ಕೇಜ್ರಿವಾಲ್‌ ಮನೆಯಲ್ಲಿ ಎಎಪಿ–ಬಿಜೆಪಿ ಕಿತ್ತಾಟ

7
‘ಆಪ್‌’ಗಳ ವಿರುದ್ಧ ಹಲ್ಲೆ ಆರೋಪ: ಸಭೆಯಿಂದ ಬಿಜೆಪಿ ನಿಯೋಗ ಹೊರಕ್ಕೆ

ಕೇಜ್ರಿವಾಲ್‌ ಮನೆಯಲ್ಲಿ ಎಎಪಿ–ಬಿಜೆಪಿ ಕಿತ್ತಾಟ

Published:
Updated:
ಕೇಜ್ರಿವಾಲ್‌ ಮನೆಯಲ್ಲಿ ಎಎಪಿ–ಬಿಜೆಪಿ ಕಿತ್ತಾಟ

ನವದೆಹಲಿ: ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಾಯಕರ ಜಟಾಪಟಿಯಿಂದಾಗಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅಧಿಕೃತ ನಿವಾಸ ಮಂಗಳವಾರ ರಣರಂಗವಾಗಿತ್ತು.

ದೆಹಲಿ ಮಹಾನಗರ ಪಾಲಿಕೆ ಕೈಗೊಂಡಿರುವ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತು ಚರ್ಚಿಸಲು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ನೇತೃತ್ವದ ನಿಯೋಗವು ಕೇಜ್ರಿವಾಲ್‌ ನಿವಾಸಕ್ಕೆ ತೆರಳಿದ್ದಾಗ ಅಲ್ಲಿ ಮಾರಾಮಾರಿ ನಡೆದಿದೆ.

ಮುಖ್ಯಮಂತ್ರಿ ನಿವಾಸದಲ್ಲಿದ್ದ ಎಎಪಿ ಶಾಸಕರು, ಗೂಂಡಾಗಳು ಮತ್ತು ಬೌನ್ಸರ್‌ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸಭೆ ಬಹಿಷ್ಕರಿಸಿ ಅರ್ಧದಲ್ಲಿಯೇ ಹೊರ ನಡೆದರು.

ನಿಯೋಗದಲ್ಲಿದ್ದ ಬಿಜೆಪಿಯ ಮಹಿಳಾ ಮೇಯರ್‌ಗಳಾದ ಪ್ರೀತಿ ಅಗರ್‌ವಾಲ್‌ ಮತ್ತು ನೀಮಾ ಭಗತ್‌ ಮೇಲೆ ಎಎಪಿ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಂದರ್‌ ಗುಪ್ತಾ ದೂರು ನೀಡಿದ್ದಾರೆ. ದೂರಿನಲ್ಲಿ ಎಎಪಿಯ ನಾಲ್ವರು ಶಾಸಕರ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ.

ಹಲ್ಲೆ ನಡೆಸುವಂತೆ ಎಎಪಿ ಶಾಸಕರಿಗೆ ಕೇಜ್ರಿವಾಲ್‌ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು, ಮೊಬೈಲ್‌ನಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ಪ್ರದರ್ಶಿಸಿದರು.

ಕಾರ್ಯಾಚರಣೆ ವಿರುದ್ಧ ‘ಸುಪ್ರೀಂ’ಗೆ ಮೊರೆ: ಬಿಜೆಪಿ ಮಾಡಿರುವ ಆರೋಪಗಳನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಕೇಜ್ರಿವಾಲ್‌ ತಳ್ಳಿ ಹಾಕಿದ್ದಾರೆ.

‘ಎಎಪಿಯ ಯಾವುದೇ ಶಾಸಕ ಬಿಜೆಪಿ ನಾಯಕರ ಜತೆ ಅಸಭ್ಯವಾಗಿ ನಡೆದುಕೊಂಡಿದ್ದು ಸಾಬೀತಾದರೆ ಅವರನ್ನು ಪಕ್ಷದಿಂದ ಹೊರ ಹಾಕುತ್ತೇನೆ’ ಅವರು ಸವಾಲು ಹಾಕಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ದೆಹಲಿ ಮಹಾನಗರ ಪಾಲಿಕೆ ಕೈಗೊಂಡಿರುವ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆಯಾಜ್ಞೆ ಕೋರಿ ಎಎಪಿ ಸರ್ಕಾರ ಇದೇ ವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ತೀರ್ಮಾನಿಸಿದೆ ಎಂದರು.

ತೆರವು ಕಾರ್ಯಾಚರಣೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

***

‘ಆಮ್‌ ಆದ್ಮಿ ಅಲ್ಲ, ನಗರದ ನಕ್ಸಲೀಯರು’

‘ಎಎಪಿ ಸರ್ಕಾರ ನಗರದ ನಕ್ಸಲೀಯರಂತೆ ವರ್ತಿಸುತ್ತಿದೆ’ ಎಂದು ಮನೋಜ್‌ ತಿವಾರಿ ಆರೋಪಿಸಿದ್ದಾರೆ.

‘ಹೂಗುಚ್ಛ ನೀಡಿ ಬಿಜೆಪಿಯ ನಿಯೋಗವನ್ನು ಸ್ವಾಗತಿಸಿದ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ನಂತರ ಪಕ್ಷದ ಶಾಸಕರನ್ನು ಛೂಬಿಟ್ಟು ಹಲ್ಲೆ ನಡೆಸಿದರು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದರ್‌ ಗುಪ್ತಾ ಘಟನೆಯ ನಂತರ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ.

‘ಮಹಾತ್ಮ ಗಾಂಧಿ ಪುಣ್ಯತಿಥಿಯಂದು ಬಿಜೆಪಿ ನಾಯಕರ ಮೇಲೆ ಹಲ್ಲೆ ನಡೆಸುವ ಮೂಲಕ ಕೇಜ್ರಿವಾಲ್‌ ಅವರು ಮಹಾತ್ಮನಿಗೆ ಗೌರವ ಸಲ್ಲಿಸಿದ್ದಾರೆ’ ಎಂದು ಅವರು ಲೇವಡಿ ಮಾಡಿದ್ದಾರೆ.

‘ಎಎಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಲ್ಲಿ ನಂಬುಗೆ ಹೊರಟು ಹೋಗಿದೆ. ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಪರಿಹಾರ ಕೋರುತ್ತೇವೆ’ ಎಂದು ಬಿಜೆಪಿ ನಿಯೋಗ ಹೇಳಿದೆ.

ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತು ರಾಮಲೀಲಾ ಮೈದಾನದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿ ಕೇಜ್ರಿವಾಲ್‌ ಅವರಿಗೆ ಪತ್ರ ಬರೆಯುವುದಾಗಿ ಮನೋಜ್‌ ತಿವಾರಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry