ರೈತರಿಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌

7

ರೈತರಿಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌

Published:
Updated:
ರೈತರಿಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌

ಕೋಲ್ಕತ್ತ : ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ರೈತರಿಗೂ ಕ್ರೆಡಿಟ್‌ ಕಾರ್ಡ್‌ ನೀಡಲು ಮುಂದಾಗಿದೆ.

‘ದೇಶದ ರೈತ ಸಮುದಾಯದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಕೆ ಸಂಸ್ಕೃತಿ ಹೆಚ್ಚಿಸುವ ಉದ್ದೇಶಕ್ಕೆ ಬ್ಯಾಂಕ್‌ನ ಅಂಗಸಂಸ್ಥೆಯಾಗಿರುವ ಎಸ್‌ಬಿಐ ಕಾರ್ಡ್‌ ಆ್ಯಂಡ್‌ ಪೇಮೆಂಟ್ಸ್‌ ಸರ್ವಿಸಸ್‌ ಮೂಲಕ ಈ ಸೌಲಭ್ಯ ಒದಗಿಸಲಾಗುವುದು’ ಎಂದು ಬ್ಯಾಂಕ್‌ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

‘ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ ರೈತರಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸಲಾಗಿದೆ. ಇದರ ಯಶಸ್ಸು ಆಧರಿಸಿ ಆನಂತರ ದೇಶದಾದ್ಯಂತ ವಿಸ್ತರಿಸಲಾಗುವುದು. ಇದು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಿಂತ (ಕೆಸಿಸಿ) ಭಿನ್ನವಾಗಿರಲಿದೆ. ಸರಕು ಮತ್ತು ಸೇವೆಗಳ ಖರೀದಿಗೆ ಕಾರ್ಡ್‌ ಬಳಸುವ ರೈತರಿಗೆ ಮೊತ್ತ ಪಾವತಿಸಲು 40 ದಿನಗಳ ಕಾಲಾವಕಾಶ ಒದಗಿಸಲಾಗಿರುತ್ತದೆ.  ಇತರ ಕಾರ್ಡ್‌ಗಳಿಗೆ ಅನ್ವಯವಾಗುವ ಬಡ್ಡಿ ದರವು ರೈತರಿಗೂ ಅನ್ವಯವಾಗಲಿದೆ.

‘ಆದರೆ, ಬಾಕಿ ಪಾವತಿಸದ ಸಂದರ್ಭದಲ್ಲಿ ದಂಡದ ಮೊತ್ತ ಇತರ ಕ್ರೆಡಿಟ್‌ ಕಾರ್ಡ್‌ಗಳಿಗಿಂತ ಕಡಿಮೆ ಇರಲಿದೆ. ಕ್ರೆಡಿಟ್‌ ಕಾರ್ಡ್‌ನಲ್ಲಿ ಒದಗಿಸಿರುವ ಸಾಲದ ಮೊತ್ತದ ಶೇ 20ರಷ್ಟನ್ನು ಗ್ರಾಹಕ ಸರಕುಗಳ ಖರೀದಿಗೆ ಮತ್ತು ಉಳಿದ ಮೊತ್ತವನ್ನು ಕೃಷಿ ಚಟುವಟಿಕೆಯಲ್ಲಿ ಬಳಕೆಯಾಗುವ ಕಚ್ಚಾ ಸರಕು ಖರೀದಿಗೆ ಬಳಸಬೇಕಾಗುತ್ತದೆ’ ಎಂದರು.

ರಜನೀಶ್‌ ಕುಮಾರ್‌ ಅವರು ಈ ಸಂದರ್ಭದಲ್ಲಿ, ‘ಪೂರ್ತಿ ಫಾರ್ಮ್‌ ಕಾರ್ಟ್‌ ಮತ್ತು ಡೀಲರ್‌ ಬಂಧು’ ಮೊಬೈಲ್‌ ಆ್ಯಪ್‌ಗಳಿಗೆ ಚಾಲನೆ ನೀಡಿದರು. ‘ಕೃಷಿ ಕ್ಷೇತ್ರದಲ್ಲಿಯೂ ಇ–ಕಾಮರ್ಸ್‌ನ ಬಳಕೆ ಹೆಚ್ಚಬೇಕು. ಈ ಎರಡೂ ಆ್ಯಪ್‌ಗಳ ಮೂಲಕ ನಡೆಸುವ ಖರೀದಿ ವಹಿವಾಟಿಗೆ ಎಸ್‌ಬಿಐ ಪಾವತಿ ಸೌಲಭ್ಯ ಕಲ್ಪಿಸಿಕೊಡಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry