ಯಶಸ್ಸಾಗಿ, ಸಾಲ ಮರುಪಾವತಿಸಬೇಕು ಎನ್ನುವುದೇ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ನಿಮ್ಮ ಹಿಂದಿನ ಅನುಭವ (Previous Experience) ಅಷ್ಟೇ ಮುಖ್ಯವಾಗುತ್ತದೆ. ಇವೆಲ್ಲವೂ ಬ್ಯಾಂಕಿಗೆ ಮನದಟ್ಟಾದಲ್ಲಿ ಪ್ರಧಾನ ಮಂತ್ರಿಯವರ ‘ಮುದ್ರಾ’ ಯೋಜನೆಯಡಿಯಲ್ಲಿ ನೀವು ಸಾಲ ಪಡೆಯಬಹುದು. ಬಡ್ಡಿ ದರ ಶೇ 12. ಮರುಪಾವತಿಸಲು 60–80 ತಿಂಗಳ ಸಮಾನ ಕಂತು (ಇಎಂಐ ಕಂತು ಬಡ್ಡಿ ಸೇರಿ) ಕೊಡುತ್ತಾರೆ. ನೀವು ಈಗಲೇ ಖಾತೆ ಹೊಂದಿದ ಬ್ಯಾಂಕಿನಲ್ಲಿ ಹೆಚ್ಚಿನ ವಿಚಾರಗಳಿಗೆ ಸಂಪರ್ಕಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT