ಎನ್‌ಸಿಬಿ ಕಚೇರಿ ಚಿತ್ರೀಕರಣ; ಮಾಲ್ಡಿವ್ಸ್‌ ಪ್ರಜೆ ಬಂಧನ

6

ಎನ್‌ಸಿಬಿ ಕಚೇರಿ ಚಿತ್ರೀಕರಣ; ಮಾಲ್ಡಿವ್ಸ್‌ ಪ್ರಜೆ ಬಂಧನ

Published:
Updated:

ಬೆಂಗಳೂರು: ಮಾದಕ ವಸ್ತು ಕಳ್ಳ ಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಕಚೇರಿ ಚಿತ್ರೀಕರಣ ಮಾಡುತ್ತಿದ್ದ ಮಾಲ್ಡಿವ್ಸ್‌ ಪ್ರಜೆ ಅನಿಲ್ ಅಹ್ಮದ್‌ (35) ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ವ್ಯಾಪಾರ ವೀಸಾದಡಿ ನಗರಕ್ಕೆ ಬಂದಿರುವ ಆತ, ಮಾರತ್ತಹಳ್ಳಿಯಲ್ಲಿ ವಾಸವಿದ್ದಾನೆ. ಮಾದಕ ವಸ್ತು ಸಾಗಣೆ ಪ್ರಕರಣವೊಂದರಲ್ಲಿ 2017ರಲ್ಲಿ ಆತನನ್ನು ಬಂಧಿಸಿದ್ದ ಎನ್‌ಸಿಬಿ ಅಧಿಕಾರಿಗಳು, ಕಾರು ಜಪ್ತಿ ಮಾಡಿದ್ದರು.

ಜಾಮೀನು ಮೇಲೆ ಹೊರಬಂದಿದ್ದ ಆತ, ತನ್ನ ಕಾರು ಬಿಡಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಪತ್ರ ಪಡೆದುಕೊಂಡಿದ್ದ. ಅದರ ಪ್ರತಿಯ ಸಮೇತ ಯಲಹಂಕದಲ್ಲಿರುವ ಎನ್‌ಸಿಬಿ ಕಚೇರಿಗೆ ಸೋಮವಾರ ಹೋಗಿದ್ದ ಎಂದು ಪೊಲೀಸರು ತಿಳಿಸಿದರು.

ಅನುಮತಿ ಪತ್ರ ಪಡೆದುಕೊಂಡಿದ್ದ ಎನ್‌ಸಿಬಿ ಸಿಬ್ಬಂದಿ, ಕಾರು ಬಿಡುಗಡೆಗೊಳಿಸಲು ಅಗತ್ಯವಾದ ಪ್ರಕ್ರಿಯೆ ನಡೆಸುವುದರಲ್ಲಿ ನಿರತರಾಗಿದ್ದರು. ಅದೇ ವೇಳೆ ಆರೋಪಿ, ಕಚೇರಿಯ ಸ್ಥಳಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಅದನ್ನು ನೋಡಿದ ಸಿಬ್ಬಂದಿ, ಆತನನ್ನು ಪ್ರಶ್ನಿಸಿದ್ದರು. ಆಗ ಆರೋಪಿ, ಸಿಬ್ಬಂದಿಯೊಂದಿಗೆ ಜಗಳ ತೆಗೆದಿದ್ದ. ಆತನ ಮೊಬೈಲ್‌ ಕಸಿದುಕೊಂಡು ನೋಡಿದಾಗ, 12 ನಿಮಿಷ ಚಿತ್ರೀಕರಣ ಮಾಡಿದ್ದು ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.

ಕಚೇರಿಯ ಕೆಲ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವಂತಿಲ್ಲ. ಆ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆರೋಪಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಸರ್ಕಾರಿ ಗೋಪ್ಯ ಕಾಯ್ದೆ (ಒಎಸ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry