ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣಕಾರನಿಗೆ ಗುಂಡಿಕ್ಕಿ ಬಾಲಕನ ರಕ್ಷಣೆ

ಮನೆ ಮಾಲೀಕನೇ ಸಂಚಿನ ಸೂತ್ರಧಾರ: ₹35 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು
Last Updated 30 ಜನವರಿ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ಹಣದಾಸೆಗೆ ಐದು ವರ್ಷದ ಬಾಲಕನನ್ನು ಅಪಹರಿಸಿದ್ದ ದಿವ್ಯತೇಜ್ ಅಲಿಯಾಸ್ ಡಿಜೆ (28) ಎಂಬಾತನ ಕಾಲಿಗೆ ಕೆಂಪಾಪುರ ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ.

ಭಾನುವಾರ ಮಧ್ಯಾಹ್ನ ಮಾಗಡಿ ರಸ್ತೆಯ ಮಂಜುನಾಥನಗರಕ್ಕೆ ಕೆಂಪು ಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಬಂದಿದ್ದ ಮೂವರು ಅಪಹರಣಕಾರರು, ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಚಂದನ್‌ನನ್ನು ಅಪಹರಿಸಿಕೊಂಡು ಹೋಗಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಬಾಲಕನನ್ನು ರಕ್ಷಿಸಿ ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.

ಮಂಗಳವಾರ ನಸುಕಿನಲ್ಲಿ (ಸಮಯ 2.05) ಆರೋಪಿಗಳು ಕೊಮ್ಮಘಟ್ಟ ರಸ್ತೆಯ ವಿಶ್ವೇಶ್ವರಯ್ಯ ಲೇಔಟ್‌ ಬಳಿ ಇರುವ ಮಾಹಿತಿ ಸಿಕ್ಕಿತು. ಕಾರ್ಯಾಚರಣೆಗೆ ತೆರಳಿದ್ದ ಸಿಬ್ಬಂದಿ ಮೇಲೆ ದಿವ್ಯತೇಜ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ. ಆಗ ಇನ್‌ಸ್ಪೆಕ್ಟರ್ ಮಂಜು ಆತನ ಕಾಲಿಗೆ ಗುಂಡು ಹೊಡೆದರು ಎಂದು ಕೆಂಪಾಪುರ ಅಗ್ರಹಾರ ಪೊಲೀಸರು ತಿಳಿಸಿದರು.

ರಾಜೇಶ್ ಅವರ ಮನೆ ಮಾಲೀಕ ಅಭಿಷೇಕ್‌ನೇ ಕೃತ್ಯದ ಸೂತ್ರಧಾರ. ಆತನ ಜತೆಗೆ ದಿವ್ಯತೇಜ್, ಶ್ರೀಕಾಂತ್ ಅಲಿಯಾಸ್ ಶ್ರೀ ಹಾಗೂ ಹರ್ಷಿತ್ ಎಂಬುವರನ್ನು ಬಂಧಿಸಿದ್ದೇವೆ. ಗುಂಡೇಟಿನಿಂದ ಗಾಯಗೊಂಡಿರುವ ದಿವ್ಯತೇಜ್, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಹಿತಿ ನೀಡಿದರು.

ಹುಟ್ಟುಹಬ್ಬದ ಸಡಗರ: ಆಂಧ್ರಪ್ರದೇಶದ ರಾಜೇಶ್, 15 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಮೂರೂವರೆ ವರ್ಷಗಳ ಹಿಂದೆ ವಾಸ್ತವ್ಯವನ್ನು ಮಂಜು ನಾಥನಗರಕ್ಕೆ ಬದಲಿಸಿದ್ದ ಅವರು, ತಮ್ಮ ಮನೆ ಮಾಲೀಕರ ಟ್ರಾವೆಲ್ ಏಜೆನ್ಸಿಯಲ್ಲೇ ಕೆಲಸಕ್ಕೆ ಸೇರಿದ್ದರು. ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿತ್ತು. ಭಾನುವಾರ ರಾಜೇಶ್ ಪತ್ನಿ ಮಾಲಾ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ, ಪತ್ನಿ–ಮಗನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ರಾಜೇಶ್ ಮಧ್ಯಾಹ್ನವೇ ಮನೆಗೆ ಬಂದಿದ್ದರು. ಹೊಸ ಬಟ್ಟೆ ತೊಟ್ಟು ಮನೆಯಿಂದ ಹೊರ
ಬಂದ ಚಂದನ್, ನೆರೆಹೊರೆಯ ಮಕ್ಕಳ ಜತೆ ಆಟವಾಡುತ್ತಿದ್ದ ವೇಳೆ ಆರೋಪಿಗಳು ಅಪಹರಿಸಿದ್ದರು.

ಸ್ವಲ್ಪ ಸಮಯದ ನಂತರ ದಂಪತಿ ದೇವಸ್ಥಾನಕ್ಕೆ ಹೊರಟಿದ್ದಾಗ ಮಗ ನಾಪತ್ತೆಯಾಗಿದ್ದ. ಸುತ್ತಮುತ್ತಲ ರಸ್ತೆಗಳಲ್ಲಿ ಶೋಧ ನಡೆಸಿದರೂ ಸುಳಿವು ಸಿಗದಿದ್ದಾಗ, ರಾತ್ರಿ 7 ಗಂಟೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

₹35 ಲಕ್ಷ ಕೊಡು: ಅದೇ ದಿನ ರಾತ್ರಿ 10 ಗಂಟೆಗೆ ರಾಜೇಶ್ ಮೊಬೈಲ್‌ಗೆ ಕರೆ ಮಾಡಿದ್ದ ದಿವ್ಯತೇಜ್ , ‘ಏನಪ್ಪ.. ನಿನ್ನ ಮಗ ಚಂದನ್ ಕಾಣ್ತಿಲ್ವ. ಮಗ ಜೀವಂತವಾಗಿ ಬೇಕೆಂದರೆ ₹ 35 ಲಕ್ಷ ಕೊಡು’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಅರ್ಧ ತಾಸಿನಲ್ಲೇ ಆತ ಪುನಃ ಕರೆ ಮಾಡಿದಾಗ, ‘ನನ್ನ ಬಳಿ ಸದ್ಯ ಅಷ್ಟು ಹಣವಿಲ್ಲ. ಪತ್ನಿಯ ಒಡವೆಗಳನ್ನೆಲ್ಲ ಮಾರಿ ₹ 20 ಲಕ್ಷ ಹೊಂದಿಸಬಹುದು’ ಎಂದಿದ್ದರು ರಾಜೇಶ್.

ಅದಕ್ಕೆ ಆತ, ‘ಇನ್ನು ಎರಡು ಗಂಟೆ ಬಿಟ್ಟು ಕರೆ ಮಾಡುತ್ತೇನೆ. ಪೊಲೀಸರಿಗೆ ವಿಷಯ ತಿಳಿಸಿದ್ದು ಗೊತ್ತಾದರೆ, ಮಗನ ಕುತ್ತಿಗೆ ಸೀಳಿ ಬಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದ. ಸ್ಥಳೀಯರ ಸಲಹೆಯಂತೆ ರಾಜೇಶ್ ಬೆದರಿಕೆ ಕರೆ ಬಂದ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದರು. ನಂತರ ಮೂರು ತಾಸು ಕಳೆದರೂ ಆರೋಪಿಯಿಂದ ಕರೆ ಬಾರದಿದ್ದಾಗ ದಂಪತಿಗೆ ಆತಂಕ ಶುರುವಾಗಿತ್ತು.

ಮೊದಲ ಸುಳಿವು: ರಾತ್ರಿ 1 ಗಂಟೆಗೆ ರಾಜೇಶ್ ತಾಯಿಗೆ ಕರೆ ಮಾಡಿದ್ದ ಅಭಿಷೇಕ್, ‘ಏನ್ ವಿಜಯಮ್ಮ.. ಮೊಮ್ಮಗನ ಬಗ್ಗೆ ನಿಮಗೆ ಕಾಳಜಿಯೇ ಇಲ್ವ. ಕೋಣೆಯ ಲೈಟ್ ಆಫ್ ಮಾಡಿಕೊಂಡು ಆರಾಮಾಗಿ ಮಲಗಿದ್ದೀರಲ್ಲ. ಬೇಗ ಹಣ ಹೊಂದಿಸಿ, ಬಿಡಿಸಿಕೊಂಡು ಹೋಗೋದಲ್ವ. ಹಣ ಕೈಸೇರದಿದ್ದರೆ ಮೊಮ್ಮಗನ ಶವ ಪಾರ್ಸಲ್‌ನಲ್ಲಿ ಬರುತ್ತದೆ’ ಎಂದು ಹೇಳಿದ್ದ.

ರಾಜೇಶ್ ತಾಯಿಗೂ ಕರೆ ಮಾಡಿದ್ದರಿಂದ ಹಾಗೂ ಕೋಣೆಯ ಲೈಟ್ ಆಫ್ ಮಾಡಿದ್ದನ್ನು ಖಚಿತವಾಗಿ ಹೇಳಿದ್ದರಿಂದ ಸ್ಥಳೀಯ ವ್ಯಕ್ತಿಯೇ ಅಪಹರಣಕಾರ ಎಂಬುದು ಪೊಲೀಸರಿಗೆ ಖಚಿತವಾಯಿತು. ಬೆದರಿಕೆ ಕರೆ ಬರುತ್ತಿದ್ದ ಸಂಖ್ಯೆಯ ಸಿಡಿಆರ್ (ಕರೆಗಳ ವಿವರ) ತೆಗೆಸಿದಾಗ ಅಭಿಷೇಕ್‌ ಆ ಸಂಖ್ಯೆಗೆ ಕರೆ ಮಾಡಿರುವುದು ಗೊತ್ತಾಯಿತು.

ಸೋಮವಾರ ಬೆಳಿಗ್ಗೆ ರಾಜೇಶ್‌ಗೆ ಕರೆ ಮಾಡಿದ ‍ಪೊಲೀಸರು, ಅಭಿಷೇಕ್‌ನನ್ನು ಕರೆದುಕೊಂಡು ಕೂಡಲೇ ಠಾಣೆಗೆ ಬರುವಂತೆ ಹೇಳಿದ್ದಾರೆ. ಅಂತೆಯೇ ಸ್ವಲ್ಪ ಸಮಯದಲ್ಲೇ ಇಬ್ಬರೂ ಠಾಣೆಗೆ ತೆರಳಿದ್ದಾರೆ. ಆಗ ಅಪರಾಧ ವಿಭಾಗದ ಸಿಬ್ಬಂದಿ ಅಭಿಷೇಕ್‌ನನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ವಾಸ್ತವ ಬಯಲಾಗಿದೆ. ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದ್ದರು.

ಮತ್ತೆ ಬಂತು ಕರೆ: ಚಂದನ್‌ನನ್ನು ರಾತ್ರಿಯೇ ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದಿದ್ದ ದಿವ್ಯತೇಜ್ ಹಾಗೂ ಸಹಚರರು, ಅಲ್ಲಿಂದ ಮರುದಿನ ಮಧ್ಯಾಹ್ನ ಮೈಸೂರಿಗೆ ಬಂದಿದ್ದರು. ಅಭಿಷೇಕ್ ಪೊಲೀಸರ ವಶದಲ್ಲಿರುವ ವಿಚಾರ ಗೊತ್ತಿರದ ಅವರು, ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ನಿರಂತರವಾಗಿ ಈತನಿಗೆ ಕರೆ ಮಾಡುತ್ತಲೇ ಇದ್ದರು. ಪೊಲೀಸರು ಆ ಎಲ್ಲ ಸಂಖ್ಯೆಗಳನ್ನು ಪಡೆದು ‘ಟವರ್‌ ಡಂಪ್’ ತನಿಖೆ ಪ್ರಾರಂಭಿಸಿದ್ದರು.

ಸೋಮವಾರ ರಾತ್ರಿ 11 ಗಂಟೆಗೆ ಪುನಃ ರಾಜೇಶ್‌ಗೆ ಕರೆ ಮಾಡಿದ್ದ ದಿವ್ಯತೇಜ್, ₹ 20 ಲಕ್ಷ ತೆಗೆದುಕೊಂಡು ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬರುವಂತೆ ಹೇಳಿದ್ದ. ₹ 5 ಲಕ್ಷವನ್ನಷ್ಟೇ ಹೊಂದಿಸಿರುವುದಾಗಿ ರಾಜೇಶ್  ಹೇಳಿದಾಗ, ‘ನಾನೇನು ಕಡಲೇಪುರಿ ವ್ಯಾಪಾರ ಮಾಡುತ್ತಿದ್ದೀನಾ. ನಿನ್ನ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕ್ತೀನಿ’ ಎಂದು ಬೆದರಿಸಿದ್ದ. ಆಗ ರಾಜೇಶ್ ಮೂಲಕ ಆರೋಪಿಗೆ ಪುನಃ ಕರೆ ಮಾಡಿಸಿದ್ದ ಪೊಲೀಸರು, ‘ಹಣ ತೆಗೆದುಕೊಂಡು ಬರುತ್ತಿದ್ದೇನೆ. ಮಗನಿಗೆ ಏನು ಮಾಡಬೇಡ’ ಎಂದು ಹೇಳಿಸಿದ್ದರು.

ಆ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಅಪಹರಣಕಾರರು ಮೈಸೂರಿನಿಂದ ನಗರಕ್ಕೆ ಬರುತ್ತಿರುವ ವಿಚಾರ ಗೊತ್ತಾಗಿದೆ. ಮಫ್ತಿಯಲ್ಲಿ ಕಾರ್ಯಾಚರಣೆಗಿಳಿದ 22 ಪೊಲೀಸರು, ಕೊಮ್ಮಘಟ್ಟ ರಸ್ತೆಯ ವಿಶ್ವೇಶ್ವರಲೇಔಟ್‌ನಲ್ಲಿ ಕೆಂಪು ಬಣ್ಣದ ಸ್ಯಾಂಟ್ರೊ ಕಾರು ನಿಂತಿರುವುದನ್ನು ಕಂಡಿದ್ದಾರೆ.

‘ಅಪಹರಣಕಾರರು ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಕೆಳಗಿಳಿದಿದ್ದರು. ಈ ವೇಳೆ ಚಂದನ್ ವಾಹನದಲ್ಲೇ ಇದ್ದ. ಕೂಡಲೇ ಅವರನ್ನು ಸುತ್ತುವರಿದೆವು. ಈ ಹಂತದಲ್ಲಿ ದಿವ್ಯತೇಜ್, ಮಚ್ಚಿನಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ. ಆಗ ಇನ್‌ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹೊಡೆದರು’ ಎಂದು ಪೊಲೀಸರು ಹೇಳಿದ್ದಾರೆ.
***
ಮತ್ತೊಂದು ಅಪಹರಣಕ್ಕೂ ಸಂಚು

ರಾಜೇಶ್ ಪುತ್ರನನ್ನು ಅಪಹರಿಸುವುದಕ್ಕೂ ಮುನ್ನ, ತಮ್ಮ ಪರಿಚಿತರೊಬ್ಬರ ಮಗನನ್ನು ಅಪಹರಿಸುವುದಕ್ಕೆ ಅಭಿಷೇಕ್ ಸಂಚು ರೂಪಿಸಿದ್ದ. ಎರಡು ಬಾರಿ ಸಂಚು ರೂಪಿಸಿದರೂ, ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದಾಗ ಕೃತ್ಯ ಕೈಬಿಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದಿವ್ಯತೇಜ್ ಅಪರಾಧ ಪ್ರವೃತ್ತಿವುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಜಗಜೀವನ್‌ರಾಮನಗರ ಹಾಗೂ ಬ್ಯಾಟರಾಯನಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನಿಗೆ ಒಂದೂವರೆ ವರ್ಷದ ಹಿಂದೆ ಅಭಿಷೇಕ್‌ನ ಪರಿಚಯವಾಗಿತ್ತು.
**
‘ಸಿನಿಮಾಕ್ಕೆ ಹಣ ಸುರಿದಿದ್ದೆ’

‘ಅಮ್ಮ ಹಾಗೂ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ₹ 40 ಲಕ್ಷವನ್ನು ಅವರಿಗೇ ತಿಳಿಯದಂತೆ ಬಳಸಿಕೊಂಡಿದ್ದೆ. ದೀಪಾಂಜಲಿ ನಗರದ ಕಾಂಗ್ರೆಸ್ ಮುಖಂಡ ಅರ್ಜುನ್ ದೇವ್ ನಟಿಸಿರುವ ‘ಬತ್ತಾಸು’ ಚಿತ್ರಕ್ಕೂ ಬಂಡವಾಳ ಹೂಡಿದ್ದೆ. ಆರ್ಥಿಕ ಸಮಸ್ಯೆ ಎದುರಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿತು. ಕುಟುಂಬವೇ ಬೀದಿಗೆ ಬೀಳುವಂತ ಪರಿಸ್ಥಿತಿ ತಲುಪಿದ್ದರಿಂದ, ರಾಜೇಶ್‌ ಅವರ ಹಣ ದೋಚಲು ಸಂಚು ರೂಪಿಸಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದರು.
**
ಆಸ್ತಿ ನೋಡಿ ಸಂಚು ರೂಪಿಸಿದ‌

ರಾಜೇಶ್‌ ಅನಂತಪುರದಲ್ಲಿದ್ದ ತಮ್ಮ 26 ಎಕರೆ ಜಮೀನನ್ನು ಇತ್ತೀಚೆಗೆ ₹ 80 ಲಕ್ಷಕ್ಕೆ ಮಾರಾಟ ಮಾಡಿದ್ದರು. ಇದೇ ಜ.16ರಂದು ಅಭಿಷೇಕ್‌ನನ್ನು ತಮ್ಮೊಟ್ಟಿಗೆ ಅನಂತಪುರಕ್ಕೆ ಕರೆದುಕೊಂಡು ಹೋಗಿದ್ದ ಅವರು, ಆಸ್ತಿ ಖರೀದಿಸಿದ ವ್ಯಕ್ತಿಯಿಂದ ಮೊದಲ ಕಂತಿನಲ್ಲಿ ₹ 20 ಲಕ್ಷ ಪಡೆದುಕೊಂಡು ಬಂದಿದ್ದರು. ಈ ವಿಚಾರ ತಿಳಿದು ಆತ ಪುತ್ರನ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT