ತಂಟೆ ಮಾಡುವುದೇ ಗೋವಾದ ಕಸುಬು: ಸಿದ್ದರಾಮಯ್ಯ

7

ತಂಟೆ ಮಾಡುವುದೇ ಗೋವಾದ ಕಸುಬು: ಸಿದ್ದರಾಮಯ್ಯ

Published:
Updated:

ಬೆಂಗಳೂರು : ಕುಡಿಯುವ ಉದ್ದೇಶಕ್ಕೆ ನೀರು ಕೊಡಿ ಎಂದರೆ ಗೋವಾದವರು ಕ್ಯಾತೆ ತೆಗೆಯುತ್ತಾರೆ. ತಂಟೆ ಮಾಡುವುದೇ ಅವರ ಕಸುಬು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

‘ನಮ್ಮ ರಾಜ್ಯಕ್ಕೆ ಕಳ್ಳರಂತೆ ಬಂದ ಗೋವಾದ ಉಪಸಭಾಪತಿ, ಶಾಸಕರು ಕರ್ನಾಟಕದವರೇ ಅಪರಾಧ ಮಾಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಅವರ ವರ್ತನೆಯನ್ನು ಖಂಡಿಸುತ್ತೇನೆ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ತಿಳಿಸಿದರು.

ಮಹದಾಯಿ ನದಿಗೆ ಕರ್ನಾಟಕದಿಂದ 45 ಟಿಎಂಸಿ ಅಡಿ ನೀರು ಹರಿದು ಹೋಗುತ್ತದೆ. ಒಟ್ಟು 200 ಟಿಎಂಸಿ ಅಡಿ ನೀರು ಸಮುದ್ರದ ಪಾಲಾಗುತ್ತಿದ್ದು, ಅದನ್ನು ಬಳಸಿಕೊಳ್ಳಲು ಗೋವಾದವರು ಮುಂದಾಗುತ್ತಿಲ್ಲ. ಸಮುದ್ರಕ್ಕೆ ಹರಿದುಹೋಗುತ್ತಿರುವ ನೀರಿನಲ್ಲಿ 7.5 ಟಿಎಂಸಿ ಅಡಿ ನೀರು ಕೊಡಿ ಎಂದರೆ ತಕರಾರು ತೆಗೆದಿರುವುದು ಸರಿಯಲ್ಲ ಎಂದು ಹೇಳಿದರು.

‘ಒಂದು ರಾಜ್ಯದ ಮುಖ್ಯಮಂತ್ರಿ, ಮಂತ್ರಿ, ಸಭಾಪತಿ, ಶಾಸಕರು ಮತ್ತೊಂದು ರಾಜ್ಯಕ್ಕೆ ಅಧಿಕೃತ ಭೇಟಿ ನೀಡುವಾಗ ಶಿಷ್ಟಾಚಾರದ ಪ್ರಕಾರ ಮಾಹಿತಿ ನೀಡಬೇಕು. ಆದರೆ, ಗೋವಾದವರು ಕದ್ದು ನಮ್ಮ ರಾಜ್ಯದ ಒಳಗೆ ಪ್ರವೇಶಿಸಿದ್ದಾರೆ. ಸರ್ಕಾರಕ್ಕೆ ತಿಳಿಸಿ ಬಂದಿದ್ದರೆ ಎಲ್ಲ ವ್ಯವಸ್ಥೆಯನ್ನೂ ನಾವು ಮಾಡುತ್ತಿದ್ದೆವು’ ಎಂದರು. ‌

‘ಗೋವಾ ಉಪ ಸಭಾಪತಿ ಹೇಳಿದ್ದೆಲ್ಲ ಕಾನೂನು ಅಥವಾ ತೀರ್ಮಾನ ಆಗುವುದಿಲ್ಲ. ಅಲ್ಲಿನ ವಿಧಾನಮಂಡಲದಲ್ಲಿ ಕೈಗೊಂಡ ನಿರ್ಣಯ ನಮಗೆ ಅನ್ವಯಿಸುವುದಿಲ್ಲ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಸಂವಿಧಾನವನ್ನು ಯಾವಾಗಲೂ ಗೌರವಿಸುವ ರಾಜ್ಯ ಕರ್ನಾಟಕ. ಇದೇ 6ರಿಂದ ಮಹದಾಯಿ ನ್ಯಾಯಮಂಡಳಿ ವಿಚಾರಣೆ ಆರಂಭಿಸಲಿದೆ. ಒಂದು ವೇಳೆ ನಾವು ನಿಯಮ ಉಲ್ಲಂಘಿಸಿದ್ದರೆ ಗೋವಾ ದೂರು ಸಲ್ಲಿಸಲಿ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry