19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್ ಟೂರ್ನಿ; ಗಿಲ್‌ ಅಬ್ಬರ, ಫೈನಲ್‌ಗೆ ಭಾರತ ತಂಡ

7

19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್ ಟೂರ್ನಿ; ಗಿಲ್‌ ಅಬ್ಬರ, ಫೈನಲ್‌ಗೆ ಭಾರತ ತಂಡ

Published:
Updated:
19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್ ಟೂರ್ನಿ; ಗಿಲ್‌ ಅಬ್ಬರ, ಫೈನಲ್‌ಗೆ ಭಾರತ ತಂಡ

ಕ್ರೈಸ್ಟ್‌ಚರ್ಚ್‌ (ಪಿಟಿಐ): ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ (ಔಟಾಗದೆ 102; 94ಎ, 7ಬೌಂ) ಅವರ ಅಬ್ಬರದ ಶತಕ ಮತ್ತು ಇಶಾನ್ ಪೊರೆಲ್ (17ಕ್ಕೆ4) ಅವರ ಸ್ವಿಂಗ್ ದಾಳಿಗೆ ಪಾಕಿಸ್ತಾನ ತಂಡವು ದೂಳಿಪಟವಾಯಿತು. ಭಾರತ ತಂಡವು 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿತು.

ಹೆಗ್ಲೆ ಓವಲ್‌ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಪೃಥ್ವಿ ಶಾ ಪಡೆಯು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 203ರನ್‌ಗಳಿಂದ ಮಣಿಸಿದೆ. ವಯೋಮಿತಿಯ ಕ್ರಿಕೆಟ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ದಾಖಲಿಸಿದ ಅತ್ಯಂತ ದೊಡ್ಡ ಅಂತರದ ಜಯ ಇದು. ಭಾರತ ತಂಡವು ವಿಶ್ವಕಪ್‌ನಲ್ಲಿ ಆರನೇ ಬಾರಿ ಫೈನಲ್‌ಗೆ ತಲುಪಿದ ಸಾಧನೆ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 272 ರನ್‌ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ಪಾಕ್‌, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಈ ತಂಡ 29.3 ಓವರ್‌ಗಳಲ್ಲಿ 69ರನ್‌ ಗಳಿಸಲಷ್ಟೇ ಶಕ್ತವಾಯಿತು.

ದಿಟ್ಟ ಆರಂಭ: ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ನಾಯಕ ಪೃಥ್ವಿ (41; 42ಎ, 3ಬೌಂ, 1ಸಿ) ಮತ್ತು ಮನಜ್ಯೋತ್ ಕಾಲ್ರಾ (47; 59ಎ, 7ಬೌಂ) ದಿಟ್ಟ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 89ರನ್‌ ಕಲೆಹಾಕಿತು.

16ನೇ ಓವರ್‌ನಲ್ಲಿ ಪೃಥ್ವಿ, ರನೌಟ್‌ ಆದರು. ಇದರ ಬೆನ್ನಲ್ಲೇ ಮನಜ್ಯೋತ್, ಮಹಮ್ಮದ್‌ ಮೂಸಾಗೆ ವಿಕೆಟ್‌ ನೀಡಿದರು. ಹರ್ಮಿತ್‌ ದೇಸಾಯಿ (20; 34ಎ, 1ಬೌಂ), ರಿಯಾನ್‌ ಪರಾಗ್‌ (2) ಮತ್ತು ಅಭಿಷೇಕ್ ಶರ್ಮಾ (5) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಗಿಲ್‌ ಎದೆಗುಂದಲಿಲ್ಲ. ಪಾಕ್‌ ಬೌಲರ್‌ಗಳನ್ನು ಕಾಡಿದ ಅವರು ಅರ್ಷದ್‌ ಇಕ್ಬಾಲ್‌ ಬೌಲ್‌ ಮಾಡಿದ 36ನೇ ಓವರ್‌ನ ಮೊದಲ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈಸಿದರು. ಗಿಲ್‌ಗೆ ಅನುಕೂಲ್‌ ರಾಯ್‌ (33; 45ಎ, 4ಬೌಂ) ಉತ್ತಮ ಬೆಂಬಲ ನೀಡಿದರು. 50ನೇ ಓವರ್‌ನ ಕೊನೆಯ ಎಸೆತವನ್ನು ಲಾಂಗ್‌ ಆಫ್‌ನತ್ತ ಬಾರಿಸಿ ಎರಡು ರನ್‌ ಗಳಿಸಿದ ಗಿಲ್‌, ಶತಕದ ಸಂಭ್ರಮ ಆಚರಿಸಿದರು. ಮೂಸಾ ಹಾಕಿದ ಈ ಎಸೆತ ನೋಬಾಲ್‌ ಆಗಿತ್ತು.

ಕುಸಿತದ ಹಾದಿ: ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಪೊರೆಲ್‌, ಶಿವ ಸಿಂಗ್‌ ಮತ್ತು ರಿಯಾನ್‌ ಪರಾಗ್‌ ಅವರ ದಾಳಿಗೆ ನಲುಗಿತು.

ರೊಹೈಲ್‌ ನಜೀರ್‌ (18; 39ಎ), ಸಾದ್‌ ಖಾನ್‌ (15; 33ಎ, 1ಬೌಂ) ಮತ್ತು ಮಹಮ್ಮದ್‌ ಮೂಸಾ (ಔಟಾಗದೆ 11; 14ಎ, 1ಬೌಂ, 1ಸಿ) ಮಾತ್ರ ಎರಡಂಕಿ ಮೊತ್ತ ಮುಟ್ಟಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 272 (ಪೃಥ್ವಿ ಶಾ 41, ಮನಜ್ಯೋತ್ ಕಾಲ್ರಾ 47, ಶುಭಮನ್‌ ಗಿಲ್‌ ಔಟಾಗದೆ 102, ಹರ್ಮಿತ್‌ ದೇಸಾಯಿ 20, ಅನುಕೂಲ್‌ ರಾಯ್‌ 33; ಶಿವಂ ಮಾವಿ 10; ಅರ್ಷದ್‌ ಇಕ್ಬಾಲ್‌ 51ಕ್ಕೆ3, ಮಹಮ್ಮದ್‌ ಮೂಸಾ 67ಕ್ಕೆ4, ಶಾಹೀನ್‌ ಶಾ ಅಫ್ರಿದಿ 62ಕ್ಕೆ1).

ಪಾಕಿಸ್ತಾನ: 29.3 ಓವರ್‌ಗಳಲ್ಲಿ 69 (ರೊಹೈಲ್‌ ನಜೀರ್‌ 18, ಸಾದ್‌ ಖಾನ್‌ 15, ಮಹಮ್ಮದ್‌ ಮೂಸಾ ಔಟಾಗದೆ 11; ಇಶಾನ್ ಪೊರೆಲ್‌ 17ಕ್ಕೆ4, ಶಿವ ಸಿಂಗ್‌ 20ಕ್ಕೆ2, ರಿಯಾನ್‌ ಪರಾಗ್‌ 6ಕ್ಕೆ2, ಅನುಕೂಲ್‌ ರಾಯ್‌ 11ಕ್ಕೆ1, ಅಭಿಷೇಕ್‌ ಶರ್ಮಾ 0ಕ್ಕೆ1).

ಫಲಿತಾಂಶ: ಭಾರತಕ್ಕೆ 203ರನ್‌ ಜಯ ಹಾಗೂ ಫೈನಲ್‌ ಪ್ರವೇಶ.

ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌.

***

ಚಂಡೀಗಡ (ಪಿಟಿಐ): ‘ಕ್ರಿಕೆಟ್‌ ಬಗ್ಗೆ ಶುಭಮನ್‌ಗೆ ಎಲ್ಲಿಲ್ಲದ ಪ್ರೀತಿ. ಬಾಲ್ಯದಿಂದಲೂ ಈ ಕ್ರೀಡೆಯಲ್ಲಿ ಆತನಿಗೆ ಅಪಾರ ಆಸಕ್ತಿ ಇತ್ತು. ಕಠಿಣ ಪರಿಶ್ರಮದಿಂದ ವಿನೂತನ ಕೌಶಲಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಂಡು ಸಾಗುತ್ತಿದ್ದಾನೆ. ಆಟದ ಬಗ್ಗೆ ಹೊಂದಿರುವ ಬದ್ಧತೆ ಆತನನ್ನು ಈ ಮಟ್ಟಕ್ಕೆ ಬೆಳೆಸಿದೆ’ ಎಂದು ಶುಭಮನ್‌ ಗಿಲ್‌ ಅವರ ತಂದೆ ಲಖ್ವಿಂದರ್‌ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಶುಭಮನ್‌ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಗುರಿ ಇಟ್ಟಿದ್ದ. ಅದನ್ನು ಹೇಳಿಕೊಂಡಾಗ ನಾವು ಸಂತೋಷದಿಂದಲೇ ಒಪ್ಪಿಕೊಂಡು ಆತನನ್ನು ಪ್ರೋತ್ಸಾಹಿಸಿದ್ದೇವೆ’ ಎಂದರು.

ಶುಭಮನ್‌ ಈ ಬಾರಿಯ ಐಪಿಎಲ್‌ ಆಟಗಾರರ ಹರಾಜಿನಲ್ಲಿ ₹1.80 ಕೋಟಿ ಮೌಲ್ಯ ಪಡೆದಿದ್ದರು. ಅವರನ್ನು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಖರೀದಿಸಿತ್ತು.

***

ಜೂನಿಯರ್‌ ತಂಡಕ್ಕೆ ಬಿಸಿಸಿಐನಿಂದ ನಗದು ಪುರಸ್ಕಾರ

ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡದ ಆಟಗಾರರಿಗೆ ನಗದು ಬಹುಮಾನ ನೀಡಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿಸಿದೆ.

‘ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡ ಮತ್ತು ಕೋಚ್ ರಾಹುಲ್‌ ದ್ರಾವಿಡ್‌ ಅವರಿಗೆ ಅಭಿನಂದನೆಗಳು. ದ್ರಾವಿಡ್‌ ಅವರ  ಮಾರ್ಗದರ್ಶನದಲ್ಲಿ ತಂಡ ಅಪೂರ್ವ ಆಟ ಆಡುತ್ತಿದೆ. ಅವರ ಶ್ರಮದಿಂದ ಹಲವು ಪ್ರತಿಭಾನ್ವಿತ ಆಟಗಾರರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಫೈನಲ್‌ ಪ್ರವೇಶಿಸಿರುವ ತಂಡಕ್ಕೆ ನಗದು ಬಹುಮಾನ ನೀಡಿ ಸನ್ಮಾನಿಸಲು ನಾವು ತೀರ್ಮಾನಿಸಿದ್ದೇವೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry