ಶೈಕ್ಷಣಿಕ ಆಟಿಕೆಯ ನವೋದ್ಯಮ ಸ್ಕೋಲಾ ಟಾಯ್ಸ್‌

7

ಶೈಕ್ಷಣಿಕ ಆಟಿಕೆಯ ನವೋದ್ಯಮ ಸ್ಕೋಲಾ ಟಾಯ್ಸ್‌

Published:
Updated:
ಶೈಕ್ಷಣಿಕ ಆಟಿಕೆಯ ನವೋದ್ಯಮ ಸ್ಕೋಲಾ ಟಾಯ್ಸ್‌

ಚಿಣ್ಣರ ಕಲಿಕೆಯಲ್ಲಿ ಆಟಿಕೆಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದರಲ್ಲೂ ಐದು ವರ್ಷದ ಒಳಗಿನ ಮಕ್ಕಳ ಮಾನಸಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತವೆ. 25 ವರ್ಷಗಳ ಹಿಂದೆ  ಗೀತಾ ಶ್ರೀಧರ್‌ ಅವರು ಆರಂಭಿಸಿದ್ದ ಶೈಕ್ಷಣಿಕ ಆಟಿಕೆಗಳ ತಯಾರಿಕೆಯ ಸಣ್ಣ ಉದ್ದಿಮೆ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ತನ್ನ ಛಾಪು ಬೀರಿದೆ. 21ನೇ ಶತಮಾನದ ಅಗತ್ಯಕ್ಕೆ ತಕ್ಕಂತೆ ಹೊಸ ಸ್ವರೂಪ ನೀಡಿ, ವಿದೇಶಗಳಿಗೂ ರಫ್ತು ಮಾಡುವ ಆಟಿಕೆಗಳ ತಯಾರಿಕೆ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಉದ್ದಿಮೆಗೆ ಗೀತಾ ಅವರ ಮಗಳು ಮೃದುಳಾ ಶ್ರೀಧರ್‌ ಅವರು ಈಗ  ಚಾಲನೆ ನೀಡಿದ್ದಾರೆ. ಸ್ಟಾರ್ಟ್‌ಅಪ್‌ ರೂಪದಲ್ಲಿ ಸ್ಕೋಲಾ ಟಾಯ್ಸ್‌ಗೆ ಮುನ್ನುಡಿ ಬರೆದಿರುವ ಅವರು  ವಹಿವಾಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಮರದಿಂದ ತಯಾರಿಸುವ ಸ್ಕೋಲಾ ಕಲಿಕಾ ಆಟಿಕೆಗಳು ಮಾಂಟೆಸ್ಸರಿ ಶಿಕ್ಷಣದಿಂದ ಪ್ರಭಾವಿತಗೊಂಡಿವೆ. ಮಕ್ಕಳ ಅಂತಃಪ್ರೇರಣೆ, ಭಾವನೆ, ಸಹಜ ಕುತೂಹಲ ಮತ್ತು ಹೊಸತನ್ನು ಕಲಿಯುವ ಹಂಬಲಕ್ಕೆ ಈ ಆಟಿಕೆಗಳು ನೀರೆರೆಯುತ್ತವೆ. ಮಕ್ಕಳು ಸ್ವಯಂ ಕಲಿಕೆಗೆ ಇವುಗಳು ಇಂಬು ನೀಡುತ್ತವೆ. ನೋಟ, ಧ್ವನಿ ಮತ್ತು ಸ್ಪರ್ಶದ ಮೂಲಕವೇ ಚಿಣ್ಣರ ಕಲಿಕೆ ವಿಶಿಷ್ಟವಾಗಿರುತ್ತದೆ. ಅದಕ್ಕೆ ಅನುಗುಣವಾಗಿಯೇ ಈ ಆಟಿಕೆಗಳನ್ನು ತಯಾರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಸ್ಪರ್ಶ ಸಂವೇದನೆ ಮೂಲಕ ಮಕ್ಕಳು ಸುಲಭವಾಗಿ ಕಲಿಯುವುದರಲ್ಲಿ ಸ್ಕೋಲಾ ನಂಬಿಕೆ ಇರಿಸಿದೆ. ಬಹು ಉದ್ದೇಶದ ಆಟಿಕೆಗಳಿಗಿಂತ ಮಕ್ಕಳು ಒಂದೇ ಉದ್ದೇಶದ ಆಟಿಕೆಗಳಿಂದ ಮಕ್ಕಳು ಹೆಚ್ಚು ವಿಷಯಗಳನ್ನು ಕಲಿತುಕೊಳ್ಳಲಿದ್ದಾರೆ ಎನ್ನುವುದು ಸ್ಕೋಲಾದ ನಂಬಿಕೆಯಾಗಿದೆ.

ಮಕ್ಕಳು ಕೈ ಮತ್ತು ಬೆರಳು ಬಳಸುವುದರಿಂದಲೇ ಅವರ ಬುದ್ಧಿಶಕ್ತಿ ಚೆನ್ನಾಗಿ ಬೆಳೆಯುತ್ತದೆ ಎನ್ನುವ ತತ್ವ ಆಧರಿಸಿಯೇ ಈ ಆಟಿಕೆಗಳನ್ನು ತಯಾರಿಸಲಾಗುತ್ತಿದೆ. ಈ ಆಟಿಕೆಗಳಲ್ಲಿ ಕೃತಕ ಬಣ್ಣ, ಪ್ಲಾಸ್ಟಿಕ್ ಬಳಕೆ ಇಲ್ಲವೇ ಇಲ್ಲ. 10 ವರ್ಷಗಳಿಂದ ಸಂಶೋಧನೆ ನಡೆಸಿ, ಮಕ್ಕಳಿಗೆ ಇಷ್ಟವಾಗುವ ಮತ್ತು ಹೆಚ್ಚು ಪ್ರಯೋಜನಕಾರಿ ಆಗುವ ಆಟಿಕೆ ರೂಪಿಸಲಾಗಿದೆ. ಸ್ಕೋಲಾ ಸಂಸ್ಥೆಯೇ ಆಟಿಕೆಗಳ ವಿನ್ಯಾಸ ರೂಪಿಸಿ, ತಯಾರಿಸುತ್ತದೆ. ಸದ್ಯಕ್ಕೆ 48 ಬಗೆಯ ಆಟಿಕೆಗಳಿವೆ. ಈಗ ಹೊಸದಾಗಿ 25 ಆಟಿಕೆಗಳನ್ನು ಪರಿಚಯಿಸಲಾಗುತ್ತಿದೆ. 800ಕ್ಕೂ ಹೆಚ್ಚು ವೈವಿಧ್ಯಮಯ ಆಟಿಕೆಗಳು ಇವೆ. ತಯಾರಿಕೆಯ ಪರಿಣತಿ, ಕಲಿಕೆಯ ಪ್ರಯೋಜನ ಮತ್ತು ಆಟಿಕೆಗಳ ವಿನ್ಯಾಸ – ಇಲ್ಲಿ ಬೆರೆತಿರುವುದು ಸ್ಕೋಲಾ ಆಟಿಕೆಗಳ ವೈಶಿಷ್ಟ್ಯವಾಗಿದೆ. ಈ ಆಟಿಕೆಗಳ ಬೆಲೆ ₹ 400 ರಿಂದ ಆರಂಭಗೊಂಡು ₹ 2,000ದವರೆಗೆ ಇದೆ. ಬಹಳ ವರ್ಷಗಳವರೆಗೆ ಬಾಳಿಕೆ ಬರುವಂತೆ ಇವುಗಳನ್ನು ತಯಾರಿಸಲಾಗಿದೆ.

ಗೀತಾ ಶ್ರೀಧರ್‌ (63) ಅವರು ತಮ್ಮ 38ನೇ ವಯಸ್ಸಿನಲ್ಲಿ (1992ರಲ್ಲಿ) ಚಿಣ್ಣರ ಕಲಿಕೆಗೆ ನೆರವಾಗಲು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ಶೈಕ್ಷಣಿಕ ಆಟಿಕೆಗಳ ತಯಾರಿಕೆಗೆ ಸಣ್ಣ ಪ್ರಮಾಣದಲ್ಲಿ ಚಾಲನೆ ನೀಡಿದ್ದರು. ಇಂತಹ ಆಟಿಕೆಗಳ ತಯಾರಿಕೆ ಮೂಲಕ ‘ಕಿಡೊ ಎಂಟರ್‌ಪ್ರೈಸಿಸ್‌’ ಅಸ್ತಿತ್ವಕ್ಕೆ ಬಂದಿತ್ತು.  ಮನೆಯಲ್ಲಿಯೇ ಈ ಆಟಿಕೆಗಳನ್ನು ತಯಾರಿಸಲು ಅವರು ಆರಂಭಿಸಿದ್ದರು. ಮಾಂಟೆಸ್ಸರಿ ಸ್ಕೂಲ್‌ಗಳಿಗೆ ಅವರು ಈ ಆಟಿಕೆಗಳನ್ನು ಪೂರೈಸುತ್ತಿದ್ದರು.

ಇವರ ಮಗಳು ಮೃದುಳಾ (41) ಅವರು ಕೋಲ್ಕತ್ತದ ಐಐಎಂನಲ್ಲಿ ಪದವಿ ಪಡೆದು ಮರಳಿದ ನಂತರ ಈ ಆಟಿಕೆಗಳ ತಯಾರಿಕೆ ವೇಗ ಪಡೆದಿತ್ತು. ಮೃದುಳಾ ಅವರ ಪತಿ ವಿ. ಕೆ. ಮಣಿಕಂದನ್‌ ಅವರೂ ಆನಂತರ ಈ ವಹಿವಾಟಿಗೆ ಕೈಜೋಡಿಸಿದರು. ಐದು ವರ್ಷದ ಒಳಗಿನ (ಪ್ರಿಸ್ಕೂಲ್‌) ಮಕ್ಕಳಿಗೂ ಇಂತಹ ಆಟಿಕೆಗಳ ಪ್ರಯೋಜನ ಇದೆ ಎಂದು ನಿರ್ಣಯಿಸಿದ ಇವರಿಬ್ಬರೂ 2012ರಲ್ಲಿ ಕ್ರೆಡೊ ಕಿಂಡರ್‌ಗಾರ್ಟನ್‌ ಸ್ಕೂಲ್‌ಗಳ ಶಿಕ್ಷಕರಿಗೆ ತರಬೇತಿ, ಪಠ್ಯ ರಚನೆ ಮತ್ತಿತರ ಅಗತ್ಯಗಳನ್ನು ಪೂರೈಸಲು ಮುಂದಾಗಿದ್ದರು. ಇದೇ ಉದ್ದೇಶಕ್ಕೆ ಪ್ರಾಯೋಗಿಕ ನೆಲೆಯಲ್ಲಿ ಶಾಲೆಯೊಂದನ್ನು ಆರಂಭಿಸಿದ್ದರು. ಇದೇ ಹೊತ್ತಿಗೆ ಮನೆಯಲ್ಲಿಯೂ ಮಕ್ಕಳ   ಆಟಿಕೆಗಳನ್ನು ಒದಗಿಸಿ ಎಂದು ಪಾಲಕರು ಬೇಡಿಕೆ ಮುಂದಿಡತೊಡಗಿದರು. ‘ಬಿಟುಬಿ’ಯಿಂದ ’ಬಿಟುಸಿ’ಗೆ ವಹಿವಾಟು ವಿಸ್ತರಿಸಲು ಇದೇ ಸರಿಯಾದ ಸಂದರ್ಭ ಎಂದು ಭಾವಿಸಿದ ಈ ದಂಪತಿ ಸ್ಕೋಲಾ ಬ್ರ್ಯಾಂಡ್‌ ಹೆಸರಿನಡಿ ಶೈಕ್ಷಣಿಕ ಆಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾದರು. ಈ ಪ್ರಯತ್ನಕ್ಕೆ ಅವರ ಸ್ನೇಹಿತ ನಿತೀಶ್‌ ಅಗರ್‌ವಾಲ್‌ ಅವರೂ ಕೈಜೋಡಿಸಿದರು.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ತಯಾರಿಕಾ ಘಟಕದಲ್ಲಿ 300ಕ್ಕೂ ಹೆಚ್ಚು ಜನರು ಈ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ. ಮನೆಯಲ್ಲಿಯೂ ಕಲಿಕೆಗೆ ಅವಕಾಶ ಇರುವಂತಹ ಶೈಕ್ಷಣಿಕ ಪರಿಕರಗಳು ಬೇಕು ಎನ್ನುವ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ.

ಮೊದಲ ಬಾರಿಗೆ ಜಯನಗರದಲ್ಲಿ ಸಂಸ್ಥೆಯ ಸ್ವಂತ ಮಳಿಗೆ ಆರಂಭಿಸಲಾಗಿದೆ. ಕ್ರಮೇಣ ಮಳಿಗೆಗಳ ಸಂಖ್ಯೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಸಂಸ್ಥೆಯ ಅಂತರ್ಜಾಲ ತಾಣದಿಂದ (https://www.skola.toys) ಮತ್ತು ಇತರ ಇ–ಕಾಮರ್ಸ್‌ ತಾಣಗಳಿಂದಲೂ ಖರೀದಿಸಬಹುದಾಗಿದೆ. ಇವುಗಳು ಮಕ್ಕಳ ಪಾಲಿಗೆ ಸ್ವಯಂ ಕಲಿಕೆಯ ಸಾಮಗ್ರಿಯಾಗಿದೆ. ಮಕ್ಕಳು ತಪ್ಪುಗಳನ್ನು ಮಾಡುತ್ತಲೇ ಕಲಿಯುವ ರೀತಿಯಲ್ಲಿಯೇ ಈ ಕಲಿಕಾ ಆಟಿಕೆಗಳನ್ನು ರೂಪಿಸಲಾಗಿದೆ. ದೊಡ್ಡವರ ಮೇಲ್ವಿಚಾರಣೆ ಇಲ್ಲದೇ ಕಲಿಯುವ ಬಗೆಯಲ್ಲಿ ಈ ಆಟಿಕೆಗಳಿವೆ. ಮಕ್ಕಳ ಮನಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸ್ವತಂತ್ರ ಅಧ್ಯಯನ ಮತ್ತು ಸಂಶೋಧನೆ ಆಧರಿಸಿ ಈ ಆಟಿಕೆಗಳ ವಿನ್ಯಾಸ  ರೂಪಿಸಲಾಗಿದೆ. ಈಗ ದೊಡ್ಡ ಪ್ರಮಾಣದಲ್ಲಿ ಶೈಕ್ಷಣಿಕ ಆಟಿಕೆಗಳನ್ನು ತಯಾರಿಸುವ ಆಲೋಚನೆ ಹಾಕಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಸ್ಕೋಲಾ ಬ್ರ್ಯಾಂಡ್‌ ಅನ್ನು  ದೇಶದ ಅತಿದೊಡ್ಡ ಶೈಕ್ಷಣಿಕ ಆಟಿಕೆ ತಯಾರಿಕಾ ಸಂಸ್ಥೆಯನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.  25 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶೈಕ್ಷಣಿಕ ಉದ್ದೇಶದ ಆಟಿಕೆಗಳ ತಯಾರಿಕೆಯ ಲಾಭವನ್ನೇ ಹೊಸ ಉದ್ದಿಮೆಗೆ ಬಂಡವಾಳ ರೂಪದಲ್ಲಿ ತೊಡಗಿಸಲಾಗಿದೆ.

‘ವರ್ಷಕ್ಕೆ 25 ಸಾವಿರಕ್ಕಿಂತ ಕಡಿಮೆ ಶುಲ್ಕ ವಿಧಿಸುವ ಖಾಸಗಿ ಶಾಲೆಗಳಲ್ಲಿ ಸಂಸ್ಥೆಯ ಆಟಿಕೆಗಳು, ಪಠ್ಯವಿಷಯದ ಕುರಿತು ಅಲ್ಲಿನ ಬೋಧಕರಿಗೆ ತರಬೇತಿ ನೀಡಲೂ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.  ಸಮಾಜದ ಬಹುತೇಕ ಮಕ್ಕಳು ಇಂತಹ ಶಾಲೆಗಳಲ್ಲಿಯೇ ಕಲಿಯುತ್ತಾರೆ. ಹೀಗಾಗಿ ಹೆಚ್ಚು ಮಕ್ಕಳಿಗೆ ಈ ಕಲಿಕಾ ಪರಿಕರಗಳ ಪ್ರಯೋಜನ ತಲುಪಿಸಲು ಸಾಧ್ಯ. ಸಾಮಾಜಿಕ ಉದ್ಯಮಶೀಲತೆ ತತ್ವದಡಿ ಸಮಾಜಕ್ಕೆ ಒಳಿತು ಮಾಡುವುದರ ಜತೆಗೆ ಲಾಭದಾಯಕ ವಹಿವಾಟು

ನಡೆಸುವುದೂ ಇವರ ಉದ್ದೇಶವಾಗಿದೆ. ಚಾರಿಟಿ ಮತ್ತು ಉದ್ದಿಮೆ – ಇವೆರೆಡರ ಮಧ್ಯೆ ನಾವು ಇದ್ದೇವೆ’ ಎಂದು ಸ್ಕೋಲಾದ ಸಹ ಸ್ಥಾಪಕಿ ಮೃದುಲಾ ಶ್ರೀಧರ್‌ ಹೇಳುತ್ತಾರೆ.

**

‌ಪರಿಸರ ಸ್ನೇಹಿ

ಮಕ್ಕಳು ಪ್ಲಾಸ್ಟಿಕ್‌ನಂತಹ ಕೃತಕ ಸಾಮಗ್ರಿಗಳಿಗಿಂತ ನೈಸರ್ಗಿಕ ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ. ಅದೇ ಕಾರಣಕ್ಕೆ ಸ್ಕೋಲಾ ಆಟಿಕೆಗಳನ್ನು ಕಟ್ಟಿಗೆಯಿಂದ ಮಾತ್ರ ತಯಾರಿಸಲಾಗುತ್ತಿದೆ.  ಹೀಗಾಗಿ ಈ ಆಟಿಕೆಗಳು ಪರಿಸರ ಸ್ನೇಹಿಯೂ ಆಗಿರುತ್ತವೆ. ಈ ಆಟಿಕೆಗಳು ಅಂತರರಾಷ್ಟ್ರೀಯ ಸುರಕ್ಷತೆ ಮಾನದಂಡಕ್ಕೆ ಅನುಗುಣವಾಗಿರುತ್ತವೆ. ಶಾಲಾ ಪೂರ್ವ ಶೈಕ್ಷಣಿಕ ಪರಿಕರ ಮತ್ತು ಪಠ್ಯ ವಿಷಯದಲ್ಲಿನ ಅಪಾರ ಅನುಭವ ಆಧರಿಸಿ ಈ ಆಟಿಕೆಗಳನ್ನು ತಯಾರಿಸಲಾಗುತ್ತಿದೆ.  ಗರಿಷ್ಠ ಗುಣಮಟ್ಟದ ಶೈಕ್ಷಣಿಕ ಕಲಿಕಾ ಸಾಮಗ್ರಿಗಳನ್ನು 25 ವರ್ಷಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಪೂರೈಸುತ್ತಿರುವ ಕ್ರೀಡೊ ಸಂಸ್ಥೆಯು ಈಗ ತನ್ನ ವಹಿವಾಟನ್ನು ‘ಬಿಟುಬಿ’ಯಿಂದ ‘ಬಿಟುಸಿ’ ಮಾರುಕಟ್ಟೆಗೆ ವಿಸ್ತರಿಸಲು ಮುಂದಾಗಿದೆ. ಪ್ರೀಸ್ಕೂಲ್‌ಗೆ ತೆರಳುವ ಮಕ್ಕಳು ಶಾಲೆಗಿಂತ ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ದಿನದ ಬಹು ಸಮಯದವರೆಗೆ ಅವರನ್ನು ಚಟುವಟಿಕೆಯಿಂದ ಇರಿಸಲು ಈ ಆಟಿಕೆಗಳು ನೆರವಾಗುತ್ತವೆ.ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಬಳಕೆಯಾಗುತ್ತಿರುವ ಕ್ರೀಡೊ ಬ್ರ್ಯಾಂಡ್‌ನ ಆಟಿಕೆಗಳು ಮನೆಯಲ್ಲಿಯೂ ಬಳಸಲು ಬೇಕು ಎಂದು ಪಾಲಕರಿಂದ ಬೇಡಿಕೆ ಹೆಚ್ಚುತ್ತಿರುವುದರಿಂದ ಸಂಸ್ಥೆ ಈಗ ಸ್ಕೋಲಾ (skola) ಬ್ರ್ಯಾಂಡ್‌ ಹೆಸರಿನಡಿ ಶೈಕ್ಷಣಿಕ ಆಟಿಕೆಗಳನ್ನು ಪರಿಚಯಿಸಲು ಮುಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry