ಸತ್ತಿದ್ದ ಎಂದು ಸುದ್ದಿಯಾದವ ಬಂದ..

7
ಕಾಸ್‌ಗಂಜ್: ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ: ಪೊಲೀಸರ ಹೇಳಿಕೆ

ಸತ್ತಿದ್ದ ಎಂದು ಸುದ್ದಿಯಾದವ ಬಂದ..

Published:
Updated:
ಸತ್ತಿದ್ದ ಎಂದು ಸುದ್ದಿಯಾದವ ಬಂದ..

ಲಖನೌ: ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ರಾಹುಲ್ ಉಪಾಧ್ಯಾಯ ಎಂಬುವರು,ತಾವು ಬದುಕಿದ್ದು ಕ್ಷೇಮವಾಗಿರುವುದಾಗಿ ಸೋಮವಾರ ಹೇಳಿಕೊಂಡಿದ್ದಾರೆ.

‘ಉತ್ತರ ಪ್ರದೇಶದ ಕಸ್‌ಗಂಜ್‌ನಲ್ಲಿ ಶುಕ್ರವಾರ ಆರ್‌ಎಸ್‌ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ‘ತಿರಂಗಾ ಬೈಕ್ ರ‍್ಯಾಲಿ’ ವೇಳೆ ಉಂಟಾದ ಗಲಭೆಯಲ್ಲಿ ತಾವು ಸ್ಥಳದಲ್ಲಿ ಇರಲಿಲ್ಲ. ಕಸ್‌ಗಂಜ್‌ನಿಂದ 10 ಕಿ.ಮೀ ದೂರದ ಹಳ್ಳಿಯಲ್ಲಿದ್ದೆ’ ಎಂದು ಉಪಾಧ್ಯಾಯ ಹೇಳಿದ್ದಾರೆ.

ತಿರಂಗಾ ಜಾಥಾ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ, ಕಲ್ಲುತೂರಾಟ ನಡೆದಿತ್ತು. ಗಲಭೆಯಲ್ಲಿ 22 ವರ್ಷದ ವಿದ್ಯಾರ್ಥಿ ಚಂದನ್ ಗುಪ್ತಾ ಮೃತಪಟ್ಟಿದ್ದ. ಆದರೆ ಮತ್ತೊಬ್ಬ ವ್ಯಕ್ತಿಯೂ ಮೃತಪಟ್ಟಿದ್ದಾನೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಟಿವಿಗಳಲ್ಲಿಯೂ ಪ್ರಸಾರವಾಗಿತ್ತು.

‘ನನ್ನ ಸ್ನೇಹಿತನೊಬ್ಬ ಕರೆ ಮಾಡಿ, ಕಸ್‌ಗಂಜ್ ಗಲಭೆಯಲ್ಲಿ ನೀನು ಮೃತಪಟ್ಟಿರುವ ವದಂತಿ ಹಬ್ಬಿದೆ ಎಂದು ತಿಳಿಸಿದ. ಅವನು ಕಳುಹಿಸಿದ ಪೋಸ್ಟ್‌ಗಳೂ ಅದೇ ಮಾಹಿತಿ ನೀಡಿದವು. ಆದರೆ ನಾನು ಘಟನಾ ಸ್ಥಳದಲ್ಲಿ ಇರಲಿಲ್ಲ. ನನ್ನ ಹಳ್ಳಿಯಲ್ಲಿದೆ’ ಎಂದು ಉಪಾಧ್ಯಾಯ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು 30 ಮಂದಿಯನ್ನು ಬಂಧಿಸಿ, 50 ಜನರನ್ನು ವಶಕ್ಕೆ ಪಡೆದಿದ್ದರು. ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜೀವ ಗುಪ್ತಾ ತಿಳಿಸಿದ್ದಾರೆ. 

ಗಲಭೆಯಲ್ಲಿ ಮೂರು ಅಂಗಡಿ, ಎರಡು ಬಸ್ ಮತ್ತು ಒಂದು ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು. ಒಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು.

***

ಮೌನ ಮುರಿದ ಯೋಗಿ

ಕಾಸ್‌ಗಂಜ್ ಕೋಮುಗಲಭೆ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೌನ ಮುರಿದಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ.

‘ತಪ್ಪಿತಸ್ಥರೂ ಯಾರೇ ಆಗಿದ್ದರೂ ಅವರಿಗೆ ಅವರ ವಿರುದ್ಧ ಕ್ರಮ ಖಚಿತ. ಎಲ್ಲ ನಾಗರಿಕರಿಗೂ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಯೋಗಿ ಭರವಸೆ ನೀಡಿದ್ದಾರೆ.

ವರದಿ ಕೇಳಿದ ಕೇಂದ್ರ: ಗಲಭೆ ಬಗ್ಗೆ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಕೇಂದ್ರ ಸರ್ಕಾರ ಕೇಳಿದೆ. ಘಟನೆಯ ಕಾರಣ ಹಾಗೂ ಗಲಭೆ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸುವಂತೆ ಸೂಚಿಸಲಾಗಿದೆ.

***

ಮುಸ್ಲಿಮರು ಪಾಕಿಸ್ತಾನಿಯರೇ: ಬರೇಲಿ ಜಿಲ್ಲಾಧಿಕಾರಿ ಪ್ರಶ್ನೆ

ಲಖನೌ: ರಾಜ್ಯದಲ್ಲಿ ಹಿಂದುತ್ವವಾದಿ ಸಂಘಟನೆಗಳು ಕೋಮು ಗಲಭೆಗೆ ಪ್ರಚೋದಿಸುತ್ತಿವೆ ಎಂದು ಬರೇಲಿ ಜಿಲ್ಲಾಧಿಕಾರಿ ರಾಘವೇಂದ್ರ ವಿಕ್ರಂ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದನ್ನು ಉತ್ತರ ಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

‘ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಅನುಮತಿ ಪಡೆಯದೇ ಮೆರವಣಿಗೆ ನಡೆಸುವ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಅಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆ ಕೂಗುತ್ತಿದ್ದಾರೆ. ಬರೇಲಿಯಲ್ಲೂ ಇಂತಹ ಘಟನೆ ನಡೆದಿದೆ. ಕಲ್ಲೂತೂರಾಟ ನಡೆದು, ಎಫ್‌ಐಆರ್ ಕೂಡಾ ದಾಖಲಾಗಿದೆ’ ಎಂದು ವಿಕ್ರಂ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

‘ಹೆಚ್ಚು ಮುಸ್ಲಿಮರಿರುವ ಪ್ರದೇಶಗಳಲ್ಲಿ ಮೆರವಣಿಗೆ ನಡೆಸುವುದು.. ಪಾಕಿಸ್ತಾನ ವಿರೋಧಿ ಘೋಷಣೆ ಕೂಗುವುದು ಇಂದು ಫ್ಯಾಷನ್ ಆಗಿದೆ. ಮುಸ್ಲಿಮರೇನು ಪಾಕಿಸ್ತಾನಿಯರಾ?’ ಎಂದು ಅವರು ಪ್ರಶ್ನಿಸಿದ್ದರು.

ಕಾಸ್‌ಗಂಜ್ ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ ಭಾನುವಾರು ಅವರು ಈ ಪೋಸ್ಟ್ ಹಾಕಿದ್ದರು.

ಕ್ಷಮೆಯಾಚನೆ: ಬಿಜೆಪಿ ಮುಖಂಡರ ಆಕ್ಷೇಪದ ಬಳಿಕ, ಸಿಂಗ್ ಅವರು ತಮ್ಮ ಬರಹವನ್ನು ತೆಗೆದುಹಾಕಿದ್ದು, ಕ್ಷಮೆ ಕೇಳಿದ್ದಾರೆ. ತಮ್ಮ ಬರಹವು ಬರೇಲಿಯ ಕಾನೂನು ಹಾಗೂ ಸುವ್ಯವಸ್ಥೆಗೆ ಸಂಬಂಧಿಸಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರವು ಈ ಬಗ್ಗೆ ಗಮನ ಹರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮಂಗಳವಾರ ಹೇಳಿದ್ದಾರೆ.

**

ನೀವು ನೋಡುತ್ತಿರುವ ಹಾಗೆ ರಾಹುಲ್ ಉಪಾಧ್ಯಾಯ ಅವರು ಆರೋಗ್ಯವಾಗಿದ್ದಾರೆ. ನಮ್ಮ ಜೊತೆ ಇದ್ದಾರೆ.

     – ಸಂಜೀವ ಗುಪ್ತಾ, ಹಿರಿಯ ಪೊಲೀಸ್ ಅಧಿಕಾರಿ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry