ಮಜೀದ್‌, ಶೇಖರ್‌ ಕಾರ್ಯಕ್ಕೆ ಪ್ರಶಂಸೆ

7
ತಲಾ ₹ 50,000 ನೀಡಿ ಗೌರವಿಸಿದ ವಕೀಲ

ಮಜೀದ್‌, ಶೇಖರ್‌ ಕಾರ್ಯಕ್ಕೆ ಪ್ರಶಂಸೆ

Published:
Updated:
ಮಜೀದ್‌, ಶೇಖರ್‌ ಕಾರ್ಯಕ್ಕೆ ಪ್ರಶಂಸೆ

ಮಂಗಳೂರು: ಕಾಟಿಪಳ್ಳ ದೀಪಕ್‌ ರಾವ್‌ ಮತ್ತು ಆಕಾಶಭವನದ ಅಬ್ದುಲ್‌ ಬಶೀರ್‌ ಮತೀಯ ದ್ವೇಷದಲ್ಲಿ ಕೊಲೆಗೀಡಾದ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿ, ಪ್ರಾಣ ಉಳಿಸಲು ಯತ್ನಿಸಿ ಸೌಹಾರ್ದ ಮೆರೆದ ಅಬ್ದುಲ್‌ ಮಜೀದ್‌ ಹಾಗೂ ಶೇಖರ್‌ ಕುಲಾಲ್‌ ಅವರಿಗೆ ಕಲಬುರ್ಗಿಯ ವಕೀಲರೊಬ್ಬರು ತಲಾ ₹ 50 ಸಾವಿರ ನೀಡಿ ಗೌರವಿಸಿದ್ದಾರೆ.

ಕಲಬುರ್ಗಿಯ ವಕೀಲ ಪಿ.ವಿಲಾಸ್‌ಕುಮಾರ್‌ ಅವರು ಕಳುಹಿಸಿದ್ದ ₹ 50 ಸಾವಿರ ಮೊತ್ತದ ಚೆಕ್‌ ಹಾಗೂ ಪ್ರಶಂಸಾ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ಅವರು ಮಂಗಳವಾರ ಮಜೀದ್‌ ಮತ್ತು ಶೇಖರ್‌ ಅವರಿಗೆ ಹಸ್ತಾಂತರ ಮಾಡಿದರು. ಮಂಗಳೂರು ನಗರ ಕಾನೂನು ಸುವ್ಯವಸ್ಥೆ ಡಿಸಿ‍ಪಿ ಹನುಮಂತರಾಯ ಉಪಸ್ಥಿತರಿದ್ದರು.

‘ದಕ್ಷಿಣ ಕನ್ನಡ ಜಿಲ್ಲೆ ಮತೀಯ ದ್ವೇಷದಿಂದ ಸುಡುತ್ತಿರುವ ಸಂದರ್ಭದಲ್ಲಿ ಮಜೀದ್‌ ಮತ್ತು ಶೇಖರ್‌ ಮಾಡಿರುವ ಕೆಲಸಗಳು ಅನನ್ಯವಾದವು. ಇತರೆ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಜೀವನ್ಮರಣದ ನಡುವೆ ಹೋರಾಡುತ್ತಿರುವಾಗ ಅವರ ನೆರವಿಗೆ ಬಂದಿರುವುದು ಶ್ಲಾಘನೀಯ’ ಎಂದು ವಿಲಾಸ್‌ಕುಮಾರ್‌ ಪತ್ರದಲ್ಲಿ ತಿಳಿಸಿದ್ದಾರೆ.

800 ಕಿ.ಮೀ. ದೂರದವರೆಗೆ ಪ್ರಯಾಣ ಮಾಡಿಕೊಂಡು ಬರಲು ಸಾಧ್ಯವಾಗದಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದ ವಕೀಲರು, ಚೆಕ್‌ ಮತ್ತು ಪತ್ರವನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರು. ಪುರಸ್ಕಾರದ ಮೊತ್ತ ಸ್ವೀಕರಿಸಲು ನಿರಾಕರಿಸಿದಲ್ಲಿ ಅವರು ಬಯಸುವಂತಹ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಗೆ ಬಳಸಲು ಕೋರಿದ್ದರು.

ಜೀವ ಉಳಿಸಲಾಗದ ಕೊರಗು: ‘ಏಳು ವರ್ಷಗಳಿಂದ ದೀ‍ಪಕ್ ನನ್ನ ಜೊತೆಗಿದ್ದ. ಹಲ್ಲೆ ನಡೆದಾಗ ಕೂಗಿಕೊಳ್ಳುತ್ತಲೇ ಮನೆಯಿಂದ ಓಡಿಬಂದೆ. ಆತನ ಜೀವ ಉಳಿಸಲು ನನ್ನಿಂದ ಆಗಲಿಲ್ಲ. ಈಗ ಈ ಗೌರವ ನನಗೆ ಬೇಕಿತ್ತಾ ಎಂದು ಅನಿಸುತ್ತಿದೆ’ ಎಂದು ಮಜೀದ್‌ ಭಾವುಕರಾದರು.

ಶೇಖರ್‌ ಮಾತನಾಡಿ, ‘ನನ್ನ ಬಳಿ ಆಂಬುಲೆನ್ಸ್‌ ಇದೆ. ಬಶೀರ್‌ ಕೊಲೆಯಾದ ದಿನ ನಾನು ಕೊಟ್ಟಾರ ಚೌಕಿಗೆ ಬರುತ್ತಿದ್ದಾಗ ಯುವಕನೊಬ್ಬ ಗಾಬರಿಯಲ್ಲಿ ಮೊಬೈಲ್‌ನಿಂದ ಪೊಲೀಸರಿಗೆ ಕರೆ ಮಾಡುತ್ತಿದ್ದ. ಇಳಿದು ನೋಡಿದಾಗ ಬಶೀರ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣಕ್ಕೆ ಅವರ ಜೀವ ಉಳಿಸಬೇಕೆಂಬ ಆಶಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry