4

ರಾಷ್ಟ್ರೀಯ ಶೂಟಿಂಗ್‌: ವಾಸನ್‌ ಪಾಟೀಲ್‌ಗೆ ಚಿನ್ನದ ಪದಕ

Published:
Updated:
ರಾಷ್ಟ್ರೀಯ ಶೂಟಿಂಗ್‌: ವಾಸನ್‌ ಪಾಟೀಲ್‌ಗೆ ಚಿನ್ನದ ಪದಕ

ಹುಬ್ಬಳ್ಳಿ: ಕೊನೆಯ ಸುತ್ತಿನಲ್ಲಿ ಎದುರಾದ ಕಠಿಣ ಸವಾಲನ್ನು ಮೆಟ್ಟಿನಿಂತ ಮರಾಠ ರೆಜಿಮೆಂಟ್‌ನ ವಾಸನ್‌ ಪಾಟೀಲ್‌ ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಚಿನ್ನದ ಪದಕ ಜಯಿಸಿದರು.

ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ನ ರೇಂಜ್‌ನಲ್ಲಿ ನಡೆದ ಪುರುಷರ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಅವರು 238.4 ಪಾಯಿಂಟ್ಸ್‌ ಕಲೆ ಹಾಕಿ ಈ ಸಾಧನೆ ಮಾಡಿದರು. ಹೋದ ವರ್ಷ ಐ.ಎಸ್.ಎಸ್.ಎಫ್‌. ವಿಶ್ವಕಪ್‌ನಲ್ಲಿ ಪದಕ ಜಯಿಸಿದ್ದ ಅಮನ್‌ಪ್ರೀತ್‌ ಸಿಂಗ್‌ 232.9 ಪಾಯಿಂಟ್ಸ್‌ ಗಳಿಸಿ ಇಲ್ಲಿ ಬೆಳ್ಳಿ ತಮ್ಮದಾಗಿಸಿಕೊಂಡರು. ಎಸ್.ವಿ. ಜಿತೇಂದ್ರ 212.9 ಪಾಯಿಂಟ್ಸ್ ಕಲೆ ಹಾಕಿ ಕಂಚು ಗೆದ್ದರು.

ಒ.ಎನ್‌.ಜಿ.ಸಿ. ಪ್ರತಿನಿಧಿಸುವ ಅಮನ್‌ಪ್ರೀತ್‌ ಮತ್ತು ವಾಸನ್‌ ನಡುವೆ ಆರಂಭದ ಎರಡು ಸುತ್ತುಗಳಲ್ಲಿ ಕಠಿಣ ಪೈಪೋಟಿ ಕಂಡು ಬಂದಿತು. ಒಂದು ಪಾಯಿಂಟ್ ಅಂತರದಿಂದಷ್ಟೇ ವಾಸನ್‌ ಮುನ್ನಡೆಯಲ್ಲಿದ್ದರು. ಉಳಿದ 13 ಸುತ್ತುಗಳಲ್ಲಿ ವಾಸನ್‌ ಸ್ಥಿರತೆ ಕಾಯ್ದುಕೊಂಡು ಚಿನ್ನದ ಪದಕದ ಜೊತೆ ₹ 1 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ಅಮನ್‌ಪ್ರೀತ್‌ಗೆ ₹ 50 ಸಾವಿರ, ಜಿತೇಂದ್ರಗೆ ₹ 25 ಸಾವಿರ ಲಭಿಸಿತು.

ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ವಾಸನ್‌ ಜಯಿಸಿದ ನಾಲ್ಕನೇ ಪದಕವಿದು. 2014 ಮತ್ತು 2016ರಲ್ಲಿ ‍ಪುಣೆಯಲ್ಲಿ, 2016ರಲ್ಲಿ ನವದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಅವರು ಪದಕ ಪಡೆದಿದ್ದರು.

‘ಅಂತರರಾಷ್ಟ್ರೀಯ ಶೂಟರ್‌ಗಳು ಭಾಗವಹಿಸಿದ್ದರಿಂದ ಚುರುಕಿನ ಪೈಪೋಟಿ ಇರುತ್ತದೆ ಎಂಬುದು ಗೊತ್ತಿತ್ತು. ಆದ್ದರಿಂದ ಕಠಿಣ ಅಭ್ಯಾಸ ಮಾಡಿದ್ದೆ. 2020ರ ಒಲಿಂಪಿಕ್ಸ್‌ಗೆ ಇನ್ನೂ ಚೆನ್ನಾಗಿ ತಯಾರಿ ನಡೆಸಲು ಇಲ್ಲಿ ಗೆದ್ದ ಪದಕ ಪ್ರೇರಣೆಯಾಗಲಿದೆ’ ಎಂದು ವಾಸನ್‌ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

ಫೈನಲ್‌ಗೆ ಅರ್ಹತೆ ಪಡೆದಿದ್ದ ಉತ್ತರ ಪ್ರದೇಶದ ಎಸ್‌. ಖುಷ್‌ (194 ಪಾಂ.), ಸೌರಭ್‌ (174.2), ಕರ್ನಾಟಕದ ಸಾಗರ ಸಿಂಗ್‌ (153.7), ಈ. ಗಿರಿಧರ್‌ (131.6) ಮತ್ತು ಮಹಾರಾಷ್ಟ್ರದ ರಾಹುಲ್‌ ಹಿವಾರಿ (107.6) ಕ್ರಮವಾಗಿ ನಾಲ್ಕರಿಂದ ಎಂಟರವರೆಗೆ ಸ್ಥಾನ ಪಡೆದರು.

ಅರ್ಹತೆ ಪಡೆಯದ ಪ್ರಕಾಶ್‌: ಒಲಿಂಪಿಯನ್‌ ಕರ್ನಾಟಕದ ಪಿ.ಎನ್‌. ಪ್ರಕಾಶ್‌ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು.

ಹೆಚ್ಚು ಪಾಯಿಂಟ್ಸ್‌ ಗಳಿಸಿದ ಮೊದಲ ಎಂಟು ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಪ್ರಕಾಶ್‌ ಅರ್ಹತಾ ಸುತ್ತಿನಲ್ಲಿ 378 ಪಾಯಿಂಟ್ಸ್ ಗಳಿಸಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟರು.

‘ಫಿಟ್‌ನೆಸ್‌ ಸಮಸ್ಯೆ ಇದ್ದ ಕಾರಣ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಲ್ಲಿ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ. ಏಷ್ಯನ್‌ ಕ್ರೀಡಾಕೂಟಕ್ಕೆ ಪುಣೆಯಲ್ಲಿ ಅಭ್ಯಾಸ ಆರಂಭಿಸುತ್ತೇನೆ’ ಎಂದು ಪ್ರಕಾಶ್‌ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry