ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು ಸ್ಮಾರಕ: ಕಾಮಗಾರಿಗೆ ಅವಕಾಶ ಕೊಡಿ

ರೈತರಿಗೆ ಭಾರತಿ ವಿಷ್ಣುವರ್ಧನ್‌ ಮನವಿ
Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಗುರುತಿಸಿರುವ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ಭಾರತಿ ವಿಷ್ಣುವರ್ಧನ್‌ ಮಂಗಳವಾರ ಜಿಲ್ಲಾಧಿಕಾರಿ ಡಿ.ರಂದೀಪ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಮಾರು 40 ನಿಮಿಷ ಮಾತುಕತೆ ನಡೆಯಿತು. ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ‘ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸ್ಮಾರಕ ನಿರ್ಮಾಣ ಕೆಲಸ ನನೆಗುದಿಗೆ ಬಿದ್ದಿದೆ. ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯುವಂತೆ ರೈತರಲ್ಲಿ ಮನವಿ ಮಾಡಿಕೊಳ್ಳುವೆ’ ಎಂದು ಹೇಳಿದರು.

‘ತಡೆಯಾಜ್ಞೆ ಆದೇಶವನ್ನು ಹೈಕೋರ್ಟ್‌ ವಾಪಸ್‌ ತೆಗೆದುಕೊಂಡರೆ ಸ್ಮಾರಕ ನಿರ್ಮಾಣದ ಕೆಲಸ ಶುರುಮಾಡಲು ಸುಲಭವಾಗುತ್ತದೆ. ಹೈಕೋರ್ಟ್‌ ಮೊರೆಹೋಗಿರುವ ರೈತರ ಜತೆ ಮಾತನಾಡುತ್ತೇನೆ. ರೈತರು ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ’ ಎಂದರು.

‘ರೈತರು ಕೂಡಾ ವಿಷ್ಣು ಅಭಿಮಾನಿಗಳಾಗಿದ್ದಾರೆ. ಸ್ಮಾರಕ ನಿರ್ಮಾಣ ಪೂರ್ಣಗೊಂಡ ಬಳಿಕ ಕೆಲಸ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದೇನೆ. ಅವರು ಮನಸ್ಸು ಮಾಡಿ ಕೆಲಸ ಶುರುಮಾಡಲು ಅವಕಾಶ ಮಾಡಿಕೊಟ್ಟರೆ ಎಲ್ಲರಿಗೂ ಸಂತಸವಾಗುತ್ತದೆ’ ಎಂದು ಭಾರತಿ ತಿಳಿಸಿದರು.

‘ವಿವಾದವನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಕೋರಲು ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದೇನೆ. ಭೂಮಿ ಕಳೆದುಕೊಂಡ ರೈತರಿಗೆ ಬೇರೆ ಕಡೆ ಜಮೀನು ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದರು.
***
ಏನಿದು ವಿವಾದ

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೈಸೂರು ಸಮೀಪ ಎಚ್.ಡಿ.ಕೋಟೆ ರಸ್ತೆಯ ಉದ್ಬೂರಿನಲ್ಲಿ ಜಾಗ ಗುರುತಿಸಿ ಶಂಕುಸ್ಥಾಪನೆ ನಡೆಸಲಾಗಿತ್ತು. ಆದರೆ ಕಾಮಗಾರಿ ಅರಂಭಗೊಂಡ ಕೆಲ ದಿನಗಳಲ್ಲೇ ಜಮೀನಿನ ರೈತರು ಹೈಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.

ಸ್ಮಾರಕ ನಿರ್ಮಾಣಕ್ಕೆ ಗುರುತಿಸಿರುವ ಜಮೀನು ಸರ್ಕಾರಕ್ಕೆ ಸೇರಿಲ್ಲ. ರೈತರ ಜಮೀನಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ರೈತರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT