ಆದಾಯ ತೆರಿಗೆ: ಸಲ್ಲಿಕೆ ಸರಳ

7
ಹೂಡಿಕೆ ದಾಖಲೆ ನೀಡಿಕೆಯಿಂದ ವಿನಾಯಿತಿ ಸಾಧ್ಯತೆ

ಆದಾಯ ತೆರಿಗೆ: ಸಲ್ಲಿಕೆ ಸರಳ

Published:
Updated:
ಆದಾಯ ತೆರಿಗೆ: ಸಲ್ಲಿಕೆ ಸರಳ

ನವದೆಹಲಿ: ಮಧ್ಯಮ ಆದಾಯದ ವರ್ಗವು ಆದಾಯ ತೆರಿಗೆ ಪಾವತಿಸುವುದನ್ನು ಸರಳಗೊಳಿಸುವ ಕ್ರಮಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ. ಅದರ ಭಾಗವಾಗಿ, ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ತೆರಿಗೆ ವಿನಾಯಿತಿ ಇರುವ ಹೂಡಿಕೆಗಳಿಗೆ ದಾಖಲೆ ಸಲ್ಲಿಸಬೇಕು ಎಂಬ ನಿಯಮವನ್ನು ರದ್ದುಪಡಿಸುವ ಸಾಧ್ಯತೆ ಇದೆ.

ರಿಟನ್ಸ್‌ ಸಲ್ಲಿಕೆಗೆ ಸಂಬಂಧಿಸಿ ಇರುವ ಗೋಜಲುಗಳೇ ವೇತನದಾರರು ಮತ್ತು ಇತರ ಮಧ್ಯಮ ಆದಾಯ ವರ್ಗಗಳಿಗೆ ಸೇರಿದ ಹಲವರು ಆದಾಯ ತೆರಿಗೆ ಮಾಹಿತಿ ಸಲ್ಲಿಸದಿರಲು ಕಾರಣ ಎಂದು ಸರ್ಕಾರ ಭಾವಿಸಿದೆ.

‘ದಾಖಲೆ ಸಲ್ಲಿಕೆ ನಿಯಮ ರದ್ದು ಮಾಡುವಂತೆ ಆದಾಯ ತೆರಿಗೆ ಇಲಾಖೆಗೆ ಹಲವು ಮನವಿಗಳು ಬಂದಿವೆ. ತೆರಿಗೆದಾರರ ಎಲ್ಲ ಮಾಹಿತಿಯೂ ಈಗ ಇಲಾಖೆಗೆ ಲಭ್ಯ ಇದೆ. ತಾಂತ್ರಿಕವಾಗಿ ಇಷ್ಟೊಂದು ಮುಂದುವರಿದಿರುವ ಸಂದರ್ಭದಲ್ಲಿ ಪ್ರತಿ ಮಾಹಿತಿಯನ್ನೂ ತೆರಿಗೆದಾರನೇ ನೀಡಬೇಕು ಎಂಬುದರಲ್ಲಿ ಅರ್ಥ ಇಲ್ಲ. ಈ ಬಗ್ಗೆ ಹಲವು ಸುತ್ತಿನ ಚರ್ಚೆ ನಡೆದಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬ್ಯಾಂಕ್‌ ಖಾತೆಗಳು ಮತ್ತು ವಿಮಾ ಪಾಲಿಸಿಗಳ ಜತೆಗೆ ಆಧಾರ್‌ ಸಂಖ್ಯೆ ಜೋಡಿಸಬೇಕು ಎಂಬ ನಿಯಮವನ್ನು ಈ ಕಾರಣಕ್ಕಾಗಿಯೇ ಮಾಡಲಾಗಿದೆ. ಸಾಮಾನ್ಯ ಜನರಿಗೆ ವ್ಯವಹಾರ ಅನುಕೂಲವಾಗಲಿ ಎಂಬುದಕ್ಕಾಗಿ ಪ್ಯಾನ್‌ ಸಂಖ್ಯೆಗೂ ಆಧಾರ್‌ ಜೋಡಣೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ, ದಾಖಲೆ ನೀಡಿಕೆ ನಿಯಮ ರದ್ದತಿಯನ್ನು ಈ ವರ್ಷವೇ ಜಾರಿಗೆ ತರಬೇಕೇ ಅಥವಾ ಮುಂದಿನ ವರ್ಷಕ್ಕೆ ಮುಂದೂಡಬೇಕೇ ಎಂಬುದನ್ನು ಹಣಕಾಸು ಸಚಿವರೇ ನಿರ್ಧರಿಸಬೇಕು ಎಂದು ಅವರು ಹೇಳಿದ್ದಾರೆ.

ವೇತನದಾರರು ತಮ್ಮ ಹೂಡಿಕೆಯ ದಾಖಲೆಗಳನ್ನು ಪ್ರತಿ ವರ್ಷ ತಾವು ಕೆಲಸ ಮಾಡುವ ಸಂಸ್ಥೆಗೆ ನೀಡಿದರೆ ಅದರ ಆಧಾರದಲ್ಲಿಯೇ ಅವರ ಆದಾಯ ತೆರಿಗೆ ಲೆಕ್ಕ ಹಾಕಲಾಗುತ್ತದೆ. ತೆರಿಗೆ ಉಳಿಸುವುದಕ್ಕಾಗಿ ಉದ್ಯೋಗಿಗಳು ವಿವಿಧ ರೀತಿಯ ಹೂಡಿಕೆ ಮಾಡಲು ಆದಾಯ ತೆರಿಗೆ ಕಾಯ್ದೆ 1961ರಲ್ಲಿ ಅವಕಾಶ ಇದೆ.

ಈಗ ₹2.5 ಲಕ್ಷ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ. ಈ ವಿನಾಯಿತಿ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇದೆ. 2016–17ರಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ಪ್ರಯೋಜನ 2018–19ರಲ್ಲಿ ಜನರಿಗೆ ದೊರೆಯಲಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಇತ್ತೀಚೆಗೆ ಹೇಳಿದ್ದಾರೆ. ಇದು ಆದಾಯ ತೆರಿಗೆದಾರರಲ್ಲಿ ನಿರೀಕ್ಷೆ ಗರಿಗೆದರಲು ಕಾರಣವಾಗಿದೆ.

ಸುಲಭ ವಿಧಾನ

l ಸರಳ, ಸುಲಭ ಮತ್ತು ಪರಿಣಾಮಕಾರಿ ನೇರ ತೆರಿಗೆ ವ್ಯವಸ್ಥೆ ರೂಪಿಸಲು ಪ್ರಧಾನಿ ಮೋದಿ ಕರೆ

l ತೆರಿಗೆ ನೆಲೆ ವಿಸ್ತರಣೆಗೆ ಕೇಂದ್ರ ಸರ್ಕಾರದ ಪ್ರಯತ್ನ

l ಜಿಎಸ್‌ಟಿ ಬಳಿಕ ನೇರ ತೆರಿಗೆ ವ್ಯವಸ್ಥೆ ಪರಿಷ್ಕರಣೆ ಭರವಸೆಯನ್ನು ಸರ್ಕಾರ ನೀಡಿದೆ

l ತೆರಿಗೆ ಪಾವತಿ ಪ್ರಮಾಣ ಹೆಚ್ಚಳಕ್ಕೆ ಸರ್ಕಾರದಿಂದ ಸಮಿತಿ ರಚನೆ

***

ಮಾಹಿತಿ ಗೋಪ್ಯವಲ್ಲ

ಬ್ಯಾಂಕ್‌, ವಿಮೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಂದ ತೆರಿಗೆದಾರರು ಮತ್ತು ತೆರಿಗೆ ತಪ್ಪಿಸಿಕೊಳ್ಳುತ್ತಿರುವವರ ಮಾಹಿತಿ ಪಡೆಯುವ ಅವಕಾಶವನ್ನು ಆದಾಯ ತೆರಿಗೆ ಇಲಾಖೆಗೆ ಸರ್ಕಾರ ನೀಡಿದೆ. ಇದಕ್ಕಾಗಿ ಆದಾಯ ತೆರಿಗೆ ನಿಯಮಗಳಿಗೆ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿದೆ.

***

ವಿನಾಯಿತಿ ನಿರೀಕ್ಷೆ

ತೆರಿಗೆ ವಿನಾಯಿತಿ ಮಿತಿಯಲ್ಲಿ ಕಳೆದ ವರ್ಷ ಯಾವುದೇ ಬದಲಾವಣೆ ಮಾಡಿರಲಿಲ್ಲ. ಹಾಗಾಗಿ ಈ ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ₹5 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಇದೆ. ಈಗ ವಾರ್ಷಿಕ ₹2.5 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ. ಈ ಮಿತಿಯನ್ನು ಕನಿಷ್ಠ ₹3 ಲಕ್ಷಕ್ಕೆ ಏರಿಸಬಹುದು ಎಂದು ಮೂಲಗಳು ಹೇಳಿವೆ. ತೆರಿಗೆ ವಿನಾಯಿತಿ ದೊರೆಯುವ ಹೂಡಿಕೆ ಪ್ರಮಾಣದಲ್ಲಿಯೂ ಏರಿಕೆಯಾಗುವ ಸಾಧ್ಯತೆ ಇದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry