ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರಿಗೆ ಅತ್ಯಧಿಕ ಮತ ತಂದು ಕೊಡುವ ಹೊಣೆ

ಮುಖ್ಯಮಂತ್ರಿ, ಪರಮೇಶ್ವರ ಸೇರಿ ಎಲ್ಲಾ ಪದಾಧಿಕಾರಿಗಳಿಗೆ ‘ನಮ್ಮ ಕ್ಷೇತ್ರ– ನಮ್ಮ ಹೊಣೆ’ ಕಡ್ಡಾಯ: ಕೆಪಿಸಿಸಿ ಸೂಚನೆ
Last Updated 8 ಫೆಬ್ರುವರಿ 2018, 8:55 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಪಕ್ಷದ ಪದಾಧಿಕಾರಿಗಳು ತಮ್ಮ ತಮ್ಮ  ಬೂತ್‌ಗಳಲ್ಲಿ ಪಕ್ಷಕ್ಕೆ ಹೆಚ್ಚು ಮತಗಳನ್ನು ತಂದುಕೊಡುವ ಜವಾಬ್ದಾರಿ ಹೊರಬೇಕು ಎಂದು ಸೂಚಿಸಲಾಗಿದೆ.

ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳಲು ‘ನಮ್ಮ ಕ್ಷೇತ್ರ– ನಮ್ಮ ಹೊಣೆ’ ಘೋಷಣೆಯೊಂದಿಗೆ ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬ್ಲಾಕ್‌ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಮತ್ತು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಈ ಸೂಚನೆ ನೀಡಿದ್ದಾರೆ.

ಪ್ರಭಾವಿ ಮುಖಂಡರು ತಮ್ಮ ಮತಗಟ್ಟೆಗಳಲ್ಲಿ ಹಿಡಿತ ಸಾಧಿಸದೆ ಪಕ್ಷಕ್ಕೆ ಹಿನ್ನಡೆಯಾದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ. 2013ರ ಚುನಾವಣೆಯಲ್ಲಿ 5,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 16 ಕ್ಷೇತ್ರಗಳನ್ನು ಪಕ್ಷ ಕಳೆದುಕೊಂಡಿದೆ. 5,000ದಿಂದ 10,000 ಮತಗಳ ಅಂತರದಲ್ಲಿ 24 ಸ್ಥಾನ ನಷ್ಟವಾಗಿವೆ. ಈ ಕಾರಣಕ್ಕೆ ಪ್ರತಿ ಬೂತ್‌ನಲ್ಲಿ ಕಳೆದ ಚುನಾವಣೆಗಿಂತ 50 ಹೆಚ್ಚು ಮತ ಪಡೆಯಲೇಬೇಕು. ಈ ನಿಟ್ಟಿನಲ್ಲಿ ತಕ್ಷಣದಿಂದಲೇ ಪ್ರಯತ್ನ ಆರಂಭಿಸಬೇಕು ಎಂದು ಪದಾಧಿಕಾರಿಗಳಿಗೆ ಇಬ್ಬರು ನಾಯಕರೂ ತಾಕೀತು ಮಾಡಿದರು.

‘ನಮ್ಮ ಕ್ಷೇತ್ರದ ಹೊಣೆ ನಮ್ಮದೇ ಹೊರತು ಇನ್ನೊಬ್ಬರದಲ್ಲ. ಮುಂಬರುವ ಮೂರು ತಿಂಗಳು ಕಷ್ಟ ಪಡದಿದ್ದರೆ ಮುಂದಿನ ಐದು ವರ್ಷ ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಸಂಗತಿ ಎಲ್ಲರ ಮನಸ್ಸಿನಲ್ಲಿ ಇರಲಿ’ ಎಂದೂ ಪರಮೇಶ್ವರ ಹೇಳಿದರು.

‘ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ. ಸರ್ಕಾರ ರಚನೆಗೆ ಅಗತ್ಯವಾದಷ್ಟು ಸ್ಥಾನ ಗೆಲ್ಲುವುದು ಸಂದೇಹ ಎಂಬ ರೀತಿಯಲ್ಲಿ ಯಾರೂ ಮಾತನಾಡಬಾರದು. ಸಕಾರಾತ್ಮಕ ಧೋರಣೆಯಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ’ ಎಂದೂ ಸಲಹೆ ನೀಡಿದರು.

‘ಬಿಜೆಪಿ ವಿರುದ್ಧ ಯುದ್ಧಕ್ಕೆ ಸಜ್ಜುಗೊಳ್ಳುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ್ದು. ಯಾವುದೇ ಮಾಹಿತಿ ನೀಡದೆ ಕೆಲವು ಪದಾಧಿಕಾರಿಗಳು ಈ ಸಭೆಗೂ ಗೈರಾಗಿದ್ದಾರೆ. ಅಂಥವರು ಆ ಹುದ್ದೆಯಲ್ಲಿದ್ದು ಏನು ಪ್ರಯೋಜನ’ ಎಂದು ಕೆ.ಸಿ. ವೇಣುಗೋಪಾಲ್‌ ಕಿಡಿಕಾರಿದರು.

‘ಕೆಪಿಸಿಸಿ ಅಧ್ಯಕ್ಷರ ಅನುಮತಿ ಪಡೆಯದೆ ಈ ಸಭೆಗೆ ಗೈರಾದವರರನ್ನು ಪಕ್ಷದಿಂದ ಏಕೆ ವಜಾಗೊಳಿಸಬಾರದು ಎಂದು ಕಾರಣ ಕೇಳಿ
ನೋಟಿಸ್‌ ನೀಡಲಾಗುವುದು. ಇದು ಪಕ್ಷದ ವರಿಷ್ಠರ ತೀರ್ಮಾನ’ ಎಂದೂ ಅವರು ಎಚ್ಚರಿಕೆ ನೀಡಿದರು.

ವ್ಯಕ್ತಿ ಬಿಟ್ಟು ಪಕ್ಷ ಪೂಜೆ ಮಾಡಿ: ‘ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ನಿರ್ಧರಿಸುವ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಮ್ಮವರ ವಿರುದ್ಧ ನಾವೇ ಸಂಚು ರೂಪಿಸುತ್ತೇವೆ. ಒಳಗಿನ ಅಸಮಾಧಾನ ನಮ್ಮವರ ಸೋಲಿಗೆ ಕಾರಣವಾಗುತ್ತದೆ. ಪದಾಧಿಕಾರಿಗಳು ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಪಕ್ಷದ ತಳಮಟ್ಟದ ನಾಯಕರಲ್ಲಿರುವ ಅಸಮಾಧಾನಗಳನ್ನು ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.
**
ಪದಾಧಿಕಾರಿಗಳಿಗೆ ಗುರಿ

* ವಾರದೊಳಗೆ ಎಲ್ಲ 56,000 ಬೂತ್ ಸಮಿತಿಗಳ ಪದಾಧಿಕಾರಿಗಳ ಭಾವಚಿತ್ರ, ಮೊಬೈಲ್ ಸಂಖ್ಯೆ (ವಾಟ್ಸ್‌ ಆ್ಯಪ್‌), ಎಪಿಕ್ ಕಾರ್ಡ್ ಸಂಖ್ಯೆ ಸಂಗ್ರಹಿಸಬೇಕು
* 10 ದಿನಗಳ ಒಳಗೆ ಮುಖ್ಯಮಂತ್ರಿ ಸೇರಿ ಎಲ್ಲ ಪದಾಧಿಕಾರಿಗಳು ಮತ ಚಲಾಯಿಸುವ ಬೂತ್‌ಗಳ ಮಾಹಿತಿ
* ಪಕ್ಷದ ಮಾಹಿತಿ ವಿನಿಮಯ ಮಾಡಿಕೊಳ್ಳಲು 24 ಗಂಟೆ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ಆರಂಭ
* ರಾಜ್ಯ ಮಟ್ಟದ ನಾಯಕರು ನೀಡುವ ಹೇಳಿಕೆಗಳಿಗೆ ಸ್ಥಳೀಯ ಮಟ್ಟದಲ್ಲಿ ಪ್ರಚಾರ ನೀಡುವ ಹೊಣೆ
* 2013ರ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿ ಯಾವ ಪಕ್ಷ ಎಷ್ಟು ಮತ ಪಡೆದಿದೆ ಆಧಾರದಲ್ಲಿ ಮತ ಹೆಚ್ಚಳಕ್ಕೆ ಯೋಜನೆ ರೂಪಿಸಬೇಕು
****
‘ಮಾರ್ಚ್‌ಗೆ ಬಸ್‌ನಲ್ಲಿ ಪ್ರಚಾರ’

‘ಮಾರ್ಚ್‌ 1ರಿಂದ 20ರವರೆಗೆ ಪಕ್ಷದ ಎಲ್ಲ ನಾಯಕರು ಒಂದಾಗಿ ರಾಜ್ಯದಾದ್ಯಂತ ಬಸ್‌ನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ’ ಎಂದು ವೇಣುಗೋಪಾಲ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗೆ ಸಜ್ಜುಗೊಳ್ಳುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲಾಗಿದ್ದು, ಫೆಬ್ರುವರಿ ತಿಂಗಳಿನಿಂದ ಮೂರು ತಿಂಗಳು ತಳಮಟ್ಟದಿಂದ ರಾಜ್ಯಮಟ್ಟದವರೆಗಿನ ಎಲ್ಲ ಪದಾಧಿಕಾರಿಗಳಿಗೆ ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯೇ ಪಕ್ಷಕ್ಕೆ ಸ್ಟಾರ್‌ ಪ್ರಚಾರಕ. ಸಿನಿಮಾ ನಟರನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವ ಉದ್ದೇಶವಿದೆ ಎಂದೂ ತಿಳಿಸಿದರು.

ಇವಿಎಂ ಪರಿಶೀಲನೆ ಪ್ರಾತ್ಯಕ್ಷಿಕೆ

ಬೂತ್‌ಗಳಲ್ಲಿ ಮತದಾನ ಆರಂಭಕ್ಕೂ ಮೊದಲು ಚುನಾವಣಾ ಅಧಿಕಾರಿಗಳು ಬೂತ್‌ ಏಜೆಂಟರುಗಳ ಎದುರು ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಪ್ರಾತ್ಯಕ್ಷಿಕೆ ನೀಡುತ್ತಾರೆ. ಕಾಂಗ್ರೆಸ್‌ ಬೂತ್‌ ಏಜೆಂಟರುಗಳಿಗೆ ಪಕ್ಷದ ವತಿಯಿಂದ ಚುನಾವಣೆಗೆ ಮೊದಲೇ ಈ ಕುರಿತು ಪ್ರಾತ್ಯಕ್ಷಿಕೆ ನೀಡಿ, ಮತದಾನ ದಿನ ಈ ಬಗ್ಗೆ ಗಮನವಿರಿಸುವುದು ಕಡ್ಡಾಯ ಎಂದೂ ಸೂಚಿಸಲಾಗುವುದು. ಆ ಮೂಲಕ ಮತಯಂತ್ರ ದುರ್ಬಳಕೆ ಮೇಲೆ ನಿಗಾ ವಹಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT