ಭದ್ರತೆಗೆ 3 ಸಾವಿರ ಪೊಲೀಸರು

7
ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಿ, ರಾಷ್ಟ್ರಪತಿ ಆಗಮನ ಖಚಿತ ಇಲ್ಲ: ಡಿಜಿಪಿ

ಭದ್ರತೆಗೆ 3 ಸಾವಿರ ಪೊಲೀಸರು

Published:
Updated:
ಭದ್ರತೆಗೆ 3 ಸಾವಿರ ಪೊಲೀಸರು

ಶ್ರವಣಬೆಳಗೊಳ: ಮುಂದಿನ ತಿಂಗಳು ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಶಾಂತಿ ಹಾಗೂ ಸುಗಮವಾಗಿ ಆಚರಿಸಲು ಪೊಲೀಸ್ ಇಲಾಖೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ತಿಳಿಸಿದರು.

ಕ್ಷೇತ್ರಕ್ಕೆ ಭೇಟಿ ನೀಡಿ ಬಂದೋಬಸ್ತ್ ಸಿದ್ಧತೆ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಮಾತನಾಡಿದರು.

‘ದೊಡ್ಡಮಟ್ಟದ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಸಜ್ಜಾಗಿದ್ದೇವೆ. ಬಂದೋಬಸ್ತ್ ಬಗ್ಗೆ ಈಗಾಗಲೇ ಅನೇಕ ತಂಡಗಳೂ ಭೇಟಿ ಕೊಟ್ಟು ಅವಲೋಕನ ನಡೆಸಿವೆ. ವಾಹನಗಳ ಪಾರ್ಕಿಂಗ್, ಊಟದ ವ್ಯವಸ್ಥೆ, ಶೌಚಾಲಯ, ಯಾತ್ರಾರ್ಥಿಗಳಿಗೆ ಸ್ನಾನದ ಏರ್ಪಾಡು, ಪ್ರವಾಸಿಗರು ಮತ್ತು ಜನ ಸಂಚಾರದ ಅನುಕೂಲಕ್ಕಾಗಿ ನಾಮಫಲಕ ಅಳವಡಿಕೆ ಬಗ್ಗೆಯೂ ಅಧ್ಯಯನ ನಡೆಸಿದ್ದೇನೆ’ ಎಂದರು.

ಏನೆಲ್ಲಾ ಸೌಲಭ್ಯ ಬೇಕು ಎಂಬ ಬಗ್ಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಜತೆ ಪ್ರತ್ಯೇಕ ಮಾತುಕತೆ ನಡೆಸಲಾಗಿದೆ ಎಂದರು.

ಫೆ. 7ರಿಂದ ಆರಂಭವಾಗುವ ಮಸ್ತಕಾಭಿಷೇಕ ಭದ್ರತೆಗೆ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಯಾವ್ಯಾವ ದಿನದಲ್ಲಿ ಯಾತ್ರಾರ್ಥಿಗಳು, ಪ್ರವಾಸಿಗರು ಎಷ್ಟು ಸಂಖ್ಯೆ ಬರುತ್ತಾರೋ ಅದಕ್ಕೆ ತಕ್ಕಂತೆ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಭದ್ರತೆಗಾಗಿ ನಾಗರಿಕ, ಕೆಎಸ್ಆರ್‌ಪಿ ತುಕಡಿ, ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ ಸಹ ಇರಲಿದೆ ಎಂದು ವಿವರಿಸಿದರು.

ವಿಶೇಷವಾಗಿ ಅಪರಾಧ ತಡೆ ಮತ್ತು ಪತ್ತೆಗೆ ಅನುಕೂಲವಾಗುವಂತೆ ಹೆಚ್ಚು ಕಡೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು, ಅಲ್ಲದೆ ಬೈನಾಕ್ಯುಲರ್ ಸಹ ಇರಲಿದೆ. ಬಸ್ ನಿಲ್ದಾಣ ಮೊದಲಾದ ಕಡೆ ಜೇಬು ಕಳ್ಳರು, ಸರಗಳ್ಳತನ, ಪಾರ್ಕಿಂಗ್ ಸ್ಥಳದಲ್ಲಿ ವಾಹನ ಕಳವು ಮೊದಲಾದ ಅಪರಾಧ ಪ್ರಕರಣ ತಡೆಯುವುದಕ್ಕಾಗಿಯೇ ಪ್ರತ್ಯೇಕ ಅಧಿಕಾರಿ ನೇಮಕ ಮಾಡಲಾಗುವುದು. ಸಂಚಾರಿ ವ್ಯವಸ್ಥೆಯಲ್ಲಿ ಯಾವುದೇ ಕಿರಿಕಿರಿ, ಅಡೆತಡೆ ಉಂಟಾಗದಂತೆ ಬೆಂಗಳೂರಿನಿಂದಲೇ ಸಂಚಾರ ವಿಭಾಗದ ಅಧಿಕಾರಿಗಳು ಬರಲಿದ್ದಾರೆ ಎಂದು ಹೇಳಿದರು.

ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾಹಿತಿ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಹೋತ್ಸವದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿ ಭಾಗಿಯಾಗುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ಬರುವುದು ಖಾತ್ರಿಯಾದರೆ ಭದ್ರತೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು. ವಿಂಧ್ಯಗಿರಿ ಬೆಟ್ಟಕ್ಕೆ ಹೋಗುವವರಿಗೆ ಮಠ ಹಾಗೂ ಜಿಲ್ಲಾಡಳಿತದ ಕಡೆಯಿಂದ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕದ ಕಳಶ ಖರೀದಿ ಮಾಡಿರುವವರಿಗೆ ಬೇರೆ ರೀತಿಯ ಕಲರ್ ಕೋಟಿಂಗ್ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂಥ್, ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶರಪೂರ್‌ವಾಡ್‌ ಇದ್ದರು.

ವಿಂಧ್ಯಗಿರಿ ಏರಿದ ನೀಲಮಣಿ ರಾಜು

ಅಧಿಕಾರಿಗಳೊಂದಿಗೆ ವಿಂಧ್ಯಗಿರಿ ಏರಿದ ಡಿಜಿಪಿ ನೀಲಮಣಿ ಎನ್.ರಾಜು, ಬಾಹುಬಲಿ ಪದತಳದಲ್ಲಿ ಬೃಹನ್ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬ ಸದಸ್ಯರ ಗೋತ್ರ, ನಕ್ಷತ್ರ ಹೇಳಿ ಸಂಕಲ್ಪ ಮಾಡಿಸಿದರು. ಈ ವೇಳೆ ತಮ್ಮ ಕಿಸೆಯಲ್ಲಿ ಹಣ ಇಲ್ಲದ ಕಾರಣ, ಬೇರೊಬ್ಬರಿಂದ ₹ 500 ಹಣ ಪಡೆದು ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಿದರು. ಬಳಿಕ ಹೈಟೆಕ್ ಅಟ್ಟಣಿಗೆ ವೀಕ್ಷಣೆ ಮಾಡಿ, ಗಟ್ಟಿಮುಟ್ಟಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry